ಕೋಝಿಕ್ಕೋಡ್‌ನಲ್ಲಿ 'ಕಿಸ್ ಇನ್ ದಿ ಸ್ಟ್ರೀಟ್‌': ತಾರಕ್ಕೇರಿದ್ದ ಪ್ರತಿಭಟನೆ

ಕಿಸ್ ಆಫ್ ಲವ್ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡದಿದ್ದರೂ...
'ಕಿಸ್ ಇನ್ ದಿ ಸ್ಟ್ರೀಟ್‌'ನಲ್ಲಿ  ಪ್ರತಿಭಟನಾಕಾರರು
'ಕಿಸ್ ಇನ್ ದಿ ಸ್ಟ್ರೀಟ್‌'ನಲ್ಲಿ ಪ್ರತಿಭಟನಾಕಾರರು

ಕೋಝಿಕ್ಕೋಡ್: ಕಿಸ್ ಆಫ್ ಲವ್ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡದಿದ್ದರೂ ಮಾಡಿಯೇ ತೀರುತ್ತೇವೆ ಎಂದು ನೈತಿಕ ಪೊಲೀಸ್ ಗಿರಿ ವಿರೋಧಿಸಿ ಕೇರಳದ ಕೋಝಿಕ್ಕೋಡ್‌ನಲ್ಲಿ ಭಾನುವಾರ ನಡೆದ 2ನೇ ಹಂತದ 'ಕಿಸ್ ಇನ್ ದಿ ಸ್ಟ್ರೀಟ್‌' ಪ್ರತಿಭಟನೆ ತಾರಕ್ಕೇರಿತ್ತು.

ದೇಶಾದಾದ್ಯಂತ ಕಿಸ್ ಆಫ್ ಲವ್‌ಗೆ ಪರ ವಿರೋಧಗಳು ವ್ಯಕ್ತವಾಗುತ್ತಿದ್ದರೂ ಫೇಸ್ ಬುಕ್‌ನ ಹೊಸ ಸಮೂಹವೊಂದು ನಿನ್ನೆ ಕೇರಳದ ಕೋಝಿಕ್ಕೋಡ್‌ನ, ಮೊಫಿಸಿಸ್ ಬಸ್ ನಿಲ್ದಾಣದಲ್ಲಿ, ಕಿಸ್ ಇನ್ ದಿ ಸ್ಟ್ರೀಟ್ ಎಂಬ ಪ್ರತಿಭಟನೆಯನ್ನು ಆಯೋಜಿಸಿತ್ತು. ಈ ಪ್ರತಿಭಟನೆಗೆ ಬೆಂಬಲ ಸೂಚಿಸುವಂತೆ ಫೇಸ್‌ಬುಕ್‌ನಲ್ಲಿ ಬಹುತೇಕ ಯುವಕ ಯುವತಿಯರು ಭಾಗವಹಿಸುವುದಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದರು.

ಈ ಪ್ರತಿಭಟನೆಗೆ ಕೇರಳದ ಪೊಲೀಸರು ಎಚ್ಚೆತ್ತುಕೊಂಡು ನಿಷೇಧ ಹೇರಿದ್ದರು. ಈ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಿಸ್ ಆಫ್ ಲವ್ ಪ್ರತಿಭಟನಾಕಾರರು, ತಮ್ಮ ಯೋಜನೆಯಂತೆಯೇ ಸಾವಿರಾರು ಮಂದಿ ನಿನ್ನೆ ಮೊಫಿಸಿಸ್ ಬಸ್ ನಿಲ್ದಾಣಕ್ಕೆ ಬಂದು ಪ್ರತಿಭಟನೆಗಿಳಿದಿದ್ದರು. ಪ್ರತಿಭಟನಾಕಾರರ ಈ ಪ್ರವರ್ತನಗೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ಹನುಮಾನ್ ಸೇನಾ ಕಾರ್ಯಕರ್ತರು ಪ್ರತಿಭಟನಾ ಸ್ಥಳಕ್ಕೆ ಬಂದು ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನತೆಯ ವಾತಾವರಣ ಸೃಷ್ಟಿಯಾಯಿತು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದ ಪೊಲೀಸರು ಪ್ರತಿಭಟನಾನಿರತ 15 ಹುಡುಗಿರು ಸೇರಿದಂತೆ ಒಟ್ಟು 65 ಮಂದಿಯನ್ನು ಬಂಧಿಸಿ, ಸ್ಥಳದಲ್ಲಿ ಸಂಜೆ 6 ಗಂಟೆವರೆಗೆ ನಿಷೇಧ ಹೇರಿದ್ದರು. ಬಂಧನಕ್ಕೊಳಗಾದ ಯುವತಿಯರು ಬಸ್‌ನಲ್ಲೇ ಕಿಸ್ ಆಫ್ ಲವ್‌ಗೆ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.

ಇದೇ ವೇಳೆ ಹನುಮಾನ್ ಸೇನೆಯ ಕಾರ್ಯಕರ್ತರು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಅವರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದರು.

ನಗರದಲ್ಲಿ ಹಿಂಸಾಚಾರ ಭುಗಿಲೇಳುವುದಕ್ಕೆ ಪೊಲೀಸರೇ ಕಾರಣ. ಪೊಲೀಸರೇ ಉದ್ದೇಶ ಪೂರ್ವಕವಾಗಿ ಸ್ಥಳಕ್ಕೆ ಹನುಮಾನ್ ಕಾರ್ಯಕರ್ತರನ್ನು ಬರುವಂತೆ ಮಾಡಿದ್ದರು. ಅವರ ಆಕ್ರಮಣಕ್ಕೆ ಒಳಗಾದ ನಮಗೆ ಯಾರೊಬ್ಬ ಪೊಲೀಸ್ ಕೂಡ ರಕ್ಷಣೆ ಮಾಡಲಿಲ್ಲ, ಪೊಲೀಸರೇ ನಮ್ಮ ಮೇಲೆ ಹಲ್ಲೆ ನಡೆಸಿ ಬಲವಂತವಾಗಿ ಬಂಧಿಸಿದ್ದರು. ಬಂಧನದ ನಂತರ ಪೊಲೀಸರು ನಮ್ಮ ಫೋಟೊಗಳನ್ನು ತೆಗೆದುಕೊಂಡರು ಎಂದು ಪ್ರತಿಭಟನೆಕಾರ ಶಫೀಕ್ ತಿರೊಂತರಂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಆರೋಪವನ್ನು ತಳ್ಳಿ ಹಾಕಿದ ಪೊಲೀಸ್ ಆಯುಕ್ತ ಎ.ವಿ. ಜಾರ್ಜ್, ಸ್ಥಳದಲ್ಲಿದ್ದ ಉದ್ವಿಗ್ನತೆ ನಮ್ಮ ಕಲ್ಪನೆಗೂ ಮೀರಿದ್ದಾಗಿತ್ತು ಘಟನೆ ವೇಳೆ ನಾವು ಕಾರ್ಯಕರ್ತರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದೇವಷ್ಟೆ. ಪ್ರತಿಭಟನೆಯಲ್ಲಿ ನಮ್ಮ ಪೊಲೀಸರು ತೆಗೆದುಕೊಂಡ ಕ್ರಮ ಸರಿಯಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಅಲ್ಲದೆ ಪ್ರತಿಭಟನೆಯಲ್ಲಿ ಬಂಧನಕ್ಕೊಳಗಾದ ನಮ್ಮ ಫೋಟೋಗಳನ್ನು ಪೊಲೀಸರು ತೆಗೆದುಕೊಂಡರು ಎಂಬ ಪ್ರತಿಭಟನಾಕಾರನ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಫೊಟೋ ತೆಗೆದುಕೊಂಡಿದ್ದು ನಿಜ, ಪ್ರತಿಭಟನೆಯಲ್ಲಿ ತೊಡಗಿದ್ದ ಆ ವ್ಯಕ್ತಿ ಬೇರೆ ಯಾವುದಾದರೂ ಗುಂಪೊಂದಿಗೆ ಸೇರಿದ್ದಾರೆಯೋ ಅಥವಾ ಬೇರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಪರಿಶೀಲನೆಗಾಗಿ ಫೋಟೋ ತೆಗೆಯಲಾಯಿತು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com