ನೀವು ಒಳ್ಳೆಯ ಕೆಲಸಗಾರರಾಗಿದ್ದರಷ್ಟೇ ಸಾಕೇ? ನಿಮ್ಮ ಕೆಲಸವನ್ನು ಇತರರೂ ಗುರುತಿಸುವುದು ಬೇಡವೇಯ ನಿವೇಷ್ಟೇ ಕೆಲಸ ಮಾಡಿದರೂ ನಿಮ್ಮ ಪ್ರತಿಭೆಯನ್ನು ಯಾರೂ ಗುರುತಿಸದೆ ಹೋದ್ರೆ ಪ್ರಯೋಜನ ಏನು? ನಿಮ್ಮನ್ನು ನೀವು ಕಚೇರಿಯಲ್ಲಿ ಹೇಗೆ ಗುರುತಿಸಿಕೊಳ್ಳುವಂತೆ ಮಾಡಬೇಕು ಎನ್ನುವ ಕುರಿತು ಇಲ್ಲಿದೆ ಒಂದಿಷ್ಟು ಟಿಪ್ಸ್.
ಫಲಿತಾಂಶವೇ ಮಾತನಾಡಲಿ
- ನೀವು ಭವಿಷ್ಯದಲ್ಲಿ ಏನು ಮಾಡುತ್ತೀರಿ ಎನ್ನುವ ಕುರಿತು ಯಾರೂ ಮಾತನಾಡುವುದಿಲ್ಲ. ಬದಲಾಗಿ ನೀವು ಏನು ಮಾಡಿದ್ದೀರಿ ಎನ್ನುವ ಬಗ್ಗೆಯಷ್ಟೇ ಜನ ತಲೆಕೆಡಿಸಿಕೊಳ್ಳುವುದು. ನೀವು ಯಾವ ಸಮಸ್ಯೆಯನ್ನು ಪರಿಹರಿಸಿದ್ದೀರಿ, ಪ್ರಾಜೆಕ್ಟ್ವೊಂದಕ್ಕೆ ಎಷ್ಟು ಕೊಡುಗೆ ನೀಡಿದ್ದೀರಿ? ಬಿಕ್ಕಟ್ಟಿನ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದ್ದೀರಿ? ಡೈಡ್ಲೈನ್ ಅನ್ನು ಹೇಗೆ ಪಾಲಿಸಿದ್ದೀರಿ ಎನ್ನುವುದು ಕಚೇರಿಯಲ್ಲಿ ನಿಮ್ಮ ಬೆಳವಣಿಗೆಯನ್ನು ನಿರ್ಧರಿಸುತ್ತದೆ ಎನ್ನುವುದು ಯಾವತ್ತೂ ನೆನಪಿನಲ್ಲಿರಲಿ. ಹಾಗಾಗಿ ಏನೇ ಕೆಲಸ ಕೊಟ್ಟರೂ ಅದನ್ನು ಯಶಸ್ವಿಯಾಗಿ ನಿಭಾಯಿಸಿ.
ಪ್ರೋತ್ಸಾಹಿಸಿ
- ಸಹೋದ್ಯೋಗಿಗಳು ಉತ್ತಮ ಕೆಲಸ ಮಾಡಿದಾಗ ಅವರನ್ನು ಬೆಂಬಲಿಸಿ. ತಪ್ಪು ಮಾಡಿದಾಗ ಅವರಿಗೆ ಧೈರ್ಯ ತುಂಬಿ. ಇದು ಅವರಲ್ಲಿ ಹೊಸ ಉತ್ಸಾಹ ತುಂಬುತ್ತದೆ. ಜತೆಗೆ ಅವರು ನಿಮ್ಮನ್ನು ಗೌರವಿಸಲೂ ಆರಂಭಿಸುತ್ತಾರೆ. ಈ ಹಿಂದೆ ಏನು ಹೇಳಿದ್ದೀರಿ, ಏನು ಮಾಡಿದ್ದೀರಿ ಎಂಬುದನ್ನು ಜನ ಮರೆತುಬಿಡಬಹುದು. ಆದರೆ, ಅವರು ಹೆಮ್ಮೆ ಪಡುವಂತೆ ಮಾಡಿದ್ದನ್ನು ಯಾವತ್ತೂ ಮರೆಯುವುದಿಲ್ಲ. ಒಂದು ವೇಳೆ ನೀವು ಇತರರನ್ನು ಬೆಂಬಲಿಸಿದರೆ ಮುಂದೆ ಅವರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ.
