ಕರಾಚಿಯಲ್ಲೇ ಇದ್ದಾನೆ ಭೂಗತ ಪಾತಕಿ..!

ಭೂಗತ ಪಾತಕಿ ಮತ್ತು ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇದ್ದಾನೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ (ಸಂಗ್ರಹ ಚಿತ್ರ)
ಭೂಗತ ಪಾತಕಿ ದಾವೂದ್ ಇಬ್ರಾಹಿಂ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಭೂಗತ ಪಾತಕಿ ಮತ್ತು ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇದ್ದಾನೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ.

ಖಾಸಗಿ ಭದ್ರತಾ ಸಂಸ್ಥೆಯ ಮೂಲಗಳ ಪ್ರಕಾರ ಈಗಲೂ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇದ್ದಾನಂತೆ. ಈ ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ಪ್ರಬಲ ಸಾಕ್ಷ್ಯಾಧಾರ ದೊರೆತಿದ್ದು, ಪಾಕಿಸ್ತಾನದ ಖ್ಯಾತ ಉಧ್ಯಮಿಯ ಪುತ್ರನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ದಾಖಲೆಗಳು ಗುಪ್ತಚರ ಸಂಸ್ಥೆಗಳಿಗೆ ಲಭಿಸಿದೆ. ಈ ದೂರವಾಣಿಯ ಜಾಡನ್ನು ಹಿಡಿದು ತನಿಖೆ ನಡೆಸಿದಾಗ ಇದು ಕರಾಚಿಯ ಒಂದು ಪ್ರದೇಶ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಖ್ಯಾತ ಉದ್ಯಮಿಯ ಪುತ್ರ ಮತ್ತು ದುಬೈನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ ಯಾಸಿರ್ ಎಂಬಾತನೊಂದಿಗೆ ದಾವೂದ್ ದೂರವಾಣಿಯಲ್ಲಿ ಮಾತನಾಡಿದ್ದು, ಸಂಭಾಷಣೆ ವೇಳೆ ದಾವೂದ್ 'ನಾನು ದುಬೈನಲ್ಲಿ 1, 100 ಕೋಟಿ ರುಪಾಯಿ ಆಸ್ತಿ ಹೊಂದಿದ್ದೇನೆ. ಇದಲ್ಲದೆ ಕರಾಚಿಯ ವಿವಿಧೆಡೆ ತಾನು ಕೋಟ್ಯಾಂತರ ರುಪಾಯಿ ಮೌಲ್ಯದ ಆಸ್ತಿ ಹೊಂದಿದ್ದೇನೆ. ಇಷ್ಟು ಪ್ರಭಾವಿಯಾದ ತನಗೆ ತಡೆ ಒಡ್ಡುವವರಾರು..? ಇಲ್ಲಿ ನಾನೇ ಪ್ರಧಾನಿ, ನಾನೇ ನ್ಯಾಯಾಧೀಶ, ನಾನೇ ನ್ಯಾಯಾಲಯ' ಎಂದು ಬಡಾಯಿ ಕೊಚ್ಚಿಕೊಂಡಿದ್ದಾನಂತೆ. ಈ ದೂರವಾಣಿಯ ಜಾಡನ್ನು ಪರಿಶೀಲಿಸಿದಾಗ ಇದು ಕರಾಚಿಯ 'ಕ್ಲಿಪ್ಟನ್‌' ಪ್ರದೇಶದಿಂದ ಮಾಡಿದ ಕರೆಯಾಗಿದೆ ಎಂದು ತಿಳಿದುಬಂದಿದೆ.

ಮುಂಬೈ ಸರಣಿ ಸ್ಫೋಟದ ಪ್ರಮುಖ ರೂವಾರಿಯಾಗಿರುವ ದಾವೂದ್ 1993ರಲ್ಲಿ ಭಾರತದಿಂದ ಕಾಲ್ಕಿತ್ತಿದ್ದ. ಈತನಿಗೆ ಪಾಕಿಸ್ತಾನ ಸರ್ಕಾರ ರಕ್ಷಣೆ ನೀಡಿ ಪೋಷಿಸುತ್ತಿದೆ. ತನ್ನ ಡಿ ಕಂಪನಿ ಮೂಲಕ ವಿಧ್ವಂಸಕ ಕೃತ್ಯಗಳನ್ನು ಮುಂದುವರೆಸುತ್ತಿರುವ ಈತನನ್ನು ಮಟ್ಟಹಾಕಲು ಭಾರತ ಮತ್ತು ಅಮೆರಿಕ ದೇಶಗಳು ಜಂಟಿ ಕಾರ್ಯಾಚರಣೆಗೆ ಮುಂದಾಗಿವೆ. ಇದಕ್ಕಾಗಿ ಈಗಾಗಲೇ ಕೆಲ ರಕ್ಷಣಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಅವರು ಕಾರ್ಯಪ್ರವೃತ್ತರಾಗಿದ್ದಾರೆ.

ಈ ಹಿಂದೆಯೂ ಕೂಡ ಈತನನ್ನು ಕೊಂದು ಹಾಕಲು ಭಾರತದ ರಕ್ಷಣಾ ಪಡೆಯ ಕೆಲ ಸಿಬ್ಬಂದಿ ಕರಾಚಿಯಲ್ಲಿ ಕಾರ್ಯತಂತ್ರ ರೂಪಿಸಿದ್ದರು. ದಾವೂದ್ ನಿತ್ಯ ಓಡಾಡುವ ದಾರಿಯಲ್ಲಿ ಕಾದು ಕುಳಿತಿದ್ದ ಸಿಬ್ಬಂದಿಗಳು ಇನ್ನೇನು ಆತನನ್ನು ಹೊಡೆದುರುಳಿಸಬೇಕು ಎನ್ನುವ ಸಂದರ್ಭದಲ್ಲಿ ಭಾರತದಿಂದ ಬಂದ ಕರೆಯೊಂದು ಕಾರ್ಯಾಚರಣೆ ಕೊನೆಕ್ಷಣದಲ್ಲಿ ನಿಲ್ಲುವಂತೆ ಮಾಡಿತ್ತು. ಬಳಿಕ ಈ ವಿಚಾರ ದಾವೂದ್‌ಗೆ ತಿಳಿಯಿತಂತೆ.

ಈ ಹಿಂದೆ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕದ ಸೀಲ್ ಪಡೆಗಳು ಕಾರ್ಯಾಚರಣೆ ನಡೆಸಿ ಕೊಂದ ಮಾದರಿಯಲ್ಲೇ ತನ್ನನ್ನು ಕೂಡ ಭಾರತದ ವಿಶೇಷ ಭದ್ರತಾ ಪಡೆಗಳು ಕೂಡ ಕೊಂದು ಹಾಕುತ್ತವೆ ಎಂದು ಹೆದರಿದ್ದ ಭೂಗತ ಪಾತಕಿ, ಐಎಸ್‌ಐ ನೆರವಿನಿಂದಾಗಿ ಪಾಕಿಸ್ತಾನ ಬಿಟ್ಟು ಪರಾರಿಯಾಗಿದ್ದ. ತಾಲಿಬಾನ್ ಪ್ರಾಬಲ್ಯವಿರುವ ವಜೀರಿಸ್ತಾನದಲ್ಲಿ ದಾವೂದ್ ರಕ್ಷಣೆ ಪಡೆದಿದ್ದಾನೆ ಎಂದು ಹೇಳಲಾಗುತ್ತಿತ್ತು.

ಆದರೆ ಗುಪ್ತಚರ ಇಲಾಖೆಯ ಪ್ರಸ್ತುತ ದಾಖಲೆಗಳ ಪ್ರಕಾರ ಈಗಲೂ ದಾವೂದ್ ಕರಾಚಿಯಲ್ಲೇ ಇದ್ದಾನೆ ಎಂದು ತಿಳಿದು ಬಂದಿದೆ. ಅಲ್ಲದೆ ಭಾರತೀಯ ಭದ್ರತಾ ಪಡೆಗಳ ದಿಕ್ಕು ತಪ್ಪಿಸಲು ಐಎಸ್‌ಐ ಈ ನಾಟಕವಾಡಿರಬಹುದು ಎಂದೂ ಗುಪ್ತಚರ ಇಲಾಖೆ ಮೂಲಗಳು ಶಂಕೆ ವ್ಯಕ್ತಪಡಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com