Tamilnadu & West Bengal Election 2026 Highlights | ಸಂಜೆ 6 ಗಂಟೆ ವೇಳೆಗೆ ತಮಿಳುನಾಡು ಶೇ. 84.41, ಪಶ್ಚಿಮ ಬಂಗಾಳ ಹಂತ-I ಶೇ.91.46 ಮತದಾನ

ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಪಶ್ಚಿಮ ಬಂಗಾಳದ 294 ಕ್ಷೇತ್ರಗಳಲ್ಲಿ 152 ಕ್ಷೇತ್ರಗಳಿಗೆ ಇಂದು ಗುರುವಾರ 7 ಗಂಟೆಗೆ ಮತದಾನ ಪ್ರಗತಿಯಲ್ಲಿದೆ.
Voting progressed for crucial Assembly elections in Tamil Nadu and West Bengal.
ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳಿಗೆ ಮತದಾನ ಪ್ರಗತಿಯಲ್ಲಿದೆ. Photo| Express
Summary

ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಪಶ್ಚಿಮ ಬಂಗಾಳದ 294 ಕ್ಷೇತ್ರಗಳಲ್ಲಿ 152 ಕ್ಷೇತ್ರಗಳಿಗೆ ಇಂದು ಗುರುವಾರ 7 ಗಂಟೆಗೆ ಮತದಾನ ಆರಂಭವಾಗಿವೆ.

ತಮಿಳುನಾಡಿನಲ್ಲಿ, 5.73 ಕೋಟಿಗೂ ಹೆಚ್ಚು ಮತದಾರರು 4,023 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಮುಖ್ಯವಾಗಿ ಡಿಎಂಕೆ ನೇತೃತ್ವದ ಮೈತ್ರಿ ಹಾಗೂ ಎಐಎಡಿಎಂಕೆ ನೇತೃತ್ವದ ಎನ್‌ಡಿಎ ನಡುವಿನ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಐದು ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಇದಲ್ಲದೆ, ನಟ ವಿಜಯ ಅವರ ಟಿವಿಕೆ ಪಕ್ಷದ ಚುನಾವಣಾ ಪ್ರವೇಶವು ಸ್ಪರ್ಧೆಗೆ ಹೊಸ ಆಯಾಮವನ್ನು ನೀಡಿದ್ದು, ದ್ರಾವಿಡ ಪಕ್ಷಗಳಿಗೆ ಕಠಿಣ ಸವಾಲು ಎದುರಾಗಿದೆ.

ಪಶ್ಚಿಮ ಬಂಗಾಳದಲ್ಲಿ, ಸುಮಾರು 1.75 ಕೋಟಿ ಮಹಿಳೆಯರನ್ನು ಒಳಗೊಂಡಂತೆ 3.60 ಕೋಟಿಗೂ ಹೆಚ್ಚು ಮತದಾರರು ರಾಜ್ಯದ 294 ಕ್ಷೇತ್ರಗಳಲ್ಲಿ 152 ಕ್ಷೇತ್ರಗಳನ್ನು ಒಳಗೊಂಡ ಎರಡು ಹಂತಗಳ ಮೊದಲ ಹಂತದಲ್ಲಿ ಮತದಾನಕ್ಕೆ ಅರ್ಹರಾಗಿದ್ದಾರೆ. ಮೂರು ಅವಧಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಮೊದಲ ಬಾರಿಗೆ ರಾಜ್ಯದಲ್ಲಿ ಸರ್ಕಾರ ರಚಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ನಡುವಿನ ಸ್ಪರ್ಧೆಯ ಫಲಿತಾಂಶ ನಿರ್ಧರಿಸಲಿದೆ.

ಎರಡನೇ ಹಂತದ ಮತದಾನವು ಕೊಲ್ಕತ್ತಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಮೇಲೆ ಕೇಂದ್ರೀಕರಿಸಿಕೊಂಡು ಉಳಿದ 142 ಕ್ಷೇತ್ರಗಳಿಗೆ ಏಪ್ರಿಲ್ 29ರಂದು ನಡೆಯಲಿದೆ. ಎರಡೂ ರಾಜ್ಯಗಳಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.

ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮತ ಎಣಿಕೆ ಮೇ 4ರಂದು ನಡೆಯಲಿದೆ. ಇದೇ ದಿನ ಕೇರಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಮತ ಎಣಿಕೆ ನಡೆಯಲಿದೆ.

ಎರಡು ರಾಜ್ಯಗಳಲ್ಲಿ 1,000 ಕೋಟಿ ರೂ ಮೌಲ್ಯದ ವಸ್ತು ಜಪ್ತಿ

ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಉದ್ದೇಶಿಸಲಾದ ನಗದು, ಮಾದಕ ದ್ರವ್ಯಗಳು ಮತ್ತು ಮದ್ಯ ಸೇರಿದಂತೆ 1,000 ಕೋಟಿ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಬುಧವಾರ ತಿಳಿಸಿದೆ.

ಪಶ್ಚಿಮ ಬಂಗಾಳದಲ್ಲಿ ಸುಮಾರು 473 ಕೋಟಿ ರೂ.ಗಳಷ್ಟು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದರೆ, ತಮಿಳುನಾಡಿನಲ್ಲಿ 599 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣೆಗೂ ಒಂದು ದಿನ ಮುನ್ನ ದೀದಿ ಗೆ ಬಿಗ್ ಶಾಕ್; 'ಮಮತಾ ನಡೆ ಪ್ರಜಾಪ್ರಭುತ್ವಕ್ಕೆ ಅಪಾಯದ ಕೃತ್ಯ'; ಸುಪ್ರೀಂ ಕೋರ್ಟ್ ಕೆಂಡಾಮಂಡಲ!

ಕೇಂದ್ರೀಯ ಸಂಸ್ಥೆಯ ತನಿಖೆಯ ಮಧ್ಯೆ ಪ್ರವೇಶಿಸಿ "ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸುವ" ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕೃತ್ಯಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಅಸಮ್ಮತಿ ವ್ಯಕ್ತಪಡಿಸಿದ್ದು, ಇದು ಸರಿಯಲ್ಲ ಎಂದು ಹೇಳಿದೆ. ರಾಜ್ಯದಲ್ಲಿ ಚುನಾವಣೆ ನಡೆಯುವ ಒಂದು ದಿನ ಮೊದಲು ಸುಪ್ರೀಂ ಕೋರ್ಟ್ ನಿಂದ ಈ ಕಟು ಹೇಳಿಕೆ ಬಂದಿದೆ.

ಉತ್ಸಾಹಭರಿತ ಮತದಾನಕ್ಕೆ ಪ್ರಧಾನಿ ಮೋದಿ ಕರೆ

ತಮಿಳುನಾಡಿನ ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒತ್ತಾಯಿಸಿದ್ದಾರೆ.

