
ಬೆಂಗಳೂರು: ಇಸಿಸ್ ಉಗ್ರರನ್ನು ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದ ಆರೋಪಿ ಮೆಹ್ದಿ ಮಸ್ರೂರ್ ಬಿಸ್ವಾಸ್‌ನನ್ನು ಐದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಬ್ರಿಟನ್ ಮೂಲದ ಸುದ್ದಿವಾಹಿನಿಯ ವರದಿಯ ಹಿನ್ನಲೆಯಲ್ಲಿ ಕಳೆದ ಶುಕ್ರವಾರ ರಾತ್ರಿ ಬಂಧನಕ್ಕೀಡಾಗಿದ್ದ ಮೆಹ್ದಿ ಮಸ್ರೂರ್ ಬಿಸ್ವಾಸ್‌ನನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶರು ಮೆಹ್ದಿಯನ್ನು ಐದು ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. 'ಶನಿವಾರ ತಡರಾತ್ರಿ ಮೆಹ್ದಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ಮೆಹ್ದಿಯನ್ನು ಐದು ದಿನಗಳ ವಶಕ್ಕೆ ನೀಡಿದ್ದಾರೆ ಎಂದು ಅಪರಾಧ ವಿಭಾಗದ ಡಿಸಿಪಿ ಅಭಿಷೇಕ್ ಗೋಯಲ್ ಅವರು ಹೇಳಿದ್ದಾರೆ.
ಇನ್ನು ಟ್ವಿಟರ್‌ನಲ್ಲಿ ಉಗ್ರರು ಹಾಕಿರುವ ಬೆದರಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅಭಿಷೇಕ್ ಗೋಯಲ್ ಅವರು, ತಾವು ಆ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಆದರೆ ಟ್ವಿಟರ್ ಖಾತೆಯ ಹಿಂದಿರುವವರ ಕುರಿತು ಗಂಭೀರವಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಪೊಲೀಸ್ ಮೂಲಗಳ ಪ್ರಕಾರ ವಿಚಾರಣೆ ವೇಳೆ ಬಂಧಿತ ಮೆಹ್ದಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, 'ಶಮಿವಿಟ್ನೆಸ್' ಎಂಬ ಇಸಿಸ್ ಪರ ಟ್ವಿಟರ್ ಖಾತೆಯನ್ನು ತಾನೇ ನಿರ್ವಹಿಸುತ್ತಿದ್ದೆ ಎಂದು ಹೇಳಿದ್ದಾನೆ. ಮೆಹ್ದಿ ವಿರುದ್ಧ ಐಪಿಸಿ ಸೆಕ್ಷನ್ 125 (ಸರ್ಕಾರದ ವಿರುದ್ಧ ಯುದ್ಧ) ಸೆಕ್ಷನ್ 18 ಮತ್ತು 39 (ಕಾನೂನು ಬಾಹಿರ ಚಟುವಟಿಕೆ) ಸೆಕ್ಷನ್ 66 (ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ)ಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
Advertisement