ಪಾಕಿಸ್ತಾನದಲ್ಲಿ ಮತ್ತೆ ನಾಲ್ವರು ಉಗ್ರರಿಗೆ ಗಲ್ಲು ಜಾರಿ

ತಾನೇ ಸಾಕಿ ಬೆಳೆಸಿದ ಉಗ್ರರು ಈಗ ತನ್ನ ವಿರುದ್ಧವೇ ತಿರುಗಿ ಬೀಳುತ್ತಿದ್ದಂತೆ ಪಾಕಿಸ್ತಾನ ಎಚ್ಚೆತ್ತುಕೊಂಡಿದೆ.
ಪೇಶಾವರ ದಾಳಿಯನ್ನು ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿರುವುದು (ಸಂಗ್ರಹ ಚಿತ್ರ)
ಪೇಶಾವರ ದಾಳಿಯನ್ನು ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿರುವುದು (ಸಂಗ್ರಹ ಚಿತ್ರ)

ನವದೆಹಲಿ: ತಾನೇ ಸಾಕಿ ಬೆಳೆಸಿದ ಉಗ್ರರು ಈಗ ತನ್ನ ವಿರುದ್ಧವೇ ತಿರುಗಿ ಬೀಳುತ್ತಿದ್ದಂತೆ ಪಾಕಿಸ್ತಾನ ಎಚ್ಚೆತ್ತುಕೊಂಡಿದೆ.

ಪೇಶಾವರ ಸೈನಿಕ ಶಾಲೆ ಮೇಲೆ ತಾಲಿಬಾನ್ ಉಗ್ರರ ದಾಳಿ ಬಳಿಕ ದಮನಕ್ಕೆ ತೋರಿಕೆಯಾಗಿಯಾದರೂ ಕ್ರಮ ಕೈಗೊಳ್ಳಲು ಆರಂಭಿಸಿದೆ. ಫೈಸಲಾಬಾದ್ ಜೈಲಿನಲ್ಲಿ ಭಾನುವಾರ ಮತ್ತೆ ನಾಲ್ಕು ಉಗ್ರರನ್ನು ಗಲ್ಲಿಗೇರಿಸಲಾಗಿದೆ. ಏತನ್ಮಧ್ಯೆ, ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ವಿಶ್ವಸಂಸ್ಥೆ ನಿಜವಾಗಿಯೂ ಗಂಭೀರವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ ಅದರ ನಡೆ. ಲಷ್ಕರ್-ಎ-ತೋಯ್ಬಾ ಸಂಸ್ಥಾಪಕ ಹಫೀಜ್ ಸಯೀದ್‌ನನ್ನು ಸಾಹಿಬ್ ಎಂದು ಕರೆದಿರುವುದೇ ಇದಕ್ಕೆ ಸಾಕ್ಷಿ.

ನಾಲ್ವರಿಗೆ ಗಲ್ಲು..?
ಪಾಕ್‌ನ ಮಾಜಿ ಅಧ್ಯಕ್ಷ ಫರ್ವೇಜ್ ಮುಷರ್ರಫ್ ಹತ್ಯೆಗೆ ಯತ್ನಿಸಿದ್ದ ಜುಬೇರ್ ಅಹಮದ್, ರಶೀದ್ ಖುರೇಶಿ, ಗುಲಾಂ ಸರ್ವಾರ್ ಭಟ್ಟಿ ಮತ್ತು ರಷ್ಯಾದ ಪ್ರಜೆ ಅಖಾಖ್ ಅಹ್ಮದ್ ಭಾನುವಾರ ಗಲ್ಲು ಶಿಕ್ಷೆಗೆ ಗುರಿಯಾದ ಉಗ್ರರು. ಶುಕ್ರವಾರವಷ್ಟೇ ಉಬ್ಬರು ಉಗ್ರರನ್ನು ಗಲ್ಲಿಗೇರಿಸಲಾಗಿತ್ತು.

ಉಗ್ರರಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆ ಜಾರಿ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಪೇಶಾವರ ದಾಳಿ ಬಳಿಕ ಪ್ರಧಾನಿ ನವಾಜ್ ಷರೀಪ್ ಸರ್ಕಾರ ರದ್ದು ಮಾಡಿತ್ತು. ಅದರಂತೆ ಆರಂಭದಲ್ಲಿ ಮರಣದಂಡನೆಗೆ ಗುರಿಯಾಗಿರುವ 17 ಉಗ್ರರನ್ನು ಗಲ್ಲಿಗೇರಿಸಲು ಸರ್ಕಾರ ನಿರ್ಧರಿಸಿತ್ತು. ಈಗ ಒಟ್ಟು ಆರು ಉಗ್ರರನ್ನು ಗಲ್ಲಿಗೇರಿಸಲಾಗಿದ್ದು, ಲಾಹೋರ್‌ನ ಕೋಟ್ ಲಜಪತ್ ಕೇಂದ್ರ ಕಾರಾಗೃಹದಲ್ಲಿ ಮತ್ತೆ ನಾಲ್ಕು ಮಂದಿಯನ್ನು ಗಲ್ಲಿಗೇರಿಸಲು ಸಿದ್ಧತೆ ನಡೆಯುತ್ತಿದೆ. ಇನ್ನು ಕರಾಚಿ ಜೈಲಿನಲ್ಲಿರುವ ನಿಷೇಧಿತ ಲಷ್ಕರ್-ಎ-ಝಂಗ್ವಿ ಸಂಘಟನೆಯ ಇನ್ನಿಬ್ಬರು ಉಗ್ರರಾದ ಖಾಸಿಂ ಮತ್ತು ಮೊಹಮದ್ ಅಜಂನನ್ನು ಮಂಗಳವಾರ ಗಲ್ಲಿಗೇರಿಸುವ ಸಾಧ್ಯತೆ ಇದೆ.

