ಪುಟ್ಟ ಮಕ್ಕಳಲ್ಲೂ ಬೊಜ್ಜಿನ ಸಮಸ್ಯೆ! ಇದಕ್ಕೆ ವೈದ್ಯರು ಸೂಚಿಸುವ ಪರಿಹಾರವೇನು?

ಒಂದು ವೇಳೆ ಮಗುವಿನ ಬಿಎಂಐ ಶೇಕಡಾ 85 ರಿಂದ ಶೇಕಡಾ 95ರ ನಡುವೆ ಇದ್ದರೆ, ಅದನ್ನು ಮಿತಿಮೀರಿದ ತೂಕವೆಂದು ಪರಿಗಣಿಸಲಾಗುತ್ತದೆ.
ಪುಟ್ಟ ಮಕ್ಕಳಲ್ಲೂ ಬೊಜ್ಜಿನ ಸಮಸ್ಯೆ! ಇದಕ್ಕೆ ವೈದ್ಯರು ಸೂಚಿಸುವ ಪರಿಹಾರವೇನು?
Updated on

ಪ್ರಸ್ತುತ ಕಾಲದಲ್ಲಿ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗಿ ಕಂಡುಬರುತ್ತಿದೆ. ಈ ಸ್ಥಿತಿಯು, ಮಕ್ಕಳ ಆರೋಗ್ಯ, ಉತ್ಸಾಹ ಮತ್ತು ಆತ್ಮವಿಶ್ವಾಸದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಮಕ್ಕಳಲ್ಲಿ ಬೊಜ್ಜು ಹೆಚ್ಚಾಗಲು ಕಾರಣಗಳೆನು?, ವೈದ್ಯರು ಅದನ್ನು ಹೇಗೆ ಅಳೆಯುತ್ತಾರೆ ಮತ್ತು ಅದನ್ನು ತಡೆಯಲು ಪೋಷಕರು ಏನು ಮಾಡಬಹುದು ಎಂಬ ಕುರಿತು ಮಾಹಿತಿ ಇಲ್ಲಿದೆ.

ಮಕ್ಕಳಲ್ಲಿ ಬೊಜ್ಜು ಹೆಚ್ಚಾಗಲು ಕಾರಣವೇನು?

ಇದಕ್ಕೆ ಕಾರಣಗಳು ಸರಳವಾಗಿದೆ. ಆದರೆ ಇದು ಅಷ್ಟೇ ಆತಂಕಕಾರಿಯೂ ಹೌದು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚು ಸಮಯವನ್ನು ಮೊಬೈಲ್ ಮತ್ತು ಟಿ.ವಿ. ಪರದೆಗಳ ಮುಂದೆ ಕಳೆಯುತ್ತಾರೆ. ಇದರಿಂದ, ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ. ಜೊತೆಗೆ, ಮನೆಯಲ್ಲಿ ತಯಾರಿಸಿದ ತಾಜಾ ಆಹಾರಕ್ಕೆ ಬದಲಾಗಿ, ಹೆಚ್ಚು ಸಕ್ಕರೆ ಮತ್ತು ಕೊಬ್ಬಿರುವ ಜಂಕ್ ಫುಡ್‌ ಹಾಗೂ ಪ್ಯಾಕೇಜ್ಡ್‌ ತಿಂಡಿಗಳಿಗೆ ಆದ್ಯತೆ ನೀಡುತ್ತಾರೆ. ಇವೆಲ್ಲದರ ಜೊತೆಗೆ, ರಾತ್ರಿ ತಡವಾಗಿ ಮಲಗುವುದು, ಅನಿಯಮಿತ ನಿದ್ರೆ ಮತ್ತು ಶಾಲೆಯ ಒತ್ತಡವೂ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗಲು ಕಾರಣವಾಗಬಹುದು.

ಮಕ್ಕಳಲ್ಲಿನ ಬೊಜ್ಜಿನ ಪ್ರಮಾಣ ಅಳೆಯುವುದು ಹೇಗೆ?

