ದೇವಿ ಪಾರ್ವತಿಗೆ ಜೀವನ ಮತ್ತು ಅಮರತ್ವದ ರಹಸ್ಯ ಭೋದಿಸಿದ್ದ "ಅಮರನಾಥ"

ಈ ಗುಹೆಗೆ ಸುಮಾರು 5000 ವರ್ಷಗಳ ಹಿಂದಿನ ಐತಿಹಾಸಿಕ ಹಿನ್ನಲೆ ಇದ್ದು, ಪೌರಾಣಿಕವಾಗಿ ಈ ಸ್ಥಳಕ್ಕೆ ಸಾಕಷ್ಟು ಮಹತ್ವವಿದೆ. ಅಮರನಾಥ ಗುಹೆಯಲ್ಲಿ ಶಿವನನ್ನು ಪ್ರತಿನಿಧಿಸುವ ಹಿಮಲಿಂಗದೊಂದಿಗೆ ಎರಡು ಸಣ್ಣ ಹಿಮಲಿಂಗಗಳೂ ಇದ್ದು, ಅದು ಪಾರ್ವತಿ ಮತ್ತು ಗಣೇಶ ಎಂದು ಹೇಳಲಾಗುತ್ತದೆ..
ಅಮರನಾಥ ಗುಹೆ (ಸಂಗ್ರಹ ಚಿತ್ರ)
ಅಮರನಾಥ ಗುಹೆ (ಸಂಗ್ರಹ ಚಿತ್ರ)

ದೇವಿ ಪಾರ್ವತಿಗೆ ಜೀವನ ಮತ್ತು ಅಮರತ್ವದ ರಹಸ್ಯ ಭೋದಿಸಿದ್ದ ಪವಿತ್ರ ಸ್ಥಳವೇ ಅಮರನಾಥ ಗುಹೆ. ಈ ಪವಿತ್ರ ಗುಹೆ ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾಗಿದ್ದು, ಜಮ್ಮು-ಕಾಶ್ಮೀರದ   ಶ್ರೀನಗರದಿಂದ ಸುಮಾರು 141 ಕಿ.ಮೀ. ದೂರಲ್ಲಿನ ಪೆಹಲ್ಗಾಮ್ ಪಟ್ಟಣ ಸಮೀಪದಲ್ಲಿದೆ. ಈ ಗುಹೆ ಸಮುದ್ರ ಮಟ್ಟದಿಂದ 3,888 ಮೀ. (12,756 ಅಡಿ) ಎತ್ತರದಲ್ಲಿದ್ದು, ಶಿವಕ್ಷೇತ್ರಗಳಲ್ಲಿ   ಒಂದಾಗಿರುವ ಅಮರನಾಥ ಗುಹೆಯಲ್ಲಿ ನೈಸರ್ಗಿಕವಾಗಿ ರೂಪುಗೊಳ್ಳುವ ಹಿಮಲಿಂಗ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ದಕ್ಷಿಣಕ್ಕೆ ಮುಖಮಾಡಿ ನಿಂತಿರುವ 131 ಅಡಿ ಎತ್ತರದ ಗುಹೆಯ   ಒಳಗೆ ಹಿಮಲಿಂಗವಿದೆ.

ಹಿಮಲಿಂಗದ ಮಹತ್ವ:
ಈ ಗುಹೆಗೆ ಸುಮಾರು 5000 ವರ್ಷಗಳ ಹಿಂದಿನ ಐತಿಹಾಸಿಕ ಹಿನ್ನಲೆ ಇದ್ದು, ಪೌರಾಣಿಕವಾಗಿ ಈ ಸ್ಥಳಕ್ಕೆ ಸಾಕಷ್ಟು ಮಹತ್ವವಿದೆ. ಅಮರನಾಥ ಗುಹೆಯಲ್ಲಿ ಶಿವನನ್ನು ಪ್ರತಿನಿಧಿಸುವ   ಹಿಮಲಿಂಗದೊಂದಿಗೆ ಎರಡು ಸಣ್ಣ ಹಿಮಲಿಂಗಗಳೂ ಇದ್ದು, ಅದು ಪಾರ್ವತಿ ಮತ್ತು ಗಣೇಶ ಎಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ಶಿವ ತನ್ನ ಪತ್ನಿ ಪಾರ್ವತಿಗೆ ಜೀವನ ಮತ್ತು ಅಮರತ್ವದ   ರಹಸ್ಯ ಭೋದಿಸಿದ ಎಂದು ಹೇಳಲಾಗುತ್ತದೆ.

ಶಿವನ ಕೊರಳಿನಲ್ಲಿದ್ದ ರುಂಡ ಮಾಲೆಯನ್ನು ಕಂಡ ಪಾರ್ವತಿ ಒಮ್ಮೆ ಆ ಬಗ್ಗೆ ಪ್ರಶ್ನಿಸುತ್ತಾಳೆ. ಅದು ಹೇಗೆ ಬಂತು ಮತ್ತು ಅದರ ಐತಿಹ್ಯವೇನು ಎಂದು. ಇದಕ್ಕೆ ಉತ್ತರಿಸುವ ಶಿವ ತಾನು   ಹುಟ್ಟಿದಾಗನಿಂದಲೇ ತನ್ನ ಕೊರಳಲ್ಲಿ ಈ ರುಂಡ ಮಾಲೆ ಇದೆ. ನೀನು ಹುಟ್ಟಿದಾಗ ಇದಕ್ಕೆ ಮತ್ತೊಂದು ಮಣಿ ಸೇರಿಸಿದೆ ಎಂದು ಹೇಳುತ್ತಾನೆ. ಆಗ ದೇವಿ ಪಾರ್ವತಿ ಹುಟ್ಟು ಸಾವಿನ ಕುರಿತು   ಪ್ರಶ್ನಿಸುತ್ತಾಳೆ. ಎಲ್ಲರೂ ಸಾಯುತ್ತಾರೆ. ಆದರೆ ನೀವು ಮಾತ್ರ ಅಮರರಾಗಿದ್ದೀರಿ. ಅದು ಹೇಗೆ ಎಂದು ಪ್ರಶ್ನಿಸುತ್ತಾಳೆ. ಆರಂಭದಲ್ಲಿ ಶಿವ ಈ ಪ್ರಶ್ನೆಗೆ ಉತ್ತರಿಸಲು ನಿರಾಕರಿಸುತ್ತಾನೆ. ಆದರೆ ಪಟ್ಟು   ಬಿಡದ ದೇವಿ ಪಾರ್ವತಿ ಪದೇ ಪದೇ ಈ ಬಗ್ಗೆ ಪ್ರಶ್ನಿಸುತ್ತಿರುತ್ತಾಳೆ. ಅಂತಿಮವಾಗಿ ಶಿವ ಪಾರ್ವತಿಗೆ ಅಮರತ್ವದ ರಹಸ್ಯವನ್ನು ಹೇಳಲು ಸಿದ್ಧನಾಗುತ್ತಾನೆ. ಇದೇ ಅಮರಕಥಾ ಎಂದು   ಹೇಳಲಾಗುತ್ತದೆ.

ಪಾರ್ವತಿಗೆ ಅಮರತ್ವದ ರಹಸ್ಯ ಹೇಳಲು ಸಿದ್ಧನಾದ ಶಿವ ಇದಕ್ಕಾಗಿ ಸೂಕ್ತ ಸ್ಥಳದ ಶೋಧ ನಡೆಸುತ್ತಾನೆ. ತನ್ನ ವಾಹನ ನಂದಿಯೊಂದಿಗೆ ಪಾರ್ವತಿ ಮತ್ತು ಗಣೇಶನೊಂದಿಗೆ ಪ್ರಯಾಣ   ಆರಂಭಿಸುವ ಶಿವ ಅಮರನಾಥ ಗುಹೆಯನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಬಳಿಕ ನಂದಿಯನ್ನು ಬೈಲ್ ಗಾಮ್ (ಇಂದಿನ ಪೆಹಲ್ಗಾಮ್) ಬಳಿ ಬಿಟ್ಟು, ಚಂದ್ರನನ್ನು ಚಂದನ್ ವಾರಿಯಲ್ಲಿ ಬಿಡುತ್ತಾನೆ.

