ಭಾರತ ರತ್ನಕ್ಕೆ ತಮ್ಮ ಹೆಸರು ಶಿಫಾರಸು ಮಾಡಲು ನಿರಾಕರಿಸಿದ್ದ ಅಟಲ್!

ಭಾರತರತ್ನಕ್ಕೆ ನಿಮ್ಮ ಹೆಸರನ್ನು ನೀವೇ ನಾಮ ನಿರ್ದೇಶನ ಮಾಡಿಕೊಳ್ಳಿ ಎಂದು ಬಿಜೆಪಿಯ ಹಲವು ನಾಯಕರು...
ಅಟಲ್ ಬಿಹಾರಿ ವಾಜಪೇಯಿ
ಅಟಲ್ ಬಿಹಾರಿ ವಾಜಪೇಯಿ

ನವದೆಹಲಿ: ಭಾರತರತ್ನಕ್ಕೆ ನಿಮ್ಮ ಹೆಸರನ್ನು ನೀವೇ ನಾಮ ನಿರ್ದೇಶನ ಮಾಡಿಕೊಳ್ಳಿ ಎಂದು ಬಿಜೆಪಿಯ ಹಲವು ನಾಯಕರು ಒತ್ತಾಯಿಸಿದ್ದರೂ ಅದಕ್ಕೆ ಅಟಲ್ ಬಿಹಾರಿ ವಾಜಪೇಯಿ ಸುತಾರಾಂ ಒಪ್ಪಿರಲಿಲ್ಲ.  ಆ ರೀತಿ ಮಾಡುವುದು ನನಗೇಕೋ ಸರಿ ಕಾಣುತ್ತಿಲ್ಲ ಎನ್ನುವ ಮೂಲಕ ಎಲ್ಲರ ಆಗ್ರಹವನ್ನು ನಯವಾಗಿ ತಿರಸ್ಕರಿಸಿದ್ದರು.

ಹೀಗೆಂದು ಹೇಳಿದ್ದು ವಾಜಪೇಯಿ ಆಡಳಿತಾವಧಿಯಲ್ಲಿ ಸರ್ಕಾರದ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ಅಶೋಕ್ ಟಂಡನ್. ಅಟಲ್ ಜೀಗೆ ಭಾರತ ರತ್ನ ಪ್ರಶಸ್ತಿ ಘೋಷಣೆಯಾದ ಮಾರನೇ ದಿನ, ಅಂದರೆ ಅವರ 90ನೇ ಹುಟ್ಟುಹಬ್ಬದ ದಿನವಾದ ಗುರುವಾರ ಟಂಡನ್ ಅವರು ಈ ವಿಚಾರ ಬಹಿರಂಗಪಡಿಸಿದ್ದಾರೆ.

199ರಲ್ಲಿ ವಾಜಪೇಯಿ ಅವರು ಮೂರನೇ ಬಾರಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬಿಜೆಪಿ ಆ ಆಗ್ರಹವನ್ನು ಅವರ ಮುಂದಿಟ್ಟಿತ್ತು. ಆ ಸಂದರ್ಭದಲ್ಲಿ ಭಾರತದ ಕಾರ್ಗಿಲ್ ವಿಜಯದ ಖುಷಿ, ಯಶಸ್ವಿ ಪರಮಾಣು ಪರೀಕ್ಷೆ, ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲವು ಮತ್ತಿತರ ಬೆಳವಣಿಗೆಗಳು ವಾಜಪೇಯಿ ಅವರ ಜನಪ್ರಿಯತೆಯನ್ನು ಉತ್ತುಂಗಕ್ಕೇರಿಸಿತ್ತು. ಹೀಗಾಗಿ ಅವರು ಭಾರತ ರತ್ನಕ್ಕೆ ಅರ್ಹರು ಎಂದು ಬಿಜೆಪಿ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಅಟಲ್ ಜೀ ಅವರನ್ನು ಭೇಟಿಯಾದ ಪಕ್ಷದ ನಾಯಕರು, ಭಾರತರತ್ನಕ್ಕೆ ನಿಮ್ಮ ಹೆಸರನ್ನು ನೀವೇ ಶಿಫಾರಸು ಮಾಡಿ' ಎಂದು ಕೋರಿಕೊಂಡರು.  ಜತೆಗೆ, ಇಂದಿರಾಗಾಂಧಿ ಹಾಗೂ ಜವಾಹರ್ ಲಾಲ್ ನೆಹರೂ ಅವರೂ  ಹೀಗೇ ಮಾಡಿದ್ದರು ಎಂಬುದನ್ನೂ ನೆನಪಿಸಿದರು. ಆದರೆ ಇದ್ಯಾವುದಕ್ಕೂ ಒಪ್ಪದ ವಾಜಪೇಯಿ, ಅಂಥದಕ್ಕೆ ಇದು ಸರಿಯಾದ ಸಮಯವಲ್ಲ ಎನ್ನುವ ಮೂಲಕ ಆಗ್ರಹವನ್ನು ತಿರಸ್ಕರಿಸಿದ್ದರು ಎಂದಿದ್ದಾರೆ ಟಂಡನ್.

ಆದರೂ ಪಟ್ಟು ಬಿಡದ ನಾಯಕರು, ಪ್ರಧಾನಿ ವಾಜಪೇಯಿ ಅವರು ವಿದೇಶ ಪ್ರವಾಸದಲ್ಲಿದ್ದಾಗ ರಹಸ್ಯವಾಗಿ ಇಂತಹ ಶಿಫಾರಸು ಮಾಡಲು ನಿರ್ಧರಿಸಿದ್ದರು. ಆದರೆ ಈ ವಿಚಾರ ಗೊತ್ತಾದೊಡನೆ ಸ್ವತಃ ಅಟಲ್ ಅವರೇ ಬಿಜೆಪಿ ನಾಯಕರನ್ನು ತಡೆದಿದ್ದರು ಎಂದೂ ಟಂಡನ್ ಹೇಳಿದ್ದಾರೆ.

ಪೆರಿಯಾರ್‌ಗೂ ಭಾರತರತ್ನ ಸಿಗಲಿ: ಕರುಣಾ
ದ್ರಾವಿಡ ಚಳವಳಿಯ ನಾಯಕ ಇ.ವಿ  ರಾಮಸ್ವಾಮಿ (ಪೆರಿಯಾರ್) ಮತ್ತು ತಮಿಳುನಾಡಿನ ಮಾಜಿ ಸಿಎಂ ಅಣ್ಣಾದೊರೈ ಅವರಿಗೂ ಭಾರತರತ್ನ ನೀಡಿ ಎಂದು ಡಿಎಂಕೆ ನಾಯಕ ಎಂ. ಕರುಣಾನಿಧಿ ಒತ್ತಾಯಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಜೀ ಅವರಿಗೆ ಭಾರತ ರತ್ನ ನೀಡಿರುವುದನ್ನು  ಗುರುವಾರ ಸ್ವಾಗತಿಸಿದ ಕರುಣಾ, ಅಣ್ಣಾದೊರೈ ಹಾಗೂ ಪೆರಿಯಾರ್‌ರಿಗೂ ಈ ಗೌರವ ನೀಡಿ ಎಂದು ನಾನು ಈಗಾಗಲೇ ರಾಷ್ಟ್ರಪತಿ ಪ್ರಣಬ್ ಹಾಗೂ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇನೆ' ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com