ಮಕ್ಕಳಲ್ಲಿ ಬೊಜ್ಜನ್ನು ಅಳೆಯಲು ನಿರ್ದಿಷ್ಟ ತೂಕದ ಸಂಖ್ಯೆಯನ್ನು ಪರಿಗಣಿಸುವುದಿಲ್ಲ. ಅದರ ಬದಲು ವಯಸ್ಸು ಮತ್ತು ಲಿಂಗಕ್ಕೆ ಅನುಗುಣವಾಗಿ, ಬಾಡಿ ಮಾಸ್ ಇಂಡೆಕ್ಸ್ (BMI) ಅಳೆಯುವ ಬೆಳವಣಿಗೆಯ ಚಾರ್ಟ್‌ಗಳನ್ನು ಬಳಸುತ್ತಾರೆ. ಒಂದು ವೇಳೆ ಮಗುವಿನ ಬಿಎಂಐ ಶೇಕಡಾ 85 ರಿಂದ ಶೇಕಡಾ 95ರ ನಡುವೆ ಇದ್ದರೆ, ಅದನ್ನು ಮಿತಿಮೀರಿದ ತೂಕವೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಬಿಎಂಐ ಶೇಕಡಾ 95 ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಅದನ್ನು ಬೊಜ್ಜು ಎಂದು ವರ್ಗೀಕರಿಸಲಾಗುತ್ತದೆ. ಇದರಿಂದ, ಮಗುವಿನ ಬೆಳವಣಿಗೆಯನ್ನು ಅವರ ವಯಸ್ಸಿನ ಇತರ ಮಕ್ಕಳೊಂದಿಗೆ ಹೋಲಿಸಿ, ನಿಖರವಾದ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ.

ಬೊಜ್ಜನ್ನು ತಡೆಯಲು ಏನು ಮಾಡಬೇಕು?

ಇದಕ್ಕಾಗಿ ಕಟ್ಟುನಿಟ್ಟಿನ ಆಹಾರಕ್ರಮವನ್ನು ಅನುಸರಿಸುವ ಅಗತ್ಯವಿಲ್ಲ, ಬದಲಿಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಮಕ್ಕಳಿಗೆ ಪ್ರತಿದಿನ ಕನಿಷ್ಠ ಒಂದು ಗಂಟೆ ದೈಹಿಕ ಚಟುವಟಿಕೆ ಬೇಕು. ಅದು ಆಟವಾಡುವುದು, ಸೈಕ್ಲಿಂಗ್ ಅಥವಾ ಓಟ ಆಗಿರಬಹುದು. ಜತೆಗೆ, ಊಟದಲ್ಲಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಸಾಕಷ್ಟು ಪ್ರೋಟೀನ್‌ ಸೇರಿಸಬೇಕು. ಸಿಹಿ ಪಾನೀಯಗಳು, ಜಂಕ್ ಫುಡ್‌ ಮತ್ತು ರಾತ್ರಿ ತಡವಾಗಿ ತಿನ್ನುವ ಅಭ್ಯಾಸವನ್ನು ಕಡಿಮೆ ಮಾಡಬೇಕು. ಶಾಲೆಗೆ ನಡೆದುಕೊಂಡು ಹೋಗುವುದು, ಸ್ಕ್ರೀನ್ ಟೈಮ್‌ಗೆ ಮಿತಿ ಹಾಕುವುದು ಮತ್ತು ಸರಿಯಾಗಿ ನಿದ್ರೆ ಮಾಡುವುದು ಕೂಡ ಬೊಜ್ಜನ್ನು ತಡೆಯಲು ಸಹಾಯ ಮಾಡುತ್ತದೆ.

