ಮಾರಕ ಎಬೋಲಾಗೆ 2015ರಲ್ಲಿ ಔಷಧಿ..?

ವಿಶ್ವ ಆರೋಗ್ಯ ಸಂಸ್ಥೆ ನಿರ್ಬಂಧ ಸಡಿಲ, ತೀವ್ರಗೊಂಡ ಔಷಧಿ ತಯಾರಿಕಾ ಸ್ಪರ್ಧೆ..
ಎಬೋಲಾ ಲಸಿಕೆ (ಸಾಂದರ್ಭಿಕ ಚಿತ್ರ)
ಎಬೋಲಾ ಲಸಿಕೆ (ಸಾಂದರ್ಭಿಕ ಚಿತ್ರ)
Updated on

ನವದೆಹಲಿ: ಕಳೆದೊಂದು ವರ್ಷದಿಂದ ಆಫ್ರಿಕಾ ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಎಬೋಲಾ ರೋಗಕ್ಕೆ 2015ರಲ್ಲಿ ಔಷಧಿ ಲಭ್ಯವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಆಫ್ರಿಕಾದ ಗಿನಿಯಾ, ಸಿಯೆರಾ ಲಿಯೋನ್, ನೈಜಿರಿಯಾ ಮತ್ತು ಲಿಬೇರಿಯಾ ಸೇರಿದಂತೆ ಹಲವು ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಎಬೋಲಾ ರೋಗಕ್ಕೆ 2015ರಲ್ಲಿ ಔಷಧಿ ದೊರೆಯುವ ಕುರಿತು ಆಶಾಭಾವನೆ ವ್ಯಕ್ತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮೂಲಗಳ ಪ್ರಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಔಷಧಿ ತಯಾರಿಕೆ ಮಾಡುವ ಮತ್ತು ಔಷಧಿಗಳ ಕುರಿತು ಪ್ರಯೋಗ ಮಾಡುವ ಸಂಸ್ಥೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ಅಲ್ಲದೆ ಆಯಾ ಸಂಸ್ಥೆಗಳು ಕೂಡ ಔಷಧಿ ತಯಾರಿಸುವ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿವೆ ಎಂದು ತಿಳಿದು ಬಂದಿದೆ.

ತೀವ್ರಗೊಂಡ ಔಷಧಿ ತಯಾರಿಕಾ ರೇಸ್
ಇದೇ ವೇಳೆ ಮಾರಕ ಎಬೋಲಾ ರೋಗದ ಭೀತಿ ವಿಶ್ವಕ್ಕೆ ತಟ್ಟುತ್ತಿದ್ದಂತೆಯೇ ಸ್ಪರ್ಧೆಗಿಳಿದಿರುವ ಔಷಧ ತಯಾರಿಕಾ ಸಂಸ್ಥೆಗಳು ನಾಮುಂದು ತಾಮುಂದು ಎನ್ನುವಂತೆ ಔಷಧ ತಯಾರಿಕಾ ಪ್ರಯೋಗಕ್ಕೆ ಮುಂದಾಗಿವೆ. ಈ ಪ್ರಯೋಗದಲ್ಲಿ ಅಮೆರಿಕ, ಬ್ರಿಟನ್ ಮತ್ತು ಚೀನಾ ದೇಶಗಳ ಔಷಧ ತಯಾರಿಕಾ ಸಂಸ್ಥೆಗಳು ಮುಂದಿದ್ದು, ಈ ಸಂಸ್ಥೆಗಳಿಗೆ ಆಯಾ ದೇಶದ ಸರ್ಕಾರಗಳು ಬೆಂಬಲ ನೀಡುತ್ತಿವೆ. ಇನ್ನು  ಈ ಪೈಕಿ ಚೀನಾ ದೇಶದ ಪೀಪಲ್ಸ್ ಲಿಬರೇಷನ್ ಆರ್ಮಿ ಲಾಜಿಸ್ಟಿಕ್ ಯೂನಿಟ್ ಕೈಗೊಂಡಿರುವ ಪ್ರಯೋಗದಲ್ಲಿ ಮಹತ್ವದ ಪ್ರಗತಿ ಕಂಡುಬಂದಿದೆ ಎಂದು ಆ ದೇಶದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೀನ್ಯಾದ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಅಧಿಕಾರಿಗಳು ತಾವು ಈಗಾಗಲೇ ಪ್ರಯೋಗಾತ್ಮಕ ಎಬೋಲಾ ಲಸಿಕೆಯನ್ನು ಆವಿಷ್ಕರಿಸಿದ್ದು, ಅದನ್ನು ಸ್ಥಳೀಯ ಆರೋಗ್ಯ ಕಾರ್ಯಕರ್ತನ ಮೇಲೆ ಪ್ರಯೋಗಿಸಿದ್ದೇವೆ. ಲಸಿಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದೆ ಎಂದು ಹೇಳಿದ್ದಾರೆ. ಕಿಲಿಫಿ ಕೌಂಟಿ ಆಸ್ಪತ್ರೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳು ಈ ವಿಚಾರವನ್ನು ಹೇಳಿದ್ದಾರೆ.

