ಹಿನ್ನೋಟ 2016: ವಿಶ್ವದಲ್ಲಿನ ಪ್ರಮುಖ ಬೆಳವಣಿಗೆಗಳು

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ 2016ರ ಮಾರ್ಚ್ ತಿಂಗಳಲ್ಲಿ ಕ್ಯೂಬಾ ದೇಶಕ್ಕೆ ಐತಿಹಾಸಿಕ ಭೇಟಿ ನೀಡಿದ್ದರು.
ಹಿನ್ನೋಟ 2016: ವಿಶ್ವದಲ್ಲಿನ ಪ್ರಮುಖ ಬೆಳವಣಿಗೆಗಳು
ಹಿನ್ನೋಟ 2016: ವಿಶ್ವದಲ್ಲಿನ ಪ್ರಮುಖ ಬೆಳವಣಿಗೆಗಳು
ಬದ್ಧ ವೈರಿ ಕ್ಯೂಬಾಗೆ ಅಮೆರಿಕ ಅಧ್ಯಕ್ಷರ ಭೇಟಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ 2016ರ ಮಾರ್ಚ್ ತಿಂಗಳಲ್ಲಿ ಕ್ಯೂಬಾ ದೇಶಕ್ಕೆ ಐತಿಹಾಸಿಕ ಭೇಟಿ ನೀಡಿದ್ದರು. ಬದ್ಧ ವೈರಿಯಾಗಿದ್ದ ಕ್ಯೂಬಾಗೆ ಸುಮಾರು 88 ವರ್ಷಗಳ ಬಳಿಕ ಭೇಟಿ ನೀಡಿದ ಮೊದಲ ಅಮೆರಿಕ ಅಧ್ಯಕ್ಷ ಎಂಬ ಖ್ಯಾತಿ ಬರಾಕ್ ಒಬಾಮರದ್ದು. ಕ್ಯೂಬಾ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದ ಬರಾಕ್ ಒಬಾಮ ವಾಣಿಜ್ಯ ಮತ್ತು ಸ್ನೇಹ ಬಾಂಧವ್ಯದ ಬಗ್ಗೆ ಚರ್ಚೆ ನಡೆಸಿದ್ದರು. 1959ರ ನಂತರ ಅಮೆರಿಕ ಕಮ್ಯುನಿಸ್ಟ್ ರಾಷ್ಟ್ರ ಕ್ಯೂಬಾ ಜತೆಗಿನ ಸುಮಾರು 53 ವರ್ಷಗಳ ಹಗೆತನ ಅಂತ್ಯಗೊಳಿಸಿತ್ತು.
ಡೊನಾಲ್ಡ್ ಟ್ರಂಪ್ ಗೆಲುವು: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಗೆಲುವು ಸಾಧಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತಾದರೂ, ನಿರೀಕ್ಷೆಗೂ ಮೀರಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. 
ಅಮೆರಿಕ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ: ಅಮೆರಿಕಾಗೆ ಪೈಪೋಟಿ ನೀಡುತ್ತಿರುವ ರಷ್ಯಾದ ವಿರುದ್ಧ ಅಮೆರಿಕದ-2016 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವ ಆರೋಪ ಕೇಳಿಬಂದಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿ ಈಗ ಆಯ್ಕೆಯಾಗಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಗೆಲುವಿಗೆ ರಷ್ಯಾ ಸಹಕರಿಸಿತ್ತು. ಟ್ರಂಪ್ ಗೆಲುವಿಗೆ ಸಹಕರಿಸಲು ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ಇ-ಮೇಲ್ ಖಾತೆಗಳನ್ನು ಹ್ಯಾಕ್ ಮಾಡಿ ಹಿಲರಿ ಕ್ಲಿಂಟನ್ ಜನಪ್ರಿಯತೆಯನ್ನು ಕುಗ್ಗಿಸಿತ್ತು, ಇದರಿಂದಾಗಿ ಟ್ರಂಪ್ ಗೆಲುವಿನ ಹಾದಿ ಸುಗಮವಾಯಿತು ಎಂಬ ಆರೋಪಗಳು ಕೇಳಿಬಂದಿವೆ. ರಷ್ಯಾ ವಿರುದ್ಧ  ಕ್ರಮ ಕೈಗೊಳ್ಳುವುದಾಗಿ ಒಬಾಮ ಸಹ ಎಚ್ಚರಿಕೆ ನೀಡಿದ್ದು, ಈ ಬೆಳವಣಿಗೆ ರಷ್ಯಾಗೆ ವಿಶ್ವದ ದೊಡ್ಡಣ್ಣನ ಚುನಾವಣೆಯಲ್ಲಿ ಯಾರು ಗೆಲ್ಲಬೇಕೆಂಬುದನ್ನು ನಿರ್ಧರಿಸುವ ತಾಕತ್ತಿದೆಯೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.    