'ಸಾಹಿಬ್‌' ಆದ 'ಸಯೀದ್‌'
ಡಿಸೆಂಬರ್ 17ರಂದು ಗ್ಯಾರಿ ಕ್ವಿನ್‌ಲನ್ ನೇತೃತ್ವದಲ್ಲಿ ವಿಶ್ವಸಂಸ್ಥೆಯ ಭಧ್ರತಾ ಮಂಡಳಿ ಸಮಿತಿ ಸಭೆ ಇತ್ತು. ಈ ವೇಳೆ ಕ್ವಿನ್‌ಲನ್ ಅವರು ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್‌ನನ್ನು 'ಸಾಹಿಬ್‌' ಎಂದು ಸಂಬೋಧಿಸಿದ್ದಾರೆ. ಈ ಪತ್ರಕ್ಕೆ ಸ್ವತಃ ಕ್ವಿನ್‌ಲನ್ ಅವರೂ ಸಹಿ ಹಾಕಿದ್ದಾರೆ.

166 ಮಂದಿ ಹತ್ಯೆಗೆ ಕಾರಣವಾದ ಅಂತಾರಾಷ್ಟ್ರೀಯ ಉಗ್ರನೊಬ್ಬನನ್ನು 'ಸಾಹಿಬ್‌' ಎಂದು ಕರೆದಿರುವುದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ವಿಶ್ವಸಂಸ್ಥೆಯಿಂದ ಸ್ಪಷ್ಟನೆಯನ್ನೂ ಕೋರಿದೆ. ವಿಶ್ವಸಂಸ್ಥೆಯು ಉಗ್ರ ಹಫೀಜ್ ಸಯೀದ್‌ನ ಜಮಾತ್-ಉದ್-ದವಾ ಅನ್ನು ಉಗ್ರ ಸಂಘಟನೆ ಎಂದು 2008ರಲ್ಲಿ ಘೋಷಿಸಿತ್ತು. ಸಯೀದ್ ವಿರುದ್ಧವೂ ನಿರ್ಬಂಧ ಹೇರಲಾಗಿತ್ತು. ಅಮೆರಿಕ ಕೂಡ ಈತನನ್ನು ಹತ್ಯೆ ಮಾಡಿದವರಿಗೆ ಕೋಟ್ಯಂತರ ರುಪಾಯಿ ಘೋಷಿಸಿದೆ. ಇಷ್ಟಾದರೂ ಈತ ಪಾಕಿಸ್ತಾನದಲ್ಲಿ ಮುಕ್ತವಾಗಿ ಓಡಾಡುತ್ತಿದ್ದಾನೆ. ಟಿವಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ.

ಅಲ್‌ಖೈದಾಗೆ ನೋವಾಗಿದೆಯಂತೆ
ಪೇಶಾವರ ಸೈನಿಕ ಶಾಲೆ ಮೇಲಿನ ದಾಳಿಯಿಂದಾಗಿ ಅಲ್‌ಖೈದಾಗೆ ನೋವಾಗಿದೆಯಂತೆ. ಅಮಾಯಕ ಮಕ್ಕಳ ಮೇಲಿನ ದಾಳಿಗೆ ತಮ್ಮ ಬೆಂಬಲಿಗರಿಂದಲೇ ವಿರೋಧ ವ್ಯಕ್ತವಾಗುತ್ತಿದ್ದಂತೆ ಅಲ್‌ಖೈದಾ ತನ್ನ ನಿಲುವು ಬದಲಿಸಿದೆ. ಜತೆಗೆ ಮಕ್ಕಳ ಬದಲು ಭಧ್ರತಾ ಪಡೆಗಳ ಮೇಲೆಯೇ ದಾಳಿ ನಡೆಸುವಂತೆ ತೆಹ್ರೀಕ್-ಎ-ತಾಲಿಬಾನಿಗೆ ಅಲ್‌ಖೈದಾ ಸಲಹೆ ನೀಡಿದೆ. 'ಪೇಶಾವರ ಘಟನೆಯಿಂದ ನಮ್ಮ ಹೃದಯ ತುಂಬಿ ಬಂದಿದೆ' ಎಂದು ಅಲ್‌ಖೈದಾದ ದಕ್ಷಿಣ ಏಷ್ಯಾ ವಿಭಾಗದ ಒಸಾಮಾ ಮೆಹಮೂದ್ ಹೇಳಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com