
ನವದೆಹಲಿ: ಬಿಜೆಪಿ ಸರ್ಕಾರ ವಿದೇಶದಿಂದ ತರಲಿರುವ ಕಪ್ಪುಹಣವನ್ನು ಹೊರಲು ಒಂಟೆಗಳನ್ನು ಸಿದ್ಧಪಡಿಸಿಕೊಳ್ಳಲೇ..? ಎಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ವ್ಯಂಗ್ಯವಾಡಿದ್ದಾರೆ.
ನವದೆಹಲಿಯಲ್ಲಿ ಜನತಾ ಪರಿವಾರ ಹಮ್ಮಿಕೊಂಡಿರುವ ಮಹಾಧರಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಲಾಲು ಪ್ರಸಾದ್ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಮುಖವಾಗಿ ಕಪ್ಪುಹಣದ ಕುರಿತಂತೆ ಬಿಜೆಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಇತ್ತೀಚೆಗಿನ ದಿನಗಳಲ್ಲಿ ಅವರು ಟ್ವೀಟ್ ಪದವನ್ನೇ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಹೀಗಾಗಿಯೇ ಕಪ್ಪುಹಣವನ್ನು ಭಾರತಕ್ಕೆ ತರುವ ವಿಚಾರ ಏನಾಯಿತು ಎಂದು ಬಾಬಾ ರಾಮ್ದೇವ್ಗೆ ಟ್ವೀಟ್ ಮಾಡಿ ಕೇಳು ಎಂದು ಹೇಳಿದ್ದೇನೆ.
ಕಪ್ಪು ಹಣ ಭಾರತಕ್ಕೆ ಬರುತ್ತದೆ ಎಂದು ನಾವು ಹಲವಾರು ತಿಂಗಳುಗಳಿಂದ ಕಾದಿದ್ದು, ಮತ್ತಷ್ಟು ತಿಂಗಳುಗಳ ಕಾಲ ಕಾಯಲು ನಾವು ಸಿದ್ಧ. ಕಪ್ಪುಹಣವನ್ನು ವಿಮಾನದಲ್ಲಿ ಹೊತ್ತು ಬರಲು ಕೇಂದ್ರಸರ್ಕಾರಕ್ಕೆ ಕಷ್ಟವಾದರೆ ನಾವು ಒಂಟೆಗಳನ್ನು ಕೂಡ ಸಿದ್ಧ ಮಾಡುತ್ತೇವೆ ಎಂದು ಲಾಲು ಪ್ರಸಾದ್ ಯಾದವ್ ವ್ಯಂಗ್ಯವಾಡಿದ್ದಾರೆ. ಅಲ್ಲದೆ ಭಾರತಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂಬ ಬಿಜೆಪಿ ಘೋಷವಾಕ್ಯವನ್ನು ಟೀಕಿಸುತ್ತಾ ಬಿಜೆಪಿ ಸರ್ಕಾರ ಭಾರತವನ್ನು ಒಡೆಯುತ್ತಿದೆ ಎಂದು ಆರೋಪಿಸಿದರು.
ಒಟ್ಟಾರೆ ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಮತ್ತೆ ಒಂದಾಗಿರುವ ಜನತಾ ಪರಿವಾರದ ನಾಯಕರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement