ಫಡ್ನವಿಸ್ ಕ್ಯಾಬಿನೆಟ್ ಸೇರಲು ಶಿವಸೇನೆ ನಿರ್ಧಾರ..!

ಶಿವಸೇನೆ ಕೊನೆಗೂ ತನ್ನ ನಿರ್ಧಾರವನ್ನು ಬದಲಿಸಿದ್ದು, ದೇವೇಂದ್ರ ಫಡ್ನವಿಸ್ ಸಂಪುಟವನ್ನು ಸೇರಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ)
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ)

ಮುಂಬೈ: ಮಹಾರಾಷ್ಟ್ರ ಬಿಜೆಪಿ ಸರ್ಕಾರದಿಂದ ದೂರವಿರಲು ನಿರ್ಧರಿಸಿದ್ದ ಶಿವಸೇನೆ ಕೊನೆಗೂ ತನ್ನ ನಿರ್ಧಾರವನ್ನು ಬದಲಿಸಿದ್ದು, ದೇವೇಂದ್ರ ಫಡ್ನವಿಸ್ ಸಂಪುಟವನ್ನು ಸೇರಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ನಿರ್ಧರಿಸಲು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಮುಂಬೈ ನಿವಾಸ ಮಾತೊಶ್ರೀಯಲ್ಲಿ ನಿನ್ನೆ ಕರೆಯಲಾಗಿದ್ದ ಸಭೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಬೇಷರತ್ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಸುಮಾರು 1 ಗಂಟೆಗೂ ಅಧಿಕ ಕಾಲ ಚರ್ಚಿಸಿದ್ದಾರೆ. ಈ ವೇಳೆ ಸಂಪುಟದಲ್ಲಿ ಸ್ಥಾನ ಹಂಚಿಕೆ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಉಪಮುಖ್ಯಮಂತ್ರಿ ಸ್ಥಾನ ಅಥವಾ ಗೃಹ ಸಚಿವ ಸ್ಥಾನಕ್ಕೆ ಹಿಡಿದಿದ್ದ ಪಟ್ಟನ್ನು ಉದ್ಧವ್ ಠಾಕ್ರೆ ಸಡಿಲಿಸಿದ್ದಾರೆ. ಅದರ ಬದಲಿಗೆ ಇಂಧನ ಮತ್ತು ನೀರಾವರಿ ಖಾತೆಗಳನ್ನು ಶಿವಸೇನೆಗೆ ನೀಡಲು ಬಿಜೆಪಿ ಒಪ್ಪಿಕೊಂಡಿದೆ. ಅಲ್ಲದೆ 6 ಕ್ಯಾಬಿನೆಟ್ ದರ್ಜೆ ಮತ್ತು 4 ರಾಜ್ಯ ಸಚಿವ ಖಾತೆಗಳನ್ನು ಹಂಚಿಕೆ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆದಿದೆ. ಎಲ್ಲವೂ ಅಂದು ಕೊಂಡಂತೆ ನಡೆದರೆ ನಾಳೆಯೇ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ತಮ್ಮ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸುಭಾಷ್ ದೇಸಾಯಿ, ಏಕನಾಥ್ ಶಿಂಧೆ, ದಿವಾಕರ್ ರಾವುತ್ ಅವರು ಕ್ಯಾಬಿನೆಟ್ ಸಚಿವರಾಗುವ ಸಾಧ್ಯತೆ ಇದ್ದು, ಸಂಜಯ್ ರಾಥೋಡ್, ಸಂಜಯ್ ಶಿರ್ಸದ್, ವೈಭವ್ ನಾಯ್ಕ್ ಕೂಡ ಸಂಪುಟ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ನವೆಂಬರ್ 2ರಂದು ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರ್ಕಾರ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿತ್ತು. ಆದರೆ ಬಿಜೆಪಿಗೆ ಪೂರ್ಣ ಬೆಂಬಲ ಲಭಿಸದೇ ಇದ್ದುದರಿಂದ ಎನ್‌ಸಿಪಿ ಪಕ್ಷ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com