
ಬೆನ್ನು ಹುರಿ ಮತ್ತು ಮೆದುಳಿನ ನರ ದೌರ್ಬಲ್ಯದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಕ್ರಿಯಾತ್ಮಕ ಸ್ಪರ್ಧೆಯೇ ಐಸ್ ಬಕೆಟ್ ಚಾಲೆಂಜ್. ಕೋರೆ ಗ್ರಿಫಿನ್ ಎಂಬಾತ ತನ್ನ ಸ್ನೇಹಿತನಿಗಿದ್ದ ಖಾಯಿಲೆ ಕುರಿತು ದೇಣಿಗೆ ಸಂಗ್ರಹಿಸಲು ತನ್ನ ಒಂದಷ್ಟು ಸ್ನೇಹಿತರ ಗುಂಪನ್ನು ಜೊತೆಗೂಡಿಸಿಕೊಂಡು ಈ ಐಸ್ ಬಕೆಟ್ ಚಾಲೆಂಜ್ ಹುಟ್ಟುಹಾಕಿದನು. ಅಲ್ಲದೇ ಆತ ಹುಟ್ಟುಹಾಕಿದ ಈ ಸ್ಪರ್ಧೆ ಕಡಿಮೆ ಅವಧಿಯಲ್ಲಿಯೇ ವಿಶ್ವಾದ್ಯಂತ ಹೆಚ್ಚು ಪ್ರಚಾರ ಪಡೆದಿತ್ತು. ನಂತರದ ದಿನಗಳಲ್ಲಿ ಈ ಸ್ಪರ್ಧೆಗಾಗಿಯೇ ಎಎಲ್‌ಎಸ್ ಸಂಸ್ಥೆ ಕೂಡ ಹುಟ್ಟಿಕೊಂಡಿತು.
ಇದರ ಖ್ಯಾತಿ ಯಾವ ಮಟ್ಟಿಗೆ ಹೋಯಿತು ಎಂದರೆ ಕರ್ನಾಟಕದ ಸಿನಿತಾರೆಯರಿಂದ ಹಿಡಿದು ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರು ಕೂಡ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು ಎನ್ನುವುದು ಇದರ ಖ್ಯಾತಿಗೆ ಹಿಡಿದ ಕನ್ನಡಿಯಾಗಿದೆ. ಹಾಲಿವುಡ್, ಬಾಲಿವುಡ್, ರಾಜಕೀಯ ಗಣ್ಯರು, ಕ್ರೀಡಾಸ್ಪರ್ಧಿಗಳು ಸೇರಿದಂತೆ ಎಲ್ಲ ವಿಭಾಗದ ಗಣ್ಯರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕೇವಲ ಜುಲೈ 29ರಿಂದ ಆಗಸ್ಟ್ 20ರವರೆಗಿನ ಅವಧಿಯಲ್ಲಿ ಈ ಐಸ್ ಬಕೆಟ್ ಚಾಲೆಂಜ್‌ನಿಂದಾಗಿ 191 ಕೋಟಿ ರುಪಾಯಿಗಳಷ್ಟು ದೇಣಿಗೆ ಸಂಗ್ರಹವಾಗಿತ್ತು. ದುರಂತವೆಂದರೆ ನೀರಿನ ಸ್ಪರ್ಧೆ ಮೂಲಕ ವಿಶ್ವಾದ್ಯಂತ ಖ್ಯಾತಿ ಗಳಿಸಿದ ಕೋರೆ ಗ್ರಿಫಿನ್ ಅದೇ ನೀರಿನ ದುರಂತದಲ್ಲಿ ಸಾವಿಗೀಡಾಗಿದ್ದ. ಅದು ಕೂಡ ತನ್ನ 27ನೇ ವಯಸ್ಸಿನಲ್ಲಿ.
