ಹೊಸ ಪ್ರಯೋಗಗಳು ಭರವಸೆ; ಹಾರರ್ ಭರಾಟೆ; ೨೦೧೬ರ ಸ್ಯಾಂಡಲ್ವುಡ್ ಹಿನ್ನೋಟ

ಹೋದ ವರ್ಷ, ಕಳೆದ ಸಮಯ ಹಿಂದೆ ಬರುವುದಿಲ್ಲ ಎಂಬ ಅರಿವಿನೊಂದಿಗೆ, ಕನ್ನಡ ಚಿತ್ರರಂಗದಲ್ಲಿ ಹೊಳೆದ ಬೆಳಕನ್ನು ಮೆಲುಕು ಹಾಕುವ ಪ್ರಯತ್ನದಲ್ಲಿ ಈ ಹಿನ್ನೋಟ.
ಹೊಸ ಪ್ರಯೋಗಗಳು ಭರವಸೆ; ಹಾರರ್ ಭರಾಟೆ;  ೨೦೧೬ರ ಸ್ಯಾಂಡಲ್ವುಡ್ ಹಿನ್ನೋಟ
ಹೊಸ ಪ್ರಯೋಗಗಳು ಭರವಸೆ; ಹಾರರ್ ಭರಾಟೆ; ೨೦೧೬ರ ಸ್ಯಾಂಡಲ್ವುಡ್ ಹಿನ್ನೋಟ
ಹೋದ ವರ್ಷ, ಕಳೆದ ಸಮಯ ಹಿಂದೆ ಬರುವುದಿಲ್ಲ ಎಂಬ ಅರಿವಿನೊಂದಿಗೆ, ಕನ್ನಡ ಚಿತ್ರರಂಗದಲ್ಲಿ ಹೊಳೆದ ಬೆಳಕನ್ನು ಮೆಲುಕು ಹಾಕುವ ಪ್ರಯತ್ನದಲ್ಲಿ ಈ ಹಿನ್ನೋಟ. 
ಕತ್ತಲ ಕೋಣೆಯ ಮ್ಯಾಜಿಕ್ ಎಂದೇ ಪ್ರಸಿದ್ಧವಾದ ಸಿನೆಮಾ ಕಲೆಗೆ ವಿಶ್ವದಾದ್ಯಂತ ಇದು ಸಂಕ್ರಮಣ ಕಾಲ. ಭಾರತದ ಮಟ್ಟಿಗೆ, ಕರ್ನಾಟಕಕ್ಕೂ ಈ ಮಾತು ಅನ್ವಯ.  ತಂತ್ರಜ್ಞಾನದಲ್ಲಿ ಆಗಿರುವ ಬೆಳವಣಿಗೆಯಿಂದ, ಚಲನಚಿತ್ರ ತಯಾರಿಕೆ ಪ್ರತಿಭಾವಂತರಿಗೆ-ಆಸಕ್ತರಿಗೆ ಕೈಗೆಟಕುವಷ್ಟು ಹತ್ತಿರವಾಗಿದೆ. ಹೀಗಿದ್ದೂ, ಸಿನೆಮಾ ಮಾಡಿ ಮುಗಿಸುವ ಹಾದಿಯೇನು ಸುಗಮವಾಗಿಲ್ಲ. ಪಟ್ಟಭದ್ರ ಹಿತಾಸಕ್ತಿಗಳ ನಡುವೆಯೇ ಸಿನೆಮಾ ವಿತರಣಾ ಮಾರ್ಗ, ಚಿತ್ರಮಂದಿರಗಳ ಮಾಲೀಕತ್ವ, ಮತ್ತಿತರ ಪ್ರಮುಖ ಸಂಪನ್ಮೂಲಗಳು ವಶದಲ್ಲಿರುವುದರಿಂದ ಸವಾಲಂತೂ ಇದ್ದೆ ಇದೆ. ಇಂತಹ ಸವಾಲುಗಳನ್ನು ಮೀರಿ, ಹೇಗೋ ಸಂಪನ್ಮೂಲಗಳ ಕೊರತೆಯನ್ನು ನೀಗಿಸಿಕೊಂಡು, ಅಥವಾ ವಿನೂತನ ಮಾರ್ಗಗಳಲ್ಲಿ ಅವುಗಳನ್ನು ಕ್ರೋಢೀಕರಿಸಿಕೊಂಡು, ಸಾಮಾಜಿಕ ಜಾಲತಾಣಗಳ ಮೂಲಕ ವಿಭಿನ್ನವಾಗಿ ಪ್ರಚಾರ ಮಾಡಿ, ಪ್ರೇಕ್ಷಕರ ಗಮನ ಸೆಳೆಯಲು ಸಫಲವಾಗಿ, ಮೊದಲಿಗೆ ಸಣ್ಣ ಮಟ್ಟದಲ್ಲಿ, ಬಾಡಿಗೆ ಇಲ್ಲದ ಮಲ್ಟಿಪ್ಲೆಕ್ಸ್ ಸ್ಕ್ರೀನ್ ಗಳಲ್ಲಿ ಸಿನೆಮಾ ಬಿಡುಗಡೆ ಮಾಡಿ, ಜನರ ಬಾಯಿಂದ ಬಾಯಿಗೆ ಹರಿದಂತೆ, ಚಿತ್ರಮಂದಿರಗಳನ್ನು ಹೆಚ್ಚಿಸಿಕೊಂಡು ಸಾಧಾರಣ ಯಶಸ್ಸು ಕಂಡು ಮೆಚ್ಚುಗೆಗೆ ಪಾತ್ರವಾದ ಬೆರಳೆಣಿಕೆಯ ಸಿನೆಮಾಗಳಾದರು ಕನ್ನಡ ಚಿತ್ರರಂಗದಲ್ಲಿ ಮೂಡಿ ಬಂದದ್ದೇ ಈ ವರ್ಷದ ಮುಖ್ಯಾಂಶಗಳಲ್ಲಿ ಒಂದು! 
ಸಂಖ್ಯೆಯಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕನ್ನಡ ಚಿತ್ರೋದ್ಯಮದಲ್ಲಿ ಸುಮಾರು ೨೦% ಹೆಚ್ಚು ಸಿನೆಮಾಗಳು ತೆರೆ ಕಂಡಿವೆ. ೨೦೧೫ರಲ್ಲಿ ಸುಮಾರು ೧೩೫ ಸಿನೆಮಾಗಳು ತೆರೆ ಕಂಡರೆ ಈ ವರ್ಷ ೧೬೦ ಕ್ಕೂ ಹೆಚ್ಚು ಸಿನೆಮಾಗಳು ತೆರೆ ಕಂಡಿವೆ. ವರ್ಷದ ಮಧ್ಯೆಕ್ಕೆ ಈ ಸಂಖ್ಯೆ ಶತಕದ ಗಡಿ ದಾಟಿದ್ದಾದರೂ, ನವೆಂಬರ್ ನಲ್ಲಿ ಕೇಂದ್ರ ಸರ್ಕಾರದ ನೋಟು ಹಿಂಪಡೆತ ನಿರ್ಧಾರದಿಂದ, ಒಟ್ಟಾರೆ ಉದ್ದಿಮೆಗೆ ಹಿನ್ನಡೆಯಾದ ಪರಿಣಾಮ ದ್ವಿತೀಯಾರ್ಧದಲ್ಲಿ ಮತ್ತೊಂದು ಶತಕ ಮುಟ್ಟಲು ಸಾಧ್ಯವಾಗಿಲ್ಲವೇನೋ. ಇಷ್ಟು ಬೃಹತ್ ಪ್ರಮಾಣದ ಸಿನೆಮಾಗಳಲ್ಲಿ ಅತ್ಯುತ್ತಮವಾದ ಹತ್ತು ಸಿನೆಮಾಗಳನ್ನು ಪಟ್ಟಿ ಮಾಡುವುದಕ್ಕೆ ಸುಲಭವೇನಲ್ಲ. ಕಾರಣ ಗುಣಮಟ್ಟದ ಕೊರೆತೆ ಎಂದು ಮತ್ತೆ ಹೇಳಬೇಕಿಲ್ಲ ಅಲ್ಲವೇ? 
ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಸ್ಟಾರ್ ನಟರ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾದ, ಗುಣಮಟ್ಟದಲ್ಲಿ ಸಾಧಾರಣವಾಗಿದ್ದರು, ಮೊದಲ ವಾರಾಂತ್ಯದಲ್ಲೇ ಎಷ್ಟೆಷ್ಟೋ ಕೋಟಿ ಬಾಚಿತು ಎಂಬ ವರದಿಗಳನ್ನು ನೀಡುವ ಸಿನೆಮಾಗಳ ಅವಲೋಕನವನ್ನು ಸ್ವಲ್ಪ ಬದಿಗೆ ಸರಿಸಿ, ಬಿಡುಗಡೆ ಮಾಡುವುದಕ್ಕೆ ಕಷ್ಟ ಪಟ್ಟ, ಆದರೂ ಒಂಚೂರು ಶಬ್ದ ಮಾಡಲು ಸಶಕ್ತವಾದ, ವಿನೂತನ ಪ್ರಯೋಗಗಳಿಗೆ ಒಡ್ಡಿಕೊಂಡ, ಬಾಕ್ಸ್ ಆಫಿಸ್ ನಲ್ಲಿ ಸೋತರೂ ಹೊಸ ಚಿಂತನೆಗೆ ಒಡ್ಡಿದ, ವಿಮರ್ಶಕರು ಮೆಚ್ಚಿದ, ಮುಂದಿನ ವರ್ಷಗಳಲ್ಲಿ ಮತ್ತೆ ಮತ್ತೆ ಹಿಂದಿರುಗಿ ನೋಡಬಹುದಾದ, ನಮ್ಮ ಚಿತ್ರರಂಗದಲ್ಲಿ ಮೂಡಿದ ಸಿನೆಮಾಗಳಿವು ಎಂದು ಎದೆ ತಟ್ಟಿ ಹೇಳಬಹುದಾದ, ಚಲನಚಿತ್ರ ಇತಿಹಾಸ ಉಪೇಕ್ಷಿಸಲು ಬಾರದ ೧೦ ಚಿತ್ರಗಳನ್ನು ಪಟ್ಟಿ ಮಾಡುವ ಕೆಲಸ ಇದು. 
೧. ತಿಥಿ
ಬಹುಷಃ ಕನ್ನಡ ಚಿತ್ರರಂಗದ ಹಿರಿಮೆಗೆ ಅಂತಾರಾಷ್ಟ್ರೀಯ ಗರಿ ತಂದಿಟ್ಟ ಸಿನೆಮಾ 'ತಿಥಿ'. ಸುಮಾರು ೧೬ ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿ, ಹಲವು ಚಿತ್ರರಂಗದ ಗಣ್ಯರಿಂದ ಪ್ರಶಂಸೆಗೆ ಪಾತ್ರವಾದ ಈ ಚಿತ್ರ ತುಂಬಿದ ಪ್ರದರ್ಶನಗಳನ್ನು ಕಂಡು ಬಾಕ್ಸ್ ಆಫಿಸ್ ನಲ್ಲಿಯು ಉತ್ತಮ ಗಳಿಕೆ ಕಂಡಿತು. ಸಣ್ಣ ವಯಸ್ಸಿನ ನಿರ್ದೇಶಕ ರಾಮ್ ರೆಡ್ಡಿ, ಪತ್ರಿಕೆಗಳ ಸಂದರ್ಶನಕ್ಕೆ ಬಹು ಬೇಡಿಕೆಯ ವ್ಯಕ್ತಿಯಾದರೆ, ಕಥೆ ಬರೆದ ಈರೇ ಗೌಡ ಕೂಡ ಮಿಂಚಿ ಈಗ ಅವರದ್ದೇ ಸ್ವಂತ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಬಹುಶಃ ಇದು ನಿರ್ವಿವಿವಾದಿತವಾಗಿ ೨೦೧೬ರ ಉತ್ತಮ ಚಿತ್ರಗಳಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುವ ಸಿನೆಮಾ. 
