ಶಾರದಾ ಹಗರಣ:'ದೀದಿಯೇ ಅತಿದೊಡ್ಡ ಫಲಾನುಭವಿ'

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಶಾರದಾ ಚಿಟ್...
ಮಮತಾ ಬ್ಯಾನರ್ಜಿ ಮತ್ತು ಕುನಾಲ್ ಘೋಷ್  (ಸಾಂದರ್ಭಿಕ ಚಿತ್ರ )
ಮಮತಾ ಬ್ಯಾನರ್ಜಿ ಮತ್ತು ಕುನಾಲ್ ಘೋಷ್ (ಸಾಂದರ್ಭಿಕ ಚಿತ್ರ )

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಶಾರದಾ ಚಿಟ್ ಫಂಡ್ ಹಗರಣದ ದೊಡ್ಡ ಫಲಾನುಭವಿ ಎಂದು ಕುನಾಲ್ ಘೋಷ್ ಆರೋಪಿಸಿದ್ದಾರೆ.

ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಇಂದು ನಡೆದ ವಿಚಾರಣೆ ವೇಳೆ ಟಿಎಂಸಿ ಉಚ್ಛಾಟಿತ ಸದಸ್ಯ ಕುನಾಲ್ ಘೋಷ್, ಗಂಭೀರ ಆರೋಪ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಅಧಿಕಾರ ಮತ್ತು ಪ್ರಭಾವವನ್ನು ಬಳಸಿಕೊಂಡು ಹಗರಣದ ತನಿಖೆ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ. ಮಮತಾ ಅವರೇ ಹಗರಣದ ಪ್ರಮುಖ ಫಲಾನುಭವಿಯಾಗಿದ್ದು, ನನ್ನನ್ನೇಕೆ ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂಬುದು ಈವರೆಗೂ ನನಗೆ ಅರ್ಥವಾಗುತ್ತಿಲ್ಲ ಎಂದು ಕುನಾಲ್ ಘೋಷ್ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿರುವ ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕುನಾಲ್ ಘೋಷ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದು, ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ. ಮೂಲಗಳ ಪ್ರಕಾರ ಬಂಧಿತ ಕುನಾಲ್ ಘೋಷ್ ಹಗರಣದಲ್ಲಿ ಭಾಗಿಯಾಗಿರುವ ಪ್ರಮುಖಕರ ಹೆಸರುಗಳನ್ನು ಬಹಿರಂಗ ಪಡಿಸಿ ಅವರನ್ನು ಕೂಡಲೇ ಬಂಧಿಸುವಂತೆಯೂ ಇಲ್ಲವಾದಲ್ಲಿ ತಾವೂ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಅದರಂತೆ ನ.14ರಂದು ಆತ್ಮಹತ್ಯೆಗೆ ಯತ್ನಿಸಿದ್ದ ಘೋಷ್ ಜೈಲಿನಲ್ಲೇ ಸುಮಾರು 58 ನಿದ್ರೆ ಮಾತ್ರೆಗಳನ್ನು ಸೇವಿಸಿದ್ದರು. ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com