ಹಿನ್ನೋಟ 2016: ಪ್ರಮುಖ ಭಯೋತ್ಪಾದಕ ದಾಳಿಗಳು

2016ರಲ್ಲಿ ಜಗತ್ತಿನಾದ್ಯಂತ ಭಯೋತ್ಪಾದಕರು ರಕ್ತದ ಓಕುಳಿಯನ್ನು ಹರಿಸಿದ್ದಾರೆ. ಭಯೋತ್ಪಾದಕರ ದಾಳಿಗಳಲ್ಲಿ ಸಾವಿರಾರು ಅಮಾಯಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ...
ಹಿನ್ನೋಟ 2016: ಪ್ರಮುಖ ಭಯೋತ್ಪಾದಕ ದಾಳಿಗಳು
ಹಿನ್ನೋಟ 2016: ಪ್ರಮುಖ ಭಯೋತ್ಪಾದಕ ದಾಳಿಗಳು
ಉರಿ ಸೇನಾ ಶಿಬಿರದ ಮೇಲೆ ದಾಳಿ
ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ಪಾಕ್ ಮೂಲದ ಉಗ್ರರು ದಾಳಿ ನಡೆಸಿದ್ದರು. ಮಲಗಿದ್ದ ಸೈನಿಕರ ಬಿಡಾರಗಳ ಮೇಲೆ ದಾಳಿ ನಡೆಸಿದ್ದ ಉಗ್ರರು ಬಿಡಾರಗಳಿಗೆ ಬೆಂಕಿ ಹಚ್ಚಿದ್ದರು. ನಿದ್ದೆಯ ಮಂಪರಿನಲ್ಲಿದ್ದ 17 ಯೋಧರು ಸಜೀವವಾಗಿ ಸುಟ್ಟುಹೋಗಿದ್ದರು. ಗಾಯಗೊಂಡಿದ್ದ 20 ಸೈನಿಕರಲ್ಲಿ ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃಪಟ್ಟಿದ್ದರು. ಈ ಉಗ್ರರು ಪಾಕಿಸ್ತಾನದ ಜೈಷ್ ಎ ಮೊಹಮ್ಮದ್ ಸಂಘಟನೆಗೆ ಸೇರಿದವರು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯ ಲಭ್ಯವಾಗಿತ್ತು ಈ ದಾಳಿಯ ಬಗ್ಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. 
ಪಠಾಣ್ ಕೋಟ್ ವಾಯುನೆಲೆ ದಾಳಿ 
ಜನವರಿ 1ರ ಮಧ್ಯರಾತ್ರಿ ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ್ದರು. ಮಧ್ಯರಾತ್ರಿ ವಾಯುನೆಲೆಗೆ ನುಸುಳಿದ್ದ ಉಗ್ರರು 2ರ ಬೆಳಗಿನ ಜಾವ ದಾಳಿ ಆರಂಭಿಸಿದ್ದರು. ಮೂರು ದಿನ ನಡೆದ ಗುಂಡಿನ ಚಕಮಿಕಿಯಲ್ಲಿ ಒಟ್ಟು ಏಳು ಸೈನಿಕರು ಮತ್ತು ಐವರು ಉಗ್ರರು ಮೃತಪಟ್ಟರು. ಉಗ್ರರ ಗುಂಪು ತನ್ನ ಎಸ್ಯುವಿ ಕಾರು ಅಪಹರಿಸಿತ್ತು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದರು. 
ಪಾಂಪೋರ್ ದಾಳಿ
ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ ನಲ್ಲಿರುವ ಸರ್ಕಾರಿ ಉದ್ಯಮಶೀಲತ್ವ ಅಭಿವೃದ್ಧಿ ಸಂಸ್ಥೆ(ಇಡಿಐ) ಕಟ್ಟಡಕ್ಕೆ ನುಗ್ಗಿದ ಉಗ್ರುರ ಮೂರು ದಿನಗಳ ಕಾಲ ಅಲ್ಲಿಂದ ಸೈನಿಕರ ಮೇಲೆ ದಾಳಿ ನಡೆಸಿದರು. ಮೂರು ದಿನಗಳ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಸೈನಿಕರು ಹತ್ಯೆ ಮಾಡಿದ್ದರು. 
