
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಹಿಂದುತ್ವದ ಮುಖವಾಡವನ್ನು ಧರಿಸುವ ಮೂಲಕ ಬಿಜೆಪಿ ಬಹುಸಂಖ್ಯಾತರ ವೋಟ್ ಕಬಳಿಸಲು ಹವಣಿಸುತ್ತಿದೆ. ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರಿಗೆ ಹೋಲಿಕೆ ಮಾಡಿದರೆ ಅವರಿಗಿಂತ ಕೆಟ್ಟ ಜನ ಸರ್ಕಾರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಬಿಜೆಪಿ ಸಂಸದರಾದ ಸಾಕ್ಷಿ ಮಹಾರಾಜ್ ಮತ್ತು ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರ ಹೇಳಿಕೆಗಳನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದ ಅಯ್ಯರ್ ಅವರು, ಹಿಂದುತ್ವದ ಮತ್ತು ಅಭಿವೃದ್ಧಿ ಪರವೆಂದು ಮುಖವಾಡ ಧರಿಸಿರುವವರು ಧರ್ಮವನ್ನು ರಾಜಕೀಯಕ್ಕೆ ತರಲೆತ್ನಿಸುತ್ತಿದ್ದಾರೆ. ಇಂಥಹ ಕುರಿಗಳ ಮುಖವಾಡ ಧರಿಸಿರುವ ಗುಳ್ಳೆ ನರಿಗಳ ಕುರಿತು ದೇಶದ ಜನತೆ ಎಚ್ಚರವಾಗಿರಬೇಕು. ಕೆಲವುರ ಗೋಡ್ಸೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರಲ್ಲೇ ಕೆಲವರು ಅದನ್ನು ವಿರೋಧಿಸುವ ಮೂಲಕ ಪ್ರಕರಣವನ್ನು ಮರೆಮಾಚಲು ಯತ್ನಿಸುತ್ತಾರೆ. ಜನಪ್ರತಿನಿಧಿಗಳು ತಮ್ಮ ಮಾತಿನ ಮೇಲೆ ಹಿಡಿತ ಹೊಂದಿರಬೇಕು ಎಂದು ಮಣಿಶಂಕರ್ ಅಯ್ಯರ್ ಅವರು ಹೇಳಿದರು.
ಈ ಹಿಂದೆ ರಾಜಕೀಯವಾಗಿ ಅಡ್ವಾಣಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಮಣಿಶಂಕರ್ ಅಯ್ಯರ್ ಅವರೇ ಇಂದು ಪ್ರಧಾನಿ ಸ್ಥಾನಕ್ಕೆ ಬಿಜೆಪಿಯಲ್ಲಿ ಯಾರನ್ನಾದರೂ ಪ್ರಸ್ತಾಪಿಸುವುದಾದರೇ ತಾವು ಅಡ್ವಾಣಿ ಅವರನ್ನು ಪ್ರಸ್ತಾಪಿಸುತ್ತೇವೆ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
Advertisement