300 ಶಂಕಿತ ಉಗ್ರರ ಬಂಧನ..!

ಪೇಶಾವರ ಸೈನಿಕ ಶಾಲೆಯಲ್ಲಿ ಉಗ್ರರು ನಡೆಸಿದ ಮಾರಣ ಹೋಮದ ಬಳಿಕ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಸರ್ಕಾರ...
ಉಗ್ರರ ವಿರುದ್ಧ ಪಾಕಿಸ್ತಾನ ಸೇನೆಯ ಕಾರ್ಯಾಚರಣೆ (ಸಂಗ್ರಹ ಚಿತ್ರ)
ಉಗ್ರರ ವಿರುದ್ಧ ಪಾಕಿಸ್ತಾನ ಸೇನೆಯ ಕಾರ್ಯಾಚರಣೆ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಪೇಶಾವರ ಸೈನಿಕ ಶಾಲೆಯಲ್ಲಿ ಉಗ್ರರು ನಡೆಸಿದ ಮಾರಣ ಹೋಮದ ಬಳಿಕ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಸರ್ಕಾರ ಭಾನುವಾರ 300 ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.

ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ ಶನಿವಾರ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ 300 ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತ ಶಂಕಿತ ಉಗ್ರರಲ್ಲಿ ವಿದೇಶಿಗರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ರಾಜಧಾನಿಯಲ್ಲಿ ನಡೆದ ಈ ಬೃಹತ್ ಕಾರ್ಯಾಚರಣೆ ವೇಳೆ ಸಾಕಷ್ಟು ಮುಂಜಾಗ್ರತೆ ವಹಿಸಿದ್ದ ಭದ್ರತಾ ಪಡೆಗಳು, ಒಟ್ಟು 6 ಶ್ವಾನದಳ ತಂಡ, ಶಸ್ತ್ರಸಜ್ಜಿತ ಯೋಧರ ತಂಡಗಳು, ಬಾಂಬ್ ನಿಷ್ಕ್ರಿಯದಳ ಮತ್ತು ವಿಶೇಷ ಕಮಾಂಡೋಗಳ ತಂಡದ ನೆರವನ್ನು ಪಡೆದಿತ್ತು.

ಪೇಶಾವರ ಮಾರಣ ಹೋಮದ ಹಿನ್ನಲೆಯಲ್ಲಿ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದ ಪಾಕ್ ಸರ್ಕಾರ ನಿನ್ನೆಯಷ್ಟೇ ಇಬ್ಬರು ಉಗ್ರರಿಗೆ ಗಲ್ಲು ಶಿಕ್ಷೆ ಪ್ರಧಾನ ಮಾಡಿತ್ತು. ಅಲ್ಲದೆ ತಾಲಿಬಾನ್ ಮುಖಂಡ ಫಜ್ಲುಲ್ಲಾ ನನ್ನು ಕೂಡ ಪಾಕಿಸ್ತಾನ ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹೊಡೆದು ಹಾಕಿದ್ದವು.

ಎನ್‌ಕೌಂಟರ್ ನಡೆದ ಕೆಲವೇ ಗಂಟೆಗಳ ಬಳಿಕ ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ತಾಲಿಬಾನ್ ಉಗ್ರಸಂಘಟನೆ, ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ನಿಲ್ಲಿಸದಿದ್ದರೆ ವಿವಿಧ ರಾಜಕೀಯ ಗಣ್ಯರ ಮಕ್ಕಳನ್ನು ಕೊಂದು ಹಾಕುವುದಾಗಿ ಎಚ್ಚರಿಕೆ ನೀಡಿತ್ತು. ಈ ಹಿನ್ನಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನ ಭದ್ರತಾ ಪಡೆಗಳು ಇಂದು ಬರೊಬ್ಬರಿ 300 ಮಂದಿ ಶಂಕಿತ ಉಗ್ರರನ್ನು ಬಂಧಿಸಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪಾಕಿಸ್ತಾನ ಸೇನೆಯ ವರಿಷ್ಠಾಧಿಕಾರಿಗಳು, ಇದೊಂದು ಗುಪ್ತಚರ ಇಲಾಖೆ ಮಾಹಿತಿಯಾಧಾರಿತ ಕಾರ್ಯಾಚರಣೆಯಾಗಿದ್ದು, ಉಗ್ರರ ಎಚ್ಚರಿಕೆ ಸಂದೇಶದ ಹಿನ್ನಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವ ಹಾಗೆ, ಪೇಶಾವರ ಪೈಶಾಚಿಕ ಕೃತ್ಯದ ಬಳಿಕ ಪಾಕಿಸ್ತಾನ ಸರ್ಕಾರಕ್ಕೆ ಬುದ್ಧಿ ಬಂದಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com