೨. ಕಹಿ 
ಋಣಾತ್ಮಕ ಶೀರ್ಷಿಕೆಗಳುಳ್ಳ ಚಿತ್ರಗಳು ಅತ್ಯುತ್ತಮ ಗುಣಮಟ್ಟ ಹೊಂದಿದ ಚಿತ್ರಗಳಾಗಿದ್ದವು ಎಂಬುದು ಜೋಕ್.  'ತಿಥಿ'ಗೆ ಹೋಲಿಸಿದರೆ, ಬಹುಷಃ ಅದಕ್ಕಿಂತಲೂ ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾಗಿ, ಅತ್ತ 'ತಿಥಿ' ಗ್ರಾಮ ಜೀವನದ ನೈಜ ಚಿತ್ರಣವಾದರೆ, 'ಕಹಿ' ನಗರ ಜೀವನದ ತಲ್ಲಣಗಳನ್ನು ಹಿಡಿದಿಟ್ಟ ಚಿತ್ರ. ನಿರ್ದೇಶಕ ಅರವಿಂದ್ ಶಾಸ್ತ್ರಿ, ಈ ಸಿನೆಮಾಗೆ ನೀಡಿದ್ದ ಅಂತ್ಯ ಹಲವರಿಗೆ ಆಘಾತ ನೀಡಿತ್ತಾದರೆ, ಒಟ್ಟಿನಲ್ಲಿ ಅದರ ಸುತ್ತ ಒಂದು ಆರೋಗ್ಯಕರ ಚರ್ಚೆಯನ್ನು ಬೆಳೆಸುವಲ್ಲಿ ಸಫಲರಾಗಿದ್ದರು. ಆದರೆ ಗಂಭೀರವಾದ, ಬೋಧನೆಯಿಲ್ಲದ, ಅಸಡ್ಡಾಳ ರಂಜನೆಯಿಲ್ಲದ ಚಿತ್ರವಾದ 'ಕಹಿ'ಯನ್ನು ಗೆಲ್ಲಿಸಲು ಬೇಕಿದ್ದ ಅಗತ್ಯ ಪ್ರಚಾರ ಸಿಗದೆ ಬೇಗ ಚಿತ್ರಮಂದಿರಗಳಿಂದ ಕಣ್ಮರೆಯಾಯಿತು. ಆದರೂ ಇದು ೨೧೦೬ ರ ನೆನಪಿನಲ್ಲುಳಿಯುವ ಅತಿ ಪ್ರಮುಖ ಚಿತ್ರ. 
೩. ರಾಮಾ ರಾಮಾ ರೇ 
ಬಿಡುಗಡೆಗಾಗಿ, ದಿನಗಳನ್ನು-ತಿಂಗಳುಗಳನ್ನು ದೂಡಿ ಕೊನೆಗೂ ಸಣ್ಣ ಮಟ್ಟದಲ್ಲಿ ತೆರೆ ಕಾಣಿಸಲು ಸಾಧ್ಯಾವಾಗಿ, ನಂತರ ಇದು ಉತ್ತಮ ಸಿನೆಮಾ ಎಂಬ ಮಾತು ಕಾಳ್ಗಿಚ್ಚಿನಂತೆ ಹಬ್ಬಿ, ಯಶಸ್ಸು ಕಾಣಲು ಸಾಧ್ಯವಾದ ಸತ್ಯಪ್ರಕಾಶ್ ನಿರ್ದೇಶನದ 'ರಾಮ ರಾಮಾ ರೇ' ಕೂಡ ೨೦೧೬ರ ಗೆದ್ದ ಸಿನೆಮಾ. ಸರ್ರಿಯಲ್ ಕಥೆ ಇಟ್ಟುಕೊಂಡು, ಬದುಕಿನ ಕಠೋರತೆಯನ್ನು ತೊಡೆಯುವ ರಸ್ತೆ ಪಯಣದ ಚಿತ್ರ, ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಸಿನೆಮಾಸಕ್ತರಿಗೆ ಪಠ್ಯವಾಗಬಹುದು ಕೂಡ. 
೪. ಯು-ಟರ್ನ್ 
ಸ್ಟಾರ್ ನಟರು ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳುವ ಹಾಗೆ, ಕನ್ನಡದ ಮಟ್ಟಿಗೆ ಇತ್ತೀಚಿಗೆ ಯಾರಾದರೂ ತಮ್ಮದೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಜನಪ್ರಿಯ ನಿರ್ದೇಶಕ ಇದ್ದರೆ ಅದು ಲೂಸಿಯಾ ಖ್ಯಾತಿಯ ಪವನ್ ಕುಮಾರ್. ಹಾರರ್ ಪ್ರಕಾರದ ಈ ಸಿನೆಮಾ, ತಾಂತ್ರಿಕ ಆಯಾಮಗಳಲ್ಲಿ ಉತ್ಕೃಷ್ಟತೆ ಕಾಯ್ದುಕೊಂಡು, ಜನಪ್ರಿಯವಾಗಿ ಒಳ್ಳೆಯ ಗಳಿಕೆ ಕಂಡದ್ದು ಗಾಮಾನಾರ್ಹವಾದ ಬೆಳವಣಿಗೆ!
