

ಗಾಂಧಿನಗರ: 2012ರ ಗೋಧ್ರೋತ್ತರ ಹಿಂಸಾಚಾರ ಬಳಿಕ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಬಹಿಷ್ಕಾರ ಹಾಕಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳು ಈಗ ಅವರ ಗುಣಗಾನ ಮಾಡಲು ಆರಂಭಿಸಿವೆ. ಐರೋಪ್ಯ ಒಕ್ಕೂಟ, ಜರ್ಮನಿಯ ಬೆನ್ನಲ್ಲೇ ಅಮೆರಿಕವೂ ಮೋದಿ ಪರ ಮೃದು ನಿಲುವು ತೋರುವ ಲಕ್ಷಣ ಕಾಣಿಸುತ್ತಿದೆ. ಇದಕ್ಕೆ ಪೂರಕವಾಗಿ ಅಮೆರಿಕದ ಕೆಲ ಸಂಸದರು ಹಾಗೂ ಉದ್ಯಮಿಗಳ ನಿಯೋಗವೊಂದು ಮೋದಿ ಅವರನ್ನು ಭೇಟಿಯಾಗಿದೆ. ಈ ವೇಳೆ ಗುಜರಾತ್ ಅಭಿವೃದ್ಧಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ನಿಯೋಗ ಅಮೆರಿಕಕ್ಕೆ ಭೇಟಿ ನೀಡುವಂತೆ ಮೋದಿ ಅವರಿಗೆ ಆಹ್ವಾನ ನೀಡಿದೆ.
ರಿಪಬ್ಲಿಕನ್ ಸಂಸದ ಅರೋನ್ ಶಾಕ್ ನೇತೃತ್ವದ 18 ಮಂದಿ ನಿಯೋಗ ಗುರುವಾರ ನರೇಂದ್ರ ಮೋದಿ ಅಧಿಕೃತ ನಿವಾಸಕ್ಕೆ ಭೇಟಿ ನೀಡಿತು. ಈ ವೇಳೆ ಮೋದಿ ಜತೆ ಸುಮಾರು ಒಂದು ಗಂಟೆ ಕಾಲ ನಿಯೋಗ ಚರ್ಚೆ ನಡೆಸಿತು.
ಮೋದಿ ಅವರ 'ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತ' ಹೇಳಿಕೆಯಿಂದ ಆಕರ್ಷಿತರಾಗಿದ್ದೇವೆ. ಗುಜರಾತ್ನಲ್ಲಿ ಅವರು ಕೈಗೊಂಡ ಕಾರ್ಯಗಳ ಕುರಿತು ಅಮೆರಿಕಕ್ಕೆ ಬಂದು ವಿವರಿಸುವಂತೆ ಕೇಳಿಕೊಂಡಿದ್ದೇವೆ. ಇದಕ್ಕಾಗಿ ನಾವು ಅವರನ್ನು ಅಮೆರಿಕಕ್ಕೆ ಆಹ್ವಾನಿಸಿದ್ದೇವೆ ಎಂದು ಮೋದಿ ಭೇಟಿ ಬಳಿಕ ನಿಯೋಗದ ಸದಸ್ಯರು ಮಾಹಿತಿ ನೀಡಿದ್ದಾರೆ.
ಮಾತುಕತೆ ವೇಳೆ ಅಮೆರಿಕದ ಜನ ಗುಜರಾತ್ ಜತೆಗೆ ಉತ್ತಮ ಬಾಂಧವ್ಯ ಹೊಂದಲು ಆಸಕ್ತರಾಗಿರುವುದಾಗಿ ಶಾಕ್ ತಿಳಿಸಿದ್ದಾರೆ. ಅಲ್ಲದೆ, ಗುಜರಾತ್ನಲ್ಲಿ ಮೋದಿ ಅವರು ಹೂಡಿಕೆಗೆ ನೀಡಿದ ಉತ್ತೇಜನ ಕುರಿತೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೋಧ್ರೋತ್ತರ ಹಿಂಸಾಚಾರ ಬಳಿಕ ಮೋದಿಗೆ ಅಮೆರಿಕ ವೀಸಾ ನಿರಾಕರಿಸಿತ್ತು. ಆದರೆ, ಈ ಮಾತುಕತೆ ವೇಳೆ ವೀಸಾ ವಿಚಾರ ಪ್ರಸ್ತಾಪ ಆಯಿತೇ ಇಲ್ಲವೇ ಎನ್ನುವ ಕುರಿತು ಯಾವುದೇ ಮಾಹಿತಿ ಇಲ್ಲ.