
ಇಸ್ಲಾಮಾಬಾದ್: ಪೇಶಾವರ ಪೈಶಾಚಿಕ ಕೃತ್ಯದ ಬಳಿಕ 'ಪಾಪಿ'ಸ್ತಾನಕ್ಕೆ ಬುದ್ಧಿ ಬಂದಂತ್ತಿದ್ದು, ಶುಕ್ರವಾರ ಇಬ್ಬರು ಉಗ್ರರಿಗೆ ಗಲ್ಲು ಶಿಕ್ಷೆ ಜಾರಿ ಮಾಡಿದೆ.
2009ರಲ್ಲಿ ರಾವಲ್ಪಿಂಡಿಯಲ್ಲಿರುವ ಸೇನಾ ಮುಖ್ಯಸ್ಥರ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿ ಜೀವಂತವಾಗಿ ಸೆರೆ ಸಿಕ್ಕಿದ್ದ ಅಖೀಲ್ ಅಲಿಯಾಸ್ ಡಾ.ಉಸ್ಮಾನ್ ಮತ್ತು ಪಾಕಿಸ್ತಾನ ಮಾಜಿ ಅಧ್ಯಕ್ಷ ಫರ್ವೇಜ್ ಮುಷರ್ರಫ್ ಮೇಲಿನ ಹತ್ಯಾ ಪ್ರಯತ್ನದಲ್ಲಿ ಬಂಧಿತನಾಗಿದ್ದ ಅರ್ಷದ್ ಮೆಹಮೂದ್ ಅಲಿಯಾಸ್ ಮೆಹರ್‌ಬನ್ ಎಂಬಾತನನ್ನು ಗಲ್ಲಿಗೇರಿಸಲಾಗಿದೆ.
2003ರಲ್ಲಿ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಹತ್ಯೆಗೆ ಪ್ರಯತ್ನಿಸಿದ್ದ ಮೆಹಮೂದ್ ತನ್ನ ಪ್ರಯತ್ನದಲ್ಲಿ ವಿಫಲನಾಗಿದ್ದ. ಆದರೆ ಅಂದಿನ ಘಟನೆಯಲ್ಲಿ ಮುಷರಫ್‌ರನ್ನು ಹೊರತು ಪಡಿಸಿ ಸುಮಾರು 15 ಮಂದಿ ಸಾವಿಗೀಡಾಗಿದ್ದರು. ಪಾಕಿಸ್ತಾನದ ಪ್ರಮುಖ ಸುದ್ದಿ ವಾಹಿನಿಗಳು ವರದಿ ಮಾಡಿರುವಂತೆ ನಿನ್ನೆ ರಾತ್ರಿ ಸುಮಾರು 9 ಗಂಟೆ ಸುಮಾರಿನಲ್ಲಿ ಇಬ್ಬರು ಉಗ್ರರನ್ನು ಫೈಸಲಾಬಾದಿನಲ್ಲಿರುವ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆಯಂತೆ.
ನಾಳೆ ಮತ್ತೆ ನಾಲ್ವರಿಗೆ ಗಲ್ಲು ಶಿಕ್ಷೆ ಪ್ರಧಾನ
ಉಸ್ಮಾನ್ ಮತ್ತು ಮೆಹರಬನ್ ಉಗ್ರರಂತೆಯೇ ಇನ್ನೂ ಸಾಕಷ್ಟು ಉಗ್ರರು ಗಲ್ಲು ಶಿಕ್ಷೆಗೆ ಸರತಿಸಾಲಿನಲ್ಲಿದ್ದು, ನಾಳೆ ಮತ್ತೆ ನಾಲ್ವರನ್ನು ಗಲ್ಲಿಗೇರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೋಟ್ ಲಕ್‌ಪತ್ ಜೈಲಿನಲ್ಲಿ ಈಗಾಗಲೇ ಗಲ್ಲು ಶಿಕ್ಷೆ ಪ್ರಧಾನದ ಪೂರ್ವ ಸಿದ್ಧತೆಗಳು ಆರಂಭಗೊಂಡಿವೆ ಎಂದು ಕೆಲ ಸುದ್ದಿವಾಹಿನಿಗಳು ವರದಿ ಬಿತ್ತರಿಸಿವೆ.
ಇದಲ್ಲದೆ ಇನ್ನೂ 15 ಉಗ್ರರನ್ನು ಗಲ್ಲಿಗೇರಿಸಲು ಸಿದ್ದತೆ ನಡೆಸಿದ್ದು, ಶೀಘ್ರದಲ್ಲೇ ಅವರಿಗೆ ನೇಣು ಕುಣಿಕೆ ಬೀಳಲಿದೆ. ಉಗ್ರರಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆ ಅನುಷ್ಠಾನದ ಮೇಲಿನ ನಿರ್ಬಂಧವನ್ನು ಪೇಶಾವರ ಸೈನಿಕರ ಶಾಲೆ ದಾಳಿ ಬಳಿಕ ಸರ್ಕಾರ ತೆರವುಗೊಳಿಸಿತ್ತು.
ಕಳೆದ ಡಿಸೆಂಬರ್ 16 ಮಂಗಳವಾರದಂದು ಪೇಶಾವರದ ಸೈನಿಕ ಶಾಲೆಯನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ದಾಳಿಯಿಂದಾಗಿ ಸುಮಾರು 95 ಮಕ್ಕಳು ಸೇರಿದಂತೆ ಒಟ್ಟು 148 ಮಂದಿ ಹತರಾಗಿದ್ದರು. ಪಾಕಿಸ್ತಾನದ ಭಯೋತ್ಪಾದನಾ ಇತಿಹಾಸದಲ್ಲಿಯೇ ಮಕ್ಕಳ ಮೇಲೆ ನಡೆದ ಅತಿದೊಡ್ಡ ಪೈಶಾಚಿಕ ಕೃತ್ಯ ಇದಾಗಿತ್ತು. ಘಟನೆ ಕುರಿತಂತೆ ವಿಶ್ವಾದ್ಯಂತ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.
ಭಾರತ, ಅಮೆರಿಕ ಸೇರಿದಂತೆ ಪಾಕಿಸ್ತಾನದ ಮಿತ್ರ ರಾಷ್ಟ್ರ ಚೀನಾ ಕೂಡ ಘಟನೆಯನ್ನು ಖಂಡಿಸಿತ್ತು. ಇದೇ ಸಂದರ್ಭದಲ್ಲಿ ಮುಂಬೈ ದಾಳಿ ರೂವಾರಿ ಲಖ್ವಿಗೆ ನ್ಯಾಯಾಲಯ ಜಾಮೀನು ನೀಡಿದ್ದು, ವಿಶ್ವಸಮುದಾಯದ ಎದುರು ಪಾಕಿಸ್ತಾನ ಮುಜುಗರಕ್ಕೀಡಾಗುವಂತೆ ಮಾಡಿತ್ತು. ಭಾರತದ ಸಂಸತ್ತಿನಲ್ಲಿ ಲಖ್ವಿಗೆ ಜಾಮೀನು ನೀಡಿದ್ದನ್ನು ವಿರೋಧಿಸಿ ನಿನ್ನೆ ಖಂಡನಾ ನಿರ್ಣಯವನ್ನು ಕೂಡ ಅಂಗೀಕಾರ ಮಾಡಲಾಗಿತ್ತು.
ಭಾರತದ ನಿರಂತರ ಒತ್ತಡ ಮತ್ತು ವಿಶ್ವ ಸಮುದಾಯದಿಂದ ಟೀಕೆಗೊಳಗಾಗುವ ಭೀತಿ ಹಿನ್ನಲೆಯಲ್ಲಿ ಉಗ್ರರ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳಲೇಬೇಕಾದ ಪರಿಸ್ಥಿತಿಯಲ್ಲಿ, ಇಂದು ಇಬ್ಬರು ಉಗ್ರರಿಗೆ ನವಾಜ್ ಷರೀಫ್ ಸರ್ಕಾರ ಗಲು ಶಿಕ್ಷೆ ವಿಧಿಸಿದೆ. ಅಲ್ಲದೆ ಮತ್ತಷ್ಟು ಉಗ್ರರನ್ನು ಗಲ್ಲಿಗೇರಿಸುವ ಮಾತನ್ನಾಡಿದೆ.
Advertisement