ಉರಿ ಉಗ್ರರ ದಾಳಿಗೆ ಸರ್ಜಿಕಲ್ ಪ್ರತೀಕಾರ
ಉರಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ ಬಂದರು. ಇಂತಹ ಸರ್ಜಿಕಲ್ ಸ್ಟ್ರೈಕ್ ಇದೇ ಮೊದಲು ಎಂದು ಭಾರತೀಯ ಸೇನಾ ಪಡೆಯ ಲೆಫ್ಟಿನೆಂಟ್ ಜನರಲ್ ರಣವೀರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಈ ಸರ್ಜಿಕಲ್ ದಾಳಿಯಲ್ಲಿ ಭಾರತೀಯ ಯೋಧರು ಏಳು ಉಗ್ರ ನೆಲೆಗಳು ಮತ್ತು ಪಾಕಿಸ್ತಾನ ಸೈನಿಕರ ಕೆಲ ಬಿಡಾರಗಳ ಮೇಲೆ ದಾಳಿ ನಡೆಸಿ ನಾಶಪಡಿಸಿದ್ದರು. ದಾಳಿಯಲ್ಲಿ 38 ಉಗ್ರರು ಮತ್ತು ಪಾಕ್ ನ ಇಬ್ಬರು ಸೈನಿಕರು ಹತರಾಗಿದ್ದರು. ಮತ್ತೊಂದು ವಿಶೇಷವೆಂದರೆ ಈ ದಾಳಿಯಲ್ಲಿ ಭಾರತೀಯ ಯಾವ ಯೋಧನಿಗೂ ಸಣ್ಣ ಗಾಯ ಕೂಡವಾಗಿರಲಿಲ್ಲ. 
ಬ್ರುಸೆಲ್ಸ್ ದಾಳಿ
ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ದಾಳಿಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊಣೆ ಹೊತ್ತಿಕೊಂಡಿತ್ತು. ಮೂವರು ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ಇದರಲ್ಲಿ ಖಾಲಿದ್ ಎಲ್ ಬಾಕ್ರೂಯಿ ಹಾಗೂ ಬ್ರಾಹಿಂ ಎಲ್ ಬಾಕ್ರೋಯಿ ಎಂಬ ಸಹೋದರರಿಬ್ಬರು ವಿಮಾನನಿಲ್ದಾಣದಲ್ಲಿ ತಮ್ಮನ್ನು ಸ್ಫೋಟಿಸಿಕೊಂಡಿದ್ದರು. 
ಕರಾಚಿ ದಾಳಿ 
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಷಾ ನೂರಾನಿ ಯಾತ್ರಾಸ್ಥಳದಲ್ಲಿ ಆತ್ಮಾಹುತಿ ಬಾಂಬ್ ದಾಳಿಕೋರನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ ಪರಿಣಾಮ 62 ಜನರು ಸಾವನ್ನಪ್ಪಿದ್ದರು. ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತಿಕೊಂಡಿತ್ತು. ಮತ್ತೊಂದು ದಾಳಿ ಕ್ವೆಟ್ಟಾದಲ್ಲಿ ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಜಂಟಿಯಾಗಿ ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 75 ಮಂದಿ ಸಾವನ್ನಪ್ಪಿದ್ದರು. 
ಕಾಬೂಲ್ ದಾಳಿ 
ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನ ಮಸೀದಿಯೊಂದರ ಮೇಲೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ದಾಳಿಯಲ್ಲಿ 27 ಮಂದಿ ಮೃತಪಟ್ಟಿದ್ದರು. ಉಗ್ರನೊಬ್ಬ ಶಿಯಾ ಸಮುದಾಯಕ್ಕೆ ಸೇರಿದ ಬಖಿರ್ ಉಲ್ ಒಲುಮ್ ಮಸೀದಿಯಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. 