ಮುರಿದುಬಿದ್ದ ಭಾರತ-ಪಾಕ್ ದ್ವಿಪಕ್ಷೀಯ ಸಂಬಂಧ: ಡೊಲಾಯಮಾನ ಸ್ಥಿತಿಯಲ್ಲಿದ್ದ ಭಾರತ-ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧ ಚಿಗುರುವ ನಿರೀಕ್ಷೆ ಇತ್ತು. ಆದರೆ ವರ್ಷದ ಪ್ರಾರಂಭದಲ್ಲೇ 2016 ಜ.2 ರಂದು ಪಠಾಣ್ ಕೋಟ್ ನಲ್ಲಿ ಪಾಕ್  ಬೆಂಬಲಿತ ಭಯೋತ್ಪಾದಕರು ದಾಳಿ ನಡೆಸಿದ ನಂತರ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧ ಸಂಪೂರ್ಣವಾಗಿ ಮುರಿದುಬಿದ್ದು. ಪಾಕಿಸ್ತಾನ ಭಯೋತ್ಪಾದನೆಯನ್ನು ಪದೇ ಪದೇ ಬೆಂಬಲಿಸಿದ್ದಕ್ಕಾಗಿ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಒಂಟಿಯಾಗಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.
ಗ್ವಾದಾರ್ ಬಂದರಿಗೆ ಪರ್ಯಾಯವಾಗಿ ಚಬಹಾರ್ ಬಂದರು ಒಪ್ಪಂದಕ್ಕೆ ಸಹಿ: ಪಾಕಿಸ್ತಾನದ ಹಂಗಿಲ್ಲದೇ ಭಾರತದಿಂದ ಅಫ್ಘಾನಿಸ್ತಾನ ಮತ್ತು ಯುರೋಪ್ ಗೆ ನೇರ ಸಂಪರ್ಕ ಕಲ್ಪಿಸುವ ವ್ಯೂಹಾತ್ಮಕ ಕೇಂದ್ರವಾಗಿ ಕಾರ್ಯಾಚರಿಸಬಲ್ಲ ಚಬಹಾರ್ ಬಂದರು ನಿರ್ಮಾಣದ ಮಹತ್ವದ ಒಪ್ಪಂದಕ್ಕೆ 2016 ರ ಮೇ. 23 ರಂದು ಭಾರತ  ಮತ್ತು ಇರಾನ್ ಸಹಿ ಹಾಕಿದ್ದವು. ಪ್ರಧಾನಿ ನರೇಂದ್ರ ಮೋದಿ 2016 ರಲ್ಲಿ ಇರಾನ್ ಗೆ ಭೇಟಿ ನೀಡುವ ಮೂಲಕ 15 ವರ್ಷಗಳ ನಂತರ ಇರಾನ್ ಗೆ ಭೇಟಿ ನೀಡಿದ ಪ್ರಧಾನಿಯಾಗಿದ್ದರು. 
ಗಾಢಗೊಂಡ ಭಾರತ-ಅಫ್ಘಾನಿಸ್ತಾನ ದ್ವಿಪಕ್ಷೀಯ ಸಂಬಂಧ:  2016 ರ ವರ್ಷ ಕೇವಲ ಭಾರತ- ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸಂಬಂಧ ಕಡಿದುಕೊಂಡ ವರ್ಷವಲ್ಲ, ಇದೇ ವರ್ಷದಲ್ಲಿ ಭಾರತ ಅನೇಕ ರಾಷ್ಟ್ರಗಳೊಂದಿಗೆ ಸ್ನೇಹದ ಬೆಸುಗೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಆ ಪೈಕಿ ಅಫ್ಘಾನಿಸ್ತಾನವೂ ಒಂದು.  ಭಾರತ-ಅಪ್ಘಾನಿಸ್ತಾನ ಸ್ನೇಹದ ಪ್ರತೀಕವಾಗಿ 290 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸಲ್ಮಾ ಡ್ಯಾಂ ನ್ನು  2016ರ ಜೂ.5 ರಂದು ಪ್ರಧಾನಿ ನರೇಂದ್ರ ಮೋದಿ, ಅಪ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಜಂಟಿಯಾಗಿ ಉದ್ಘಾಟಿಸಿದ್ದರು. 
19 ನೇ ಸಾರ್ಕ್ ಶೃಂಗಸಭೆ ರದ್ದು: ನವೆಂಬರ್ ನಲ್ಲಿ ಪಾಕಿಸ್ತಾನದಲ್ಲಿ ನಡೆಯಲು ನಿಗದಿಯಾಗಿದ್ದ 19ನೆ ಸಾರ್ಕ್ ಶೃಂಗಸಭೆ ಪಾಕಿಸ್ತಾನದ ಭಯೋತ್ಪಾದನೆ ಉತ್ತೇಜನ ನೀತಿಯಿಂದಾಗಿ ರದ್ದುಗೊಂಡಿದ್ದು  ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದಂತೆ 2016ರಲ್ಲಿ ನಡೆದ ಮಹತ್ವದ ಘಟನೆಗಳಲ್ಲಿ ಮಹತ್ವದ್ದು. ಪಾಕ್ ನಡೆಸುತ್ತಿರುವ ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿದಂತೆ ಪಾಕ್ ವಿರುದ್ಧ ಸಾರ್ಕ್ ರಾಷ್ಟ್ರಗಳು ಒಂದಾಗಿ ಸಾರ್ಕ್ ಸಮ್ಮೇಳನವನ್ನು ಬಹಿಷ್ಕರಿಸಿದ್ದವು. ಈ ಮೊದಲು ಪಾಕ್ ನಡೆಸಿದ್ದ ಉರಿ ದಾಳಿಯಿಂದ ಬಾರತ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿತ್ತು. ಇದಕ್ಕೆ ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಭೂತಾನ್ ರಾಷ್ಟ್ರಗಳು ಸಹ ಭಾರತ ನಡೆಯನ್ನು ಅನುಸರಿಸಿ ನವೆಂಬರ್ 9 ಮತ್ತು 10ರಂದು ಇಸ್ಲಾಮಾಬಾದ್ ನಲ್ಲಿ ನಿಗದಿಯಾಗಿದ್ದ ಸಾರ್ಕ್ ಸಮ್ಮೇಳನವನ್ನು ಬಹಿಷ್ಕರಿಸಿದ್ದವು. ಸಾರ್ಕ್ ಶೃಂಗಸಭೆ ನಡೆಸಲು ಯೋಗ್ಯವಾದ ಪರಿಸರವನ್ನು ಪಾಕಿಸ್ತಾನ ಹೊಂದಿಲ್ಲ ಆದ್ದರಿಂದ ಶೃಂಗಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಭೂತಾನ್, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ರಾಷ್ಟ್ರಗಳು ಭಾರತದೊಂದಿಗೆ ಕೈ ಜೋಡಿಸದ್ದವು.  
ಎನ್ ಎಸ್ ಜಿಗೆ ಅಡ್ಡಗಾಲು, ತಂತ್ರಕ್ಕೆ ಪ್ರತಿತಂಟ್ರ, ಚೀಗಾಗೆ ಭಾರತ ತಿರುಗೇಟು:  ಪೂರೈಕೆದಾರರ ಸಮೂಹದ (ಎನ್​ಎಸ್​ಜಿ) ಗುಂಪಿಗೆ ಸೇರಬೇಕೆಂಬ ಭಾರತದ ಮಹತ್ವಾಕಾಂಕ್ಷೆಗೆ ಅಮೆರಿಕ ಬ್ರಿಟನ್, ಇಟಲಿ,  ಮೆಕ್ಸಿಕೋ, ಸ್ವಿಟ್ಜರ್ಲೆಂಡ್, ರಷ್ಯಾ ಸೇರಿದಂತೆ ಬಹುತೇಕ ರಾಷ್ಟ್ರಗಳು ಬೆಂಬಲ ನೀಡಿದ್ದರು. ಆದರೆ 2016 ರ ಜೂನ್ ತಿಂಗಳಲ್ಲಿ ಸಿಯೋಲ್ ನಲ್ಲಿ ನಡೆದ ಎನ್ಎಸ್ ಜಿ ರಾಷ್ಟ್ರಗಳ ಸಭೆಯಲ್ಲಿ ಚೀನಾ ಭಾರತದ ಪ್ರಯತ್ನಕ್ಕೆ ಅಡ್ಡಗಾಲು ಹಾಕಿ ಎನ್ಎಸ್ ಜಿ ಸದಸ್ಯತ್ವದ ಕನಸನ್ನು ಭಗ್ನಗೊಳಿಸಿತ್ತು. ಅಷ್ಟೇ ಅಲ್ಲದೇ ತಾನು ವಿರೋಧಿಸಿದರೆ ಉಳಿದ ರಾಷ್ಟ್ರಗಳೂ ವಿರೋಧಿಸಲಿವೆ ಎಂಬ ಭ್ರಮೆಯಲ್ಲಿತ್ತು. ಆದರೆ ಭಾರತದ ಎನ್‏ಎಸ್‏ಜಿ ಸದಸ್ಯತ್ವ ತಡೆಗೆ ಜಾಗತಿಕ ಮಟ್ಟದಲ್ಲಿ ನೀರಸ ಬೆಂಬಲ ದೊರೆತಿದ್ದಕ್ಕೆ  ಚೀನಾ ತಪ್ಪು ಮಾಹಿತಿ ನೀಡಿದ್ದ ತನ್ನ ಅಧಿಕಾರಿಯನ್ನು ವಜಾಗೊಳಿಸಿತ್ತು. ಈ ಬೆಳವಣಿಗೆಗಳ ನಂತರ ಚೀನಾಗೆ ತಿರುಗೇಟು ನೀಡಲು ಭಾರತ ಸಹ ಯತ್ನಿಸಿದ್ದು, ದಕ್ಷಿಣ ಚೀನಾ ಸಮುದ್ರ ವಿವಾದಲ್ಲಿ ಚೀನಾ ವಿರುದ್ಧ ಸ್ಪಷ್ಟ ನಿಲುವು ಪ್ರಕಟಿಸಲು ಭಾರತ ಸರ್ಕಾರ ತೀರ್ಮಾನಿಸಿತ್ತು. 
ಎನ್ ಎಸ್ ಜಿ ಗೆ ಅಡ್ದಗಾಲು ಹಾಕಿದಂತೆಯೇ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಭಾರತದ ಯತ್ನಕ್ಕೂ ಚೀನಾ ಅಡ್ದಗಾಲು ಹಾಕಿತ್ತು. ಆದರೆ ಚೀನಾಗೆ ಅದರ ಭಾಷೆಯಲ್ಲೇ ಉತ್ತರ ನೀಡಿದ್ದ ಭಾರತ ಚೀನಾದ ಉಯ್ಗುರ್ ಪ್ರಾಂತ್ಯದಲ್ಲಿ ಮುಸ್ಲಿಂ ಪ್ರಾಬಲ್ಯವಿದ್ದು, ಅಲ್ಲಿನವರು ತಮ್ಮ ಹಕ್ಕು ಸ್ಥಾಪನೆಗೆ ಹೋರಾಟ ನಡೆಸುತ್ತಿರುವ ಪ್ರತ್ಯೇಕತಾವಾದಿ ಮುಖಂಡ ದೋಲ್ಕುನ್ ಇಸಾ ಎಂಬಾತನಿಗೆ ವೀಸಾ ನೀಡಿ, ನಂತರ ವಾಪಸ್ ಪಡೆದಿತ್ತು. 
ಹಿರೋಷಿಮಾ ನಾಗಸಾಕಿಗೆ ಬರಾಕ್ ಭೇಟಿ: 2016 ರ ಮೇ ತಿಂಗಳಲ್ಲಿ ಬರಾಕ್ ಒಬಾಮ ಜಪಾನ್ ಗೆ ಭೇಟಿ ನೀಡಿದ್ದರು. ಎರಡನೇ ಮಹಾಯುದ್ಧದ ಬಳಿಕ ಜಪಾನ್ ನಗರಕ್ಕೆ ಭೇಟಿ ನೀಡಿದ್ದ ಮೊದಲ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಮೇ.27 ರಂದು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ಹಿರೋಶಿಮಾಕ್ಕೂ ಭೇಟಿ ನೀಡಿದ್ದರು. ಆದರೆ ಹಿರೋಶಿಮಾ ನಾಗಸಾಕಿ ಮೇಲೆ ಅಮೆರಿಕ ಅಣು ಬಾಂಬ್ ಸ್ಫೋಟಿಸಿದ್ದ ಘಟನೆ ಬಗ್ಗೆ ಕ್ಷಮೆ ಕೇಳಲು ನಿರಾಕರಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com