೫. ಗೋಧಿ ಬಣ್ಣ ಸಾಧಾರಣ ಮೈಕಟ್ಟು 
ಮತ್ತೆ ಚೊಚ್ಚಲ ನಿರ್ದೇಶನದಲ್ಲೇ ಗಮನ ಸೆಳೆದು, ಗೆದ್ದು ಇತರ ಚಿತ್ರರಂಗಗಳ ಗಮನ ಸೆಳೆಯಲು ಸಾಧ್ಯವಾದ ಹೇಮಂತ ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿದುಕೊಳ್ಳುವುದರಲ್ಲಿ ಸಂಶಯವಿಲ್ಲ. 
೬. ಕಿರಗೂರಿನ ಗಯ್ಯಾಳಿಗಳು 
ಕನ್ನಡದ ಖ್ಯಾತ ಸಾಹಿತಿ, ಮನೆಮಾತಾಗಿರುವ ಪೂರ್ಣಚಂದ್ರ ತೇಜಸ್ವಿಯವರ ಕಥೆಯನ್ನು ತೆರೆಗೆ ತರುವುದು ಎಷ್ಟು ಸವಾಲೋ ಅಷ್ಟೇ ರಿಸ್ಕ್ ಕೂಡ. ಈ ನೀಳ್ಗತೆ ಮತ್ತು ತೆರೆಯ ಮೇಲಿನ ಅಡವಳಿಕೆಯನ್ನು ಹೋಲಿಸಿ ಚರ್ಚಿಸುವ ಅಪಾಯವನ್ನು ನಿರ್ದೇಶಕರಿ ಎದುರಿಸಬೇಕಾಗುತ್ತದೆ. ಹೀಗಿದ್ದೂ, ಸುಮನಾ ಕಿತ್ತೂರು ಪ್ರೇಕ್ಷರನ್ನು ಮತ್ತು ವಿಮರ್ಶಕರನ್ನು ಸಮಾನವಾಗಿ ಆಕರ್ಷಿಸಲು ಸಾಧ್ಯವಾಗಿ ಗೆದ್ದವರು.
೭. ಕರ್ವ 
ಮತ್ತೊಬ್ಬ ಚೊಚ್ಚಲ ನಿರ್ದೇಶಕ, ಬಿಡುಗಡೆಯಾದಾಗ ಉಪೇಕ್ಷೆಗೆ ಒಳಾಗಾಗಿ, ವಿಮರ್ಶೆಗಳು ಹೆಚ್ಚು ಕಾಣದೆ ಹೋದರು, ಜನರ ನಡುವೆ ಬಾಯಿಂದ ಬಾಯಿಗೆ ಹರಡಿ ಗೆದ್ದ ಹಾರರ್ ಚಿತ್ರ. ಈ ವರ್ಷ ಬಿಡುಗಡೆಯಾದ ಅಸಂಖ್ಯಾತ ಹಾರರ್ ಚಿತ್ರಗಳ ಪಟ್ಟಿಯಲ್ಲಿ ಇದಕ್ಕೆ ಖಂಡಿತಾ ಅಗ್ರ ಸ್ಥಾನ! ನವನೀತ್ ನಿರ್ದೇಶನದ ಈ ಚಿತ್ರ ಟಿವಿಯ ಪ್ರಖ್ಯಾತ ಕಾರ್ಯಕ್ರಮವನ್ನು ಸಿನೆಮಾ ಕಥೆಗೆ ಬೆಸೆದಿದ್ದು ರಂಜನೀಯವಾಗಿ, ಪ್ರೇಕ್ಷಕರ ಮನಸೂರೆಗೊಂಡು, ನಂತರ ಚಿತ್ರಮಂದಿರಗಳ ಪ್ರದರ್ಶನ ವೃದ್ಧಿಸಿಕೊಂಡು ಬಾಕ್ಸ್ ಆಫಿಸ್ ನಲ್ಲಿ ಒಳ್ಳೆಯ ಗಳಿಕೆ ಕಂಡಿತು.
