
ನವದೆಹಲಿ: ಶರದಾ ಚಿಟ್‌ಫಂಡ್ ಹಗರಣಕ್ಕೂ ಮತ್ತು ಬುರ್ದ್ವಾನ್ ಸ್ಫೋಟ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬುಧವಾರ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕೋಲ್ಕತಾ ರ್ಯಾಲಿ ವೇಳೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಲೋಕಸಭೆಯಲ್ಲಿ ಉತ್ತರಿಸಿರುವ ಕೇಂದ್ರದ ಸಚಿವ ಜಿತೇಂದ್ರ ಸಿಂಗ್ ಅವರು, ಶರದಾ ಚಿಟ್‌ಫಂಡ್ ಹಗರಣಕ್ಕೂ ಬುರ್ದ್ವಾನ್ ಸ್ಫೋಟ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಶರದಾ ಚಿಟ್‌ಫಂಡ್ ಹಗರಣದ ಈ ವರೆಗಿನ ತನಿಖೆಯಲ್ಲಿ ಯಾವುದೇ ರೀತಿಯ ಬಾಂಗ್ಲಾದೇಶ ಸಂಪರ್ಕಗಳು ಕಂಡುಬಂದಿಲ್ಲ. ಹಗರಣದಲ್ಲಿ ನಡೆದಿರುವ ಹಣಕಾಸಿನ ವ್ಯವಹಾರಗಳಲ್ಲಿ ಬಾಂಗ್ಲಾದೇಶಿ ಭಯೋತ್ಪಾದಕ ಸಂಘಟನೆಗಳ ಪಾತ್ರ ಕಂಡುಬಂದಿಲ್ಲ. ತನಿಖೆ ಮುಂದುವರೆದಿದ್ದು, ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸತ್ಯಾಂಶ ಹೊರ ಬೀಳಲಿದೆ ಎಂದು ಜಿತೇಂದ್ರ ಸಿಂಗ್ ಸ್ಪಷ್ಟಪಡಿಸಿದರು.
ಕಳೆದ ಭಾನುವಾರ ಕೋಲ್ಕತಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶರದಾ ಚಿಟ್‌ಫಂಡ್ ಹಗರಣದ ಆರೋಪಿಗಳ ರಕ್ಷಣೆ ನಿಂತಿದ್ದು, ಹಗರಣದಲ್ಲಿ ಗುಳುಂ ಮಾಡಲಾಗಿರುವ ಹಣವನ್ನು ಬುರ್ಧ್ವಾನ್ ಸ್ಫೋಟ ಪ್ರಕರಣದಲ್ಲಿ ಉಗ್ರರು ಬಳಕೆ ಮಾಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ ಬುರ್ದ್ವಾನ್ ಸ್ಫೋಟ ಪ್ರಕರಣದ ತನಿಖೆ ನೆಡಸುತ್ತಿರುವ ಎನ್‌ಐಎ ಅಧಿಕಾರಿಗಳ ಹಾದಿ ತಪ್ಪಿಸಲಾಗುತ್ತಿದ್ದು, ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಟಿಎಂಸಿ ಮುಖಂಡರನ್ನು ರಕ್ಷಣೆ ಮಾಡಲು ತನಿಖೆಗೆ ಅಡ್ಡಿ ಪಡಿಸಲಾಗುತ್ತಿದೆ ಅಮಿತ್ ಶಾ ಆರೋಪಿಸಿದ್ದರು. ಶಾ ಅವರ ಆರೋಪಕ್ಕೆ ಸಂಬಂಧಿಸಿದಂತೆ ಆಕ್ರೋಶಗೊಂಡ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು.
ಅಲ್ಲದೆ ಸಹರಾ ಹಗರಣದಲ್ಲಿ ಅಮಿತ್ ಶಾ ಅವರ ಪಾತ್ರವಿದೆ ಎಂದು ಆರೋಪಿಸಿದ್ದಲ್ಲದೇ ಸಹರಾ ಹಗರಣದ ರೂವಾರಿ ಸುಪ್ರತೋ ರಾಯ್ ಅವರ ಕೆಂಪು ಡೈರಿಯಲ್ಲಿ ಅಮಿತ್ ಶಾ ಅವರ ಹೆಸರು ಉಲ್ಲೇಖವಾಗಿರುವುದು ಏಕೆ ಎಂದು ಪ್ರಶ್ನಿಸಿದ್ದರು. ಅಲ್ಲದೆ, ಸಹರಾ ಹಗರಣದಲ್ಲಿ ಅಮಿತ್ ಶಾ ಅವರ ಪಾತ್ರದ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.
Advertisement