
ಕೌಲಾಲಂಪುರ: ಇದೆಂಥಾ ಮೂರ್ಖತನ ಎಂದು ಗೊತ್ತಾಗುತ್ತಿಲ್ಲ. ಸಿರಿಯಾ ಮತ್ತು ಇರಾಕ್‌ನಲ್ಲಿ ಉಗ್ರ ಸಂಘಟನೆ ಇಸಿಸ್‌ಗೆ ಸೇರಲೆಂದು ಬಯಸುವ ಮಲೇಷ್ಯನ್ನರು ಬ್ಯಾಂಕ್ ಸಾಲ ಮಾಡಿಕೊಂಡು ಅಲ್ಲಿಗೆ ತೆರಳುತ್ತಿದ್ದಾರಂತೆ! ಅದರಲ್ಲೂ ಕೆಲವರಂತೂ 20 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದಾರಂತೆ!
ಹೀಗಂತ ಅಲ್ಲಿನ ತನಿಖಾಧಿಕಾರಿಗಳೇ ಬಹಿರಂಗಪಡಿಸಿದ್ದಾರೆ. ಬ್ಯಾಂಕ್ ಸಾಲ ಮಾಡಿಕೊಂಡು ಇರಾಕ್‌ಗೆ ತೆರಳುತ್ತಿದ್ದ ಐವರು ಇಸಿಸ್ ಪರ ಮೃದುಧೋರಣೆಯುಳ್ಳ ಯುವಕರನ್ನು ಈ ಅಧಿಕಾರಿಗಳೇ ತಡೆದಿದ್ದಾರೆ.
ಕೌಲಾಲಂಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆರೆಸಿಕ್ಕಿರುವ ಮತ್ತೊಬ್ಬ 30 ವರ್ಷದ ವ್ಯಕ್ತಿಯು ಇಸಿಸ್ ಸೇರುವುದಕ್ಕಾಗಿ ಸಾಲ ಪಡೆದಿದ್ದಾನೆ ಮಾತ್ರವಲ್ಲ ಉದ್ಯೋಗಕ್ಕೆ ರಾಜಿನಾಮೆಯನ್ನೂ ನೀಡಿದ್ದಾನೆ. ಈತ ಬ್ರೂನೆ ಮತ್ತು ಭಾರತದಲ್ಲಿ ಇಳಿದು, ನಂತರ ಪ್ರಯಾಣ ಮುಂದುವರಿಸಲು ಯೋಜಿಸಿದ್ದ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಸಾಲ ಹಿಂತಿರುಗಿಸುವ ಯೋಚನೆಯೇ ಇಲ್ಲ
ಇಸಿಸ್ ಪರ ಧೋರಣೆಯುಳ್ಳವರು ಎಂಬ ಬಲವಾದ ಶಂಕೆ ಮೂಡಿದಲ್ಲಿ ಅಂಥವರಿಗೆ ಸಾಲ ನೀಡದಂತೆ ಬ್ಯಾಂಕುಗಳಿಗೆ ಸೂಚಿಸಲಾಗಿದೆ ಎಂದು ವಿಶೇಷ ಪಡೆಯ ಉಗ್ರ ನಿಗ್ರಹ ವಿಭಾಗ ತಿಳಿಸಿದೆ. ಈ ರೀತಿಯಾಗಿ ಬ್ಯಾಂಕುಗಳಿಂದ ಸಾಲ ಪಡೆದುಕೊಂಡವರಿಗೆ ಮತ್ತು ಸಾಲಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಅದನ್ನು ಹಿಂತಿರುಗಿಸುವ ಉದ್ದೇಶವೇ ಇಲ್ಲ.
ಏಕೆಂದರೆ, ಇಸಿಸ್ ಸೇರಲು ಹೋಗುತ್ತಿರುವುದರಿಂದ ತಾವು ಅಲ್ಲೇ 'ಹುತಾತ್ಮ'ರಾಗುತ್ತೇವೆ, ಒಂದು ವೇಳೆ ಬದುಕುಳಿದು ವಾಪಸಾದರೂ ಮಲೇಷ್ಯಾ ಪೊಲೀಸರು ತಮ್ಮನ್ನು ಬಂಧಿಸುತ್ತಾರೆ. ಹೀಗಿರುವಾಗ ಸಾಲ ಮರು ಪಾವತಿ ಮಾಡುವುದೆಲ್ಲಿಂದ ಬಂತು ಎಂಬ ಯೋಚನೆ ಅವರಲ್ಲಿದೆ ಎನ್ನುತ್ತಾರೆ ಉಗ್ರ ನಿಗ್ರಹ ದಳದ ಅಧಿಕಾರಿಗಳು, ಈ ಹಿಂದೆಯೂ ಸಿರಿಯಾದಲ್ಲಿ ಹೋರಾಡಲೆಂದು ತೆರಳಿರುವ ಅನೇಕರು ತಮ್ಮ ಆಸ್ತಿಪಾಸ್ತಿಗಳನ್ನೆಲ್ಲ ಮಾರಿ ಆ ದೇಶಗಳಿಗೆ ಹೋಗಿದ್ದಾರೆ ಎಂದೂ ಅಧಿಕಾರಿಗಳು ಹೇಳುತ್ತಾರೆ.
Advertisement