
ಕೇವಲ ಪ್ರಾಕೃತಿಕ ವಿಕೋಪಗಳಷ್ಟೇ ಅಲ್ಲದೇ ಮಾನವನ ಸ್ವಯಂಕೃತ ಅಪರಾಧಗಳು ಕೂಡ ಇಂದು ವಿಶ್ವದ ಹಲವು ದೇಶಗಳಲ್ಲಿ ಭೀತಿ ಸೃಷ್ಟಿಸಿವೆ. ಅತಿಯಾದ ಅಭಿವೃದ್ಧಿ ಜಗತ್ತಿನ ಹಲವು ಪ್ರಮುಖ ದೇಶಗಳಲ್ಲಿ ಪರಿಸರ ಮಾಲಿನ್ಯವನ್ನುಂಟು ಮಾಡಿದ್ದು, ಸಾಕಷ್ಟು ನಗರಗಳ ಮಾಲಿನ್ಯದಿಂದಾಗಿ ನರಳುತ್ತಿವೆ.
ವಾಯುಮಾಲಿನ್ಯದಿಂದಾಗಿ ರೆಡ್ ಅಲರ್ಟ್ ಘೋಷಿಸಿದ ಬೀಜಿಂಗ್
ವಿಶ್ವದಾದ್ಯಂತ ಇದೀಗ ಕಾಡುತ್ತಿರುವುದು ವಾಯುಮಾಲಿನ್ಯ ಸಮಸ್ಯೆ. ಮನುಷ್ಯ ತನ್ನ ಅಗತ್ಯಕ್ಕೆ ತಕ್ಕಂತೆ ಹಾಗೂ ತನ್ನ ಸ್ವಾರ್ಥಕ್ಕೆ ಪ್ರಕೃತಿಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಆದರೆ, ಪ್ರಕೃತಿಗೆ ಉಂಟಾಗುತ್ತಿರುವ ಹಾನಿಯ ಬಗ್ಗೆ ಆಲೋಚನೆ ಮಾಡುತ್ತಿರುವವರು ಮಾತ್ರ ಬೆರಳೆಣಿಕೆಯಷ್ಟು ಜನ. ಇಂದು ದೇಶದಲ್ಲಿ ವಾಯುಮಾಲಿನ್ಯ ಹೆಚ್ಚಾಗಿ ಸಾಕಷ್ಟು ಅನಾಹುತಗಳು ಆಗುತ್ತಿರುವುದು ಪ್ರತೀನಿತ್ಯ ನಮ್ಮ ಗಮನಕ್ಕೆ ಬರುತ್ತಿರುತ್ತದೆ. ಜಾಗತಿಕ ತಾಪಮಾನ ಏರಿಕೆಯಿಂದ ಹಿಡಿದು ಜನರಿಗೆ ಅನಾರೋಗ್ಯದ ಸಮಸ್ಯೆಗಳವರೆಗೆ ವಾಯುಮಾಲಿನ್ಯದಿಂದ ಆಗುತ್ತಿರುವ ನಷ್ಟ ಸಾಕಷ್ಟು. ಚೀನಾದ ರಾಜಧಾನಿ ಬೀಜಿಂಗನ್ನು ವಾಯುಮಾಲಿನ್ಯದ ಕಾರಣದಿಂದ ಕೆಲಸ ದಿನಗಳ ಕಾಲ ಸಂಪೂರ್ಣ ಬಂದ್ ಮಾಡಿ ರೆಡ್ ಅರ್ಟ್ ಘೋಷಿಸಲಾಗಿತ್ತು. ಚೀನಾದಲ್ಲೀಗ ಶುದ್ಧ ಗಾಳಿಯನ್ನು ಬಾಟಲಿಗಳಲ್ಲಿ ಆಮದು ಮಾಡಿಕೊಂಡು ಜನರು ಉಸಿರಾಡುವ ಪರಿಸ್ಥಿತಿ ಉಂಟಾಗಿದೆ.
ಅತಿಯಾದ ವಾಯುಮಾಲಿನ್ಯದಿಂದಾಗಿ ಅಲ್ಲಿನ ಜನ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಲ್ಲಿನ ಸರ್ಕಾರಿ ಕಚೇರಿಗಳು, ಶಾಲೆ, ಕಾಲೇಜುಗಳು, ಖಾಸಗಿ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಬೀಜಿಂಗ್ ನಗರದಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು, ವಿವಿಧ ಬಗೆಯ ಕಾರ್ಖಾನೆಗಳು, ದೊಡ್ಡ ಸಂಖ್ಯೆಯಲ್ಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳು, ದೊಡ್ಡ ಸಂಖ್ಯೆಯ ವಾಹನಗಳು ಇರುವುದರಿಂದ ಅಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಅತಿಯಾದ ವಾಯು ಮಾಲಿನ್ಯದಿಂದಾಗಿ ಅಲ್ಲಿನ ನಿವಾಸಿಗಳು ಉಸಿರಾಡಲು ಸ್ವಚ್ಛ ಗಾಳಿ ಸಿಗದೇ ನಾನಾ ಬಗೆಯ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದೀಗ ಇಲ್ಲಿ ದಟ್ಟವಾಗಿ ಮಂಜು ಕವಿತದರೆ ಸಾಕು, ವಾಯುಮಾಲಿನ್ಯ ಹೆಚ್ಚಾಗಿ ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಗಿದೆ.
