
ಬೆಂಗಳೂರು: ಇಸಿಸ್ ಉಗ್ರರನ್ನು ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದ ಆರೋಪಿ ಮೆಹ್ದಿ ಮಸ್ರೂರ್ ಬಿಸ್ವಾಸ್‌ಗೆ ತಾನು ಬಂಧನಕ್ಕೆ ಒಳಗಾಗುತ್ತಿದ್ದೇನೆ ಎನ್ನುವ ವಿಚಾರ ಮೊದಲೇ ಗೊತ್ತಿತ್ತೆ? ಹೌದು ಎನ್ನುತ್ತವೆ ಮೂಲಗಳು. ಬಂಧನಕ್ಕೆ ಕಲವೇ ತಾಸುಗಳ ಮೊದಲು ಆತ ಇಂಗ್ಲೆಂಡ್‌ನ ಚಾನೆಲ್ 4ಗೆ ಈ ಬಗ್ಗೆ ತಿಳಿಸಿದ್ದ!
'ಪೊಲೀಸರು ನನಗಾಗಿ ಹುಡುಕುತ್ತಿದ್ದಾರೆ. ಬಂಧಿಸಲು ಬಂದರೆ ಶರಣಾಗುತ್ತೇನೆ. ವಿರೋಧಿಸಿದರೆ ನನ್ನನ್ನು ಕೊಲೆ ಮಾಡಬಹುದು. ನನ್ನ ಬಳಿ ಯಾವುದೇ ಶಸ್ತ್ರಾಸ್ತ್ರಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ವಿರೋಧಕ್ಕೆ ನನ್ನ ಬಳಿ ಕಾರಣವೂ ಇಲ್ಲ' ಎಂದಿದ್ದ ಆತ.
ನಿಮ್ಮನ್ನೇಕೆ ಬಂಧಿಸಬಹುದು? ಎಂದು ಚಾನೆಲ್ 4 ಕೇಳಿದ ಪ್ರಶ್ನೆಗೆ, ನನಗಾಗಿ ಹುಡುಕಾಟ ನಡೆದಿದೆ ಎಂದು ಮಾಧ್ಯಮಗಳಿಂದ ತಿಳಿದಿದ್ದೇನೆ. ಅವರು ನನ್ನನ್ನು ಬಂಧಿಸಲು 24 ತಾಸು ತೆಗೆದುಕೊಳ್ಳಬಹುದು ಎಂದಿದ್ದಾನೆ. ಇನ್ನು ನೀನು ಏನಾದರೂ ತಪ್ಪು ಮಾಡಿದ್ದಿಯಾ? ಎನ್ನುವ ಪ್ರಶ್ನೆಗೆ, ಯಾವ ತಪ್ಪು ಮಾಡಿಲ್ಲ. ಯಾರನ್ನೂ ನೋಯಿಸಿಲ್ಲ. ದೇಶದ ಯಾವುದೇ ಕಾನೂನನ್ನು ಮುರಿದಿಲ್ಲ, ದೇಶದ ವಿರುದ್ಧ ಯುದ್ಧವಾಗಲಿ, ಸಾರ್ವಜನಿಕರಿಗೆ ತೊಂದರೆಯಾಗಲೀ ನೀಡಿಲ್ಲ. ಭಾರತ ಸೇರಿದಂತೆ ಅದರ ಮಿತ್ರರಾಷ್ಟ್ರಗಳ ವಿರುದ್ಧವಾಗಲೀ, ವ್ಯಕ್ತಿ ವಿರುದ್ಧವಾಗಲೀ ಯುದ್ಧ ಸಾರಿಲ್ಲ. ಆದರೆ ಅವರು (ಪೊಲೀಸರು) ನನ್ನ ಮೇಲೆ ಹಾಗೆಂದು ಆರೋಪಿಸಬಹುದು. ನಾನು ಸತ್ಯ ಹೇಳಿದ್ದೇನೆ. ಅದಕ್ಕಾಗಿ ಜನ ನನ್ನನ್ನು ಫಾಲೋ ಮಾಡಿದ್ದಾರೆ'.
'ನಾನು ಅವರನ್ನು ಫಾಲೋ ಮಾಡಿದ್ದೇನೆ. ಪರಸ್ಪರ ಮಾತನಾಡಿದ್ದೇವೆ. ಇಸ್ಲಾಮಿಕ್ ರಾಷ್ಟ್ರದ ಹೊರಟಗಾರರು ಅಥವಾ ಅವರ ಪರವಾಗಿರುವವರು ಏನು ಟ್ವೀಟ್ ಮಾಡಿದ್ದಾರೆಂದು ನನಗೆ ಮಾತ್ರ ಗೊತ್ತು' ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾನೆ.