ಬಳಿಕ ತನ್ನ ಪುತ್ರ ಗಣೇಶನನ್ನು ಮಹಾಗುಣ ಪರ್ವತ (ಮಹಾಗಣೇಶ ಪರ್ವತ)ದಲ್ಲಿ ಬಿಟ್ಟು, ತನ್ನ ಕೊರಳಲ್ಲಿರುವ ಹಾವುಗಳನ್ನು ಶೇಷನಾಗ ಸಾಗರದಲ್ಲಿ ಬಿಡುತ್ತಾನೆ. ಬಳಿಕ ಪಂಚಭೂತ (ಭೂಮಿ,   ನೀರು, ಗಾಳಿ, ಬೆಂಕಿ ಮತ್ತು ಆಕಾಶ)ಗಳನ್ನು ಪಂಜ್ ತಾರಿಣಿಯಲ್ಲಿ ಬಿಡುತ್ತಾನೆ. ಇವು ಶಿವನ ತ್ಯಾಗದ ಪ್ರತೀಕ ಎಂದು ಹೇಳಲಾಗುತ್ತದೆ. ಬಳಿಕ ತಾಂಡವ ನೃತ್ಯದಲ್ಲಿ ಪಾಲ್ಗೊಳ್ಳುವ ದಂಪತಿಗಳು   ಅಮರನಾಥ ಗುಹೆಯನ್ನು ಸೇರುತ್ತಾರೆ. ಆಗ ಶಿವ ತನ್ನ ರುದ್ರ ಎಂಬ ಕಾಲಾಗ್ನಿಯನ್ನು ಕರೆದು ತಾನು ಹೇಳುವ ರಹಸ್ಯವನ್ನು ಯಾವ ಜೀವಸಂಕುವೂ ಕೇಳಬಾರದು. ಹೀಗಾಗಿ ಗುಹೆಯ ಸುತ್ತಮುತ್ತ   ಇರುವ ಎಲ್ಲ ಜೀವ ಸಂಕುಲಗಳನ್ನು ನಾಶ ಮಾಡು ಎಂದು ಆದೇಶಿಸುತ್ತಾನೆ.

ಶಿವನ ಆಣತಿಯಂತೆ ರುದ್ರ ಎಂಬ ಕಾಲಾಗ್ನಿ ಗುಹೆಯ ಸುತ್ತಮುತ್ತ ಇರುವ ಎಲ್ಲ ಜೀವ ಸಂಕುಲವನ್ನು   ನಾಶಪಡಿಸುತ್ತದೆ. ಇದಾದ ಬಳಿಕ ಶಿವ ಪಾರ್ವತಿಗೆ ಜೀವನ ಮತ್ತು ಅಮರತ್ವವನ್ನು ಭೋಧಿಸುತ್ತಾನೆ. ಆದರೆ ಈ ನಡುವೆ ಕಾಲಾಗ್ನಿಯ ಜ್ವಾಲೆಗೆ ಸಿಲುಕದೆ ಗುಹೆಯಲ್ಲಿ ಒಂದು ಪಾರಿವಾಳದ   ಮೊಟ್ಟೆ ಇರುತ್ತದೆ. ಭೋದನೆ ಬಳಿಕ ಇದನ್ನು ಶಿವ ಗಮನಿಸುತ್ತಾನೆಯಾದರೂ, ಅದನ್ನು ನಾಶಪಡಿಸುವುದಿಲ್ಲ. ಬದಲಿಗೆ ಅವುಗಳನ್ನು ರಕ್ಷಿಸುತ್ತಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ಇಂದಿಗೂ ಅಮರನಾಥ ಯಾತ್ರೆ ಕೈಗೊಳ್ಳುವ ಯಾತ್ರಿಕರು ಪವಿತ್ರ ಗುಹೆಯಲ್ಲಿ ಈ ಎರಡು ಪಾರಿವಾಳಗಳನ್ನು ನೋಡಬಹುದು. ಗುಹೆಯ ಸುತ್ತಮುತ್ತ ಇರುವ ಹತ್ತಾರು ಕಿ.ಮೀ ವ್ಯಾಪ್ತಿಯಲ್ಲಿ   ಯಾವುದೇ ಈ ಪಾರಿವಾಳಗಳಿಗೆ ಆಹಾರ ನೀಡಬಲ್ಲ ಯಾವುದೇ ಮೂಲಗಳಿಲ್ಲ. ಅಲ್ಲದೆ ಇಲ್ಲಿ ಚಳಿಗಾಲದಲ್ಲಿ ತೀವ್ರ ಚಳಿ ಇದ್ದು, ಮನುಷ್ಯರೇ ಯಾತ್ರೆ ವೇಳೆ ಚಳಿ ತಡೆಯಲಾರದೆ   ಸಾವನ್ನಪ್ಪುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಎರಡು ಪಾರಿವಾಳಗಳು ಮಾತ್ರ ಅದು ಹೇಗೆ ಜೀವಿಸುತ್ತಿವೆ ಎಂಬ ಪ್ರಶ್ನೆ ವಿಜ್ಞಾನಕ್ಕೆ ಸವಾಲಾಗಿದೆ.

ಹಿಮಲಿಂಗದ ಉದ್ಭವ ಹೇಗೆ?
ಇನ್ನು ಪವಿತ್ರ ಹಿಮಲಿಂಗದ ಉದ್ಭವದ ಹಿಂದೆ ಪ್ರಾಕೃತಿಕ ರಹಸ್ಯ ಅಡಗಿದ್ದು, ಗುಹೆಯ ಮೇಲ್ಭಾಗ ಮತ್ತು ಕೆಳಭಾಗ ನೀರಿನ ಸೆಲೆ ಇದೆ. ಗುಹೆಯ ನೆತ್ತಿಯ ಮೇಲಿನಿಂದ ತೊಟ್ಟಿಕ್ಕುವ ನೀರು   ಚಳಿಗಾಲದಲ್ಲಿ ಕ್ರಮೇಣ ಘನೀಕೃತವಾಗಿ ಶಿವವಲಿಂಗದ ಆಕೃತಿಯಲ್ಲಿ ಬೆಳೆಯುತ್ತಾ ಹೋಗುತ್ತದೆ. ಹೀಗೆ ಬೆಳೆಯುವ ಹಿಮಲಿಂಗ ಸುಮಾರು 15 ಅಡಿ ಎತ್ತರ ಬೆಳೆದು ಗುಹೆಯ ಒಳಗಿನ   ತುದಿಯನ್ನು ಮುಟ್ಟುತ್ತದೆ. ಇದನ್ನು ಶಿವಲಿಂಗ ಎಂದು ಪರಿಗಣಿಸಲಾಗುತ್ತದೆ. ಮೇ ತಿಂಗಳಿನಿಂದ ಆಗಸ್ಟ್ ತಿಂಗಳಿನಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಚಂದ್ರನ ಗತಿಗೆ ಅನುಸಾರವಾಗಿ ಲಿಂಗ ಬೆಳೆದು   ಬಳಿಕ ಕರಗುವುದು ಹಿಮಲಿಂಗದ ವಿಶೇಷ. ಶ್ರಾವಣ ಪೂರ್ಣಿಮೆಯಂದು ಹಿಮಲಿಂಗ ಪೂರ್ಣ ಪ್ರಮಾಣದ ಎತ್ತರವನ್ನು ತಲುಪುತ್ತದೆ. ಈ ಹಿಮಲಿಂಗವನ್ನು ಅಮರೇಶ್, ಅಮರೇಶ್ವರ, ರಾಸ   ಲಿಂಗಂ, ಶುದ್ಧಿ ಲಿಂಗಂ ಮುಂತಾದ ಅನೇಕ ಹೆಸರಿನಿಂದ ಕರೆಯಲಾಗುತ್ತದೆ.

ಅಮರನಾಥ ಯಾತ್ರೆ:
ಅಮರನಾಥ ದೇವಾಲಯ ಮಂಡಳಿ ಈ ಯಾತ್ರೆಯನ್ನು ಆಯೋಜಿಸುತ್ತದೆ. ಈ ಪವಿತ್ರ ಯಾತ್ರೆ ಶ್ರಾವಣ ಮಾಸದಲ್ಲಿ ಅಂದರೆ, ಜೂನ್ ನಿಂದ ಆಗಸ್ಟ್ ತನಕ ವರ್ಷಂಪ್ರತಿ ಆಯೋಜನೆ   ಮಾಡಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಹಿಮಲಿಂಗದ ದರ್ಶನ ಪಡೆಯಲು ಸಾವಿರಾರು ಭಕ್ತರು ಅಮರನಾಥಕ್ಕೆ ಆಗಮಿಸುತ್ತಾರೆ.  ಸಾವಿರಾರು ವರ್ಷಗಳ ಇತಿಹಾಸವಿರುವ ಅಮರನಾಥ   ದೇಗುಲ 12ನೇ  ಶತನಾನದ ಬಳಿಕ ಜನಮಾನಸದಿಂದ ಕಳೆದುಹೋಗಿತ್ತು ಎನ್ನಲಾಗುತ್ತದೆ. ಆದರೆ ಆ ಬಳಿಕ ಅಮರನಾಥದಲ್ಲಿ ಗುಹಾಂರ್ತಗತ ಹಿಮಲಿಂಗ ಇರುವುದನ್ನು ಮುಸ್ಲಿಂ   ದನಗಾಹಿಯೊಬ್ಬ ಪತ್ತೆಹಚ್ಚಿದ. ಕುರಿಗಳನ್ನು ಮೇಯಿಸುತ್ತ ಬರುವ ಮುಸ್ಲಿಂ ದನಗಾಹಿಗೆ ಗುಹೆಯಲ್ಲಿ ಶಿವಲಿಂಗ ಇರುವುದು ಪತ್ತೆಯಾಗುತ್ತದೆ. ಇದು ಕೆಲವೇ ವರ್ಷಗಳಲ್ಲಿ ದೇಶವ್ಯಾಪಿ ದೊಡ್ಡ   ಸಮಾಚಾರವಾಗುತ್ತದೆ. ಬಳಿಕ ವಾರ್ಷಿಕ ಇಲ್ಲಿಗೆ ಆಗಮಿಸುವ ಯಾತ್ರಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇದೀಗ ಪ್ರತೀ ವರ್ಷ ಇಲ್ಲಿ ಲಕ್ಷಾಂತರ ಮಂದಿ ಭಕ್ತರು ಯಾತ್ರೆ ಕೈಗೊಳ್ಳುತ್ತಾರೆ. ಯಾತ್ರೆ   ಆರಂಭವಾದಾಗ ಯಾತ್ರಾರ್ಥಿಗಳ  ಕಷ್ಟ ಸುಖವನ್ನು ನೋಡಿಕೊಳ್ಳುತ್ತಿರುವುದು ಸ್ಥಳೀಯ ಮುಸ್ಲಿಮರು.

ಗುಡ್ಡ, ಪರ್ವತಗಳ ಚಾರಣ:
ಅಮರನಾಥ ಗುಹೆಗೆ ತೆರಳಲು ಯಾವುದೇ ವಾಹನದ ವ್ಯವಸ್ಥೆಯಿಲ್ಲ. ಹೀಗಾಗಿ ಶ್ರೀನಗರದಿಂದ ಪೆಹಲ್ ಗಾಮ್ ಗೆ ಮೊದಲು ಯಾತ್ರಿಕರು ಆಗಮಿಸಬೇಕು. ಅಲ್ಲಿಂದ ಸುಮಾರು ಭಕ್ತರು 24 ಕಿ.ಮೀ.   ಹಾದಿಯನ್ನು ಕಾಲ್ನಡಿಗೆಯಲ್ಲೇ ಕ್ರಮಿಸಬೇಕು. ಇದು ಪರ್ವತ ಚಾರಣವನ್ನು ಹೊಂದಿರುವ ಪ್ರಯಾಸದ ಹಾದಿಯಾಗಿದ್ದು, ನಡೆಯಲು ಸಾಧ್ಯವಾಗದವರಿಗೆ ಕುದುರೆ ಸವಾರಿಯ ವ್ಯವಸ್ಥೆ   ಕಲ್ಪಿಸಲಾಗುತ್ತದೆ. ಯಾತ್ರೆಯ ವೇಳೆ ಹೃದಯಾಘಾತಕ್ಕೆ ಒಳಗಾಗಿ ಅನೇಕ ಭಕ್ತರು ಸಾವನ್ನಪ್ಪುತ್ತಾರೆ. ಇತ್ತಿಚೆಗೆ ಉಗ್ರರ ಬೆದರಿಕೆಯಿಂದಾಗಿ ಯಾತ್ರೆಯುದ್ದಕ್ಕೂ ಭಾರತೀಯ ಸೇನೆ ಮಿಲಿಟರಿ ಭದ್ರತೆ ಒದಗಿಸುತ್ತಿದೆ. ಭದ್ರತಾ ದೃಷ್ಟಿಯಿಂದ ಯಾತ್ರೆಗೂ ಮುನ್ನ ಭಕ್ತರು ಹೆಸರು ನೋಂದಾವಣಿಯನ್ನು ಕಡ್ಡಾಯಗೊಳಿಸಲಾಗಿದೆ.

ಹೊಸ ಮಾರ್ಗ ಬಾಲ್ ಟಾಲ್
ಅಮರನಾಥ ಯಾತ್ರೆಗೆ ಪ್ರತೀ ವರ್ಷ ಲಕ್ಷಾಂತರ ಮಂದಿ ಆಗಮಿಸುವುದರಿಂದ ಪೆಹಲ್ ಗಾಮ್ ನಲ್ಲಿ ಎಲ್ಲ ಯಾತ್ರಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸುವುದು ಕಷ್ಟಸಾಧ್ಯವಾಗಿತ್ತು. ಈ ಹಿನ್ನಲೆಯಲ್ಲಿ   ದೇವಾಲಯ ಆಡಳಿತ ಮಂಡಳಿ ಹೊಸ ಮಾರ್ಗದ ಆನ್ವೇಷಣೆಗೆ ತೊಡಗಿತ್ತು. ಆಗ ಕಂಡುಕೊಂಡ ಮಾರ್ಗವೇ ಬಾಲ್ ಟಾಲ್ ಮಾರ್ಗ. ಇದು ಅಮರನಾಥ ಗುಹೆಗೆ ಕೇವಲ 14 ಕಿ.ಮೀ   ದೂರದಲ್ಲಿದ್ದು, ಜಮ್ಮುವಿನಿಂದ 400 ಕಿ.ಮೀ ದೂರದಲ್ಲಿದೆ. ಪೆಹಲ್ ಗಾಮ್ ಮಾರ್ಗಕ್ಕಿಂತಲೂ ಕಡಿಮೆ ಅವಧಿಯಲ್ಲಿ ಈ ಮಾರ್ಗದ ಮೂಲಕ ಅಮರನಾಥ ಯಾತ್ರೆಯನ್ನು ಪೂರ್ಣಗೊಳಿಸಬಹುದು.   ಇನ್ನು ಒಂದೇ ದಿನದಲ್ಲಿ ಯಾತ್ರೆ ಪೂರ್ಣ ಮಾಡಬಯಸವವರಿಗಾಗಿ ಇಲ್ಲಿ ಹೆಲಿಕಾಪ್ಟರ್ ಸೇವೆ ಕಲ್ಪಿಸಲಾಗಿದೆ. ಹೆಲಿಕಾಪ್ಟರ್ ಮೂಲಕ ಗುಹೆಯ ಸಮೀಪ ತೆರಳಿ ಅಲ್ಲಿಂದ ಸುಮಾರು 4ರಿಂದ 6   ನಕಿ.ಮೀ ನಡೆದು ಅಮರನಾಥನ ದರ್ಶನ ಪಡೆಯಬಹುದು.

-ಶ್ರೀನಿವಾಸ ಮೂರ್ತಿ.ವಿ.ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com