
ನವದೆಹಲಿ: ದೆಹಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಿ ಚಾಲಕ ತಪ್ಪಿಸಿಕೊಳ್ಳಲು ಪರೋಕ್ಷವಾಗಿ ಮಹಿಳೆಯೇ ಕಾರಣವಾಗಿದ್ದ ಅಂಶ ಇದೀಗ ಬೆಳಕಿಗೆ ಬಂದಿದೆ.
ಕಳೆದ ಶುಕ್ರವಾರ ರಾತ್ರಿ ದೆಹಲಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ದಿನಕಳೆದಂತೆ ರೋಚಕ ತಿರುವು ಪಡೆಯುತ್ತಿದ್ದು, ಅತ್ಯಾಚಾರಕ್ಕೆ ಒಳಗಾದ ಬಳಿಕ ಮಹಿಳೆಯು ತನ್ನ ಸ್ನೇಹಿತೆಗೆ ತನ್ನ ಮೇಲಾದ ಕುಕೃತ್ಯವನ್ನು ತಿಳಿಸುವ ಭರದಲ್ಲಿ ತಪ್ಪಾಗಿ ಅತ್ಯಾಚಾರ ಗೈದ ಕಾರು ಚಾಲಕನ ಮೊಬೈಲ್ ಸಂಖ್ಯೆಗೇ ಸಂದೇಶ ರವಾನಿಸಿದ್ದಾರೆ.
ತಮ್ಮ ಮೊಬೈಲ್‌ನ ಕಾಲ್ ಲಿಸ್ಟ್‌ನಲ್ಲಿ ಕೊನೆಯ ಬಾರಿಗೆ ಕರೆ ಮಾಡಿದ್ದ ಸಂಖ್ಯೆಗೆ ಮಹಿಳೆ ಸಂದೇಶ ರವಾನಿಸಿದ್ದು, ಆ ಸಂಖ್ಯೆ ಕಾರು ಚಾಲಕ ಶಿವ ಕುಮಾರ್ ಯಾದವ್‌ದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದೇಶ ನೋಡುತ್ತಿದ್ದಂತೆಯೇ ಗಾಬರಿಗೊಳಗಾದ ಚಾಲಕ ಶಿವಕುಮಾರ್ ತನ್ನ ಕುಟುಂಬದೊಡನೆ ಕೂಡಲೇ ದೆಹಲಿ ಬಿಟ್ಟು ಮಥುರಾಗೆ ಪರಾರಿಯಾಗಿದ್ದನು. ಅಲ್ಲದೆ ಅಲ್ಲಿಂದ ನೇಪಾಳಕ್ಕೆ ಪರಾರಿಯಾಗಲು ಸಿದ್ಧತೆ ನಡೆಸಿಕೊಂಡಿದ್ದನು.
ಆದರೆ ಅಷ್ಟು ಹೊತ್ತಿಗಾಗಲೇ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಮಥುರಾದಲ್ಲಿಯೇ ಆರೋಪಿ ಶಿವಕುಮಾರ್ ಯಾದವ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಆರೋಪಿ ಶಿವಕುಮಾರ್ ಯಾದವ್ 7 ದಿನಗಳ ಕಾಲ ಪೊಲೀಸ್ ಬಂಧನಲ್ಲಿದ್ದು, ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement