ಗುಂಡೇಟು ತಿಂದು 9 ಕಿ.ಮೀ ನಡೆದ ಯೋಧ

ಛತ್ತೀಸ್‌ಗಡದಲ್ಲಿ ನಡೆದಿದ್ದ ನಕ್ಸಲ್ ದಾಳಿ ವೇಳೆ ಸಿಆರ್‌ಪಿಎಫ್ ಯೋಧನೊಬ್ಬ ಗುಂಡೇಟು ತಿಂದು 9 ಕಿ.ಮೀ ನಡೆದಿದ್ದಾನೆ..!
ಕಾರ್ಯಾಚರಣೆಯಲ್ಲಿ ತೊಡಗಿರುವ ಯೋಧರು (ಸಂಗ್ರಹ ಚಿತ್ರ)
ಕಾರ್ಯಾಚರಣೆಯಲ್ಲಿ ತೊಡಗಿರುವ ಯೋಧರು (ಸಂಗ್ರಹ ಚಿತ್ರ)
Updated on

ರಾಯ್‌ಪುರ: ಛತ್ತೀಸ್‌ಗಡದಲ್ಲಿ ನಡೆದಿದ್ದ ನಕ್ಸಲ್ ದಾಳಿ ವೇಳೆ ಸಿಆರ್‌ಪಿಎಫ್ ಯೋಧನೊಬ್ಬ ಗುಂಡೇಟು ತಿಂದು 9 ಕಿ.ಮೀ ನಡೆದಿದ್ದಾನೆ..!

ಕಳೆದ ಸೋಮವಾರ ರಾಯ್‌ಪುರದಲ್ಲಿ ನಡೆದಿದ್ದ ಭೀಕರ ನಕ್ಸಲ್ ದಾಳಿ ವೇಳೆ 14 ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿ, 12 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಪ್ರಸ್ತುತ ಗಾಯಾಳುಗಳನ್ನು ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಯೋಧರು ಚಿಕಿತ್ಸೆ ಪಡೆಯುತ್ತಿದ್ದಾರೆ. ನಕ್ಸಲರ ದಾಳಿ ಕುರಿತಂತೆ ದಾಳಿ ವೇಳೆ ಗಾಯಗೊಂಡ 24 ವರ್ಷದ ಚಂದನ್ ಕುಮಾರ್ ಎಂಬ ಯೋಧ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕ್ಷಣ ಕ್ಷಣದ ಘಟನೆಯನ್ನು ವಿವರಿಸಿದ್ದಾರೆ.

'ನಾವು ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ರಾಯ್‌ಪುರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೆವು. ಈ ವೇಳೆ ನಕ್ಸಲರು ಅವಿತಿರುವ ಜಾಗದ ಬಗ್ಗೆ ಮಾಹಿತಿ ಬಂದ ಕೂಡಲೇ ಆ ಜಾಗಕ್ಕೆ ತೆರಳಿದೆವು. ಅಷ್ಟರಲ್ಲಾಗಲೇ ನಮ್ಮ ಬರುವಿಕೆಯನ್ನು ಅರಿತಿದ್ದ ನಕ್ಸಲರು ಸ್ಥಳೀಯ ಮನೆಗಳಲ್ಲಿ ಅವಿತುಕೊಂಡಿದ್ದರು. ಎಲ್ಲ ಮನೆಗಳಿಗೂ ಬೀಗ ಜಡಿಯಲಾಗಿತ್ತು. ನಾವು ಆ ಜಾಗದ ಪ್ರವೇಶ ಮಾಡುತ್ತಿದ್ದಂತೆಯೇ ನಕ್ಸಲರು ಮನಸೋ ಇಚ್ಚೆ ಗುಂಡು ಹಾರಿಸಲಾರಂಭಿಸಿದರು. ನಾವು ಆ ಗ್ರಾಮವನ್ನು ತೊರೆಯದೇ ಬೇರೆ ವಿಧಿಯಿರಲಿಲ್ಲ. ಅದೇ ವೇಳೆ ಕೆಲ ಗ್ರಾಮಸ್ಥರು ಕೂಗಿಕೊಂಡು ನಮ್ಮ ಹತ್ತಿರ ಬಂದರು. ಇದನ್ನೇ ಅಸ್ತ್ರವಾಗಿ ಬಳಿಸಿಕೊಂಡ ನಕ್ಸಲರು ಜನರ ಗುಂಪಿನಲ್ಲಿ ಸೇರಿಕೊಂಡು ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದರು'.

