ಕಿರಾತಕರ ಪೇಶಾ'ವಾರ್': ಚಿಣ್ಣರು ಸೇರಿ 148 ಬಲಿ

ಇದು ನಿಜಕ್ಕೂ ಭೀಭತ್ಸ ಹತ್ಯಾಕಾಂಡ. ಪಾಕಿಸ್ತಾನದ ಭಯೋತ್ಪಾದಕ ಇತಿಹಾಸದಲ್ಲೇ ಕರಾಳ ದಿನ.
ಪೇಶಾವರ ಆರ್ಮಿ ಪಬ್ಲಿಕ್ ಸ್ಕೂಲ್‌ ದಾಳಿ
ಪೇಶಾವರ ಆರ್ಮಿ ಪಬ್ಲಿಕ್ ಸ್ಕೂಲ್‌ ದಾಳಿ
Updated on

ಪೇಶಾವರ/ಇಸ್ಲಾಮಾಬಾದ್: ಇದು ನಿಜಕ್ಕೂ ಭೀಭತ್ಸ ಹತ್ಯಾಕಾಂಡ. ಪಾಕಿಸ್ತಾನದ ಭಯೋತ್ಪಾದಕ ಇತಿಹಾಸದಲ್ಲೇ ಕರಾಳ ದಿನ.

ತೆಹ್ರಿಕ್-ಎ-ತಾಲಿಬಾನ್‌ಗೆ ಸೇರಿದ ಎಂಟು ಮಂದಿ ಉಗ್ರರು ಕಾರುಣ್ಯರಹಿತರಾಗಿ 132 ಮಕ್ಕಳೂ ಸೇರಿ 148 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಇಡೀ ಪೇಶಾವರ ನಗರ ಕಣ್ಣೀರ ಕೋಡಿಯಲ್ಲಿ ನರಳುವಂತೆ ಮಾಡಿದ್ದಾರೆ.

ಪಾಕಿಸ್ತಾನದ ಪ್ರಮುಖ ನಗರ ಪೇಶಾವರದ ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿ ಮಂಗಳವಾರ ನಡೆದ ಹೇಡಿ ಭಯೋತ್ಪಾದಕ ದಾಳಿಯ ಸ್ಥೂಲ ಚಿತ್ರಣವಿದು. ಬೆಳಿಗ್ಗೆ ಶಾಲೆ ಆರಂಭವಾಗಿ ಹೆಚ್ಚೂ ಹೊತ್ತೇನೂ ಆಗಿರಲಿಲ್ಲ. ಪಾಕಿಸ್ತಾನದ ತೆಹ್ಲಿಕ್-ಇ-ತಾಲಿಬಾಲ್‌ಗೆ ಸೇರಿದ ಎಂಟು ಮಂದಿ ರಕ್ತಪಿಪಾಸುಗಳು ಸೇನಾ ಉಡುಪಿನೊಂದಿಗೆ ಶಾಲೆ ಪ್ರವೇಶಿಸಿ ಈ ಕೃತ್ಯ ಎಸಗಿದ್ದಾರೆ.

ಮೊದಲಿಗೆ ಬಂದ ಪಾತಕಿಯೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡ. ಇದಾದ ಬಳಿಕ ನಡೆದದ್ದೇ ಏಳು ಗಂಟೆಗಳ ಕಾಲ ಮಾರಣ ಹೋಮ ಮತ್ತು ಘನ ಘೋರ ಗುಂಡಿನ ಕಾಳಗ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಏಕ ವ್ಯಕ್ತಿಯ ಉಗ್ರ ಕೃತ್ಯ ಮುಕ್ತಾಯವಾದ ಬೆನ್ನಲ್ಲೇ ಪೇಶಾವರದಲ್ಲಿ ಇಂಥ ಕೃತ್ಯ ನಡೆದದ್ದು ವಿಶ್ವವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.

ಸಾಲಲ್ಲಿ ನಿಲ್ಲಿಸಿ ಗುಂಡಿನ ಮಳೆ
ಮನ ಬಂದಂತೆ ಗುಂಡು ಹಾರಿಸುತ್ತಾ ಒಳ ನುಗ್ಗಿದ ಉಗ್ರರನ್ನು ತಡೆಯುವವರು ಯಾರೂ ಇರಲಿಲ್ಲ. ದೀಪದ ಬೆಳಕಿನ ಮುಂದೆ ಮಿಣಕು ಹುಳಗಳು ಬಿದ್ದು ಹೋಗುವಂತೆ ಅತ್ಯಾಧುನಿಕ ಬಂದೂಕುಗಳಿಂದ ಹಾರಿದ ಗುಂಡಿಗೆ ವಿದ್ಯಾರ್ಥಿಗಳು, ಶಿಕ್ಷಕರು ಸಿಕ್ಕಿ ಅಸುನೀಗಿದರು. ಪುಟ್ಟ ಮಕ್ಕಳ ಮೇಲೆ ಅದೇನು ಸಿಟ್ಟಿತ್ತೋ ಗೊತ್ತಿಲ್ಲ ಆ ಉಗ್ರರಿಗೆ. ಬಹುತೇಕ ಚಿಣ್ಣರ ಎದೆಗೆ ಮತ್ತು ತಲೆಗೆ ಗುಂಡು ಹಾರಿಸಿ ಕೊಂದೇ ಬಿಟ್ಟರು. 130ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