ಇದು "ಪವಿತ್ರ ಪ್ರಜಾಪ್ರಭುತ್ವ ಕರ್ತವ್ಯ". ಯುವಜನರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ದಾಖಲೆಯ ಮತದಾನವನ್ನು ಸಾಧಿಸಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಮಹಿಳೆಯರು ಮತ್ತು ಯುವಕರು ಚುನಾವಣೆಯ ನಿರ್ಣಾಯಕ ಶಕ್ತಿ

ತಮಿಳುನಾಡಿನ ಮತದಾರರ ರಚನೆ ಗಮನಾರ್ಹವಾಗಿ ಜನಸಾಂಖ್ಯಿಕವಾಗಿ ವಿಭಿನ್ನವಾಗಿದೆ. ಚುನಾವಣಾ ಆಯೋಗದ ಮತದಾರರ ಪಟ್ಟಿಯ ಮಾಹಿತಿಯ ಪ್ರಕಾರ, ಯುವಕರು, ಮೊದಲ ಬಾರಿಗೆ ಮತದಾನ ಮಾಡುವವರು ಮತ್ತು ಮಹಿಳೆಯರು ಪ್ರಮುಖ ಮತದಾರ ವರ್ಗಗಳನ್ನು ರೂಪಿಸಿದ್ದಾರೆ.

ಮಹಿಳಾ ಮತದಾರರು ನಿರ್ಣಾಯಕ ಹಂಚಿಕೆಯನ್ನು ಹೊಂದಿದ್ದಾರೆ. ಮತದಾರರ ಪಟ್ಟಿಯ ಪ್ರಕಾರ, ಮಹಿಳೆಯರ ಸಂಖ್ಯೆ 2.93 ಕೋಟಿಗೂ ಅಧಿಕವಾಗಿದ್ದು, ಪುರುಷ ಮತದಾರರು ಸುಮಾರು 2.80 ಕೋಟಿಯಷ್ಟಿದ್ದಾರೆ. ಇದರಿಂದ ಮಹಿಳೆಯರು ಪ್ರಮುಖ ಮತದಾರ ವರ್ಗವಾಗಿದ್ದಾರೆ.

ರಾಜಕೀಯ ಪಕ್ಷಗಳು ಈ ವರ್ಗವನ್ನು ಗುರಿಯಾಗಿಸಿಕೊಂಡು ಕಲ್ಯಾಣ ಯೋಜನೆಗಳು, ನಗದು ಹಸ್ತಾಂತರಗಳು ಮತ್ತು ಮನೆಮೂಲಕ ಲಾಭಗಳನ್ನು ಒದಗಿಸುವ ಮೂಲಕ ಪ್ರಚಾರದಲ್ಲಿ ಪ್ರಮುಖ ಸ್ಥಾನ ನೀಡುತ್ತಿವೆ. ಫೆಬ್ರವರಿ 23ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯ ಪ್ರಕಾರ, ಯುವ ಮತದಾರರ ಪ್ರಮಾಣವೂ ಗಮನಾರ್ಹವಾಗಿದೆ.

18–19 ವಯಸ್ಸಿನ 12,51,742 ಮಂದಿ ಮೊದಲ ಬಾರಿಗೆ ಮತದಾನ ಮಾಡುವವರು ಇದ್ದರೆ, 20–29 ವಯಸ್ಸಿನ ಗುಂಪಿನಲ್ಲಿ 1,05,31,653 ಮಂದಿ ಮತದಾರರು ಇದ್ದಾರೆ. ವಿಸ್ತೃತ ವಿಶ್ಲೇಷಣೆಯ ಪ್ರಕಾರ, 18–29 ವಯಸ್ಸಿನವರು ಒಟ್ಟು ಮತದಾರರಲ್ಲಿ ಸುಮಾರು ಐದನೇ ಭಾಗವನ್ನು ಹೊಂದಿದ್ದಾರೆ. 18–35 ವಯಸ್ಸಿನ ಗುಂಪು ಒಟ್ಟು ನೋಂದಾಯಿತ ಮತದಾರರಲ್ಲಿ ಮೂರನೇ ಭಾಗಕ್ಕಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.

ವಯೋರಚನೆ ಚುನಾವಣೆಯಲ್ಲಿ ಪ್ರಮುಖ ಅಂಶವಾಗಿದೆ. ವಿಶೇಷವಾಗಿ 18–35 ವಯಸ್ಸಿನ ಯುವಕರ ಸಂಖ್ಯೆಯು ಹೆಚ್ಚು ಇರುವುದರಿಂದ, ನಗರ ಮತ್ತು ಅರೆನಗರ ಕ್ಷೇತ್ರಗಳಲ್ಲಿ ಯುವ ಮತದಾರರು ನಿರ್ಣಾಯಕ ಪಾತ್ರವಹಿಸುತ್ತಾರೆ. 18–19 ವಯಸ್ಸಿನ ಮೊದಲ ಬಾರಿಗೆ ಮತದಾನ ಮಾಡುವವರು ಹೊಸ ಮತದಾರ ವರ್ಗವಾಗಿದ್ದು, ನಗರ ಮತ್ತು ಅರೆನಗರ ಪ್ರದೇಶಗಳಲ್ಲಿ ವಿಶೇಷ ಮಹತ್ವವನ್ನು ಹೊಂದಿದ್ದಾರೆ.

ಇದರಿಂದ ಚೆನ್ನೈ, ಕೊಯಂಬತ್ತೂರು ಮತ್ತು ಮದುರೈ ಮುಂತಾದ ವೇಗವಾಗಿ ಬೆಳೆಯುತ್ತಿರುವ ನಗರ ಕೇಂದ್ರಗಳು ಹಾಗೂ ಕೈಗಾರಿಕಾ ಮತ್ತು ಅರೆನಗರ ಪ್ರದೇಶಗಳಲ್ಲಿ ಯುವಕರು ಪ್ರಮುಖ ಮತದಾರ ಗುಂಪಾಗಿದ್ದಾರೆ. ಒಟ್ಟಾರೆ, ಯುವಕರು ಮತ್ತು ಮಹಿಳೆಯರು ತಮಿಳುನಾಡಿನ ಚುನಾವಣಾ ಫಲಿತಾಂಶಗಳಲ್ಲಿ ಕೇಂದ್ರ ಪಾತ್ರವಹಿಸುತ್ತಿದ್ದಾರೆ. ಉದ್ಯೋಗ, ಕಲ್ಯಾಣ ಯೋಜನೆಗಳ ಜಾರಿ, ಸಾರ್ವಜನಿಕ ಸೇವೆಗಳು ಮತ್ತು ಆಡಳಿತ ಮುಂತಾದ ವಿಷಯಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇವರ ಮತದಾನದ ಅಭಿರುಚಿಯನ್ನು ನಿರ್ಧರಿಸುತ್ತಿವೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತದಾರರಿಗೆ ಕರೆ

ತಮಿಳು ನಾಡು ಮತ್ತು ಪಶ್ಚಿಮ ಬಂಗಾಳ ಮತದಾರರಿಗೆ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದು, ಈ ಚುನಾವಣೆಯನ್ನು ಪ್ರಮುಖ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಪಾಡುವ ಹೋರಾಟವೆಂದು ಹೇಳಿದ್ದಾರೆ.