'ವಿಧಿ ಇಲ್ಲದೇ ನಾವು ಅವರ ಮೇಲೆ ಗುಂಡಿನ ದಾಳಿ ಮಾಡಬೇಕಾಯಿತು. ಈ ವೇಳೆ ಸುಮಾರು 20 ರಿಂದ 25 ನಕ್ಸಲರು ಸಾವಿಗೀಡಾದರು. ನಮ್ಮಲ್ಲಿಯೂ ಸಾಕಷ್ಟು ಸಾವು ನೋವಾಗಿತ್ತು. ಆದರೆ ಆದಾಗಲೇ ನನ್ನ ಕಾಲಿಗೆ ಗುಂಡು ತಗುಲಿತ್ತು. ಇದರ ಪರಿವೇ ಇಲ್ಲದೇ ನಾನು ಕಾಡಿನಲ್ಲಿ ನಡೆಯುತ್ತಿದ್ದೆ. ಈ ವೇಳೆ ಮತ್ತೋರ್ವ ಯೋಧ ನನ್ನ ಕಾಲಿನಲ್ಲಿ ಸುರಿಯುತ್ತಿದ್ದ ರಕ್ತವನ್ನು ಗಮನಿಸಿ ನನಗೆ ಹೇಳಿದ. ಆ ಬಳಿಕವಷ್ಟೇ ನನಗೆ ಗುಂಡು ತಗುಲಿರುವ ವಿಚಾರ ತಿಳಿಯಿತು. ಮತ್ತೋರ್ವ ಯೋಧನ ಸಹಾಯ ಪಡೆದು ಕಾಡಿನಲ್ಲಿಯೇ ಸುಮಾರು 9 ಕಿ.ಮೀ ನಡೆದು ಆಸ್ಪತ್ರೆ ಸೇರಿಕೊಂಡಿದ್ದೇನೆ' ಎಂದು ಚಂದನ್ ಕುಮಾರ್ ಹೇಳಿದ್ದಾರೆ.

ಚಂದನ್ ಕುಮಾರ್ ಮೂಲತಃ ಬಿಹಾರದ ಜೆಹನಾಬಾದ್ ಮೂಲದವರಾಗಿದ್ದು, ತಮ್ಮ ಕಾಲಿಗೆ ಗುಂಡು ಬಿದ್ದ ವಿಚಾರವನ್ನು ಅವರ ಈ ವರೆಗೂ ಕುಟುಂಬಸ್ಥರಿಗೆ ತಿಳಿಸಿಲ್ಲ. ಚಂದನ್ ಕುಮಾರ್ ಅವರಂತೆಯೇ ಸಾಕಷ್ಟು ಯೋಧರು ಗುಂಡೇಟು ತಿಂದು ರಾಯ್‌ಪುರದ ಸೇನಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲ ಯೋಧರ ಪರಿಸ್ಥಿತಿಯಂತೂ ತೀರಾ ಚಿಂತಾಜನಕವಾಗಿದೆ. ಇನ್ನು ನಕ್ಸಲ್ ಪೀಡಿತ ಛತ್ತೀಸ್‌ಗಡ ರಾಜ್ಯದಲ್ಲಿ ಹಿಂಸೆ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ದಕ್ಷಿಣ ಬಸ್ತಾರ್‌ನಲ್ಲಿ ಈಗಲೂ ಸಾಕಷ್ಟು ಸಂಖ್ಯೆಯಲ್ಲಿ ನಕ್ಸಲರು ಅವಿತಿದ್ದು, ಯಾವುದೇ ಕ್ಷಣದಲ್ಲಿ ರಾಯ್‌ಪುರ ಘಟನೆ ಮರುಕಳಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com