
ಶ್ರೀನಗರ: ಯಾವುದೇ ಕಾರಣಕ್ಕೂ ತಮ್ಮ ಪಕ್ಷದ ತತ್ವಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪೀಪಲ್ಸ್ ಡೆಮಾಕ್ರಟಿಕ್ಸ್ ಪಕ್ಷ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆ ಮಾಡುವ ಹಿನ್ನಲೆಯಲ್ಲಿ ಶ್ರೀನಗರದಲ್ಲಿ ಇಂದು ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಿಡಿಪಿ ನಾಯಕರು, ತಾವು ಯಾವುದೇ ಕಾರಣಕ್ಕೂ ತಮ್ಮ ಪಕ್ಷದ ತತ್ವಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. 'ಕಣಿವೆ ರಾಜ್ಯದಲ್ಲಿ ನಾವು ಅಧಿಕಾರ ರಚನೆ ಮಾಡಲೇಬೇಕು ಎಂದೇನೂ ಪಟ್ಟು ಹಿಡಿದಿಲ್ಲ. ಎಲ್ಲ ರೀತಿಯ ಅವಕಾಶಗಳು ತೆರೆದಿದ್ದು, ಯಾವುದೇ ಪಕ್ಷ ನಮಗೆ ಬೆಂಬಲ ನೀಡಿದರೆ ಅದನ್ನು ಸ್ವೀಕರಿಸುತ್ತೇವೆ' ಎಂದು ಪಿಡಿಪಿ ಪಕ್ಷದ ವಕ್ತಾರ ನಯೀಮ್ ಅಖ್ತರ್ ಹೇಳಿದ್ದಾರೆ.
ನಿನ್ನೆಯಷ್ಟೇ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎಂಎನ್ ವೊಹ್ರಾ ಅವರು, ಸರ್ಕಾರ ರಚನೆ ಕುರಿತಂತೆ ಚರ್ಚಿಸಲು ಬಿಜೆಪಿ ಮತ್ತು ಪಿಡಿಪಿ ಪಕ್ಷಗಳಿಗೆ ಪತ್ರವೊಂದನ್ನು ಬರೆದು ಆಹ್ವಾನ ನೀಡಿದ್ದರು. ಇಂದು ಉಭಯ ಪಕ್ಷಗಳ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
87 ಸಂಖ್ಯಾ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು 44 ಸ್ಥಾನಗಳ ಅಗತ್ಯತೆ ಇದ್ದು, ಪಿಡಿಪಿ 28 ಮತ್ತು ಬಿಜೆಪಿ 25 ಸ್ಥಾನಗಳನ್ನು ಗಳಿಸಿವೆ. ಸ್ಪಷ್ಟಬಹುಮತಕ್ಕಾಗಿ ಈ ಎರಡೂ ಪಕ್ಷಗಳು ಪ್ರಯತ್ನಿಸುತ್ತಿದ್ದು, ಸರ್ಕಾರ ರಚನೆ ಕುರಿತಂತೆ ಈಗಾಗಲೇ ಉಭಯ ಪಕ್ಷಗಳ ಮುಖಂಡರು ಮಾತುಕತೆ ಆರಂಭಿಸಿದ್ದಾರೆ. ಆದರೆ ಈ ವರೆಗೂ ಯಾವುದೇ ಒಮ್ಮತದ ನಿರ್ಣಯ ಹೊರಬಿದ್ದಿಲ್ಲ. ಈ ನಡುವೆ ಬಿಜೆಪಿ ಮತ್ತು ಪಿಡಿಪಿ ಪಕ್ಷಗಳೆರಡೂ ತಮಗೆ ಪಕ್ಷೇತರರ ಬೆಂಬಲವಿದೆ ಎಂದು ಘೋಷಣೆ ಮಾಡಿಕೊಳ್ಳುತ್ತಿದ್ದರೂ, ಅಧಿಕೃತವಾಗಿ ಯಾವೊಬ್ಬ ಪಕ್ಷೇತರ ಶಾಸಕ ಕೂಡ ಈ ಬಗ್ಗೆ ಹೇಳಿಕೆ ನೀಡಿಲ್ಲ.
ಆದರೆ ಪಿಡಿಪಿಗೆ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಬಾಹ್ಯ ಬೆಂಬಲ ನೀಡಲು ಸಿದ್ಧವಿದ್ದರೂ, ಲಿಖಿತ ರೂಪದಲ್ಲಿ ಬೆಂಬಲ ನೀಡಲು ಈ ಎರಡೂ ಪಕ್ಷಗಳು ಸಿದ್ಧವಿಲ್ಲ. ಹೀಗಾಗಿ ಪಿಡಿಪಿ ಸರ್ಕಾರ ರಚನೆ ಪ್ರಕ್ರಿಯೆ ಕುರಿತು ಹಿಂದೇಟು ಹಾಕುತ್ತಿದೆ. ಇನ್ನು ಬಿಜೆಪಿ ಕೂಡ ಸರ್ಕಾರ ರಚನೆ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದು, ಪಿಡಿಪಿ ನಾಯಕರೊಂದಿಗೆ ಚರ್ಚಿಸುತ್ತಿದೆ. ಇದೇ ಕಾರಣಕ್ಕಾಗಿ ಕಣಿವೆ ರಾಜ್ಯದಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಮತ್ತಷ್ಟು ದಿನ ವಿಳಂಬವಾಗುವ ಸಾಧ್ಯತೆ ಇದೆ.
Advertisement