
ವರ್ಷಗಳ ಹಿಂದೆ ನಿಷೇಧಕ್ಕೆ ಒಳಗಾದ ಒಂದಂಕಿ ಲಾಟರಿ ಹಗರಣ 2015ರಲ್ಲಿ ಮತ್ತೆ ಭಾರಿ ಸುದ್ದಿಗೆ ಕಾರಣವಾಯಿತು. ಕರ್ನಾಟಕದಲ್ಲಿ ಲಾಟರಿ ನಿಷೇಧವಿದ್ದರೂ ಹೊರಗಡೆ ಮುದ್ರಿಸಿ ರಾಜ್ಯದಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇತ್ತಾದರೂ, ಮೇಲಧಿಕಾರಿಗಳ ಸೂಚನೆಯಂತೆ ಸುಮ್ಮನಿದ್ದರು ಮತ್ತು ಇದಕ್ಕಾಗಿ ಪೊಲೀಸ್ ಇಲಾಖೆಗೆ ಪ್ರತೀ ತಿಂಗಳು ಅಧಿಕಾರಿಗಳಿಗೆ "ಕಾಣಿಕೆ' ಸಲ್ಲುತ್ತಿತ್ತು ಎಂದು ಆರೋಪಿಸಲಾಗಿತ್ತು.
ಈ ವಿಚಾರವನ್ನು ಖಾಸಗಿ ಸುದ್ದಿವಾಹಿನಿಯೊಂದು ಬಯಲಿಗೆಳೆದಿತ್ತು. ಚುಟುಕು ಕಾರ್ಯಾಚರಣೆಯಲ್ಲಿ ಲಾಟರಿ ಕಿಂಗ್ ಪಿನ್ ಪಾರಿರಾಜನ್ ಜತೆ ಇಬ್ಬರು ಎಡಿಜಿಪಿ, ಮೂವರು ಐಜಿಪಿ, ಇಬ್ಬರು ನಿವೃತ್ತ ಡಿಜಿಪಿ ಸೇರಿ 32 ಅಧಿಕಾರಿಗಳಿಗೆ ಸಂಪರ್ಕ ಇತ್ತು ಎಂದು ತಿಳಿದುಬಂದಿತ್ತು. ಈ ಅಧಿಕಾರಿಗಳು ತಮ್ಮ ಪ್ರಭಾವ ಬೀರಿ ರಾಜ್ಯವ್ಯಾಪಿ ಅಕ್ರಮ ಲಾಟರಿ ದಂಧೆ ನಡೆಯಲು ಸಹಕರಿಸಿದ್ದರು. ಪಾರಿ ರಾಜನ್ ಜತೆ ಪೊಲೀಸ್ ಅಧಿಕಾರಿಗಳು ನಿರಂತರವಾಗಿ ಮೊಬೈಲ್ ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದು ಸಿಐಡಿ ಮಧ್ಯಂತರ ವರದಿ ತಿಳಿಸಿತ್ತು.
ಇನ್ನೂ ಅಚ್ಚರಿ ಎಂದರೆ ಈ ಹೈ ಪ್ರೊಫೈಲ್ ಪ್ರಕರಣದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳು ಎಂದು ಖ್ಯಾತಿಗಳಿಸಿದ್ದ ಅಲೋಕ್ ಕುಮಾರ್ ರಂತಹ ಅಧಿಕಾರಿಗಳೇ ಲಾಭ ಪಡೆದ ಆರೋಪದ ಮೇಲೆ ಅಮಾನತುಗೊಂಡಿದ್ದು ಪ್ರಕರಣದ ಗಂಭೀರತೆಯನ್ನು ತೋರಿಸುತ್ತಿತ್ತು.
ಮೂರು ವರ್ಷ ರಜೆ ಕೋರಿದ್ದ ಅಲೋಕ್
ಅಕ್ರಮ ಲಾಟರಿ ದಂಧೆಯ ರೂವಾರಿ ರಾಜನ್ ಜತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಅಮಾನತುಗೊಂಡಿದ್ದ ಐಜಿಪಿ ಅಲೋಕ್‌ಕುಮಾರ್ ಉನ್ನತ ತರಬೇತಿಗಾಗಿ ಮೂರು ವರ್ಷ ದೀರ್ಘ ರಜೆ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಅವರು ದೆಹಲಿಗೂ ಹೋಗಿ ಬಂದಿದ್ದರು. ಸಿಐಡಿ ಮಧ್ಯಂತರ ವರದಿಯಲ್ಲಿ ಅಲೋಕ್ ಕುಮಾರ್ ಹೆಸರು ಇರುವುದು ಪತ್ತೆಯಾದ ತಕ್ಷಣವೇ ಕಡ್ಡಾಯ ರಜೆ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೆ, ತರಬೇತಿಗಾಗಿ ದೀರ್ಘ ರಜೆ ಕೋರಿ ಮನವಿ ಸಲ್ಲಿಸಿದ್ದೇನೆ. ಅದಕ್ಕೆ ಅನುಮತಿ ದೊರೆಯುತ್ತದೆ ಎಂದು ಅಲೋಕ್ ವಿಶ್ವಾಸ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.
ಅಲೋಕ್ ಅಮಾನತೇಕೆ?
ಮೂಲಗಳ ಪ್ರಕಾರ, ದಂಧೆ ರೂವಾರಿ ಪಾರಿ ರಾಜನ್ ಮಾಹಿತಿದಾರನಾಗಿ ಅಲೋಕ್ ಕುಮಾರಗೆ ಪರಿಚಯವಾದ. ಅಲೋಕ್‌ಗೆ ಆತನ ಪರಿಚಯ ಮಾಡಿಸಿದ್ದೇ ಮತ್ತೂಬ್ಬ ಹಿರಿಯ ಅಧಿಕಾರಿ. ಬಳಿಕ ಪಾರಿರಾಜನ್ ತನ್ನ ವ್ಯವಹಾರಗಳಿಗೆ ಅಲೋಕ್ ಸಹಾಯ ಪಡೆದ. ಆತನನ್ನು ಹಲವು ಕಿರಿಯ ಅಧಿಕಾರಿಗಳಿಗೆ ಅಲೋಕ್ ಪರಿಚಯ ಮಾಡಿಸಿದ್ದರು. ಪಾರಿ ರಾಜನ್‌ಗಾಗಿ ತಲಾಷೆ ನಡೆದಾಗ ಆತನನ್ನು ಬಂಧಿಸದಂತೆ ಕಿರಿಯ ಅಧಿಕಾರಿ ಮೇಲೆ ಒತ್ತಡ ಹಾಕಿದ್ದರೆನ್ನಲಾಗುತ್ತಿದೆ. ಪಾರಿ ಜತೆ ಅಲೋಕ್ ಗೆ ನಿರಂತರ ಮೊಬೈಲ್ ಸಂಪರ್ಕ ಇತ್ತೆನ್ನಲಾಗಿದೆ.
Advertisement