ಮೆಹ್ದಿ ಚಟುವಟಿಕೆಗಳೇನು
ಉರ್ದು ಲೇಖನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಅವುಗಳನ್ನು ಟ್ವೀಟ್ ಮಾಡುತ್ತಿದ್ದ. ಅಲ್ಲದೇ ಉಗ್ರರು ಅಥವಾ ಇಸಿಸ್ ಬೆಂಬಲಿಗರ ಟ್ವೀಟ್‌ಗಳನ್ನು ರಿಟ್ವೀಟ್ ಮಾಡುತ್ತಿದ್ದ. ಲೆವೆಂಟೈನ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ನಿರಂತರವಾಗಿ ಓದುತ್ತಿದ್ದ. ವಿಡಿಯೋ ಹಾಗು ಫೋಟೋಗಳನ್ನು ನೋಡಿ ಶೇರ್ ಮಾಡುತ್ತಿದ್ದ. ಕಣ್ಣಿಗೆ ಕಟ್ಟಿದಂತೆ ಪ್ರಚೋದನಾತ್ಮಕವಾಗಿ ಟ್ವೀಟ್ ಮಾಡುವುದರಲ್ಲಿ ಈತ ನಿಷ್ಣಾತನಾಗಿದ್ದ.
ಹೀಗಾಗಿಯೇ ಪ್ರಪಂಚದಾದ್ಯಂತ ಈತನಿಗೆ 17 ಸಾವಿರಕ್ಕೂ ಅಧಿಕ ಫಾಲೋವರ್‌ಗಳಿದ್ದರು. ಎಲ್ಲ ಮುಸ್ಲಿಂರಂತೆ ಈತನಿಗೆ ಅರೇಬಿಕ್ ಗೊತ್ತಿತ್ತು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಚೋದನಾತ್ಮಕ ವಿಚಾರಗಳ ವಿನಿಮಯ ಮಾಡುವ, ಚರ್ಚಿಸುವ ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಎಲ್ಲ ಅಕೌಂಟ್‌ಗಳ ಮೇಲೂ ಗುಪ್ತಚರ ಇಲಾಖೆ ಕಣ್ಣಿಟ್ಟಿರುತ್ತದೆ.
ಆದರೆ, ಸಾವಿರಾರು ಅಕೌಂಟ್‌ಗಳ ಬಹುತೇಕ ವಿದೇಶದಿಂದಲೇ ಕಾರ್ಯ ನಿರ್ವಹಿಸುತ್ತಿರುತ್ತವೆ. ಈ ಬಗ್ಗೆ ವಿದೇಶಿ ಸಂಸ್ಥೆಗಳ ಜತೆ ಮಾಹಿತಿ ವಿನಿಮಯ ಮಾಡಲಾಗುತ್ತಿರುತ್ತದೆ. ಆದರೆ, ಈ ಅಕೌಂಟ್ ಬೆಂಗಳೂರಿನಿಂದಲೇ ನಿರ್ವಹಿಸುತ್ತಿದ್ದರಿಂದ ಮೆಹ್ದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಪ್ರಭಾವಿ ಟ್ವೀಟ್
ಬೆಂಗಳೂರು: ಬಂಧಿತ ಮೆಹ್ದಿ ಮಸ್ರೂರ್ ಬಿಸ್ವಾಸ್ ಟ್ವೀಟ್‌ಗಳು ಇಸಿಸ್ ಉಗ್ರ ಚಟುವಟಿಕೆಗಳ ಬಗ್ಗೆ ಅತ್ಯಂತ ಪ್ರಭಾವಿ ಟ್ವೀಟ್‌ಗಳಾಗಿದ್ದು ಕೆಲವೊಮ್ಮೆ ಟ್ವಿಟರ್‌ನಲ್ಲಿ ವಿಶ್ವಾದ್ಯಂತ ಹ್ಯಾಷ್‌ಟ್ಯಾಗ್ ಆಗಿ ಚರ್ಚೆಗೊಳಗಾಗುತ್ತಿದ್ದವು. ಆರೋಪಿಯ ಚಟುವಟಿಕೆಗಳಿಗೆ ಇಸಿಸ್ ಅಥವಾ ಬೇರೆ ವ್ಯಕ್ತಿಗಳ, ಎನ್‌ಜಿಒಗಳು ಹಣಕಾಸಿನ ನೆರವು ನೀಡುತ್ತಿದ್ದವಾ ಎನ್ನುವುದರ ಬಗ್ಗೆ ಪರಿಶೀಲನೆ ನಡೆದಿದ್ದು, ಈಗಲೇ ಏನನ್ನೂ ಹೇಳಲಾಗದು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಭಾರತದಲ್ಲಿರುವ ಯಾವುದೇ ಸಕ್ರಿಯ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಇಲ್ಲ.
