ಶ್ರಾವಣ ಮಾಸ ವರಮಹಾಲಕ್ಷ್ಮಿ ವ್ರತಕ್ಕೆ ಪ್ರಶಸ್ತ ಏಕೆ

ಮಂಕು ಕವಿದಿರುವ ಜಗತ್ತನ್ನು ತಟ್ಟಿ ಎಬ್ಬಿಸುವ, ಮಬ್ಬು ಕವಿದಿರುವ ಜನಕ್ಕೆ ಬೆಳಕನ್ನು ಪಸರಿಸುವ ತಿಂಗಳೇ ಶ್ರಾವಣ ಮಾಸ.
ವರಮಹಾಲಕ್ಷ್ಮಿ ವ್ರತ
ವರಮಹಾಲಕ್ಷ್ಮಿ ವ್ರತ
Updated on

ಮಂಕು ಕವಿದಿರುವ ಜಗತ್ತನ್ನು ತಟ್ಟಿ ಎಬ್ಬಿಸುವ, ಮಬ್ಬು ಕವಿದಿರುವ ಜನಕ್ಕೆ ಬೆಳಕನ್ನು ಪಸರಿಸುವ ತಿಂಗಳೇ ಶ್ರಾವಣ ಮಾಸ. ಆಷಾಢ ಮುಗಿದು ಶ್ರಾವಣ ಮಾಸ ಆರಂಭವಾಯಿತೆಂದರೆ ಎಲ್ಲೆಡೆ ಸಮೃದ್ಧಿ. ಬಿಡುವಿಲ್ಲದೇ ದುಡಿಯುವ ರೈತಾಪಿ ವರ್ಗಕ್ಕೆ ಸಂತೋಷದಿಂದ ಕಳೆಯಲು ಸುಸಮಯ. ಹಬ್ಬಗಳ ಸಾಲು, ಸಾಲು, ಹಿಂದೂ ಜನರ ಮನೆಗಳಲ್ಲಿ ಸಂಭ್ರಮ, ಉಲ್ಲಾಸ, ಉತ್ಸಾಹ.

ಹಿಂದೂ ಸಂಪ್ರದಾಯದಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಸ್ಥಾನಮಾನವಿದೆ. ದೇವಾನುದೇವತೆಗಳನ್ನು ಪೂಜಿಸುವ ತಿಂಗಳು ಇದು. ಶ್ರಾವಣ ಬಂದಿತೆಂದರೆ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರಗಳು ನಡೆದು ಭಕ್ತರ ಸಂಖ್ಯೆಯೂ ಹೆಚ್ಚಿರುತ್ತದೆ.

ಶ್ರಾವಣದಲ್ಲಿ ತಿಂಗಳಿಡಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇದೆ. ಭೀಮನ ಅಮಾವಾಸ್ಯೆಯಿಂದ ಶ್ರಾವಣ ಮಾಸ ಆರಂಭವಾಗಿ ಗಣಪತಿ ಹಬ್ಬದವರೆಗೂ ಇರುತ್ತದೆ. ಇಡಿ ತಿಂಗಳು ಶ್ರವಣ ಅಂದರೆ ಕಿವಿ ಮೇಲೆ ಒಳ್ಳೆಯ ಮಾತು ಕಳಿಬರಲಿ ಎಂದು ಹರಿಕಥೆ, ಭಜನೆ, ಕೂಡ ನಡೆಸಲಾಗುತ್ತದೆ. ಹೀಗೆ ಶ್ರಾವಣ ಮಾಸಕ್ಕೆ ವಿಶೇಷ ಸ್ಥಾನವಿದೆ.

ಶ್ರಾವಣದಲ್ಲಿ ಮಹಾಲಕ್ಷ್ಮೀ ವ್ರತ: ವರಮಹಾಲಕ್ಷ್ಮಿ ವ್ರತ - ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ಲಕ್ಷ್ಮಿ ದೇವಿಯ ವ್ರತ ಇದು.ಈ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರ ಮಾಡುತ್ತಾರೆ. ಪೂರ್ಣಿಮೆಯ ಹಿಂದಿನ ಶುಕ್ರವಾರ ಮಾಡಬೇಕು. ವರಮಹಾಲಕ್ಷ್ಮಿಯನ್ನು ಶ್ರಾವಣ ಮಾಸದಲ್ಲಿ ಏಕೆ ಆಚರಿಸುತ್ತಾರೆ ಎಂಬುದಕ್ಕೆ ಕಥೆ ಇದೆ.

ಒಂದು ದಿನ ಪಾರ್ವತಿ ದೇವಿಯು ಪರಮೇಶ್ವರನಲ್ಲಿ 'ಮಹಾದೇವನೆ, ಪ್ರಪಂಚದಲ್ಲಿ ಭಕ್ತರ ಸಕಲ ಕಷ್ಟಗಳನ್ನು ಬಗೆಹರಿಸಿ ಸುಖವನ್ನು ಕರುಣಿಸುವ ವ್ರತ ಯಾವುದಿದೆ ಎಂದು ಕೇಳುತ್ತಾಳೆ. ಆಗ ಆಗ ಪರಮೇಶ್ವರನು, ಸರ್ವ ಸಂಪತ್ಪ್ರದವಾದ ಪುತ್ರಪೌತ್ರದಾಯಕವಾದ ಸನ್ಮಂಗಳ ಸಂತಾನಕರವಾದ ವರಲಕ್ಷ್ಮೀವ್ರತವೆಂಬುದಿದೆ. ಈ ವ್ರತವನ್ನು ಭಕ್ತಿ ಸಂಪನ್ನರಾದ ಹೆಂಗಸರಾಗಲಿ, ಗಂಡಸರಾಗಲಿ, ಮಕ್ಕಳಾಗಲಿ ಮಾಡಬಹುದು. ಈ ವ್ರತವನ್ನು ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರದ ದಿನ ಮಾಡಬೇಕು" ಎಂದು ಹೇಳುತ್ತಾನೆ.

ಆಗ ಪಾರ್ವತಿ, 'ಸ್ವಾಮಿ, ಆ ವ್ರತದ ನಿಯಮವೇನು? ಅದನ್ನು ಹೇಗೆ ಮಾಡಬೇಕು? ಆ ವ್ರತಕ್ಕೆ ಅಧಿದೇವತೆ ಯಾರು?" ಎಂದು ಕೇಳುತ್ತಾಳೆ. ಆಗ ಪರಮೇಶ್ವರನು, 'ಆ ವ್ರತಕ್ಕೆ ಅಧಿದೇವತೆ ಮಹಾಲಕ್ಷ್ಮಿ. ಇದನ್ನು ಶ್ರಾವಣಮಾಸದಲ್ಲಿ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರ ಮಾಡಬೇಕು. ಹಾಗೆ ಮಾಡಿದ ಭಕ್ತರ ಕೋರಿಕೆಗಳೆಲ್ಲ ಕೈಗೂಡಿ ಕಷ್ಟ ಕಾಯಕಗಳು ದೂರವಾಗುವವು ಎಂದು ಹೇಳುತ್ತಾನೆ. ಹೀಗೆ ಹುಟ್ಟಿಕೊಂಡ ಹಬ್ಬವೇ ವರ ಮಹಾಲಕ್ಷ್ಮೀ ವ್ರತ.
-ಸುಮನಾ ಉಪಾಧ್ಯಾಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com