ನಿರ್ಗತಿಕಳ ಮೇಲಿನ ಕ್ರೌರ್ಯಕ್ಕೆ ಮೂಕ ಸಾಕ್ಷಿ

ಮಾತು ಬಾರದವಳ ಮೇಲೆ ನಾಲ್ಕು ವರ್ಷಗಳಿಂದ ಅತ್ಯಾಚಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಾಲಾ ಬಾಲಕರೂ ಸೇರಿ ಕಂಡಕಂಡವರಿಂದ ದೌರ್ಜನ್ಯ

ರಾಜಧಾನಿ ಮಗ್ಗುಲಿನ ಸೂಲಿಬೆಲೆಯಲ್ಲಿ ರಕ್ಕಸೀಯ ಕೃತ್ಯ

ಸೂಲಿಬೆಲೆ:
ನರರೂಪಿ ರಕ್ಕಸರ ವಿಕೃತಿಯ ಪರಮಾವಧಿ ಎಂದರೆ ಇದೇ ಏನು? ಅದಿಲ್ಲದಿದ್ದರೆ, ಬಾಯಿಯೇ ಬಾರದ ನಿರ್ಗತಿಕಳೊಬ್ಬಳ ಮೇಲೆ ಶಾಲಾ ಬಾಲಕರೂ ಸೇರಿದಂತೆ ಕಂಡಕಂಡವರೆಲ್ಲ ನಿರಂತರ ಅತ್ಯಾಚಾರವೆಸಗಿದ್ದನ್ನು, ಅದನ್ನು ಕಂಡೂ ಕಾಣದಂತಿದ್ದು ಬಿಟ್ಟಿದ್ದ ಸ್ಥಳೀಯ ಸಮಾಜವನ್ನು ಹೇಗೆ ವ್ಯಾಖ್ಯಾನಿಸುವುದು?
 
ಪದಗಳಿಗೆ ಸಿಲುಕದ ಕ್ರೂರಾತಿಕ್ರೂರ ಇಂಧ ಘಟನೆಯೊಂದು ರಾಜಧಾನಿಯ ಮಗ್ಗುಲಲ್ಲೇ ಬೆಳಕಿಗೆ ಬಂದಿದೆ. ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಈ ಹತಭಾಗಿನಿಯನ್ನು ಕೊನೆಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ಹಾಗೂ ಮಾನವ ಹಕ್ಕುಗಳ ಜಾಗೃತಿ ಸಮಿತಿ ಸದಸ್ಯರು ಸಂರಕ್ಷಿಸಿ ಅನಾಥಾಲಯಕ್ಕೆ ಸೇರಿಸಿದ್ದಾರೆ.

ಏನಿದು ಘಟನೆ?
ಸೂಲಿಬೆಲೆ ಚನ್ನಬೈರೇಗೌಡ ನಗರದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಸುಮಾರು 40 ವರ್ಷದ ಮಹಿಳೆಯೊಬ್ಬಳು ಗುಡಿಸಲಿನಲ್ಲಿ ಒಬ್ಬಲೇ ವಾಸಿಸುತ್ತಿದ್ದಳು. ಈಕೆ ಮೂಕಿಯಾಗಿದ್ದು ಎಲ್ಲಿಂದ ಬಂದಳು ಎಂಬುದು ಯಾರಿಗೂ ಗೊತ್ತಿಲ್ಲ. ಸ್ಥಳೀಯರು ಕೊಡುತ್ತಿದ್ದ ಆಹಾರ ಪದಾರ್ಥಗಳನ್ನೇ ತಿಂದು ಜೀವನ ಸಾಗಿಸುತ್ತಿದ್ದಳು.

ಈಕೆ ಒಬ್ಬಳೇ ಇರುವುದನ್ನು ಗಮನಿಸಿ ಕೆಲವರು ರಾತ್ರಿ ವೇಳೆ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದರು. ತಮ್ಮ ಕಾಮ ತೃಷೆ ತೀರಿದ ಬಳಿಕ ಪರಾರಿಯಾಗುತ್ತಿದ್ದರು. ಈಕೆ ಮೂಕಿಯಾಗಿದ್ದರಿಂದ ಈ ವಿಚಾರವನ್ನು ಯಾರಲ್ಲೂ ಹೇಳಿಕೊಳ್ಳಲಾಗದ ಅಸಹಾಯಕತೆ.