ಈ ಹಿಂದೆ ಯಾವುದಾದರೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದನೇ ಎನ್ನುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ. ಮೆಹ್ದಿ ತನ್ನ ಅಕೌಂಟ್‌ನಲ್ಲಿ ಪ್ಲೇಸ್ ಎನ್ನುವ ಕಡೆ ಪ್ಲಾನೆಟ್ ಅರ್ಥ್ (ಭೂಮಿ) ಎಂದು ಬರೆದುಕೊಂಡಿದ್ದ. ಇನ್ನು ಪ್ರಾಕ್ಸಿ ಸರ್ವರ್ ಅಥವಾ ಬೇರೆಯವರ ಅಕೌಂಟ್ ಹ್ಯಾಕ್ ಮಾಡಿ ಟ್ವೀಟ್ ಮಾಡುತ್ತಿರಲಿಲ್ಲ. ಬದಲಿಗೆ ಸಾಮಾನ್ಯ ಜನರು ಇಂಟರ್ನೆಟ್ ಬಳಸುವಂತೆ ಅಕೌಂಟ್ ನಿರ್ವಹಿಸುತ್ತಿದ್ದ. ತನ್ನದೇ ಫೇಸ್‌ಬುಕ್ ಅಕೌಂಟ್ ಹೊಂದಿದ್ದು, ಅದರಲ್ಲಿ ಸಾಮಾನ್ಯ ಮನುಷ್ಯನಂತೆ ಊಟ, ತಿಂಡಿ, ಪ್ರವಾಸ, ಪಾಲಕರು, ಸಂತೋಷದ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಸಿಎಸ್ ಜತೆ ನೇರ ಸಂಪರ್ಕ?
ಟ್ವಿಟರ್‌ನಲ್ಲಿ ಹಾಕುವ ವಿಚಾರಗಳ ಮೂಲಕ ಇಸಿಸ್ ಸಂಘಟನೆ ಯುವಕರು ಸೇರುವಂತೆ ಪ್ರಚೋದಿಸಲಾಗುತ್ತಿತ್ತು. ಆ ಮೂಲಕ ಮೆಹ್ದಿ, ಇಸಿಸ್ ನೇಮಕ ವ್ಯವಸ್ಥಾಪಕನಂತೆ ಕಾರ್ಯನಿರ್ವಹಿಸುತ್ತಿದ್ದ. ಆದರೆ, ಆತ ಎಲ್ಲಿಯೂ ನೇರವಾಗಿ ನೇಮಕ ಪ್ರಕ್ರಿಯೆಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಇಲ್ಲ. ಇನ್ನಷ್ಟು ವಿಚಾರಣೆ ನಡೆಸಿದರೆ, ಮಾಹಿತಿಗಳು ಬಹಿರಂಗಗೊಳ್ಳಬಹುದು. ಏಕೆಂದರೆ ಟ್ವಿಟರ್‌ನಲ್ಲಿ ಒಬ್ಬರನ್ನು ಇನ್ನೊಬ್ಬರು ಫಾಲೋ ಮಾಡಿದಾಗ ಅವರು ಖಾಸಗಿಯಾಗಿಯೂ ಚಾಟ್ ಮಾಡಬಹುದು. ಹೀಗಾಗಿ ಮೆಹ್ದಿ ಚಾಟ್ ಮಾಡಿರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಗಂಗಮ್ಮನಗುಡಿ ಠಾಣೆಯಲ್ಲಿ ಎಫ್‌ಐಆರ್
ಐಪಿಸಿ ಕಲಂ 125 ಅನ್ವಯ (ಭಾರತ ಸೇರಿದಂತೆ ಏಷ್ಯಾದ ಯಾವುದೇ ದೇಶದ ವಿರುದ್ಧ ಯುದ್ಧ ಸಾರುವುದು) ಹಾಗೂ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ ಕಲಂ 18 ಮತ್ತು 39 ಹಾಗೂ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಸೆಕ್ಷನ್ 66 (ಎಫ್) ಅನ್ವಯ ಆರೋಪಿ ವಿರುದ್ಧ ಗಂಗಮ್ಮನ ಗುಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಟ್ವಿಟರ್ ನೆರವು ಕೋರಿಕೆ
ಸದ್ಯ ಶಮಿವಿಟ್ನೆಸ್ ಅಕೌಂಟ್ ಸ್ಥಗಿತಗೊಂಡಿದೆ. ಆದರೆ, ಅದರ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಟ್ವಿಟರ್ ನೆರವಿನಿಂದ ಸಂಗ್ರಹಿಸಬಹುದು. ಹೀಗಾಗಿ ಸಿಸಿಬಿ ಅಧಿಕಾರಿಗಳು ಟ್ವಿಟರ್‌ನ ಭಾರತೀಯ ತಂತ್ರಜ್ಞರ ನೆರವು ಪಡೆಯಲಿದ್ದಾರೆ.
Advertisement