
ನವದೆಹಲಿ: ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಖಾಸಗಿ ಕ್ಯಾಬ್ ಸಂಸ್ಥೆ ಯೂಬರ್‌ನ ಪರವಾನಗಿಯನ್ನೇ ರದ್ದು ಮಾಡಿದ್ದ ದೆಹಲಿ ಸರ್ಕಾರ, ಇದೀಗ ಇಂಟರ್‌ನೆಟ್ ಮೂಲಕ ವ್ಯವಹರಿಸುವ ಎಲ್ಲ ಕ್ಯಾಬ್ ಸಂಸ್ಥೆಗಳ ಪರವಾನಗಿಯನ್ನು ರದ್ದು ಮಾಡಲು ನಿರ್ಧರಿಸಿದೆ.
ಈ ಸಂಬಂಧ ಸಾರ್ವಜನಿಕ ನೋಟಿಸ್ ನೀಡಿರುವ ದೆಹಲಿ ಸಾರಿಗೆ ಇಲಾಖೆ, ಕೇವಲು ಆರು ನೋಂದಾಯಿತ ರೇಡಿಯೋ ಟ್ಯಾಕ್ಸಿ ಕಂಪನಿಗಳಿಗೆ ಮಾತ್ರ ಸಂಚಾರ ಪರವಾನಿಗೆ ನೀಡಲಾಗಿದೆ ಎಂದು ತಿಳಿಸಿದೆ.
'ಯೂಬರ್ ಕ್ಯಾಬ್‌ನ್ನು ನಾವು ನಿಷೇಧಿಸಿದ್ದೇವೆ ಮತ್ತು ನೋಂದಣಿಯಾಗದ ಇತರೆ ಎಲ್ಲ ಕ್ಯಾಬ್ ಸೇವೆಗಳನ್ನು ರದ್ದು ಮಾಡಲಾಗಿದ್ದು, ಈ ಬಗ್ಗೆ ನಾಳೆ ಮತ್ತೊಂದು ಸಾರ್ವಜನಿಕ ಪ್ರಕಟಣೆ ನೀಡಲಾಗುವುದು' ಎಂದು ದೆಹಲಿ ಸಾರಿಗೆ ಇಲಾಖೆ ವಕ್ತಾರ ಕುಲದೀಪ್ ಸಿಂಗ್ ಗಂಗರ್ ಅವರು ಹೇಳಿದ್ದಾರೆ.
ಯೂಬರ್ ಕಂಪನಿಯ ಚಾಲಕ ಶಿವಕುಮಾರ್ ಯಾದವ್ ತನ್ನ ಕಾರು ಹತ್ತಿದ್ದ ಹಣಕಾಸು ಕಂಪನಿಯೊಂದರ ಎಕ್ಸಿಕ್ಯುಟಿವ್ ಮೇಲೆ ಅತ್ಯಾಚಾರ ಎಸಗಿದ್ದ. ಯಾದವ್ ಈ ಹಿಂದೆಯೂ ಯುವತಿಯೊಬ್ಬಳ ಮೇಲೆ ಇದೇ ರೀತಿ ಅತ್ಯಾಚಾರ ಮಾಡಿದ್ದ. ಇಷ್ಟಾದರೂ ಆತನ ಹಿನ್ನೆಲೆ ವಿಚಾರಿಸದೆ ಕೆಲಸಕ್ಕೆ ಸೇರಿಸಿಕೊಂಡಿದ್ದ ಯೂಬರ್ ಕ್ಯಾಬ್ ಕಂಪನಿಯ ವಿರುದ್ಧ ದೆಹಲಿ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದ್ದು, ಕಂಪನಿಯ ಪರವಾನಗಿಯನ್ನು ರದ್ದು ಮಾಡಿ, ಕಪ್ಪು ಪಟ್ಟಿಗೆ ಸೇರಿಸಲಾಗಿದೆ.
Advertisement