ಇಂದು ನಡೆಯುತ್ತಿರುವ ಹೋರಾಟವು ನಿಮ್ಮ ಹಕ್ಕುಗಳನ್ನು ಸುರಕ್ಷಿತಗೊಳಿಸಲು ಆಗಿದೆ. ಇದು ಫೆಡರಲಿಸಂ, ಯುಕ್ತಿಚಿಂತನೆ, ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಹೋರಾಟವಾಗಿದೆ ಎಂದು ಅವರು X ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಹೇಳಿದರು.

ಇದು ಒಳಗೊಂಡ ಕಲ್ಯಾಣವನ್ನು ಖಚಿತಪಡಿಸಲು ಮತ್ತು ನಿಮ್ಮ ಮಹಾನ್ ನಾಯಕರಿಂದ ಪ್ರತಿಪಾದಿಸಲ್ಪಟ್ಟ ಸಾಮಾಜಿಕ ನ್ಯಾಯದ ಆದರ್ಶಗಳನ್ನು ಉಳಿಸಿಕೊಳ್ಳಲು ಸಹ ಮುಖ್ಯವಾಗಿದೆ. ನಿಮ್ಮ ಪ್ರಜಾಪ್ರಭುತ್ವ ಹಕ್ಕನ್ನು ಬಳಸಿಕೊಂಡು, ನಿಮ್ಮ ಫೆಡರಲ್ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸುವವರ ವಿರುದ್ಧ ನಿಲ್ಲುವ ಸಮಯ ಬಂದಿದೆ ಎಂದು ಅವರು ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ಬಾರಿಗೆ ಮತದಾನ ಮಾಡುವ ಯುವಕರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ತಮ್ಮ ಮತಹಕ್ಕನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು.

ಮೈಲಾಪುರದಲ್ಲಿ ಮತಚಲಾಯಿಸಿದ ಜಯಕುಮಾರ್‌: ಡಿಎಂಕೆ ವಿರುದ್ಧ ವಾಗ್ದಾಳಿ

ಎಐಎಡಿಎಂಕೆ ನಾಯಕ ಡಿ ಜಯಕುಮಾರ್ ಮೈಲಾಪುರ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಬಳಿಕ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದರು.

ರಾಯಪುರಂ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅವರು, “ಒಂದು ಕುಟುಂಬದ ಆಡಳಿತಕ್ಕೆ ಈ ಚುನಾವಣೆ ಅಂತ್ಯ ಹಾಡಲಿದೆ” ಎಂದು ಹೇಳಿ, ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದರು.

ನೀಲಂಕರೆಯಲ್ಲಿ ನಟ ವಿಜಯ್ ಮತ ಚಲಾವಣೆ

ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ಅವರು ನೀಲಂಕರೆ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದರು. ಅವರ ಆಗಮನದ ವೇಳೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದು ಕಂಡು ಬಂದಿತು. ವಿಜಯ್ ಅವರು ತಿರುಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಮತದಾನ

ಖ್ಯಾತ ತಮಿಳು ನಟ ರಜನಿಕಾಂತ್ ಅವರು, ಚೆನ್ನೈನ ಸ್ಟೆಲ್ಲಾ ಮ್ಯಾರಿಸ್ ಕಾಲೇಜು ಮತಗಟ್ಟೆಯಲ್ಲಿ ಮತಚಲಾಯಿಸಿದರು.

ಕುಟುಂಬ ಸಮೇತ ಮತ ಚಲಾಯಿಸಿದ ಸ್ಟಾಲಿನ್

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಚೆನ್ನೈನಲ್ಲಿ ಮತಚಲಾಯಿಸಿದರು. ಅವರ ಪುತ್ರ ಹಾಗೂ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರೂ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಡಿಎಂಕೆ ಮೈತ್ರಿ ಪಕ್ಷ ಸರ್ಕಾರ ರಚಿಸಲಿದೆ: ಕಾರ್ತಿ ಚಿದಂಬರಂ ವಿಶ್ವಾಸ

ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ Dbjg ಡಿಎಂಕೆ ನೇತೃತ್ವದ ಮೈತ್ರಿ ಪಕ್ಷ ಈ ಬಾರಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದು, ಮೈತ್ರಿಪಕ್ಷ ಸುಲಭವಾಗಿ ಸರ್ಕಾರ ರಚಿಸುತ್ತದೆ ಎಂದು ಹೇಳಿದ್ದಾರೆ.

ತಿರುಚಿಯಲ್ಲಿ ಅನ್ಬಿಲ್ ಮಹೇಶ್ ಮತಚಲಾವಣೆ

ಡಿಎಂಕೆ ಸಚಿವ ಹಾಗೂ ಅಭ್ಯರ್ಥಿ ಅನ್ಬಿಲ್ ಮಹೇಶ್ ಅವರು ತಿರುವೆರುಂಬೂರು ಕ್ಷೇತ್ರದಲ್ಲಿ ಮತಚಲಾಯಿಸಿದರು.

ಪಶ್ಚಿಮ ಬಂಗಾಳದಲ್ಲಿ ಶೇ.18.76ರಷ್ಟು ಮತದಾನ

ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನದಲ್ಲಿ ಬೆಳಿಗ್ಗೆ 9 ಗಂಟೆಯವರೆ ಶೇ.18.76ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ತಮಿಳುನಾಡಿನಲ್ಲಿ 9 ಗಂಟೆಯವರೆಗೆ ಶೇ.17.69ರಷ್ಟು ಮತದಾನ

ತಮಿಳುನಾಡಿನಲ್ಲಿ ಬೆಳಗ್ಗೆ 7ರಿಂದ ಆರಂಭವಾದ ಮತದಾನದಲ್ಲಿ ಈ ವರೆಗೂ ಶೇ. 17.69ರಷ್ಟು ಮತದಾನವಾಗಿದೆ. ಒಟ್ಟು 5.73 ಕೋಟಿ ಮತದಾರರು 234 ಕ್ಷೇತ್ರಗಳಲ್ಲಿ 4,023 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಮತದಾನ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ, ಎನ್‌ಟಿಕೆ ನಾಯಕ ಸೀಮಾನ್ ಹಾಗೂ ಟಿವಿ ಅಧ್ಯಕ್ಷ ವಿಜಯ್ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತಚಲಾಯಿಸಿದರು.

ಸ್ಟಾಲಿನ್ ಅವರು ಕುಟುಂಬ ಸಮೇತರಾಗಿ ಅಲ್ವಾರ್ಪೇಟೆಯಲ್ಲಿ ಮತಚಲಾಯಿಸಿದ್ದು, ಪಳನಿಸ್ವಾಮಿ ಕುಟುಂಬ ಸಮೇತ ಎಡಪ್ಪಾಡಿಯಲ್ಲಿ ಮತ ಚಲಾಯಿಸಿದರು.

ಪಶ್ಚಿಮ ಬಂಗಾಳದಲ್ಲಿ EVM ದೋಷ: ಹಲವು ಮತಗಟ್ಟೆಗಳಲ್ಲಿ ಮತದಾನ ವಿಳಂಬ

ಪಶ್ಚಿಮ ಬಂಗಾಳವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಹಲವು ಪ್ರದೇಶಗಳಲ್ಲಿ ಇವಿಎಂ (Electronic Voting Machine) ದೋಷಗಳು ಕಾಣಿಸಿಕೊಂಡು ಮತದಾನ ಪ್ರಕ್ರಿಯೆಗೆ ಅಡಚಣೆ ಉಂಟಾಗಿದೆ ಎಂದು ತಿಳಿದುಬಂದಿದೆ.

ಅಧಿಕಾರಿಗಳ ಪ್ರಕಾರ, ಕೆಲವು ಸೂಕ್ಷ್ಮ ಹಾಗೂ ಪ್ರಮುಖ ಮತಗಟ್ಟೆಗಳಲ್ಲಿ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಮತದಾನ ತಡವಾಗಿ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಮುರ್ಶಿದಾಬಾದ್ ಜಿಲ್ಲೆಯ ಬೆಲ್ಡಾಂಗಾ ಕ್ಷೇತ್ರದ ಪಾರ್ಸಲಿಕಾ ಮದನಮೋಹನ್ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 156ರಲ್ಲಿ ಇವಿಎಂ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತದಾನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಇದೇ ರೀತಿ ಸಂಶೇರ್ಗಂಜ್ ಕ್ಷೇತ್ರದ ಮತಗಟ್ಟೆ ಸಂಖ್ಯೆ 212ರಲ್ಲಿ ಮತದಾನ ಪ್ರಕ್ರಿಯೆ ನಿಗದಿತ ಸಮಯಕ್ಕೆ ಆರಂಭವಾಗಲಿಲ್ಲ. ಕಾಂಡಿ ಪ್ರದೇಶದಲ್ಲಿಯೂ ಇದೇ ರೀತಿಯ ತಾಂತ್ರಿಕ ಸಮಸ್ಯೆಗಳು ವರದಿಯಾಗಿವೆ.

ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ಕ್ಷೇತ್ರದ ಬಿರುಲಿಯಾ ಪ್ರದೇಶದಲ್ಲಿ ಇವಿಎಂ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯ ಉಂಟಾದರೆ, ಕೂಚ್ ಬಿಹಾರ್ ಜಿಲ್ಲೆಯ ಟೌನ್ ಹೈ ಸ್ಕೂಲ್ ಮತಗಟ್ಟೆ ಸಂಖ್ಯೆ 229ರಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡು ಬಳಿಕ ಪುನರಾರಂಭಿಸಲಾಯಿತು. ಮಾಲ್ಡಾ ಜಿಲ್ಲೆಯ ಹಬೀಬ್ಪುರ ಕ್ಷೇತ್ರದ ಮತಗಟ್ಟೆ ಸಂಖ್ಯೆ 231ಲ್ಲಿಯೂ ಮತದಾನ ವಿಳಂಬವಾಯಿತು.

ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿಯ ಮಾರ್ಗರೇಟ್ ಶಾಲೆಯ ಮತಗಟ್ಟೆ (26/31) ಯಲ್ಲೂ ಇವಿಎಂ ದೋಷದಿಂದ ಮತದಾನ ತಡವಾಗಿ ಆರಂಭಗೊಂಡಿತು. ಈ ತಾಂತ್ರಿಕ ಸಮಸ್ಯೆಗಳು ಮತದಾರರಲ್ಲಿ ಕೆಲ ಮಟ್ಟಿನ ಅಸಮಾಧಾನ ಉಂಟುಮಾಡಿದರೂ, ಚುನಾವಣಾಧಿಕಾರಿಗಳು ತಕ್ಷಣವೇ ಪರ್ಯಾಯ ಯಂತ್ರಗಳನ್ನು ಒದಗಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಇದಲ್ಲದೆ, ಮತದಾನದ ಮುನ್ನ ಕೆಲವು ಪ್ರದೇಶಗಳಲ್ಲಿ ಸಣ್ಣ ಮಟ್ಟಿನ ಹಿಂಸಾಚಾರ ಘಟನೆಗಳೂ ವರದಿಯಾಗಿದ್ದು, ಇದರ ನಡುವೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೆ ತಂದು ಶಾಂತಿಯುತ ಮತದಾನ ನಡೆಯುವಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಮುರ್ಷಿದಾಬಾದ್‌ನಲ್ಲಿ ಘರ್ಷಣೆ: ಟಿಎಂಸಿ ಕಾರ್ಯಕರ್ತರು–ಹುಮಾಯೂನ್ ಕಬೀರ್ ಬೆಂಬಲಿಗರ ನಡುವೆ ಜಟಾಪಟಿ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಮುಂದುವರೆದಿರುವ ನಡುವಲ್ಲೇ ರಾಜಕೀಯ ಘರ್ಷಣೆ ಭುಗಿಲೆದ್ದಿದೆ.

ಆಡಳಿತಾರೂಢ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಮತ್ತು ಎಯುಜೆಪಿ ಸ್ಥಾಪಕ ಹುಮಾಯೂನ್ ಕಬೀರ್ ಅವರ ಬೆಂಬಲಿಗರ ನಡುವೆ ಜಟಾಪಟಿ ಶುರುವಾಗಿದೆ.

