
ಮೇಘ ಸ್ಫೋಟ ಮಳೆಯಿಂದಾಗಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ ಇಡೀ ಕಣಿವೆ ರಾಜ್ಯ ನೀರಿನಲ್ಲಿ ಮುಳುಗಿತ್ತು. ಸ್ವತಃ ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಳ್ಳಬೇಕಿದ್ದ ಸರ್ಕಾರಿ ಕಚೇರಿಗಳೇ ನೀರಿನಲ್ಲಿ ಮುಳುಗಿತ್ತು. ಹೀಗಾಗಿ ರಕ್ಷಣಾ ಕಾರ್ಯಾಚರಣೆಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಕೇಂದ್ರ ಸರ್ಕಾರದ ಮೊರೆ ಹೋಗಬೇಕಾಯಿತು. ಕೇಂದ್ರದಿಂದ ಕರೆ ಬರುತ್ತಿದ್ದಂತೆಯೇ ರಕ್ಷಣಾ ಕಾರ್ಯಾಚರಣೆಗೆ ಧುಮುಕಿದ ಸೇನಾಪಡೆಯ ಸೈನಿಕರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕಾಶ್ಮೀರ ಜನತೆಯ ಪ್ರಾಣವನ್ನು ರಕ್ಷಿಸಲು ಮುಂದಾದರು.
ಈ ವೇಳೆ ಹತ್ತಾರು ಮಂದಿ ಸೈನಿಕರು ತಮ್ಮ ಪ್ರಾಣ ಕಳೆದುಕೊಂಡ ಘಟನೆ ಕೂಡ ನಡೆಯಿತು. ಕೇದಾರನಾಥ ಮಾದರಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ ವಾಯುಪಡೆಯ ಹೆಲಿಕಾಪ್ಟರ್‌ಗಳು ನಿರಂತರವಾಗಿ ಹಾರಾಟ ಮಾಡುವ ಮೂಲಕ ಲಕ್ಷಾಂತರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿತ್ತು. ಲಕ್ಷಾಂತರ ಸ್ವಯಂ ಸೇವಕರು ನಡುಗಡ್ಡೆಯಲ್ಲಿದ್ದ ಮಂದಿಗೆ ಆಹಾರ ಮತ್ತು ನೀರನ್ನು ಹಂಚಿಕೆ ಮಾಡಿದರು. ದೇಶಾದ್ಯಂತ ವಿವಿಧ ಸಂಘಟನೆಗಳು ದೇಣಿಗೆ ಸಂಗ್ರಹಿಸಿ ಕಾಶ್ಮೀರ ಜನತೆಗೆ ಅಪಾರ ಪ್ರಮಾಣದ ಹೊದಿಕೆಗಳನ್ನು, ಆಹಾರ ಸಾಮಗ್ರಿಗಳನ್ನು ಮತ್ತು ಕುಡಿಯುವ ನೀರಿನ ಬಾಟಲಿಗಳ ವ್ಯವಸ್ಥೆ ಮಾಡಿದ್ದರು.
ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಆಟಗಾರರು, ರಾಜಕೀಯ ವ್ಯಕ್ತಿಗಳು, ಬಾಲಿವುಡ್ ಗಣ್ಯರು ತಮ್ಮ ಕೈಲಾದ ಮಟ್ಟಿಗೆ ದೇಣಿಗೆ ನೀಡಿದ್ದರು. ಇಂದಿಗೂ ಕಾಶ್ಮೀರದ ಕೆಲ ಪ್ರದೇಶಗಳಲ್ಲಿ ಪ್ರವಾಹದ ಹೊಡೆತಕ್ಕೆ ಸಿಲುಕಿ ಸರ್ಕಾರದ ಪರಿಹಾರಕ್ಕಾಗಿ ಕಾದು ಕುಳಿತಿರುವ ಲಕ್ಷಾಂತರ ಮಂದಿ ಇದ್ದಾರೆ. ಇದರ ನಡುವೆಯಲ್ಲಿಯೇ ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆದಿದ್ದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ.
Advertisement