ಇಸ್ತಾನ್ ಬುಲ್ ದಾಳಿ
ಟರ್ಕಿ ರಾಷ್ಟ್ರದ ಸೆಂಟ್ರಲ್ ಇಸ್ತಾಂಬುಲ್ ನಲ್ಲಿ ಡಿಸೆಂಬರ್ 10 ರಾತ್ರಿ ಅವಳಿ ಬಾಂಬ್ ಸ್ಫೋಟ ಸಂಭವಿಸಿದ್ದು, ಪರಿಣಾಮ 29 ಮಂದಿ ಸಾವನ್ನಪ್ಪಿದ್ದರು. ಮುಸುಕುಧಾರಿಯಾಗಿ ಬಂದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಆತ್ಮಾಹುತಿ ಬಾಂಬ್ ಸ್ಫೋಟಿಸಿಕೊಂಡಿದ್ದ ಇದೊಂದು ಉಗ್ರರ ಕೃತ್ಯ ಎಂದು ನಂತರ ಸಾಬೀತಾಗಿತ್ತು. 
ಸೋಮಾಲಿ ದಾಳಿ
ಸೋಮಾಲಿ ರಾಜಧಾನಿ ಮೊಗದೀಶು ಬಂದರು ಸಮೀಪ ಭಾನುವಾರ ಬೆಳಗ್ಗೆ ಆತ್ಮಾಹುತಿ ದಾಳಿಕೋರನೊಬ್ಬ ಟ್ರಕ್ ನಲ್ಲಿ ಕುಳಿತು ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ ಪರಿಣಾಮ 16 ಮಂದಿ ಸಾವನ್ನಪ್ಪಿದ್ದರು. ಸ್ಫೋಟದ ಆಲ್ ಖೈದಾ ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿತ್ತು. 
ಬಾಗ್ದಾದ್ ದಾಳಿ
ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿ ಸೆಪ್ಟೆಂಬರ್ 27ರಂದು ಆತ್ಮಾಹುತಿ ಬಾಂಬ್ ದಾಳಿ ಸಂಭವಿಸಿತ್ತು. ದಾಳಿಯಲ್ಲಿ 9 ನಾಗರಿಕರು ಮೃತಪಟ್ಟಿದ್ದರು. ಪೂರ್ವ ಬಾಗ್ದಾದ್ ನ ವಾಣಿಜ್ಯ ಪ್ರದೇಶದಲ್ಲಿ ಉಗ್ರನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ ಇದರಲ್ಲಿ 9 ಮಂದಿ ಸಾವನ್ನಪ್ಪಿದ್ದು 28ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇರಾಕ್ ನ ಬಾಗ್ದಾದ್ ನ ಐನ್-ಅಲ್ ತಮರ್ ನಗರದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿತ್ತು. ದಾಳಿಯಲ್ಲಿ ಆರು ನಾಗರಿಕರು ಮತ್ತು ಆರು ಉಗ್ರರು ಸಾವನ್ನಪ್ಪಿದ್ದರು. 
ಡಲ್ಲಾಸ್ ಸ್ನೈಪರ್
ಅಮೆರಿಕದ ಡಲ್ಲಾಸ್ ನಲ್ಲಿ ನಡೆದ ಪ್ರತಿಭಟನೆ ವೇಳೆ ಸ್ನೈಪರ್ ಗಳು ಹೊಂಚು ಹಾಕಿ ಗುಂಡಿನ ದಾಳಿ ನಡೆಸಿದ್ದರು. ಇದರಲ್ಲಿ ಐವರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದರು. ಅಮೆರಿಕ ಕಾನೂನು ವ್ಯವಸ್ಥೆಯ ಇತಿಹಾಸದಲ್ಲೇ ನಡೆದ ಅತ್ಯಂತ ಭೀಕರ ಕೃತ್ಯ ಇದಾಗಿತ್ತು. ಪೊಲೀಸರೊಂದಿಗೆ ಗುಂಡಿನ ಚಕಮಿಕಿಯಲ್ಲಿ ತೊಡಗಿದ್ದ ಒಬ್ಬ ಸ್ನೈಪರ್ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇದು ಕಪ್ಪುವರ್ಣೀಯರ ಮೇಲೆ ಪೊಲೀಸರು ನಡೆಸಿದ ದಾಳಿಯು ಜನಾಂಗೀಯ ತಾರತಮ್ಯ ಹಾಗೂ ಭಿನ್ನತೆಗಳ ಸಂಕೇತವಾಗಿದೆ. 
- ಎಸ್. ವಿಶ್ವನಾಥ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com