ಕಾಶ್ಮೀರದಲ್ಲಿ ಉಗ್ರರ ದಾಳಿ: 20ಕ್ಕೇರಿದ ಸಾವಿನ ಸಂಖ್ಯೆ

ಕಾಶ್ಮೀರದ ವಿವಿಧೆಡೆ ಉಗ್ರರು ನಡೆಸಿದ ದಾಳಿಯಿಂದಾಗಿ ಕನಿಷ್ಟ 20 ಮಂದಿ ಸಾವಿಗೀಡಾಗಿ, 11 ಅಧಿಕ ಮಂದಿ ಗಾಯಗೊಂಡಿದ್ದಾರೆ.
ಉಗ್ರರೊಂದಿಗಿನ ಕಾಳಗದಲ್ಲಿ ನಿರತರಾಗಿರುವ ಭಾರತೀಯ ಸೇನೆಯ ಯೋಧ (ಸಂಗ್ರಹ ಚಿತ್ರ)
ಉಗ್ರರೊಂದಿಗಿನ ಕಾಳಗದಲ್ಲಿ ನಿರತರಾಗಿರುವ ಭಾರತೀಯ ಸೇನೆಯ ಯೋಧ (ಸಂಗ್ರಹ ಚಿತ್ರ)

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಮತದಾನವನ್ನು ಗುರಿಯಾಗಿಸಿಕೊಂಡು ವಿವಿಧೆಡೆ ಉಗ್ರರು ನಡೆಸಿದ ದಾಳಿಯಿಂದಾಗಿ ಕನಿಷ್ಟ 20 ಮಂದಿ ಸಾವಿಗೀಡಾಗಿ, 11 ಅಧಿಕ ಮಂದಿ ಗಾಯಗೊಂಡಿದ್ದಾರೆ.

ಸೇನಾಕ್ಯಾಂಪ್‌ಗಳು, ಪೊಲೀಸ್ ಚೆಕ್‌ಪೋಸ್ಟ್‌ಗಳು ಸೇರಿದಂತೆ ಒಟ್ಟು ನಾಲ್ಕು ಪ್ರದೇಶಗಳಲ್ಲಿ ದಾಳಿ ನಡೆಸಿರುವ ಉಗ್ರರು, ಗ್ರೆನೇಡ್‌ಗಳನ್ನು ಸ್ಫೋಟಿಸಿದ್ದಾರೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಮತದಾನಕ್ಕೆ ಅಡ್ಡಿ ಪಡಿಸಲೆಂದೇ ಉಗ್ರರು ಈ ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಇದೇ ಸೋಮವಾರ ಶ್ರೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಪ್ರಸ್ತುತ ಉಗ್ರರ ದಾಳಿಯು ಪ್ರಧಾನಿ ಮೋದಿ ಅವರ ರ್ಯಾಲಿ ಮೇಲೆ ಕರಿನೆರಳು ಬೀರಿದೆ.

ಇನ್ನು ಬಾರಾಮುಲ್ಲಾ ಬಳಿ ಇರುವ ಸೇನಾ ಶಿಬಿರದ ಮೇಲೆ ಉಗ್ರರ ಗುಂಪು ದಾಳಿ ನಡೆಸಿದ ಪರಿಣಾಮ ಇಬ್ಬರು ಸೇನಾ ಅಧಿಕಾರಿಗಳು ಸೇರಿದಂತೆ 8 ಮಂದಿ ಯೋಧರು, ಮೂವರು ಪೊಲೀಸ್ ಅಧಿಕಾರಿಗಳು, ಹತರಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಬಂದೂಕಿನಿಂದಲೇ ಉತ್ತರ ನೀಡಿದ ನಮ್ಮ ಯೋಧರು ಎಲ್ಲಾ ಆರು ಮಂದಿ ಉಗ್ರರನ್ನು ಸದೆ ಬಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉರಿ ಜಿಲ್ಲೆಯ ಮೊಹ್ರಾ ಸೇನಾ ಶಿಬಿರದ ಮೇಲೆ ಬೆಳಗ್ಗೆ ಸುಮಾರು 3ಗಂಟೆಯ ಸಮಯದಲ್ಲಿ ದಾಳಿ ನಡೆಸಿದ್ದ ಉಗ್ರರು ಓರ್ವ ಯೋಧ ಮತ್ತು ಇಬ್ಬರು ಸೇನಾ ಅಧಿಕಾರಿಗಳನ್ನು ಕೊಂದು ಹಾಕಿದ್ದಾರೆ. ಇದಲ್ಲದೇ ಘಟನೆಯಲ್ಲಿ 8 ಮಂದಿ ಯೋಧರು ಮತ್ತು ಮೂವರು ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರರ ದಾಳಿ ಕುರಿತಂತೆ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, ಇದು ಪ್ರಜಾಪ್ರಭುತ್ವದ ಮೇಲೆ ಉಗ್ರರು ನಡೆರುವ ದಾಳಿ ಎಂದು ಖಂಡಿಸಿದ್ದಾರೆ. ಅಲ್ಲದೆ ಶಾಂತಿಯನ್ನು ಕದಡಲೆಂದೇ ಉಗ್ರರು ದಾಳಿ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಒಮರ್ ಅಬ್ದುಲ್ಲಾ ಅವರು, ರಾಜ್ಯಕ್ಕೆ ಇದೊಂದು ಕರಾಳ ದಿನವಾಗಿದ್ದು, ಕಣಿವೆ ರಾಜ್ಯದ ನಾಲ್ಕು ಪ್ರದೇಶಗಳಲ್ಲಿ ಉಗ್ರರು ಅಟ್ಟಹಾಸ ಗೈದು, ಹಲವು ಯೋಧರನ್ನು, ಪೊಲೀಸರನ್ನು ಮತ್ತು ಅಮಾಯಕ ನಾಗರೀಕರನ್ನು ಕೊಂದು ಹಾಕಿದ್ದಾರೆ ಎಂದು ಹೇಳಿದ್ದಾರೆ.

ಎಲ್ಲಾ ಉಗ್ರರನ್ನು ಸದೆ ಬಡಿದ ಭಾರತೀಯ ಸೇನೆ
ಪ್ರಸ್ತುತ ದಾಳಿ ನಿಂತಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ದಾಳಿಗೊಳಗಾದ ಪ್ರದೇಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ದಾಳಿ ನಡೆಸಿದ ಗುಂಪಿನಲ್ಲಿದ್ದ ಎಲ್ಲ ಉಗ್ರರನ್ನು ಯೋಧರು ಕೊಂದು ಹಾಕಿದ್ದು, ಉಗ್ರರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಕಣಿವೆ ರಾಜ್ಯದ ಮತದಾನವನ್ನು ಕೇಂದ್ರವಾಗಿರಿಸಿಕೊಂಡೇ ಉಗ್ರರು ದಾಳಿ ನಡೆಸಿದ್ದಾರೆ. ಆದರೆ ಅಚ್ಚರಿಯ ಅಂಶವೆಂದರೆ ಉಗ್ರರ ದಾಳಿಯ ಹೊರತಾಗಿಯೂ ಕಾಶ್ಮೀರದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಾಳಿ ಹಿಂದೆ ಹಫೀಜ್ ಕೈವಾಡ: ಅಧಿಕಾರಿಗಳ ಆರೋಪ
ಇನ್ನು ಇಂದಿನ ದಾಳಿಯ ಹಿಂದೆ ಉಗ್ರ ಹಫೀಜ್ ಸೈಯದ್ ನ ಕೈವಾಡವಿದೆ ಎಂದು ಸೇನಾಧಿಕಾರಿಗಳು ಆರೋಪಿಸಿದ್ದಾರೆ. ಲಾಹೋರ್‌ನಲ್ಲಿ ಹಫೀಜ್ ಸೈಯದ್ ನಡೆಸುತ್ತಿರುವ ರ್ಯಾಲಿ ವೇಳೆಯಲ್ಲಿಯೇ ಕಾಶ್ಮೀರದಲ್ಲಿ ದಾಳಿಗಳಾಗುತ್ತಿರುವುದು ಕಾಕತಾಳೀಯವಲ್ಲ. ಖಂಡಿತವಾಗಿಯೂ ಮಾಸ್ಟರ್ ಮೈಂಡ್ ಹಫೀಜ್ ಸೈಯದ್‌ನ ಆಣತಿ ಮೇರೆಗೆ ದಾಳಿಗಳಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ಕೈಲಾಗದೇ ಹೋದರೆ ಹೇಳಿ: ರಾಜನಾಥ್ ಸಿಂಗ್ ಆಕ್ರೋಶ
ಉಗ್ರ ದಾಳಿಯನ್ನು ಖಂಡಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಪಾಕಿಸ್ತಾನ ಭಯೋತ್ಪಾದಕ ಚಟುವಟಿಕೆಗಳನ್ನು ನಿಲ್ಲಿಸಬೇಕು. ಒಂದು ವೇಳೆ ಪಾಕ್ ಸರ್ಕಾರಕ್ಕೆ ಅದು ಸಾಧ್ಯವಾಗದೇ ಇದ್ದರೆ, ಬೇಕಿದ್ದರೆ ಭಾರತದೊಂದಿಗೆ ಚರ್ಚಿಸಬಹುದು ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಆ ಮೂಲಕ ರಾಜನಾಥ್ ಸಿಂಗ್ ಅವರು 'ಭಯೋತ್ಪಾದನೆಯನ್ನು ನಿರ್ನಾಮ ಮಾಡಲು ನಾವು ಸಿದ್ಧರಿದ್ದೇವೆ' ಎಂಬ ಸಂದೇಶವನ್ನು ಪಾಕಿಸ್ತಾನ ಸರ್ಕಾರಕ್ಕೆ ರವಾನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com