500 ಮಂದಿ ಒತ್ತೆಯಾಳು
ಯಾವುದೇ ಕಾರಣಕ್ಕೂ ಪಾಕಿಸ್ತಾನದ ಸೇನಾ ಪಡೆಗಳು ಶಾಲೆಗೆ ಪ್ರವೇಶಿಸಬಾರದು ಎನ್ನುವುದೇ ತಾಲಿಬಾನ್ ಉಗ್ರರ ಪ್ರಧಾನ ಲಕ್ಷ್ಯವಾಗಿತ್ತು. ಹೀಗಾಗಿಯೇ 500 ಮಂದಿ ಮಕ್ಕಳು ಮತ್ತು ಶಾಲೆಯ ಶಿಕ್ಷಕರನ್ನು ಅವರು ಮಾನವ ಗುರಾಣಿಯನ್ನಾಗಿ ಬಳಿಸಿಕೊಂಡಿದ್ದರು. ಸೈನಿಕರ ಕಾರ್ಯಾಚರಣೆಗೆ ಹಿನ್ನಡೆಯಾಗಲಿ ಎಂಬ ಉದ್ದೇಶದಿಂದಲ್ಲೇ ಖೂಳರು ಶಾಲೆಯ ಆವರಣದಲ್ಲಿ 15 ಬಾಂಬ್ ಸ್ಫೋಟಿಸಿದ್ದಾರೆ.

ಶಿಕ್ಷಕಿಯ ಜೀವಂತ ಸುಟ್ಟರು
ಉಗ್ರರು ಮಕ್ಕಳ ಕಣ್ಣಮುಂದೆಯೇ ಒಬ್ಬ ಶಿಕ್ಷಕಿಯನ್ನು ಬೆಂಕಿ ಹಚ್ಚಿಕೊಂದರು. ಈ ಘಟನೆ ಕುರಿತಂತೆ ಆಸ್ಪತ್ರೆಗೆ ಸೇರಿದ ವಿದ್ಯಾರ್ಥಿಯೊಬ್ಬ ಹೇಳಿಕೊಂಡಿದ್ದಾನೆ.

ಮುಂಬೈ ಮಾದರಿಯಲ್ಲಿ?
2008ರಲ್ಲಿ ಮುಂಬೈನಲ್ಲಿ ಇದೇ ಪಾಕಿಸ್ತಾನದ ಉಗ್ರರು ತಾಜ್‌ಮಹಲ್ ಹೊಟೇಲ್ ಮತ್ತು ಇತರ ಸ್ಥಳಗಳಲ್ಲಿ ಜನರನ್ನು ಹುಡುಕಿ ಹುಡುಕಿ ಕೊಂದು ಹಾಕಿದ್ದರು. ಇದೇ ಮಾದರಿಯಲ್ಲಿ ಶಾಲೆಯ ಪ್ರತಿ ತರಗತಿಗೂ ಅವರು ಪ್ರವೇಶಿಸಿದರು. ಅಲ್ಲಿದ್ದವರನ್ನು ಒತ್ತೆ ಇಟ್ಟುಕೊಂಡು ಗುಂಡು ಹಾರಿಸಿ ಕೊಂದರು.

ಎಲ್ಲ ಪಾತಕಿಗಳ ಸಾವು
ಉಗ್ರರು ದಾಳಿ ಇಟ್ಟಿದ್ದಾರೆ ಎಂಬ ಸುದ್ದಿ ತಿಳಿಯುತ್ತಲೇ ಸೇನಾ ಪಡೆ ಕಾರ್ಯಾಚರಣೆ ಆರಂಭಿಸಿತ್ತು. ವಿಶೇಷ ಹೆಲಿಕಾಪ್ಟರ್‌ಗಳ ಮೂಲಕವೂ ಕಾರ್ಯಚರಣೆ ನಡೆಸಲು ಆರಂಭಿಸಿದರು. ಶಾಲೆಯ ಹಿಂಭಾಗದಲ್ಲಿರುವ ಮೂರು ಬಾಗಿಲುಗಳ ಮೂಲಕ ಸೈನಿಕರು ನುಗಿದ್ದರು. ಸೈನಿಕರು ಒಬ್ಬೊಬ್ಬರು ಪಾತಕಿಗಳನ್ನೇ ಹೊಡೆದು ಉರುಳಿಸುತ್ತಾ ಬಂದರು. ಇದರ ಜತೆಗೆ ಶಾಲೆಯ ಸಂದಿಗೊಂದಿಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸೈನಿಕರು ಪಾರು ಮಾಡಿದರು. ಅಂತಿಮವಾಗಿ ಸಂಜೆ 6.30ಕ್ಕೆ ಸೈನಿಕರು ಎಲ್ಲ ಏಳು ಮಂದಿ ಪಾತಕಿಗಳನ್ನು ಹೊಡೆದು ಹಾಕಿದರು.