ಪೋಷಕರಿಗೆ ಕೆಲವು ಸಲಹೆಗಳು

ಮಕ್ಕಳು ಪೋಷಕರನ್ನು ಅನುಕರಿಸುತ್ತಾರೆ. ಪೋಷಕರು ಚಿಪ್ಸ್ ಮತ್ತು ಸೋಡಾ ಸೇವಿಸುತ್ತಿದ್ದರೆ, ಮಕ್ಕಳು ಸಹ ಅದನ್ನೇ ರೂಢಿಸಿಕೊಳ್ಳುತ್ತಾರೆ. ಆದ್ದರಿಂದ, ಮನೆಯಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿ ಮತ್ತು ಜಂಕ್ ಫುಡ್‌ ಅನ್ನು ಕೇವಲ ಅಪರೂಪಕ್ಕೊಮ್ಮೆ ಮಾತ್ರ ತಿನ್ನಲು ಕೊಡಿ.‌ ಉತ್ತಮ ಆಹಾರವನ್ನು ನೀಡಿ, ಮಕ್ಕಳಿಗೆ ಆಮಿಷ ತೋರಿಸುವುದು ಅಥವಾ ಶಿಕ್ಷೆ ಕೊಡುವುದು ಮಾಡಬೇಡಿ. ಕುಟುಂಬದವರು ಒಟ್ಟಾಗಿ ಕುಳಿತು ಊಟ ಮಾಡುವುದರಿಂದ ಮಕ್ಕಳು ಪ್ರಮಾಣ ಮತ್ತು ಸಮತೋಲಿತ ಆಹಾರದ ಬಗ್ಗೆ ಕಲಿಯುತ್ತಾರೆ. ಜತೆಗೆ, ಮಕ್ಕಳಿಗೆ ಹಸಿವಾದಾಗ ಮಾತ್ರ ತಿನ್ನಲು ಮತ್ತು ಹೊಟ್ಟೆ ತುಂಬಿದಾಗ ನಿಲ್ಲಿಸಲು ಹೇಳಿ. ಪೋಷಕರು ಸ್ವತಃ ಮಾದರಿಯಾಗಿ ನಿಲ್ಲುವುದು ಅತಿ ಮುಖ್ಯ.

ಮಕ್ಕಳಲ್ಲಿನ ಬೊಜ್ಜು ಕೇವಲ ದೈಹಿಕ ನೋಟಕ್ಕಷ್ಟೇ ಸೀಮಿತವಾಗಿಲ್ಲ, ಅದು ಅವರ ಆರೋಗ್ಯ, ಮನಸ್ಥಿತಿ ಮತ್ತು ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ. ಆದರೆ, ಮನೆಯಲ್ಲಿ ಸಣ್ಣ ಮತ್ತು ಸ್ಥಿರ ಬದಲಾವಣೆಗಳನ್ನು ಮಾಡುವುದರಿಂದ ಇದನ್ನು ತಡೆಯಬಹುದು. ಕುಟುಂಬದವರು ಒಟ್ಟಾಗಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ, ಮಕ್ಕಳು ಉತ್ತಮ ಆರೋಗ್ಯ ಮತ್ತು ಆತ್ಮವಿಶ್ವಾಸದ ವ್ಯಕ್ತಿಗಳಾಗಿ ಬೆಳೆಯುತ್ತಾರೆ.

ಪುಟ್ಟ ಮಕ್ಕಳಲ್ಲೂ ಬೊಜ್ಜಿನ ಸಮಸ್ಯೆ! ಇದಕ್ಕೆ ವೈದ್ಯರು ಸೂಚಿಸುವ ಪರಿಹಾರವೇನು?
ನಿಮ್ಮ ಮಗುವಿಗೆ ಊಟ ಮಾಡಿಸಲು ಹರಸಾಹಸವೇ? ಸಮಸ್ಯೆ ದೂರಾಗಿಸಲು ಮಾಡಿಕೊಳ್ಳಿ ಈ ಸಣ್ಣ ಬದಲಾವಣೆ! ಇಲ್ಲಿವೆ ಕೆಲವು ಟಿಪ್ಸ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com