ಮತಗಟ್ಟೆ ಸಮೀಪದಲ್ಲಿ ಎರಡೂ ಗುಂಪಿನವರು ಪರಸ್ಪರ ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದು, ಪರಿಸ್ಥಿತಿ ತೀವ್ರಗೊಂಡು ಕೈ-ಕೈ ಮಿಲಾಯಿಸಿದ್ದಾರೆಂದು ತಿಳಿದುಬಂದಿದೆ. ಬಳಿಕ ಸ್ಥಳದಲ್ಲಿದ್ದ ಭದ್ರತಾ ಪಡೆಗಳು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಈ ಘಟನೆಯಿಂದ ಕೆಲ ಕಾಲ ಮತದಾನ ಪ್ರಕ್ರಿಯೆಗೆ ವ್ಯತ್ಯಯ ಉಂಟಾದರೂ, ನಂತರ ಪರಿಸ್ಥಿತಿ ಸಾಮಾನ್ಯಗೊಂಡು ಮತದಾನ ಮರುಾರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಹಿನ್ನೆಲೆ ಕುರಿತು ತನಿಖೆ ಮುಂದುವರಿದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಡಿಎ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಅಣ್ಣಾಮಲೈ: ಹೆಚ್ಚಿನ ಮತದಾನಕ್ಕೆ ಕರೆ

ಬಿಜೆಪಿ ನಾಯಕ ಅಣ್ಣಾಮಲೈ ಅವರು ಎನ್‌ಡಿಎ ಮೈತ್ರಿ ಗೆಲುವಿನ ಬಗ್ಗೆ ಭರವಸೆ ವ್ಯಕ್ತಪಡಿಸಿ, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸಲು ಕರೆ ನೀಡಿದ್ದಾರೆ.

ಚುನಾವಣೆಯ ಹಿನ್ನೆಲೆ ಮಾತನಾಡಿದ ಅವರು, ರಾಜ್ಯದಲ್ಲಿ ಬದಲಾವಣೆಯ ವಾತಾವರಣ ನಿರ್ಮಾಣವಾಗಿದ್ದು, ಜನತೆ ಎನ್‌ಡಿಎಗೆ ಬೆಂಬಲ ನೀಡಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.

ಈ ಬಾರಿ ಜನರು ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದಾರೆ. ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕಾಗಿ ಮತದಾನ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸಿ, ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಬೇಕು ಎಂದು ಮನವಿ ಮಾಡಿದರು.

ಶಾಂತಿಯುತವಾಗಿ ನಡೆಸಲು ಎಲ್ಲರೂ ಸಹಕರಿಸಬೇಕು. ಯುವ ಮತದಾರರು ಹಾಗೂ ಮೊದಲ ಬಾರಿಗೆ ಮತಚಲಾಯಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಒತ್ತಾಯಿಸಿದರು.

ಪೆರಿಯಾಕುಳಂನಲ್ಲಿ ಮತಚಲಾಯಿಸಿದ ಮಾಜಿ ಸಿಎಂ ಒ. ಪನ್ನೀರ್ ಸೆಲ್ವಂ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಅವರು ಪೆರಿಯಾಕುಳಂನ ಮತಗಟ್ಟೆಯಲ್ಲಿ ತಮ್ಮ ಮತಚಲಾಯಿಸಿದರು.

ಬೋಡಿನಾಯಕನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅವರು, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ಮತಗಟ್ಟೆ ಬಳಿ ಭದ್ರತಾ ವ್ಯವಸ್ಥೆ ಕಟ್ಟುನಿಟ್ಟಾಗಿದ್ದು, ಮತದಾನ ಶಾಂತಿಯುತವಾಗಿ ನಡೆಯಿತು.

ಈ ವೇಳೆ ಮಾತನಾಡಿದ ಅವರು, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸುವಂತೆ ಕರೆ ನೀಡಿದರು. “ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಬಳಸಿ, ಉತ್ತಮ ಆಡಳಿತಕ್ಕಾಗಿ ತೀರ್ಮಾನ ಕೈಗೊಳ್ಳಬೇಕು” ಎಂದು ಹೇಳಿದರು.

DMK ಮತ್ತೆ ಅಧಿಕಾರಕ್ಕೆ: ಉದಯನಿಧಿ ಸ್ಟಾಲಿನ್ ಭರವಸೆ

ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಮತಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಮ್ಮ ಪಕ್ಷ ಗೆಲ್ಲುವ ಬಗ್ಗೆ ನನಗೆ ತುಂಬಾ ವಿಶ್ವಾಸ ಇದೆ” ಎಂದು ಹೇಳಿದರು. ಡಿಎಂಕೆ ಜಯ ಸಾಧಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.

ಇದೇ ವೇಳೆ, ಡಿಎಂಕೆ ಯುವ ಘಟಕದ ಕಾರ್ಯದರ್ಶಿಯಾಗಿರುವ ಅವರು ಜನತೆಗೆ ವಿಶೇಷ ಮನವಿ ಮಾಡುತ್ತಾ, ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಕರೆ ನೀಡಿದರು.

“ಪ್ರಜಾಪ್ರಭುತ್ವವನ್ನು ಬಲಪಡಿಸಲು ಪ್ರತಿಯೊಬ್ಬರೂ ಮತಚಲಾಯಿಸಬೇಕು, ಯುವ ಮತದಾರರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಒತ್ತಾಯಿಸಿದರು.

ಪಶ್ಚಿಮ ಬಂಗಾಳ ಚುನಾವಣೆ 2026: ಮುರ್ಷಿದಾಬಾದ್‌ನಲ್ಲಿ ಮತಗಟ್ಟೆ ಬಳಿ ಭಾರೀ ಸ್ಫೋಟ; ಹಲವರಿಗೆ ಗಾಯ

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಮತದಾನ ಪ್ರಕ್ರಿಯೆ ವೇಳೆ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಮತಗಟ್ಟೆ ಸಮೀಪ ಭಾರೀ ಸ್ಫೋಟವೊಂದು ಸಂಭವಿಸಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಮತದಾನ ನಡೆಯುತ್ತಿದ್ದ ಸಮಯದಲ್ಲೇ ಮತಗಟ್ಟೆ ಹತ್ತಿರ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದ್ದು, ಇದರಿಂದ ಸ್ಥಳದಲ್ಲಿದ್ದ ಕೆಲ ಮತದಾರರು ಹಾಗೂ ಸ್ಥಳೀಯರು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.

ವೆಂಗೈವಾಯಲ್ ಗ್ರಾಮದಲ್ಲಿ ಮತದಾನ ಬಹಿಷ್ಕಾರ: ಕಪ್ಪು ಬಾವುಟ ಹಾರಿಸಿ ಗ್ರಾಮಸ್ಥರ ಪ್ರತಿಭಟನೆ

ತಮಿಳುನಾಡಿನ ವೆಂಗೈವಾಯಲ್ ಗ್ರಾಮದಲ್ಲಿ ಗ್ರಾಮಸ್ಥರು ಈ ಬಾರಿ ಮತದಾನವನ್ನು ಬಹಿಷ್ಕರಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಗ್ರಾಮ ಪ್ರವೇಶ ದ್ವಾರದಲ್ಲಿ ಕಪ್ಪು ಧ್ವಜಗಳನ್ನು ಹಾರಿಸಿರುವ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಆಡಳಿತಾರೂಢ ಡಿಎಂಕೆ ಮೈತ್ರಿಯಿಂದ ಹಿಡಿದು ಹೊಸದಾಗಿ ರಚನೆಯಾದ ತಮಿಳಗ ವೆಟ್ರಿ ಕಳಗಂ ವರೆಗೆ ಯಾವುದೇ ರಾಜಕೀಯ ಪಕ್ಷವೂ ತಮ್ಮ ಬಳಿ ಮತ ಕೇಳಲು ಅಥವಾ ಪ್ರಚಾರ ನಡೆಸಲು ಬಂದಿಲ್ಲ. ಈ ನಿರ್ಲಕ್ಷ್ಯವೇ ಬಹಿಷ್ಕಾರಕ್ಕೆ ಪ್ರಮುಖ ಕಾರಣವೆಂದು ಹೇಳಿದ್ದಾರೆ.

ವೆಂಗೈವಾಯಲ್ ಘಟನೆಗೆ ನ್ಯಾಯ ದೊರಕಬೇಕು” ಎಂಬ ತಮ್ಮ ಹಿಂದಿನ ಬೇಡಿಕೆಯನ್ನು ಇನ್ನೂ ಮುಂದುವರಿಸುತ್ತಿದ್ದು, ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ತಮ್ಮ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಿವೆ ಎಂದು ಆರೋಪಿಸಿದ್ದಾರೆ.

ಗ್ರಾಮದ ಪ್ರವೇಶದಲ್ಲೇ ಕಪ್ಪು ಧ್ವಜಗಳನ್ನು ಹಾರಿಸಿರುವ ಗ್ರಾಮಸ್ಥರು ತಮ್ಮ ಬೇಡಿಕೆಗಳಿಗೆ ಸ್ಪಷ್ಟ ಪರಿಹಾರ ಸಿಗುವವರೆಗೂ ತಮ್ಮ ನಿಲುವು ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.

ಚೆನ್ನೈನಲ್ಲಿ ಮತಚಲಾಯಿಸಿದ ಕನಿಮೊಳಿ

ಕನಿಮೊಳಿ ಕರುಣಾನಿಧಿ ಅವರು ಚೆನ್ನೈನ ಸಿಎಸ್‌ಐ ಸೆಂಟ್ ಎಬ್ಬಾಸ್ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಮತ ಹಕ್ಕು ಚಲಾಯಿಸಿದರು.

ಮತದಾನದ ನಂತರ ಮಾತನಾಡಿದ ಅವರು, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಕರೆ ನೀಡಿ. ಶಾಂತಿಯುತವಾಗಿ ನಡೆಯುವ ಮತದಾನಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ ಎಂದು ಹೇಳಿದರು.

ತಮಿಳುನಾಡಿನಲ್ಲಿ ಮತದಾನ ಪ್ರಕ್ರಿಯೆ ಚುರುಕಿನಿಂದ ಸಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ನಾಯಕರು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತಚಲಾಯಿಸುತ್ತಿದ್ದಾರೆ.

ತಮಿಳುನಾಡಿನಲ್ಲಿ 11 ಗಂಟೆಯವರೆಗೆ ಶೇ.37.56ರಷ್ಟು ಮತದಾನ

ತಮಿಳುನಾಡಿನಲ್ಲಿ ಬೆಳಗ್ಗೆ 7ರಿಂದ ಆರಂಭವಾದ ಮತದಾನದಲ್ಲಿ ಈ ವರೆಗೂ ಶೇ. 37.56ರಷ್ಟು ಮತದಾನವಾಗಿದೆ. ಒಟ್ಟು 5.73 ಕೋಟಿ ಮತದಾರರು 234 ಕ್ಷೇತ್ರಗಳಲ್ಲಿ 4,023 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಶೇ.41.11ರಷ್ಟು ಮತದಾನ

ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನದಲ್ಲಿ ಬೆಳಿಗ್ಗೆ 11 ಗಂಟೆಯವರೆ ಶೇ.41.11ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಲಂಗ-ದಾವಣಿ ಧರಿಸಿ ಮತದಾರರ ಸ್ವಾಗತಿಸಿದ ರೋಬೋಟ್

ತಮಿಳುನಾಡಿನ ಕೋಯಮತ್ತೂರು ಜಿಲ್ಲೆಯ ಸರ್ಕಾರಿ ಕಾಲೇಜು ಮತಗಟ್ಟೆಯಲ್ಲಿ ಈ ಬಾರಿ ವಿಭಿನ್ನ ಹಾಗೂ ಆಕರ್ಷಕ ದೃಶ್ಯ ಕಂಡುಬಂದಿದೆ. ಲಂಗ-ದಾವಣಿ ಧರಿಸಿದ ರೋಬೋಟ್ ಮತದಾರರನ್ನು ಸ್ವಾಗತಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ.

ಮತಗಟ್ಟೆ ಪ್ರವೇಶದ ಬಳಿ ಸ್ಥಾಪಿಸಲಾದ ಈ ರೋಬೋಟ್ ಮತದಾರರಿಗೆ ಸ್ವಾಗತ ಕೋರುವುದರ ಜೊತೆಗೆ ಮತದಾನ ಪ್ರಕ್ರಿಯೆಯ ಕುರಿತು ಮಾಹಿತಿ ನೀಡುತ್ತಿದೆ. ಕಾಲೇಜು ಆಡಳಿತ ಹಾಗೂ ಸ್ಥಳೀಯ ಚುನಾವಣಾ ಅಧಿಕಾರಿಗಳ ಸಹಯೋಗದಲ್ಲಿ ಈ ತಂತ್ರಜ್ಞಾನ ಉಪಕ್ರಮವನ್ನು ಅಳವಡಿಸಲಾಗಿದೆ.

ರೋಬೋಟ್ ಧರಿಸಿರುವ ಲಂಗ-ದಾವಣಿ ಸ್ಥಳೀಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತಿದ್ದು, ಮತದಾನ ಕೇಂದ್ರಕ್ಕೆ ಬಂದ ನಾಗರಿಕರಲ್ಲಿ ಕುತೂಹಲ ಮೂಡಿಸಿದೆ. ಅನೇಕ ಮತದಾರರು ಈ ರೋಬೋಟ್ ಜೊತೆಗೆ ಫೋಟೋ ತೆಗೆದುಕೊಂಡು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಟಿಎಂಸಿ ಮತ್ತು ಎಜೆಯುಪಿ ಕಾರ್ಯಕರ್ತರ ನಡುವೆ ಕಲ್ಲು ತೂರಾಟ

ಪಶ್ಚಿಮ ಬಂಗಾಳ-ತಮಿಳುನಾಡು ಮತದಾರರ ಶ್ಲಾಘಿಸಿದ ಪ್ರಧಾನಿ ಮೋದಿ

ಕೃಷ್ಣಾನಗರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಮತದಾರರು ಟುನಾವಣೆ ಪ್ರಕ್ರಿಯೆಯಲ್ಲಿ ತೋರಿಸುತ್ತಿರುವ ಸಕ್ರಿಯ ಭಾಗವಹಿಸುವಿಕೆಯನ್ನು ಶ್ಲಾಘಿಸಿದ್ದಾರೆ.

ತಮಿಳುನಾಡು ಮತದಾರರು ಹಾಗೂ ಬಂಗಾಳದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸುತ್ತಿರುವುದನ್ನು ಉಲ್ಲೇಖಿಸಿ, ಇದು ಪ್ರಜಾಪ್ರಭುತ್ವದ ಶಕ್ತಿಶಾಲಿ ಸೂಚಕ ಎಂದು ಹೇಳಿದ್ದಾರೆ.

ಎರಡೂ ರಾಜ್ಯಗಳಲ್ಲಿ ಈ ಬಾರಿ ದಾಖಲೆ ಮಟ್ಟದ ಮತದಾನ ನಡೆಯುವ ವಿಶ್ವಾಸವಿದೆ ಎಂದು ಹೇಳಿದ ಅವರು, ಜನರ ಉತ್ಸಾಹವು ಪ್ರಜಾಪ್ರಭುತ್ವದ ಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸುತ್ತಿರುವುದು ಪ್ರಜಾಪ್ರಭುತ್ವದ ಆರೋಗ್ಯಕರ ಬೆಳವಣಿಗೆ ಎಂದು ತಿಳಿಸಿದರು.

ಮುರ್ಷಿದಾಬಾದ್‌ನಲ್ಲಿ AJUP–ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ: ಪೊಲೀಸರಿಂದ ಲಾಠಿಚಾರ್ಜ್

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ನವೋಡ ಪ್ರದೇಶದಲ್ಲಿ ಗುರುವಾರ ಮತದಾನದ ವೇಳೆ ಘರ್ಷಣೆ ಸಂಭವಿಸಿದೆ.

ಆಡಳಿತಾರೂಢ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಮತ್ತು ಆಮ್ ಜನತಾ ಉನ್ನಯ್ಯನ್ ಪಕ್ಷದ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ.

ಶಿಬನಗರ ಗ್ರಾಮದಲ್ಲಿ ಮತದಾನ ನಡೆಯುತ್ತಿದ್ದ ವೇಳೆ ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ಆರಂಭವಾಗಿ ನಂತರ ಅದು ಘರ್ಷಣೆಗೆ ತಿರುಗಿದೆ.

ಘಟನೆಯ ಸಮಯದಲ್ಲಿ ಕೆಲವು ವಾಹನಗಳನ್ನು ಹಾನಿಗೊಳಪಡಿಸಿದ ಆರೋಪವೂ ಕೇಳಿಬಂದಿದ್ದು, ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ.

ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ ಪೊಲೀಸರು ಹಾಗೂ ಕೇಂದ್ರ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಲಾಠಿಚಾರ್ಜ್ ನಡೆಸಿ ಜನರನ್ನು ಚದುರಿಸಿದರು.

ಘರ್ಷಣೆಯಲ್ಲಿ AJUP ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಪಕ್ಷದ ಸ್ಥಾಪಕ ಹುಮಾಯೂನ್ ಕಬೀರ್ ಅವರು ಈ ಆರೋಪಗಳನ್ನು ನಿರಾಕರಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಶೇ.62.18ರಷ್ಟು ಮತದಾನ

ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನದಲ್ಲಿ ಮಧ್ಯಾಹ್ನ 1 ಗಂಟೆಯವರೆ ಶೇ.62.18ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ತಮಿಳುನಾಡಿನಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.56.81ರಷ್ಟು ಮತದಾನ

ತಮಿಳುನಾಡಿನಲ್ಲಿ ಬೆಳಗ್ಗೆ 7ರಿಂದ ಆರಂಭವಾದ ಮತದಾನದಲ್ಲಿ ಈ ವರೆಗೂ ಶೇ. 56.81ರಷ್ಟು ಮತದಾನವಾಗಿದೆ. ಒಟ್ಟು 5.73 ಕೋಟಿ ಮತದಾರರು 234 ಕ್ಷೇತ್ರಗಳಲ್ಲಿ 4,023 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಕೇಂದ್ರೀಯ ಪಡೆಗಳಿಂದ ಹಲವಾರು ಬೂತ್‌ಗಳಲ್ಲಿ ಮತದಾನಕ್ಕೆ ಅಡ್ಡಿ: ಟಿಎಂಸಿಯ ಸುಜಾಪುರ ಅಭ್ಯರ್ಥಿ ಆರೋಪ

ಪಶ್ಚಿಮ ಬಂಗಾಳ ವಿಧಾನಸಭೆಗೆ ಗುರುವಾರ ಮೊದಲ ಹಂತದ ಚುನಾವಣೆ ವೇಳೆ, ಕೇಂದ್ರೀಯ ಪಡೆಗಳು ಹಲವಾರು ಬೂತ್‌ಗಳಲ್ಲಿ ಮತದಾನಕ್ಕೆ ಅಡ್ಡಿಪಡಿಸಿವೆ ಎಂದು ಮಾಲ್ಡಾ ಜಿಲ್ಲೆಯ ಸುಜಾಪುರ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಸಬೀನಾ ಯಾಸ್ಮಿನ್ ಆರೋಪಿಸಿದ್ದಾರೆ.

"ಕೇಂದ್ರೀಯ ಪಡೆಗಳು ಅನೇಕ ಮತಗಟ್ಟೆಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಅವರ ಕೆಲಸ, ಆದರೆ ಅವರು ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತಿದ್ದಾರೆ. ಇದರಿಂದಾಗಿ, ಮತದಾನ ನಿಧಾನವಾಗಿ ನಡೆಯುತ್ತಿದೆ. ಜನರು ಬಿಸಿಲಿನಲ್ಲಿ ಕೆಳಗೆ ದೀರ್ಘಕಾಲ ನಿಂತರೆ, ಅವರು ಮತದಾನ ಮಾಡದೆ ಹಿಂತಿರುಗುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು. ಕಡಿಮೆ ಮತದಾನವಾಗಬೇಕೆಂದು ಅವರು ಉದ್ದೇಶಿಸಿದ್ದಾರೆ. ನಾವು ದೂರು ದಾಖಲಿಸುತ್ತಿದ್ದೇವೆ" ಎಂದು ಯಾಸ್ಮಿನ್ ಹೇಳಿದರು.