ಕಳೆದ ಆಗಸ್ಟ್ 15ರ ರಾತ್ರಿ ತನ್ನ ತಂದೆಗೆ ಕರೆ ಮಾಡಿದ್ದ ಕೋರೆ ಗ್ರಿಫಿನ್ ಅಂದೇ ಸ್ವಿಮಿಂಗ್ ವೇಳೆ ನೀರಿಗೆ ಡೈವ್ ಹೊಡೆದಿದ್ದ. ಆದರೆ ಒಮ್ಮೆ ಮೇಲೆದ್ದ ಆತ ದುರಾದೃಷ್ಟವಶಾತ್ ಅಲ್ಲಿಯೇ ಸಾವನ್ನಪ್ಪಿದ್ದ. ಗ್ರಿಫಿನ್ ಸಾವಿನ ಹೊರತಾಗಿಯೂ ಆತನ ಸ್ನೇಹಿತರ ಗುಂಪು ಎಎಲ್‌ಎಸ್ ಸಂಸ್ಥೆಯ ಮುಖಾಂತರವಾಗಿ ಐಸ್ ಬಕೆಟ್ ಚಾಲೆಂಜ್ ಅನ್ನು ಮುಂದುವರೆಸಿಕೊಂಡು ಸಾಗಿದೆ.
ಐಸ್ ಬಕೆಟ್‌ಗೆ ರೈಸ್ ಬಕೆಟ್ ಪರ್ಯಾಯ..?
ವಿಶ್ವಾದ್ಯಂತ ಐಸ್ ಬಕೆಟ್ ಚಾಲೆಂಜ್ ಖ್ಯಾತಿ ಹೊಂದುತ್ತಿದ್ದಂತೆ ಇತ್ತ ನಮ್ಮದೇ ಹೈದರಾಬಾದಿನ ಮೂಲೆಯೊಂದರಲ್ಲಿ ಸದ್ದಿಲ್ಲದೇ ರೈಸ್ ಬಕೆಟ್ ಚಾಲೆಂಜ್‌ವೊಂದು ಖ್ಯಾತಿಗಳಿಸಿತ್ತು. ಹೈದರಾಬಾದ್ ಮೂಲದ ಮಂಜುಲತಾ ಕಲಾನಿಧಿ ಎಂಬುವವರು ರೈಸ್ ಬಕೆಟ್ ಚಾಲೆಂಜ್ ಹುಟ್ಟುಹಾಕಿದ್ದರು. ಭಾರತದಲ್ಲಿನ ಬಡತನ ಆಹಾರ ಸಮಸ್ಯೆಯ ಕುರಿತು ಬೆಳಕು ಚೆಲ್ಲಲು ತಮ್ಮದೇ ವಿನೂತನ ಶೈಲಿಯಲ್ಲಿ ಮಂಜುಲತಾ ಬಡವರಿಗೆ ಒಂದು ಬಕೆಟ್‌ನಲ್ಲಿ ಅಕ್ಕಿ ದಾನ ಮಾಡುವ ಮೂಲಕ ರೈಸ್ ಬಕೆಟ್ ಚಾಲೆಂಜ್‌ಗೆ ಚಾಲನೆ ನೀಡಿದ್ದರು.
ಕಳೆದ ಆಗಸ್ಟ್ 22ರಂದು ಅವರು ತಮ್ಮ ಈ ಫೋಟೋವನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದರು. ಅಪ್‌ಲೋಡ್ ಆದ ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್‌ಗಳು ಮತ್ತು ಕಮೆಂಟ್‌ಗಳು ಬಂದಿದ್ದವು. ಮಂಜುಲತಾ ಅವರ ಕಾರ್ಯದಿಂದ ಸ್ಫೂರ್ತಿಗೊಂಡಿದ್ದ ಹಲವರು ರೈಸ್ ಬಕೆಟ್ ಚಾಲೆಂಜ್ ಅನ್ನು ಮುಂದುವರೆಸಿದ್ದರು.
Advertisement