ರೈಲಿಂದ ಬಿದ್ದು ಆಯುಕ್ತ ಸಾವು

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬಿಬಿಎಂಪಿ ಪೂರ್ವ ವಲಯದ ಜಂಟಿ...
ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತ ಬಿ.ಇ.ಗೋವಿಂದರಾಜು
ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತ ಬಿ.ಇ.ಗೋವಿಂದರಾಜು

ಬೆಂಗಳೂರು: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತ ಬಿ.ಇ.ಗೋವಿಂದರಾಜು ಮೃತ ಪಟ್ಟಿದ್ದಾರೆ. ಬೆಂಗಳೂರು-ಶಿವಮೊಗ್ಗ ರೈಲಿನಲ್ಲಿ ಶುಕ್ರವಾರ ಪ್ರಯಾಣಿಸುತ್ತಿದ್ದ ಗೋವಿಂದರಾಜು ಹುಟ್ಟೂರಾದ ತುಮಕೂರಿಗೆ ತೆರಳುತ್ತಿದ್ದರು.

ಶನಿವಾರ ಬೆಳಿಗ್ಗೆ ಅವರ ಶವ ತುಮಕೂರಿನ ಹೆಗಡೆ ಕಾಲೋನಿಯ ಸಿದ್ದಾರ್ಥ ಕಾಲೇಜಿನ ರೈಲ್ವೆ ಮಾರ್ಗದ ಬಳಿ ಪತ್ತೆಯಾಗಿದೆ. ಬೆಳಗ್ಗೆ ಸ್ಥಳೀಯರು ಶವವನ್ನು ಪತ್ತೆಹಚ್ಚಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರೈಲ್ವೆ ಪೊಲೀಸರು ಮೊದಲಿಗೆ ಅಪರಿಚಿತ ಶವ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ತುಮಕೂರು ಜಿಲ್ಲಾಸ್ಪತ್ರೆಗೆ ಶವ ಕೊಂಡೊಯ್ದ ನಂತರ ಮೃತರ ಜೈಬಿನಲ್ಲಿ ದೊರೆತೆ ಗುರುತಿನ ಚೀಟಿಯಿಂದಾಗಿ ಬಿಬಿಎಂಪಿ ಅಧಿಕಾರಿ ಎಂದು ತಿಳಿದುಬಂದಿದೆ.

ಸ್ಥಳಕ್ಕಾಗಮಿಸಿದ ಕುಟುಂಬ ಸದಸ್ಯರು ಶವ ಪಡೆದಿದ್ದಾರೆ. ಮೃತರ ತಲೆಯ ಹಿಂಭಾಗ ಗಂಭೀರ ಗಾಯವಾಗಿದ್ದು, ಚಲಿಸುತ್ತಿದ್ದ ರೈಲಿನಿಂದ ಕಾಲುಜಾರಿ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತ ಗೋವಿಂದರಾಜು ತಾವರೆಕೆರೆ ನಿವಾಸಿಯಾಗಿದ್ದರು. ಬಿಬಿಎಂಪಿಯ ಪೂರ್ವ ವಲಯದಲ್ಲಿ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಕಳೆದ ಒಂದು ತಿಂಗಳಿಂದ ರಜೆಯಲ್ಲಿದ್ದರು.

ಮೊದಲಿಗೆ ಎಂಪಿಎಂಸಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, 2008-09ರಲ್ಲಿ ಎರವಲು ಸೇವೆ ಮೂಲಕ ಬಿಬಿಎಂಪಿಯ ಆರೋಗ್ಯ ವಿಭಾಗದ ಜಂಟಿ ಆಯುಕ್ತರಾಗಿ ನಿಯೋಜನೆಗೊಂಡಿದ್ದರು.

ಕೆಲಕಾಲ ಜಾಹೀರಾತು ವಿಭಾಗದಲ್ಲಿ ಕಾರ್ಯನಿರ್ವಹಿಸಿ ಮಾತೃ ಇಲಾಖೆಗೆ ವಾಪಸಾಗಿದ್ದರು. ಮತ್ತೊಮ್ಮೆ ಜಾಹೀರಾತು ವಿಭಾಗದಲ್ಲಿ ಹಾಗೂ ಕೌನ್ಸಿಲ್ ಕಾರ್ಯದರ್ಶಿಯಾಗಿ ನೇಮಕಗೊಂಡು, ಆರ್.ಆರ್.ನಗರ ಹಾಗೂ ಪೂರ್ವವಲಯದ ಹೊಣೆ ಹೊತ್ತುಕೊಂಡಿದ್ದರು. ಈ ವೇಳೆ ನಗರದಲ್ಲಿ ಹೆಚ್ಚಿದ್ದ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಮುಖ್ಯ ಪಾತ್ರವಹಿಸಿದ್ದರು.

ಅನಾರೋಗ್ಯ: ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೋವಿಂದರಾಜು, ಅಪೋಲೋ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕೆಲಸದ ಒತ್ತಡಕ್ಕೂ ಸಿಲುಕಿದ್ದ ಅವರ ಅನಿರೀಕ್ಷಿತ ಸಾವು ಅನುಮಾನಕ್ಕೆ ಮಾಡಿಕೊಟ್ಟಿದೆ. ಮೃತರು ಒಬ್ಬ ಮಗ, ಮಗಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com