
ಲಿಮಾ: ಹವಾಮಾನ ಒಪ್ಪಂದಕ್ಕೆ ಸಂಬಂಧಿಸಿ ಭಾರತದ ಕನಸು ನನಸಾಗಿದೆ. ಪೆರು ರಾಜಧಾನಿ ಲಿಮಾದಲ್ಲಿ 15 ದಿನಗಳಿಂದ ನಡೆಯಿತ್ತುರುವ ಸಮ್ಮೇಳನ ಮತ್ತು ಮಾತುಕತೆಯ ಬಳಿಕ ಕೊನೆಗೂ ಹವಾಮಾನ ಬದಲಾವಣೆ, ಇಂಗಾಲ ಹೊರಸೂಸುವಿಕೆ ನಿಯಂತ್ರಣಕ್ಕೆ ಸಂಬಂಧಪಟ್ಟು ಭಾರತ ಪ್ರಸ್ತಾಪಿಸಿದ ಒಪ್ಪಂದಕ್ಕೆ ಒಪ್ಪಿಗೆ ದೊರೆತಿದೆ.
ಹವಾಮಾನ ಬದಲಾವಣೆಯ ಸಮಸ್ಯೆಯನ್ನು ನಿಗ್ರಹಿಸುವ ಈ ಒಪ್ಪಂದಕ್ಕೆ ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ಸಹಿ ಬೀಳಲಿದೆ.
2 ವಾರಗಳ ಕಾಲ ಈ ವಿಚಾರಕ್ಕೆ ಸಂಬಂಧಿಸಿ 194 ರಾಷ್ಟ್ರಗಳ ನಡುವೆ ಮಾತುಕತೆ ನಡೆದಿತ್ತು. ಈಗ ಎಲ್ಲ ರಾಷ್ಟ್ರಗಳೂ ಒಮ್ಮತಕ್ಕೆ ಬಂದಿದ್ದು, ಒಪ್ಪಂದವನ್ನು ನಾವು ಅಂಗೀರಕರಿಸುತ್ತೇವೆ ಎಂದು ವಿಶ್ವಸಂಸ್ಥೆ ಹವಾಮಾನ ಮಾತುಕತೆಯ ಅಧ್ಯಕ್ಷ, ಪೆರುವಿನ ಪರಿಸರ ಸಚಿವ ಮ್ಯಾನ್ಯುಲ್ ಪಲ್ಗಾರ್-ವಿಡಾಲ್ ಘೋಷಿಸಿದ್ದಾರೆ.
'ಲಿಮಾ ಕಾಲ್ ಫಾರ್ ಕ್ಲೈಮೇಟ್ ಆ್ಯಕ್ಷನ್' ಒಪ್ಪಂದವನ್ನು ಪರಿಸರೀಯ ಇತಿಹಾಸದಲ್ಲೇ ಐತಿಹಾಸಿಕ ಒಪ್ಪಂದ ಎಂದೇ ಬಣ್ಣಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್‌ಡೇಕರ್, ಭಾರತದ ಎಲ್ಲ ಚಿಂತನೆಗಳಿಗೂ ಬೆಲೆ ನೀಡಲಾಗಿದೆ. ನಾವು ಕೊನೆಗೂ ನಮ್ಮ ಗುರಿ ಮುಟ್ಟಿದೆವು ಎಂದಿದ್ದಾರೆ.
Advertisement