ಪ್ರಸ್ತುತ ಎಬೋಲಾ ಪೀಡಿತ ದೇಶಗಳಿಗೆ ಎರಡು ಔಷಧಿಗಳನ್ನು ರವಾನೆ ಮಾಡಲಾಗುತ್ತಿದ್ದು, ಒಂದು ಬ್ರಿಟನ್ ಮೂಲದ ಗ್ಲಾಕ್ಸೋ ಸ್ಮಿತ್‌ಕ್ಲಿನ್ ಸಂಸ್ಥೆಯ ವ್ಯಾಕ್ಸಿನ್ ಮತ್ತೊಂದು ಅಮೆರಿಕದ ವೈದ್ಯಕೀಯ ವಿದ್ಯಾಲಯ ತಯಾರಿಸಿರುವ ಲಸಿಕೆಯನ್ನು ಎಬೋಲಾ ರೋಗಿಗಳಿಗೆ ಔಷಧಿಯಾಗಿ ನೀಡಲಾಗುತ್ತಿದೆ. ಈ ಎರಡೂ ಔಷಧಿಗಳನ್ನು ಚಿಂಪಾಂಜಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಸಕಾರಾತ್ಮಕ ಪರಿಣಾಮ ಬೀರಿವೆ. ಆದರೆ ಇದೇ ಲಸಿಕೆಯನ್ನು ಎಬೋಲಾ ಪೀಡಿತ ರೋಗಿಗಳ ಮೇಲೆ ಪ್ರಯೋಗಿಸಿದಾಗ ಪರಿಣಾಮಕಾರಿಯಲ್ಲದಿದ್ದರೂ, ವೈರಾಣುವನ್ನು ಸಾಕಷ್ಟು ಮಟ್ಟಿಗೆ ಇವು ನಿಯಂತ್ರಿಸಿದ್ದವು. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ಈ ಎರಡು ಲಸಿಕೆಗಳನ್ನು ತಾತ್ಕಾಲಿಕವಾಗಿ ಬಳಕೆ ಮಾಡಲು ಅವಕಾಶ ನೀಡಿದೆ.

ತಜ್ಞರ ಪ್ರಕಾರ ಮಾರಕ ಎಬೋಲಾ ರೋಗಕ್ಕೆ ಈ ವರೆಗೂ ಯಾವುದೇ ನಿಖರ ಔಷಧಿಯನ್ನು ಕಂಡುಹಿಡಿಯಲಾಗಿಲ್ಲ. ಪ್ರಸ್ತುತ ನೀಡುತ್ತಿರುವ ಔಷಧಿಗಳು ಎಬೋಲಾ ವೈರಾಣುವನ್ನು ನಿಯಂತ್ರಿಸಬಹುದಷ್ಟೇ ಹೊರತು ಸಂಪೂರ್ಣವಾಗಿ ನಾಶಪಡಿಸುವ ಸಾಮರ್ಥ್ಯ ಹೊಂದಿಲ್ಲ. ಇದೇ ಕಾರಣಕ್ಕಾಗಿ ವಿಶ್ವ ಔಷಧವಲಯದಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದೊಂದು ವರ್ಷದಿಂದ ಆಫ್ರಿಕಾ ದೇಶಗಳಲ್ಲಿ ಅಬ್ಬರಿಸುತ್ತಿರುವ ಮಾರಕ ಎಬೋಲಾ ರೋಗಕ್ಕೆ ತುತ್ತಾಗಿ ಈ ವರೆಗೂ ಸುಮಾರು 6,500 ಮಂದಿ ಮೃತಪಟ್ಟಿದ್ದು, ಈ ದೇಶಗಳಲ್ಲಿನ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ, ಔಷಧಿ ತಯಾರಿಕೆಗೆ ಉತ್ತೇಜನ ನೀಡುವ ಕ್ರಮವಾಗಿ ಔಷಧ ಪ್ರಯೋಗದ ಮೇಲಿದ್ದ ಕೆಲ ನಿರ್ಬಂಧಗಳನ್ನು ತೆಗೆದುಹಾಕಿದೆ. ಹೀಗಾಗಿ ಪರಿಸ್ಥಿತಿಯ ಲಾಭ ಪಡೆದಿರುವ ಅಂತಾರಾಷ್ಟ್ರೀಯ ಔಷಧ ತಯಾರಿಕಾ ಸಂಸ್ಥೆಗಳು ಸ್ಪರ್ಧೆಗೆ ಬಿದ್ದು ಪ್ರಯೋಗದಲ್ಲಿ ತೊಡಗಿಕೊಂಡಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com