ಪಾಕ್ ಪಿಎಂ ಷರೀಫ್ ಭೇಟಿ
ಕಾರ್ಯಾಚರಣೆ ನಡೆಯುತ್ತಿದ್ದಂತೆಯೇ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪೇಶಾವರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದೊಂದು ಆಘಾತಕಾರಿ ಘಟನೆ ಎಂದು ಬಣ್ಣಿಸಿದ್ದಾರೆ. ಮುಗ್ಧ ಮನಸ್ಸುಗಳ ಸಾವಿನ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆ ಆದೇಶಿಸಿದ್ದಾರೆ.

ಘಟನೆ ನಿಜಕ್ಕೂ ದುಃಖದಾಯಕ. ಹೇಡಿ ಭಯೋತ್ಪಾದಕರು ಪೇಶಾವರದಲ್ಲಿ ಶಾಲೆಯನ್ನು ಗುರಿಯಾಗಿರಿಸಿಕೊಂಡು ಆಕ್ರೋಶ ಮರೆದಿದ್ದಾರೆ. ಇದೊಂದು ಹೀನ ಕೃತ್ಯ ಮತ್ತು ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತಿಲ್ಲ.
- ನರೇಂದ್ರ ಮೋದಿ, ಪ್ರಧಾನಿ

ವಿಶ್ವ ಸಮುದಾಯ ಇಂಥ ಕೃತ್ಯ ಖಂಡಿಸಬೇಕು ಮತ್ತು ಭಯೋತ್ಪಾದನೆಯ ಮೂಲೋತ್ಪಾಟನೆ ಮಾಡಬೇಕು
- ಪ್ರಣಬ್ ಮುಖರ್ಜಿ, ರಾಷ್ಟ್ರಪತಿ

ರಕ್ತಪಿಪಾಸುಗಳ ದಾಹಕ್ಕೆ ಬಲಿಯಾದ ಮುಗ್ಧ ಮನಸ್ಸುಗಳ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ಘಟನೆ ಒಟ್ಟಾರೆ ಮನುಕುಲಕ್ಕೆ ಕಳಂಕ.
- ಸಯ್ಯದ್ ಅಕ್ಬರುದ್ದೀನ್, ಭಾರತದ ವಿದೇಶಾಂಗ ಇಲಾಖೆ ವಕ್ತಾರ

ಸಂಘಟಿತ ಭಯೋತ್ಪಾದಕ ಸಂಘಟನೆಗಳು ಮನುಕುಲಕ್ಕೇ ಸವಾಲಾಗಿದೆ. ಮಕ್ಕಳು ಉಗ್ರರ ದಾಳಿಗೆ ಬಲಿಯಾಗಿದ್ದು ನನಗೆ ದುಃಖ ತಂದಿದೆ.
- ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ.

ಪಾಕಿಸ್ತಾನದಲ್ಲಿ ನಡೆದ ಘಟನೆ ನಿಜಕ್ಕೂ ಆಘಾತಕಾರಿ. ಶಾಲೆಗೆ ಹೋಗುತ್ತಿರುವ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವುದು ಎಷ್ಟು ಸರಿ?
- ಡೇವಿಡ್ ಕೆಮರಾನ್, ಬ್ರಿಟನ್ ಪ್ರಧಾನಿ

ಇದು ಪ್ರತೀಕಾರದ ದಾಳಿ
ಶಾಲೆಯ ಮೇಲೆ ದಾಳಿ ನಡೆಸಿದ ಕೆಲವೇ ಕ್ಷಣಗಳಲ್ಲಿ ಪಾಪಿ ಸಂಘಟನೆ ಕೃತ್ಯದ ಹೊಣೆ ಹೊತ್ತುಕೊಂಡಿದೆ. ಉತ್ತರ ವಜೀರಸ್ಥಾನದಲ್ಲಿ ಪಾಕಿಸ್ತಾನದ ಸೇನೆ ಅವರಿಗೆ ಕಿರುಕುಳ ಕೊಟ್ಟಿದೆಯಂತೆ. ಹೀಗಾಗಿ ಅದಕ್ಕೆ ಪ್ರತೀಕಾರವಾಗಿ ಆತ್ಮಹತ್ಯಾ ದಾಳಿ ನಡೆಸಿದ್ದಾರಂತೆ. ನಮ್ಮ ನೋವು ಪಾಕಿಸ್ತಾನ ಸರ್ಕಾರಕ್ಕೂ ಗೊತ್ತಾಗಲಿ ಎಂಬುದು ಅವರ ಬಯಕೆಯಂತೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com