ಬಂಗಾಳ: ಮತದಾನದ ವೇಳೆ ಮಹಿಳೆ ಪ್ರಜ್ಞಾಹೀನಳಾಗಿ ಬಿದ್ದು ಸಾವು

ಪಶ್ಚಿಮ ಬಂಗಾಳದ ಮಾಲತಿಪುರ ವಿಧಾನಸಭಾ ಕ್ಷೇತ್ರದ ಕಂದರನ್ ಪ್ರದೇಶದ ಮತಗಟ್ಟೆಯಲ್ಲಿ ಗುರುವಾರ ಮತ ಚಲಾಯಿಸಲು ಕಾಯುತ್ತಿದ್ದಾಗ ಮಹಿಳಾ ಮತದಾರನೊಬ್ಬ ಪ್ರಜ್ಞಾಹೀನಳಾಗಿ ಬಿದ್ದು ನಂತರ ಸಾವನ್ನಪ್ಪಿದ್ದಾಳೆ.

"ನನ್ನ ತಾಯಿ, ನನ್ನ ಸಹೋದರನೊಂದಿಗೆ ಮತ ಚಲಾಯಿಸಲು ಹೋಗಿದ್ದರು. ಅವರು ಮತ ಚಲಾಯಿಸಲು ಹೋಗಿದ್ದಾಗ, ಅವರು ಪ್ರಜ್ಞಾಹೀನರಾದರು. ಅವರು ಮತಗಟ್ಟೆಯಲ್ಲಿ ನಿಧನರಾದರು" ಎಂದು ಮೃತ ಮಹಿಳೆಯ ಮಗ ಹೇಳಿದರು.

ಬಂಗಾಳ ಚುನಾವಣೆ: ಅಸನ್ಸೋಲ್ ದಕ್ಷಿಣ ಬಿಜೆಪಿ ಅಭ್ಯರ್ಥಿಯ ಕಾರಿನ ಮೇಲೆ ದಾಳಿ

ರಹಮತ್ ನಗರ ಬಳಿ ಅಸನ್ಸೋಲ್ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಗ್ನಿಮಿತ್ರ ಪಾಲ್ ಅವರ ಕಾರಿನ ಮೇಲೆ ಗುರುವಾರ ದಾಳಿ ನಡೆಸಲಾಗಿದ್ದು, ಅದರ ಹಿಂಭಾಗದ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.

"ನಾನು ಮತಗಟ್ಟೆ ಆವರಣದಿಂದ ಹೊರಬರುತ್ತಿದ್ದಾಗ ನನ್ನ ಚಲಿಸುತ್ತಿದ್ದ ಕಾರಿನ ಮೇಲೆ ಕಲ್ಲು ಎಸೆಯಲಾಯಿತು. ಹಿಂಭಾಗದ ಕಿಟಕಿ ಒಡೆದುಹೋಗಿತ್ತು. ಇದರ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದು ಚುನಾವಣೆಯ ಮೇಲೆ ಪ್ರಭಾವ ಬೀರುವ ಪ್ರಯತ್ನ" ಎಂದು ಹಾಲಿ ಶಾಸಕರು ಆರೋಪಿಸಿದ್ದಾರೆ.

ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಅವರು ಹೇಳಿದರು. ಪೊಲೀಸರ ಪ್ರಕಾರ, ಘಟನೆಯ ತನಿಖೆ ನಡೆಸಲಾಗುತ್ತಿದೆ ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಮಧ್ಯಾಹ್ನ 3 ಗಂಟೆಗೆ ತಮಿಳುನಾಡಿನಲ್ಲಿ ಶೇ.70 ರಷ್ಟು, ಬಂಗಾಳದಲ್ಲಿ ಶೇ.78.77 ರಷ್ಟು ಮತದಾನ

ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ತಮಿಳುನಾಡಿನಲ್ಲಿ ಶೇ.70 ರಷ್ಟು ಮತದಾರರು ಮತ ಚಲಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಶೇ.78.77 ರಷ್ಟು ಮತದಾನವಾಗಿದೆ.

ತಮಿಳುನಾಡು ಚುನಾವಣೆ: ಮತದಾನದ ಸಮಯ  ವಿಸ್ತರಣೆಗೆ ಟಿವಿಕೆ ಕೋರಿಕೆ; ಮೂವರು ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ

ತಮಿಳುನಾಡಿನಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರ ಸಾರಿಗೆ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನಟ, ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತದಾನದ ಸಮಯವನ್ನು ಎರಡು ಗಂಟೆಗಳ ಕಾಲ ವಿಸ್ತರಿಸಲು ಕೋರಿದೆ.

"ನಾವು (ಮತದಾನಕ್ಕಾಗಿ) ಎರಡು ಗಂಟೆಗಳ ಕಾಲ ವಿಸ್ತರಣೆ ಕೇಳುತ್ತಿದ್ದೇವೆ. ಗುಡುವಾಂಚೇರಿ, ಚೆಂಗಲ್ಪಟ್ಟುಗಳಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದೆ..." ಎಂದು ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್ ಆನಂದ್ ಹೇಳಿದರು.

ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

ಸಂಜೆ 5 ಗಂಟೆ ವೇಳೆಗೆ ತಮಿಳುನಾಡು ಶೇ. 82. 24, ಪಶ್ಚಿಮ ಬಂಗಾಳ ಹಂತ-I ಶೇ.89.93 ಮತದಾನ

ವಿಧಾನಸಭಾ ಚುನಾವಣೆ: ಸಂಜೆ 5 ಗಂಟೆಯವರೆಗೆ ತಮಿಳುನಾಡು ಶೇ. 82.24 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಶೇ. 89.93 ರಷ್ಟು ಮತದಾನವಾಗಿದೆ. ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳು ಮತ್ತು ಪಶ್ಚಿಮ ಬಂಗಾಳದ 152 ಕ್ಷೇತ್ರಗಳಿಗೆ ಇಂದು ಬೆಳಿಗ್ಗೆ ಬಿಗಿ ಭದ್ರತೆಯ ನಡುವೆ ಮತದಾನ ಪ್ರಾರಂಭವಾಯಿತು. ಇಂದು ಸಂಜೆ 6 ಗಂಟೆಗೆ ಮತದಾನ ಕೊನೆಗೊಳ್ಳಲಿದೆ. ಪಶ್ಚಿಮ ಬಂಗಾಳದ ಉಳಿದ ಕ್ಷೇತ್ರಗಳಲ್ಲಿ ಏ.29 ರಂದು ಮತದಾನ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ.

ಸಂಜೆ 6 ಗಂಟೆ ವೇಳೆಗೆ ತಮಿಳುನಾಡಿನಲ್ಲಿ 84.41% ಮತದಾನ; ಬಂಗಾಳದಲ್ಲಿ ಮೊದಲ ಹಂತದಲ್ಲಿ 91.46% ಮತದಾನ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com