೮. ಕಿರಿಕ್ ಪಾರ್ಟಿ
ಹೊಸ ವರ್ಷದ ಪಾರ್ಟಿಗೆ ನಾಂದಿ ಹಾಡಿರುವ, ಪ್ರಾಯದ ಹುಡುಗಾಟದ ಕಾಲೇಜ್ ದಿನಗಳ ಸಂಗೀತಮಯ ಸಿನೆಮಾ ಈ ವರ್ಷದ ಕೊನೆಗೆ ಬಿಡುಗಡೆಯಾಗಿದೆ. ನಟ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಯಶಸ್ವಿ ಜೋಡಿ, ಈ ಸಿನೆಮಾದಲ್ಲೂ ಒಟ್ಟಿಗೆ ಕೆಲಸ ಮಾಡಿದ್ದು, ಸಂಗೀತ, ಛಾಯಾಗ್ರಹಣ ಎಲ್ಲವು ಸಾಥ್ ನೀಡಿದ್ದು, ಪಡ್ಡೆ ಹೈಕಳಿಗೆ ಆನಂದನ ನೀಡಿ ಭಾರಿ ಯಶಸ್ಸು ಪಡೆಯುವ ನಿರೀಕ್ಷೆಯಲ್ಲಿದೆ. 
೯. ದೊಡ್ಮನೆ ಹುಡುಗ 
ಸತತವಾಗಿ ಹಿನ್ನಡೆ ಕಂಡಿದ್ದ ಸಿನೆಮಾಗಳಿಂದ ನಟ ಪುನೀತ್ ರಾಜಕುಮಾರ್ ಬಹುಷಃ ಬ್ರೇಕ್ ನೀಡಿದ ಸಿನೆಮಾ ಇದು. ಕಥಾ ಹಂದರದಲ್ಲಿ ಯಾವುದೇ ನವೀನತೆ ಇಲ್ಲದೆ ಹೋದರು, ನಿರ್ದೇಶಕ ಸೂರಿ ಅವರ ಕಮಿಟ್ಮೆಂಟ್ ಸಿನೆಮಾದಲ್ಲಿ ಕೆಲಸ ಮಾಡಿದ್ದು ನಿಜ. ಅವರ ಚಿತ್ರೀಕರಣದ ನೈಜತೆ, ಒಂದಷ್ಟು ಹಾಡುಗಳು ಮನರಂಜನೆ ನೀಡಿ ಸಾಧಾರಣ ಯಶಸ್ಸು ಕಂಡ ಚಿತ್ರ!
೧೦ . ಸಂತೆಯಲ್ಲಿ ನಿಂತ ಕಬೀರ 
ತಾಂತ್ರಿಕವಾಗಿ ಅಷ್ಟೇನೂ ಗುಣಮಟ್ಟದ ಸಿನೆಮಾ ಅಲ್ಲದೆ ಹೋದರು, ಸಾಮಾಜಿಕವಾಗಿ ಬಹಳ ಅಗತ್ಯವಾದ, ಖ್ಯಾತ ಹಿಂದಿ ಲೇಖಕ ಭೀಷ್ಮ ಸಹಾನಿ ಅವರ ನಾಟಕವೊಂದರ ಆಧಾರಿತವಾಗಿ, ೧೪-೧೫ ನೇ ಶತಮಾನದ ಸಂತ ಕಬೀರನ ಕಥೆಯನ್ನು ಹೊಳಹೊರಟ ನಿರ್ದೇಶಕ ಕಬ್ಬಡಿ ಇಂದ್ರಬಾಬು ಅವರ ಪ್ರಯೋಗ ಗಮನಾರ್ಹವಾದದ್ದು. ಈ ಸಿನೆಮಾದ ಸೋಲು ಕೂಡ ಮುಂದೆ ಇಂತಹ ಕಥೆಯನ್ನು ಹೇಳಬಯಸುವವರಿಗೆ ಪಾಠವಾಗಬಲ್ಲದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com