
ಇಸ್ಲಾಮಾಬಾದ್: ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರೆಸಿರುವ ಪಾಕಿಸ್ತಾನ ಸೇನಾಪಡೆ ಶನಿವಾರ ಮತ್ತೆ 55 ಉಗ್ರರನ್ನು ಹೊಡೆದುರುಳಿಸಿದೆ.
ವಾಯುವ್ಯ ಪಾಕಿಸ್ತಾನದಲ್ಲಿ ಪ್ರಾಬಲ್ಯ ಹೊಂದಿರುವ ಉಗ್ರರನ್ನು ಗುರಿಯಾಗಿಸಿಕೊಂಡು ಇಂದು ಪಾಕಿಸ್ತಾನ ಸೇನಾಪಡೆ ನಡೆಸಿದ ವಾಯು ದಾಳಿ ಮತ್ತು ಸೇನಾ ಕಾರ್ಯಾಚರಣೆಯಲ್ಲಿ ಕನಿಷ್ಟ 55 ಮಂದಿ ಉಗ್ರರು ಹತರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ವಾಯುವ್ಯ ಪಾಕಿಸ್ತಾನದ ಆಫ್ಘನ್ ಮತ್ತು ಪಾಕ್ ಗಡಿಯಲ್ಲಿರುವ ಒರಕ್ಝೈ ಮತ್ತು ಖೈಬರ್ ಪ್ರಾಂತ್ಯದಲ್ಲಿ ಅಡಗಿ ಕುಳಿತಿದ್ದ ಉಗ್ರರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನಾಪಡೆಗಳು ಮತ್ತು ವಾಯುಪಡೆ ದಾಳಿ ನಡೆಸಿದೆ.
ಸೇನಾಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಟ 16 ಮಂದಿ ಉಗ್ರರು ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಉಗ್ರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ವಾಯುಪಡೆ ನಡೆಸಿದ ದಾಳಿಯಲ್ಲಿ ಇಬ್ಬರು ತಾಲಿಬಾನ್ ಕಮಾಂಡರ್‌ಗಳು ಸೇರಿದಂತೆ ಒಟ್ಟು 39 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ. ಈ ವೇಳೆ ಉಗ್ರ ದೊಡ್ಡ ಶಸ್ತ್ರಾಸ್ತ್ರ ಉಗ್ರಾಣವನ್ನು ಧ್ವಂಸಗೊಳಿಸಲಾಗಿದೆ ಎಂದು ಪಾಕಿಸ್ತಾನ ಸೇನಾಪಡೆಯ ವಕ್ತಾರ ಮೇಜರ್ ಜನರಲ್ ಆಸಿಮ್ ಬಜ್ವಾ ಅವರು ಹೇಳಿದರು.
ಇದೇ ವೇಳೆ ಪಾಕಿಸ್ತಾನ ಸೇನೆ ಕೈಗೊಂಡಿರುವ ಉಗ್ರ ನಿಗ್ರಹ ಕಾರ್ಯಾಚರಣೆಯ ಪ್ರದೇಶದಲ್ಲಿ ಮಾಧ್ಯಮಗಳ ಪ್ರವೇಶವನ್ನು ನಿರಾಕರಿಸಲಾಗಿದ್ದು, ಪಾಕಿಸ್ತಾನ ಸೇನೆಯ ನಡೆಯ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಪಾಕಿಸ್ತಾನ ಮಾನವ ಹಕ್ಕು ಸಂಘಟನೆಗಳ ಶಂಕೆ ವ್ಯಕ್ತಪಡಿಸಿವೆ.
ಒಟ್ಟಾರೆ ಪೇಶಾವರ ಪೈಶಾಚಿಕ ಕೃತ್ಯದ ಬಳಿಕ ವಿಶ್ವಸಮುದಾಯ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿದೆ. ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ ಎಂದು ಕಾದು ನೋಡಬೇಕಿದೆ.
Advertisement