ಗುಜರಾತ್ ನ ಉನಾದಲ್ಲಿ ಸತ್ತ ಹಸುವಿನ ಚರ್ಮ ಸುಲಿಯುತ್ತಿದ್ದ ನಾಲ್ವರು ದಲಿತರನ್ನು ಕಂಬಕ್ಕೆ ಕಟ್ಟಿ ಅವರಿಗೆ ಬೆಲ್ಟ್ ನಿಂದ ಹೊಡೆಯಲಾಗಿತ್ತು. ಈ ವಿಷಯ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರ ಗುಜರಾತ್ ನಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಅಂಶವನ್ನಿಟ್ಟುಕೊಂಡು ರಾಜಕೀಯ ಪಕ್ಷಗಳು ಬೊಬ್ಬೆ ಹೊಡೆದಿದ್ದವು. ಇನ್ನು ಉನಾ ಘಟನೆ ದಲಿತರ ಸ್ವಾಭಿಮಾನವನ್ನು ಬಡಿದೆಬ್ಬಿಸಿದ್ದವು. ಇದರಿಂದಾಗಿ ದಲಿತರು ಹಸುವಿನ ಶವಗಳನ್ನು ಇನ್ನೆಂದು ಮುಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದವು. ಇನ್ನು ದಲಿತರ ಮೇಲಿನ ಹಲ್ಲೆ ವಿಚಾರ ಸಂಸತ್ ಸದನಗಳಲ್ಲೂ ಪ್ರತಿಧ್ವನಿಸಿದ್ದವು.
ಶನಿ ಸಿಂಗಣಾಪುರ್ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ
400 ವರ್ಷಗಳ ಇತಿಹಾಸವಿರುವ ಮುಂಬೈನ ಶನಿ ಸಿಂಗಣಾಪುರ ದೇವಾಲಯದ ಗರ್ಭಗುಡಿಗೆ ಮಹಿಳೆಯ ಪ್ರವೇಶವನ್ನು ನಿಷೇಧಿಸಲಾಗಿತ್ತು. ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ನೀಡಬೇಕು. ಎಲ್ಲೂ ಮಹಿಳೆಯರ ಹಕ್ಕನ್ನು ಕಸಿದುಕೊಳ್ಳಬಾರದು ಎಂದು ಹೋರಾಟ ನಡೆಸಿದ್ದರು. ಬಳಿಕ ಮಹಿಳೆಯರಿಗೆ ದೇವಾಲಯದ ಟ್ರಸ್ಟ್ ಅನುಮತಿ ನೀಡುವುದರೊಂದಿಗೆ ವಿವಾದ ಇತ್ಯಾರ್ಥವಾಗಿತ್ತು.
ಭಾರತ್ ಮಾತಾಕೀ ಜೈ
ಮಹಾರಾಷ್ಟ್ರದ ಲಾಥೂರ್ ನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ನನ್ನ ಕುತ್ತಿಗೆ ಮೇಲೆ ಕತ್ತಿಯಿಟ್ಟರೂ ನನ್ನ ಬಾಯಿಯಿಂದ ಭಾರತ ಮಾತಾಕೀ ಜೈ ಎಂಬ ಘೋಷಣೆ ಬರುವುದಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದರು. ಓವೈಸಿ ಬಾಯಲ್ಲಿ ದೇಶದ್ರೋಹ ಹೇಳಿಕೆ ಬರುತ್ತಿದ್ದಂತೆ ದೇಶದಾದ್ಯಂತ ಓವೈಸಿ ವಿರುದ್ಧ ಟೀಕೆಗಳು ವ್ಯಕ್ತವಾದವು. ಇನ್ನು ಭಾರತ್ ಮಾತಾಕೀ ಜೈ ಎನ್ನಲು ನಿರಾಕರಿಸುವವರು ದೇಶ ಬಿಟ್ಟು ತೊಲಗಿ ಪಾಕಿಸ್ತಾನಕ್ಕೆ ಹೋಗಲಿ ಎಂಬ ಹೇಳಿಕೆಗಳು ವ್ಯಕ್ತವಾದವು. ಕೊನೆಗೆ ಓವೈಸಿ ವಿರುದ್ಧ ದೇಶದ್ರೋಹ ಹೇಳಿಕೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಪಾಕಿಸ್ತಾನ ಕಲಾವಿದರಿಗೆ ಬಹಿಷ್ಕಾರ ಎಂಎನ್ಎಸ್
ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿರುವ ಸೇನಾ ಶಿಬಿರದ ಮೇಲೆ ಪಾಕಿಸ್ತಾನ ಭಯೋತ್ಪಾದಕರು ದಾಳಿ ನಡೆಸಿದ್ದು ಇದರಲ್ಲಿ 19 ಭಾರತೀ ಯ ಯೋಧರ ಹುತಾತ್ಮರಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) 48 ಗಂಟೆಯೊಳಗೆ ಪಾಕಿಸ್ತಾನ ಕಲಾವಿದರು ಭಾರತ ಬಿಟ್ಟು ಹೋಗುವಂತೆ ಕರೆ ನೀಡಿದ್ದು ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಇನ್ನು ಪಾಕ್ ಕಲಾವಿದರ ಬಹಿಷ್ಕಾರ ಸಂಬಂಧಿಸಿದಂತೆ ಹಲವು ಬಾಲಿವುಡ್ ಕಲಾವಿದರು ಪರ ವಿರೋಧ ಹೇಳಿಕೆಗಳನ್ನು ನೀಡಿತ್ತು. ಪ್ರಮುಖವಾಗಿ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಎಂಎನ್ಎಸ್ ನಿರ್ಧಾರವನ್ನು ವಿರೋಧಿಸಿದ್ದರು. ಪಾಕಿಸ್ತಾನ ಕಲಾವಿದರ ಬಹಿಷ್ಕಾರ ಭಯೋತ್ಪಾದನೆಗೆ ಪರಿಹಾರವಲ್ಲ ಎಂದು ಹೇಳಿದ್ದರು. ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗಿದ್ದ ಈ ವಿಷಯ ಕ್ರಮೇಣ ತಣ್ಣಗಾಯಿತು.