ಕೊನೆಕೊನೆಗೆ ಇಂಥ ದೌರ್ಬಲ್ಯದ ದುರುಪಯೋಗ ಪಡೆದ ಕಂಡ ಕಂಡ ಪುರುಷರು, ಕುಡುಕರೂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು ನಿತ್ಯ ನರಕವೆಂಬಂತಾಯಿತು. ಇದು ಗಮನಕ್ಕೆ ಬರುತ್ತಿದ್ದಂತೆ ಕೆಲ ಸ್ಥಳೀಯರು ಆಕೆಗೆ ಮನೆಯಲ್ಲೇ ಆಶ್ರಯ ನೀಡಿ ರಕ್ಷಿಸಿದ್ದರು.

ವಿದ್ಯಾರ್ಥಿಗಳಿಂದಲೂ

ಕೆಲ ದಿನಗಳ ಹಿಂದೆ ಈಕೆಯ ಮೇಲೆ ಇತ್ತೀಚೆಗೆ 8ನೇ ತರಗತಿಯ ನಾಲ್ವರು ಶಾಲಾ ಬಾಲಕರೂ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಇದನ್ನು ಕಂಡ ಸ್ಥಳೀಯ ಮಹಿಳೆಯರು ವಿದ್ಯಾರ್ಥಿಗಳನ್ನು ಹಿಡಿದು ಕೂಡಿ ಹಾಕಿದ್ದರು.

ವಿಚಾರ ದೊಡ್ಡದಾದರೇ ಬಾಲಕರ ಭವಿಷ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ ಕೆಲ ಸ್ಥಳೀಯ 'ದೊಡ್ಡ ಮನುಷ್ಯರು' ವಿಷಯ ಹೊರ ಬರದಂತೆ ಮುಚ್ಚಿಹಾಕಿದ್ದರು ಎನ್ನಲಾಗಿದೆ. ಇದಾದ ಮೇಲೂ ಸ್ಥಳೀಯರ ಕಣ್ತಪ್ಪಿಸಿ ಮೂಗ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಲೇ ಇತ್ತು ಎನ್ನಲಾಗಿದೆ.

ಆಕ್ರೋಶ

ಕೊನೆಗೂ ವಿಷಯ ತಿಳಿದ ಮಾನವ ಹಕ್ಕುಗಳ ಜಾಗೃತಿ ಸಮಿತಿಯವರು ಸೋಮವಾರ ಹುಲಿಕಲ್ ನಟರಾಜ್ ನೇತೃತ್ವದಲ್ಲಿ ಮಹಿಳೆಯನ್ನು ರಕ್ಷಿಸಿ ನ್ಯೂ ಎಆರ್‌ಕೆ ಮಿಷನ್ ಇಂಡಿಯಾ ಆಶ್ರಮಕ್ಕೆ ದಾಖಲಿಸಲಾಗಿದೆ.

ಮಾಧ್ಯಮಗಳಿಗೆ ವಿವರ ನೀಡಿದ ನಟರಾಜ್, ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣವನ್ನು ಸ್ಥಳೀಯ ಪೊಲೀಸರು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು.

ಜಿಲ್ಲಾಡಳಿತ, ಸರ್ಕಾರ ಇಂಥ ಅಮಾಯಕ ನಿರ್ಗತಿಕ ಮಹಿಳೆಯರಿಗೆ ರಕ್ಷಣೆ ನೀಡಬೇಕು. ಮಾತು ಬಾರದ ಮಹಿಳೆಯನ್ನು ತಮ್ಮ ಕಾಮ ತೃಷೆಗೆ ಬಳಿಸಿಕೊಂಡವರನ್ನು ಪತ್ತೆ ಹಚ್ಚಿ ತಕ್ಕ ಶಾಸ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಆಶ್ರಮದ ಆಟೋರವಿ, ವೈದ್ಯಾಧಿಕಾರಿ ಪದ್ಮಜ, ಮಾನವ ಹಕ್ಕುಗಳ ಜಾಗೃತಿ ಸಮಿತಿ ಹೋಬಳಿ ಅಧ್ಯಕ್ಷ ಉಮೇಶ, ಮಹಿಳಾ ಅಧ್ಯಕ್ಷೆ ರಾಜೇಶ್ವರಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಕಾರ್ಯಾಚರಣೆ ಸಂದರ್ಭ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com