ಅಭಿಪ್ರಾಯಗಳನ್ನು ವ್ಯಕ್ತಪಡಿಸಿ
ನಿಮ್ಮಲ್ಲಿ ಏನಾದರೂ ಹೊಸ ಐಡಿಯಾಗಳಿವೆಯಾ? ನಿಮ್ಮ ಗುರಿಗಳೇನು? ಕನಸುಗಳೇನು?- ಇದಕ್ಕೆ ನೀವಷ್ಟೇ ಉತ್ತರ ಕೊಡಲು ಸಾಧ್ಯವಾದರೆ ಏನು ಪ್ರಯೋಜನ. ಸಾಧ್ಯವಾದರೆ ಇವುಗಳನ್ನೆಲ್ಲ ಇತರರೊಂದಿಗೆ ಹಂಚಿಕೊಳ್ಳಿ. ನಿಮ್ಮಂತೆಯೇ ಯೋಚಿಸುವವರು ನಿಮ್ಮ ಅಕ್ಕಪಕ್ಕದಲ್ಲಿ ಇರಬಹುದು. ನಿಮ್ಮ ಧೈರ್ಯ ಅವರಿಗೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಪ್ರೇರಣೆ ನೀಡಬಹುದು. ಅವರು ನಿಮಗೆ ಆತ್ಮೀಯರಾಗಬಹುದು.
ವೈಫಲ್ಯವನ್ನು ಒಪ್ಪಿಕೊಳ್ಳಿ
ತಪ್ಪುಗಳನ್ನು ಒಪ್ಪಿಕೊಳ್ಳುವುದು ಸುಲಭದ ಕೆಲಸ ಅಲ್ಲ. ನಾಯಕನಾದವನು ತಪ್ಪನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುವುದಿಲ್ಲ. ಇದು ಇತರರಲ್ಲಿ ನಿಮ್ಮ ಬಗ್ಗೆ ಗೌರವವನ್ನೂ ಮೂಡಿಸುತ್ತದೆ.
ಸಾಮರ್ಥ್ಯ ಏನು?
ನಿಮ್ಮ ಶಕ್ತಿ, ಸಾಮರ್ಥ್ಯಗಳೇನು? ನೀವು ಇತರರಿಗಿಂತ ಹೇಗೆ ಭಿನ್ನ ಎನ್ನುವುದನ್ನು ನೀವು ಇತರರಿಗೆ ಮನವರಿಕೆ ಮಾಡಿಕೊಡಬೇಕು. ಹತ್ತರಲ್ಲಿ ಹನ್ನೊಂದಾಗಿದ್ದರೆ ನಿಮ್ಮ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲಸದ ವಿಚಾರದಲ್ಲಿ ನೀವು ಇತರರಿಗಿಂತ ಭಿನ್ನವಾಗಿದ್ದಾಗ ಮಾತ್ರ ಮೇಲಧಿಕಾರಿಗಳು ನಿಮ್ಮ ಬಗ್ಗೆ ಆಸಕ್ತಿ ತೋರುತ್ತಾರೆ.
ವಿನೀತರಾಗಿರಿ
ನೀವು ಯಶಸ್ಸಿನ ತುತ್ತ ತುದಿಯಲ್ಲಿರಬಹುದು. ಹಾಗಂತ ಅದನ್ನು ನೆತ್ತಿಗೇರಿಸಿಕೊಳ್ಳಬೇಡಿ. ಯಶಸ್ಸಿನ ಬಳಿಕವೂ ನಿಮ್ಮ ಕಾಲು ನೆಲದಲ್ಲೇ ಇರಲಿ.