
ಇದು ಸ್ವಂತ ತಾಯಿಯೇ ತನ್ನ ಮಗಳನ್ನು ಕೊಲೆಗೈದ ಕಥೆ. ಮಾಧ್ಯಮ ಸಮೂಹವೊಂದರ ಮಾಲಕಿಯಾಗಿರುವ ಇಂದ್ರಾಣಿ ಮುಖರ್ಜಿ ಮತ್ತು ಆಕೆಯ ಪತಿಯನ್ನು ಜೈಲಿಗಟ್ಟಿದ ಪ್ರಕರಣ ಇದು. ಈ ಪ್ರಕರಣ ನಡೆದಿದ್ದು 2012 ಏಪ್ರಿಲ್ 24 ರಂದಾದರೂ, ಪ್ರಕರಣ ಬೆಳಕಿಗೆ ಬಂದದ್ದು ಮಾತ್ರ 2015ರಲ್ಲಿ.
2012ರಿಂದಲೂ ಇಂದ್ರಾಣಿ ಮುಖರ್ಜಿ ತನ್ನ ಮಗಳಾದ ಶೀನಾ ಬೋರಾ ಬದುಕಿದ್ದಾಳೆ ಎಂದು ವಾದಿಸುತ್ತಾ ಬಂದಿದ್ದರಾದರೂ, ಆಕೆಯ ಮಾಜಿ ಕಾರು ಚಾಲಕ ಕುಡಿದ ಮತ್ತಿನಲ್ಲಿ ಆಡಿದ್ದ ಮಾತುಗಳು ಇಂದ್ರಾಣಿ ಮತ್ತು ಆಕೆಯ ಮಾಜಿ ಪತಿ ಸಂಜೀವ್ ಖನ್ನಾರನ್ನು ಜೈಲಿಗಟ್ಟಿತ್ತು. ತನಿಖೆ ಆರಂಭದಲ್ಲಿ ಇಂದ್ರಾಣಿ ತನ್ನ ಮಗಳು ಬದುಕಿದ್ದಾಳೆ ಮತ್ತು ವಿದೇಶದಲ್ಲಿ ನೆಲೆಸಿದ್ದಾಳೆ ಎಂದು ವಾದಿಸುತ್ತಾ ಬಂದಿದ್ದಳಾದರೂ, ಬಳಿಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಳು. ಅಲ್ಲದೆ ಪ್ರಕರಣದಲ್ಲಿ ತನ್ನ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ವರ್ ರೈ ಕೂಡ ಪಾಲುದಾರರು ಎಂದು ಬಾಯಿ ಬಿಟ್ಟಿದ್ದಳು. ಈ ಪ್ರಕರಣ ದೇಶಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿತ್ತು. ಆಸ್ತಿಗಾಗಿಯೋ ಅಥವಾ ಅಂತಸ್ತಿಗಾಗಿಯೋ ಸ್ವಂತ ಮಗಳನ್ನೇ ತನ್ನ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ವರ್ ರೈ ಎಂಬಾತನೊಂದಿಗೆ ಸೇರಿ ಇಂದ್ರಾಣಿ ಮುಖರ್ಜಿ ಹತ್ಯೆಗೈದಿದ್ದಳು. ಪ್ರಕರಣದಲ್ಲಿ ದಿನಕಳದಂತೆ ಹಲವು ಟ್ವಿಸ್ಟ್ ಗಳು ಎದುರಾಗಿದ್ದವು.
ಕೆಲ ಊಹಾಪೋಹಗಳು ಶೀನಾ ಬೋರಾಳನ್ನು ಆಸ್ತಿಗಾಗಿ ಕೊಲೆ ಮಾಡಲಾಯಿತು ಎಂದು ಹೇಳಿದರೆ, ಮತ್ತೆ ಕೆಲ ಮಾಹಿತಿಗಳು ಶೀನಾ ತನ್ನ ಸಹೋದರ ಸಂಬಂಧಿಯನ್ನು ಪ್ರೀತಿಸುತ್ತಿದ್ದಳು ಮತ್ತು ಮದುವೆ ಕೂಡ ಆಗಿದ್ದಳು. ಇದರಿಂದ ಕ್ರೋಧಗೊಂಡ ಇಂದ್ರಾಣಿ ಆಕೆಯನ್ನು ಕೊಲ್ಲಿಸಿದಳು ಎಂದು ಕೆಲ ಊಹಾಪೋಹಗಳು ಹರಿದಾಡಿದವು. ಇದು ಕೇವಲ ಒಂದು ಕೊಲೆ ಪ್ರಕರಣವಾದ ಮಾತ್ರಕ್ಕೇ ಇಷ್ಟು ದೊಡ್ಡ ಸುದ್ದಿಯಾಗಲಿಲ್ಲ. ಬದಲಿಗೆ ಇಂದ್ರಾಣಿ ಮುಖರ್ಜಿಯ ಹಲವು ವೈವಾಹಿಕ ಸಂಬಂಧಗಳನ್ನು ಕೂಡ ಈ ಪ್ರಕರಣ ಎಳೆ-ಎಳೆಯಾಗಿ ಬಿಚ್ಚಿಟ್ಟಿತ್ತು.
ಪ್ರಸ್ತುತ ಪ್ರಕರಣ ಸಂಬಂಧ ಶೀನಾ ಬೋರಾಳ ತಾಯಿ ಇಂದ್ರಾಣಿ ಮುಖರ್ಜಿ, ಆಕೆಯ ಮಾಜಿ ಗಂಡ ಸಂಜೀವ್ ಖನ್ನಾ ಮತ್ತು ಇಂದ್ರಾಣಿ ಮಾಜಿ ಕಾರು ಚಾಲಕ ಶ್ಯಾಮ್ ವರ್ ರೈ ವಿರುದ್ಧ ಅಪಹರಣ, ಕೊಲೆ, ಕ್ರಿಮಿನಲ್ ಸಂಚು, ಸಾಕ್ಷ್ಯಾಧಾರ ನಾಶ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Advertisement