
ನವದೆಹಲಿ: ಆಗ್ರಾ ಮರು ಮತಾಂತರ ವಿಚಾರ ಸಂಸತ್ತಿನ ಉಭಯ ಸದನಗಳಲ್ಲಿ ಗುರುವಾರವೂ ತೀವ್ರ ಗದ್ದಲ ಸೃಷ್ಟಿಸಿತು. ಈ ವಿಚಾರಕ್ಕೆ ಸಂಬಂಧಿಸಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರತಿಪಕ್ಷಗಳು ನರೇಂದ್ರ ಮೋದಿ ನೇತೃತ್ವದ ಸರ್ಕಾರ ತನ್ನ ಕೋಮು ಅಡೆಂಡಾವನ್ನು ಅನುಷ್ಠಾನ ಗೊಳಿಸುತ್ತಿದೆ. ಎಂದು ಆರೋಪಿಸಿದವು.
ಈ ವಿಚಾರಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ ಚರ್ಚೆಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯನಾಯ್ಡು, ದೇಶದಲ್ಲಿ ಕೋಮು ಸೌಹಾರ್ದ ಕಾಪಾಡಲು ಸರ್ಕಾರ ಬದ್ದವಾಗಿದೆ. ಎಲ್ಲ ರಾಜ್ಯ ಹಾಗೂ ಕೇಂದ್ರದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿ ಮಾಡಬೇಕು ಎಂದು ಹೇಳಿದರು.
ಪ್ರತಿಪಕ್ಷಗಳು ಅದರಲ್ಲೂ ಮುಕ್ಯವಾಗಿ ಕಾಂಗ್ರೆಸ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡ ನಾಯ್ಡು. ಲೋಕಸಭೆ ಚುನಾವಣೆಯಲ್ಲಿ ತಿರಸ್ಕೃತ ಪಕ್ಷಗಳಿಗೆ 'ಹಿಂದೂ' ಎನ್ನುವ ಪದ ಕೇಳಿದರೆ ಅಲರ್ಜಿ. ಯಾವುದೇ ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರಲಿ. ಅಲ್ಲಿ ನಡೆಯುವ ಯಾವುದೇ ಬೆಳವಣಿಗೆಗೆ ಆರೆಸ್ಸೆಸ್ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸುತ್ತವೆ.
ಆಗ್ರಾದ ಮರು ಮತಾಂತರ ಪ್ರಕರಣದಲ್ಲಿ ಕೇಂದ್ರದ ಪಾತ್ರ ಏನೂ ಇಲ್ಲ. ಅದು ಉತ್ತರ ಪ್ರದೇಶ ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ಆ ವಿಚಾರವನ್ನು ಸ್ಥಳೀಯ ಸರ್ಕಾರವೇ ನಿಭಾಯಿಸಬೇಕು.
ಅಗತ್ಯ ಬಿದ್ದರೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚನೆಗಳನ್ನು ನೀಡಬಹುದು ಎಂದು ಕೇಂದ್ರ ಗೃಹ ಸಚಿವರ ಅನುಪಸ್ಥಿತಿಯಲ್ಲಿ ನಾಯ್ಡು ಅವರು ಕಲಾಪಕ್ಕೆ ಸ್ಪಷ್ಟನೆ ನೀಡಿದರು.
ಮತಾಂತರ ಹಾಗೂ ಮರು ಮತಾಂತರ ರಾಷ್ಟ್ರೀಯ ಸವಾಲು. ಇದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾವಾಗುತ್ತದೆ. ದೇಶದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿ ಮಾಡೋಣ. ಈ ವಿಚಾರದಲ್ಲಿ ಎಲ್ಲ ಗಂಭೀರವಾಗಿ ಕೆಲಸ ಮಾಡೋಣ. ರಾಷ್ಟ್ರಪತಿ ಮಹಾತ್ಮಾಗಾಂಧಿ ಅವರೇ ಮತಾಂತರ ವಿರೋಧಿ ಕಾನೂನು ಜಾರಿಯಾಗಬೇಕೆಂದು ಬಯಸಿದ್ದರು. ಆದರೆ, ಅದು ಇದುವರೆಗೆ ಜಾರಿಯಾಗಿಲ್ಲ.
ಹಿಂದುತ್ವ ಹಾಗೂ ಭಾರತೀಯತೆ ಎರಡೂ ಒಂದೇ. ಈ ಪದವನ್ನು ಬಿಜೆಪಿಯಾಗಲಿ, ಅರೆಸೆಸ್ಸಾಗಲಿ, ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಥವಾ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಾಗಲಿ ಕಂಡು ಹಿಡಿದಿದ್ದಲ್ಲ, ಪ್ರತಿಪಕ್ಷಗಳು ಆರೆಸ್ಸೆಸ್ ಬಗ್ಗೆ ಹಲವು ವಿಚಾರಗಳನ್ನು ಹೇಳುತ್ತಿವೆ.
ಆರೆಸ್ಸೆಸ್ ಅದ್ಭುತ ಸಾಮಾಜಿಕ ಸಂಸ್ಥೆ. ನಾನು ಆರೆಸ್ಸೆಸ್ ಹಿನ್ನೆಲೆಯಿಂದ ಬಂದವನು ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ಪ್ರತಿಪಕ್ಷಗಳು ನನ್ನ ಮಾತೃ ಸಂಸ್ಥೆಯನ್ನು ಟೀಕಿಸಿದರೆ, ಅವಹೇಳನ ಮಾಡಿದರೆ ನಾನು ಬಾಯಿಮುಚ್ಚಿಕೊಂಡು ಕೂರಲು ಹೇಗೆ ಸಾಧ್ಯ ಎಂದರು.
ಇದರಿಂದ ಕೆರಳಿದ ಪ್ರತಿಪಕ್ಷಗಳಿಂದ ಕಾಂಗ್ರೆಸ್, ಎಡಪಕ್ಷಗಳು, ತೃಣಮೂಲ ಕಾಂಗ್ರೆಸ್, ಎಸ್ಪಿ ಹಾಗೂ ಎಂಐಎಂ ಪಕ್ಷ ಸಭಾ ತ್ಯಾಗ ಮಾಡಿದವು.
ದೇಶದಲ್ಲಿ ಮರುಮತಾಂತರ ತಡೆ ಕಾನೂನು ಜಾರಿ ಮಾಡೋಣ
-ನಾಯ್ಡು
ವರದಿ ಕೇಳಿದ ಕೇಂದ್ರ ಆಗ್ರಾ ಮರು ಮತಾಂತರ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವಾಲಯ ಉತ್ತರಪ್ರದೇಶ ಸರ್ಕಾರದಿಂದ ಗುರುವಾರ ವರದಿ ಕೇಳಿದೆ.
ಕಾಲೆಳೆದ ಸಿಂದಿಯಾ
ಇದಕ್ಕೂ ಮೊದಲು ಚರ್ಚೆ ಆರಂಭಿಸಿದ ಕಾಂಗ್ರೆಸ್ ಮುಖಂಡ ಜ್ಯೋತಿರಾಧಿತ್ಯ ಸಿಂದಿಯಾ, ಆಗ್ರಾದಲ್ಲಿ ಮುಸ್ಲಿಮರಿಗೆ ಪಡಿತರ ಚೀಟಿಯ ಆಮಿಷ ನೀಡಿ ಹಿಂದೂ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಬಹುಶಃ ಇದೇ ಬಿಜೆಪಿ ಭರವಸೆ ನೀಡದ ಅಚ್ಛೇ ದಿನಗಳು ಆಗಿರಬೇಕು ಎಂದು ಸರ್ಕಾರದ ಕಾಲೆಳೆದರು.
Advertisement