
ನವದೆಹಲಿ: ಕಾಶ್ಮೀರದ ವಿವಿಧೆಡೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಲೆ.ಜ.ಸುಬ್ರತೋ ಸಹಾ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುಬ್ರತೋ ಸಹಾ ಅವರು, ಕಾಶ್ಮೀರ ದಾಳಿ ಹಿಂದೆ ಪಾಕಿಸ್ತಾನ ಸೇನೆಯ ಕೈವಾಡವಿದೆ. ಉಗ್ರರಿಂದ ವಶಪಡಿಸಿಕೊಳ್ಳಲಾಗಿರುವ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಶಸ್ತ್ರಾಸ್ತ್ರಗಳಲ್ಲಿ ಪಾಕಿಸ್ತಾನ ಸೇನೆಯ ಶಸ್ತ್ರಾಸ್ತ್ರಗಳು ಕೂಡ ಸೇರಿವೆ. ಅಲ್ಲದೆ ಕೆಲ ಉಗ್ರರ ಬಳಿ ಪಾಕಿಸ್ತಾನ ಸೇನೆಯ ಯೋಧರು ಬಳಕೆ ಮಾಡುವ ಸೇನಾ ಸಮವಸ್ತ್ರಗಳು, ಆಹಾರ ಪೊಟ್ಟಣ ಮತ್ತು ಶೂಗಳು ಕಂಡುಬಂದಿವೆ. ಈ ಎಲ್ಲ ಸಾಕ್ಷಿಗಳು ಘಟನೆಯ ಹಿಂದೆ ಪಾಕಿಸ್ತಾನದ ಕೈವಾಡವಿರುವುದನ್ನು ಸ್ಪಷ್ಟಪಡಿಸಿವೆ ಎಂದು ಹೇಳಿದ್ದಾರೆ.
ಇವಿಷ್ಟೇ ಅಲ್ಲದೆ ಗಡಿಯಲ್ಲಿ ಸುಮಾರು 145ಕ್ಕೂ ಅಧಿಕ ಉಗ್ರರು ಭಾರತ ಗಡಿ ದಾಟಲು ಹೊಂಚು ಹಾಕಿ ಕುಳಿತಿದ್ದು, ಯಾವುದೇ ಕ್ಷಣದಲ್ಲಿ ಭಾರತದ ಮೇಲೆ ಯುದ್ಧ ಸಾರಲು ಸಜ್ಜಾಗಿ ನಿಂತಿದ್ದಾರೆ ಎಂದು ಸುಬ್ರತೋ ಸಹಾ ಹೇಳಿದ್ದಾರೆ.
ಕಳೆದ ಶುಕ್ರವಾರ ಕಾಶ್ಮೀರದ ವಿವಿಧೆಡೆ ಸೇನಾ ಮತ್ತು ಪೊಲೀಸ್ ಶಿಬಿರಗಳನ್ನು ಗುರಿಯಾಗಿಸಿಕೊಂಡು ಉಗ್ರರ ಗುಂಪು ಸಾಮೂಹಿಕ ದಾಳಿ ನಡೆಸಿತ್ತು. ಈ ವೇಳೆ ಉಗ್ರರು ಸೇರಿದಂತೆ ಒಟ್ಟು 20 ಮಂದಿ ಸಾವಿಗೀಡಾಗಿದ್ದರು. ಸತತ 12 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ದಾಳಿ ನಡೆಸಿದ್ದ ಎಲ್ಲ ಉಗ್ರರನ್ನು ಭದ್ರತಾ ಪಡೆಗಳು ಸದೆಬಡಿದಿದ್ದವು. ಆ ಬಳಿಕ ನಡೆದ ತಪಾಸಣಾ ಪ್ರಕ್ರಿಯೆ ವೇಳೆ ಸೇನೆ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು, ಶೂಗಳು ಮತ್ತು ಆಹಾರ ಪೊಟ್ಟಣಗಳು ಪಾಕಿಸ್ತಾನ ಸೇನೆಯದ್ದು ತಿಳಿದುಬಂದಿತ್ತು.
Advertisement