ವಾಯು, ಶಬ್ಧ ಮಾಲಿನ್ಯದಲ್ಲಿ ನಗರ ನಂ.1
ಸುಮಾರು 800 ಚದರ ಕಿ.ಮೀ. ವ್ಯಾಪ್ತಿಯಲ್ಲಿ ವಿಸ್ತಾರವಾಗಿರುವ ಬೆಂಗಳೂರು ಪ್ರತಿ ದಿನ ಬೆಳೆಯುತ್ತಲೇ ಇದೆ. ಇದಕ್ಕೆ ಪೈಪೋಟಿ ಎನ್ನುವಂತೆಯೇ ವಾಯುಮಾಲಿನ್ಯ, ಶಬ್ಧ ಮಾಲಿನ್ಯ, ಅತಿ ಹೆಚ್ಚು ಜನಸಂಖ್ಯೆಯೂ ಬೆಳೆಯುತ್ತಿದೆ. ಈಗ ದಿಗ್ಭ್ರಮೆ ಮೂಡಿಸಿರುವ ಅಂಶವೇನೆಂದರೆ ಇವಿಷ್ಟು ಅಂಶಗಳು ಇತಿಮಿತಿಯಿಲ್ಲದೆ ಬೆಳೆಯುತ್ತಿರುವುದು. ಈ ಬೆಳವಣಿಗೆ ಇದೀಗ ಇಲ್ಲಿನ ನಾಗರಿಕರಿಗೆ ಭಯವನ್ನು ಹುಟ್ಟುವಂತೆ ಮಾಡಿದೆ. ಇತ್ತೀಚೆಗಷ್ಟೇ ಅಧ್ಯಯನ ನಡೆಸಿರುವ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವೈರ್ ಮೆಂಟ್ (ಸಿಎಸ್ಇ) ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಈ ವರದಿ ನಗರದ ಜನತೆ ಬೆಚ್ಚಿಬೀಳುವಂತೆ ಮಾಡಿದೆ. ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆ ಪಡೆದಿದ್ದ ನಗರ ಇದೀಗ ವಾಯುಮಾಲಿನ್ಯ, ಶಬ್ಧ ಮಾಲಿನ್ಯಕ್ಕೆ ನಂ.1 ನಗರ ಎಂಬ ಹೆಸರನ್ನು ಪಡೆದಿದೆ.
ನಗರದಲ್ಲಿ ಎಗ್ಗಿಲ್ಲದೆ ವ್ಯಾಪಿಸುತ್ತಿರುವ ವಾಯುಮಾಲಿನ್ಯದ ಪ್ರಮಾಣ ಶೇ.57 ರಷ್ಟು ಹೆಚ್ಚಿದೆ. ದಕ್ಷಿಣ ಭಾರತದ ಪ್ರಮುಖ ನಗರಗಳ ಪೈಕಿ ವಾಯುಮಾಲಿನ್ಯ ಹೆಚ್ಚಳದಲ್ಲಿ ಬೆಂಗಳೂರು (140 ಮೈಕ್ರೋಗ್ರಾಂ ಪರ್ ಕ್ಯೂಬಿಕ್ ಮೀಟರ್) ಮೊದಲ ಸ್ಥಾನದಲ್ಲಿದೆ. ವಿಷಕಾರಿ ಗಾಳಿಯುಳ್ಳ ಪ್ರದೇಶಗಳ ಪೈಕಿ ಬೆಂಗಳೂರೇ ನಂ.1 ಸ್ಥಾನದಲ್ಲಿದೆ. ಇಡೀ ದ.ಭಾರತದ ಮೆಟ್ರೋ ನಗರಗಳಲ್ಲಿ ವಾಯುಮಾಲಿನ್ಯದಲ್ಲಿ ಮುಂಚೂಣಿಯಲ್ಲಿರುವುದು ಇದೇ ಸಿಲಿಕಾನ್ ಸಿಟಿ! ಅಲ್ಲದೆ ಅತಿ ಹೆಚ್ಚು ವಾಹನ ಹೊಂದಿರುವ ಮೆಟ್ರೋ ನಗರಗಳ ಪೈಕಿ ದೆಹಲಿ ಮೊದಲ ಸ್ಥಾನ (ಮುಂಬೈ, ಕೋಲ್ಕತಾ ಹಾಗೂ ಚೆನ್ನೈನಲ್ಲಿರುವ ವಾಹನಗಳ ಕೂಡಿಸಿದರೆ ಆಟುವ ಒಟ್ಟು ಮಾಲಿನ್ಯ ದೆಹಲಿಯೊಂದರಲ್ಲೇ ಆಗುತ್ತದೆ), ಎರಡನೇ ಸ್ಥಾನದಲ್ಲಿ ಬೆಂಗಳೂರಿಗಿದೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯು ಮತ್ತು ಶಬ್ಧ ಮಾಲಿನ್ಯ ತಡೆಗಟ್ಟಲು ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಡಬ್ಲ್ಯೂ ಪಿ ನಂ.39432/2015) ದಾಖಲಿಸಿಕೊಂಡ ಹೈ ಕೋರ್ಟ್ ಬಿಬಿಎಂಪಿ, ಬಿಡಿಎ, ಸರ್ಕಾರ ಪೊಲೀಸ್, ಸಾರಿಗೆ ಇಲಾಖೆಗೆ ನೂತನ ವಾಹನ ನೋಂದಣಿ ನಿಯಂತ್ರಣ ಭಾರೀ ವಾಹನ ಪ್ರವೇಶ ನಿರ್ಬಂಧ, ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಸ್ಟ್ರೋಕ್ ದ್ವಿಚಕ್ರ ವಾಹನ ನಿಷೇಧ, ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಆಟೋರಿಕ್ಷಾ ಸಂಚಾರ ನಿರ್ಬಂಧ ಸೇರಿದಂತೆ ಇನ್ನಿತರೆ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿದೆ. ವಾಯುಮಾಲಿನ್ಯವೊಂದು ನಿಜಕ್ಕೂ ಗಂಭೀರವಾಗಿದ್ದು, ಈಗಲಾದರೂ ಮನುಕುಲ ಎಚ್ಚೆತ್ತುಕೊಂಡು ಪ್ರಕೃತಿಯನ್ನು ಸಂರಕ್ಷಿಸುವಲ್ಲಿ ಅಗತ್ಯ ಕ್ರಮಕೈಗೊಳ್ಳಲೇಬೇಕಾದ ಸಂದರ್ಭ ಎದುರಾಗಿದೆ.
ರಾಷ್ಟ್ರ ರಾಜಧಾನಿಯಲ್ಲೂ ಮಿತಿಮೀರಿದ ವಾಯುಮಾಲಿನ್ಯ
ದೆಹಲಿಯ ವಾಯುಮಾಲಿನ್ಯದಲ್ಲಿ ಮನುಷ್ಯರಿಗೆ ಮಾರಕವಾದ ವಿಷಯುಕ್ತ (ಟಾಕ್ಸಿಕ್) ಅಂಶವೇ ಅತ್ಯಧಿಕ ಪ್ರಮಾಣದಲ್ಲಿದೆ ಎಂಬ ಆಘಾತಕಾರಿ ವಿಷಯವನ್ನು ಸಂಶೋಧಕರು ಹೊರಹಾಕಿದ್ದಾರೆ. ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ನಗರವೂ ದೆಹಲಿಯೇ ಆಗಿದ್ದು, ಇಲ್ಲಿ ಪ್ರಸ್ತುತ 2.58 ಕೋಟಿ ಜನಸಂಖ್ಯೆಯಿದೆ.
ದೆಹಲಿಯಲ್ಲಿನ ಜನಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಇದರ ಪರಿಣಾಮವಾಗಿ ನಗರದಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚುತ್ತದೆ. ಆತಂಕಕಾರಿ ಅಂಶವೆಂದರೆ, ದೆಹಲಿಯ ಗಾಳಿಯಲ್ಲಿ ಕಂಡುಬಂದಿರುವ ಸಾಂದ್ರತೆ 286 ಮೈಕ್ರೊಗ್ರಾಂನಷ್ಟಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿರುವ ಹಿನ್ನಲೆಯಲ್ಲಿ ವಾಯುಮಾಲಿನ್ಯ ತಡೆಗಟ್ಟಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಡೀಸೆಲ್ ವಾಹನ ಮಾರಾಟಕ್ಕೆ ನಿರ್ಬಂಧ ಹೇರಿದೆ. ಡೀಸೆಲ್ ವಾಹನಗಳಿಗೆ ಪ್ರಾದೇಶಿಕ ಸಾರಿಗೆ ಸಂಸ್ಥೆ ನೋಂದಣಿ ನೀಡದಂತೆ ಅಲ್ಲಿನ ಸರ್ಕಾರಕ್ಕೆ ಹಸಿರು ಪೀಠ ಆದೇಶ ಹೊರಡಿಸಿದೆ.
- ಮಂಜುಳ ವಿ.ಎನ್
Advertisement