ಆಂಧ್ರಪ್ರದೇಶದ ನೆಮ್ಮದಿ ಹಾಳು ಮಾಡಿದ 'ಹುಡ್‌ಹುಡ್‌'

ನೆಮ್ಮದಿ ಹಾಳು ಮಾಡಿದ 'ಹುಡ್‌ಹುಡ್‌'
ನೆಮ್ಮದಿ ಹಾಳು ಮಾಡಿದ 'ಹುಡ್‌ಹುಡ್‌'

ಕಳೆದ ಅಕ್ಟೋಬರ್‌ನಲ್ಲಿ ಆಂಧ್ರಪ್ರದೇಶ ಮತ್ತು ಒಡಿಶಾ ಕಡಲ ತೀರಕ್ಕೆ ಅಪ್ಪಳಿಸಿದ್ದ ಹುಡ್ ಹುಡ್ ಚಂಡಮಾರುತ ಭೀಕರ ಅನಾಹುತವನ್ನೇ ಸೃಷ್ಟಿಸಿತ್ತು. ಅಕ್ಟೋಬರ್ 6ರಂದು ಹಿಂದೂ ಮಹಾಸಾಗರದಲ್ಲಿ ನಿರ್ಮಾಣಗೊಂಡ ಹುಡ್ ಹುಡ್ ಚಂಡಮಾರುತ 2 ದಿನಗಳ ಬಳಿಕ ಅಂದರೆ ಅಕ್ಟೋಬರ್ 8ರಂದು ಆಂಧ್ರಪ್ರದೇಶದ ವಿಶಾಖ ಪಟ್ಟಣ ಮತ್ತು ಒಡಿಶಾ ಕಡಲ ತೀರಕ್ಕೆ ಅಪ್ಪಳಿಸಿತು. ಸುಮಾರು ಗಂಟೆಗೆ 175 ಕಿ.ಮೀ ವೇಗದಲ್ಲಿ ಬೀಸುತ್ತಿದ್ದ ಚಂಡಮಾರುತ ಒಡಿಶಾ ಕಡಲ ತೀರಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡಿದ್ದು ವಿಶಾಖಪಟ್ಟಣದಲ್ಲಿ. ಹುಡ್ ಹುಡ್ ಚಂಡಮಾರುತು ದಾಳಿಯಿಂದಾಗಿ ಒಡಿಶಾ, ವಿಶಾಖಪಟ್ಟಣ ಮತ್ತು ನೇಪಾಳದ ಕೆಲ ಪ್ರದೇಶಗಳಲ್ಲಿ ಒಟ್ಟು 46 ಮಂದಿ ಸಾವನ್ನಪ್ಪಿದ್ದರು.

ಇದಲ್ಲದೆ 43ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡು, 20.93 ಲಕ್ಷ ಕುಟುಂಬಗಳು ಚಂಡಮಾರುತದಿಂದಾಗಿ ಹಾನಿಗೊಳಗಾಗಿದ್ದವು. 2,831 ಸಾಕು ಪ್ರಾಣಿಗಳು ಪ್ರಾಣ ಕಳೆದುಕೊಂಡಿದ್ದರೆ, ಪೌಲ್ಟ್ರಿ ಫಾರಂಗಳಲ್ಲಿದ್ದ 24.43 ಲಕ್ಷದ ಕೋಳಿಗಳು ಮತ್ತು ಬಾತುಕೊಳಿಗಳು ಸಾವನ್ನಪ್ಪಿದ್ದವು, ಇದಲ್ಲದೇ ಸುಮಾರು 2 ಲಕ್ಷ ಹೆಕ್ಟೇರ್ ನಷ್ಟು ಕೃಷಿ ಭೂಮಿಯಲ್ಲಿ ಬೆಳೆದಿದ್ದ ಬೆಳೆಗಳು ನಾಶವಾಗಿದ್ದವು. ಭತ್ತ, ಕಡಲೆ ಕಾಯಿ, ಕಬ್ಬು, ಬೆಳೆಕಾಳುಗಳಂತಹ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದ್ದವು. ಚಂಡಮಾರುತದಿಂದಾಗಿ ಆಂಧ್ರಪ್ರದೇಶ ಸರ್ಕಾರಕ್ಕೆ ಸುಮಾರು 70 ಸಾವಿರ ಕೋಟಿ ನಷ್ಟವಾಗಿತ್ತು.

ಸುಮಾರು 7 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ರವಾನೆ ಮಾಡಲಾಗಿತ್ತು. ಹುಡ್ ಹುಡ್ ಚಂಡಮಾರುತ ಅಕ್ಟೋಬರ್ 9ರಂದು ತನ್ನ ವೇಗವನ್ನು ಕಳೆದುಕಂಡಿತು. ಚಂಡ ಮಾರುತದ ಬಳಿಕ ಅಕ್ಷರಶಃ ವಿಶಾಖಪಟ್ಟಣ ನಗರ ಪಾಳುಬಿದ್ದ ನಗರವೇನೋ ಎಂಬಂತೆ ಭಾಸವಾಗಿತ್ತು. ಕೇಂದ್ರ ಸರ್ಕಾರ ತುರ್ತು ಪರಿಹಾರವಾಗಿ ಆಂಧ್ರ ಪ್ರದೇಶಕ್ಕೆ 1 ಸಾವಿರ ಕೋಟಿ ರು. ಪರಿಹಾರ ಧನವನ್ನು ಘೋಷಣೆ ಮಾಡಿತು. ಇದಲ್ಲದೆ ಆಂಧ್ರ ಪ್ರದೇಶದ ಸಿನಿರಂಗದ ದಿಗ್ಗಜರು ತಮ್ಮ ಕೈಲಾದ ಮಟ್ಟಿಗೆ ದೇಣಿಗೆ ನೀಡಿದ್ದರು. ಇದಲ್ಲದೇ ಇತ್ತೀಚೆಗೆ ಇಡೀ ಚಿತ್ರರಂಗ ಒಂದಾಗಿ 'ಮೇಮು ಸೈತಂ' ಎಂಬ ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ಆ ಕಾರ್ಯಕ್ರಮದಲ್ಲಿ ಬಂದ ಹಣವನ್ನು ವಿಶಾಖಪಟ್ಟಣದ ನಿರಾಶ್ರಿತರಿಗೆ ಹಂಚಿಕೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com