ಸಹೋದರನ ಕತ್ತನ್ನು ಸೀಳಿದರು!

'ನಾನು ನೋಡ ನೋಡುತ್ತಿದ್ದಂತೆಯೇ ನನ್ನ ಸಹೋದರನ ಕತ್ತನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಗುವಾಹಟಿ/ನವದೆಹಲಿ: 'ನಾನು ನೋಡ ನೋಡುತ್ತಿದ್ದಂತೆಯೇ ನನ್ನ ಸಹೋದರನ ಕತ್ತನ್ನು ಸೀಳಲಾಯಿತು. ಅವನು ನಿಸ್ಸಹಾಯಕನಾಗಿ ಕೆಳಕ್ಕೆ ಒರಗುತ್ತಿದಂತೆ ನಾನು ಅಲ್ಲಿಂದ ಓಡಲಾರಂಭಿಸದೆ'.

ಇದು ಬೋಡೋ ಉಗ್ರರ ಅಟ್ಟಹಾಸದಿಂದ ಬೆಂದು ಹೋಗಿರುವ ಅಸ್ಸಾಂನ ಆದಿವಾಸಿಗಳ ಕಣ್ಣೀರ ಕಥೆ. ಇತ್ತೀಚೆಗೆ ನಡೆದ 80 ಮಂದಿ ಆದಿವಾಸಿಗಳ ಹತ್ಯೆ ಅಲ್ಲಿನ ಜನರನ್ನು ಕ್ಷಣ ಕ್ಷಣವೂ ಬೆಚ್ಚಿ ಬೀಳುವಂತೆ ಮಾಡುತ್ತಿದೆ. ಹತ್ಯಾಕಾಂಡದ ಬಳಿಕ ಒಬ್ಬೊಬ್ಬರದ್ದೂ ಒಂದೊಂದು ವ್ಯಥೆ. ಸ್ಮಶಾನ ಮೌನ ಆವರಿಸಿದ ಅಸ್ಸಾಂನಲ್ಲಿ ಕಣ್ಣೀರೇ ಕಥೆ ಹೇಳುತ್ತಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಫುರೇನ್ ಬಾಸಿಮತ್ರಿ ಅವರು ಸಾಕಷ್ಟು ರಕ್ತವನ್ನೂ ನೋಡಿದ್ದಾರೆ, ಅವರ ಎದೆಯೂ ಗಟ್ಟಿಯಾಗಿದೆ. ಆದರೆ ತನ್ನ ಕಣ್ಣೆದುರೇ ಸಹೋದರನ ಹತ್ಯೆ ನಡೆದಾಗ ಅವರ ಧೈರ್ಯವೆಲ್ಲ ಕುಂದಿಹೋಗಿದೆ. 'ಮೊದಲು ಬಾಣವೊಂದು ನುಗ್ಗಿ ಬಂದು ನನ್ನ ಸಹೋದರನ ದೇಹಕ್ಕೆ ನುಗ್ಗಿತು. ನಂತರ ಈಟಿಯೊಂದು ಅವನ ಕತ್ತನ್ನು ಸೀಳಿಬಿಟ್ಟಿತು.

ನಂತರ ನಮ್ಮ ಮನೆಗೆ ಬೆಂಕಿ ಹಚ್ಚಲಾಯಿತು. ನನ್ನ ಸಹೋದರನನ್ನು ಕೊಂದವರು ಬೇರ್ಯಾರು ಅಲ್ಲ, ನಮ್ಮ ನೆರೆಯವರೇ. ಅವರನ್ನು ನಾನು ಪರಿಪರಿಯಾಗಿ ಬೇಡಿಕೊಂಡೆ. ಅವರು ದಯೆ ತೋರಲಿಲ್ಲ. ಸಹೋದರನ ದೇಹ ನೆಲಕ್ಕೆ ಬೀಳುತ್ತಿದ್ದಂತೆ ನಾನು ಓಡತೊಡಗಿದೆ' ಎನ್ನುತ್ತಾ ಕಣ್ಣೀರಿಡುತ್ತಾರೆ ಬಾಸಿಮತ್ರಿ.

1996ರಲ್ಲಿ ನಮ್ಮ ಹತ್ಯಾಕಾಂಡ ನಡೆಯಿತು. ಈಗ ಮತ್ತೆ ನಡೆದಿದೆ. ಹಳೆಯ ಗಾಯಗಳು ಮತ್ತೆ ತೆರೆದುಕೊಂಡಂತೆ ಆಗಿದೆ ಎನ್ನುತ್ತಾನೆ 20 ವರ್ಷದ ಆದಿವಾಸಿ ಯುವಕ. ಒಟ್ಟಾರೆ ಉಗ್ರರ ಕ್ರೌರ್ಯಕ್ಕೆ 3 ಜಿಲ್ಲೆಗಳ ಜನರು ನಡುಗಿಹೋಗಿದ್ದಾರೆ. ದಾಳಿ ಭೀತಿಯಿಂದ ಆದಿವಾಸಿಗಳು ಮಾತ್ರವಲ್ಲದೆ ಬೋಡೋಗಳು ಕೂಡ ಮನೆ ಬಿಟ್ಟು, ನಿರಾಶ್ರಿತರ ಶಿಬಿರಗಳತ್ತ ಹೋಗುತ್ತಿದ್ದಾರೆ. ಊರಿಗೆ ಊರೇ ಖಾಲಿಯಾಗಿಬಿಟ್ಟಿದೆ.

ನಿರಂತರ ಕಾರ್ಯಚರಣೆ ನಡೆಸಿ ಸೇನಾ ಮುಖ್ಯಸ್ಥರ ಸೂಚನೆ

ಭೂಸೇನಾ ಮುಖ್ಯಸ್ಥ ಜ.ದಲ್ಬೀರ್ ಸಿಂಗ್ ಸುಹಾಗ್ ಅವರು ಶನಿವಾರ ಅಸ್ಸಾಂಗೆ ಭೇಟಿ ನೀಡಿ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಜತೆಗೆ, ಬೋಡೋ ಉಗ್ರರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುವಂತೆ ಸೇನಾ ಪಡೆಗಳಿಗೆ ಕರೆ ನೀಡಿದರು. ಸೇನೆಯ ವಿವಿಧ ಕಮಾಂಡರ್‌ಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ ಜ. ಸಿಂಗ್, ನಂತರ ಗಲಭೆ ಪೀಡಿತ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.

ಕಮಾಂಡರ್‌ಗಳು ಎಲ್ಲ ಹಂತದಲ್ಲೂ ತೆಗೆದುಕೊಂಡ ಹೆಜ್ಜೆಗಳ ಬಗ್ಗೆ ತೃಪ್ತಿಯಾಗಿದೆ ಎಂದ ಅವರು, ರಾಜ್ಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಹಾಗೂ ಭದ್ರತಾ ಸಂಸ್ಥೆಗಳ ನಡುವೆ ಒಡಂಬಡಿಕೆ ಇರಬೇಕಾದ್ದು ಮುಖ್ಯ ಎಂದರು. ಇದೇ ವೇಳೆ, ಅಸ್ಸಾಂ ಪ್ರಕರಣದ ತನಿಖೆ ನಡೆಸುವಂತೆ ಎನ್‌ಐಎಗೆ ಕೇಂದ್ರ ಸರ್ಕಾರ ಶನಿವಾರ ಆದೇಶಿಸಿದೆ.

ಅಸ್ಸಾಂನ ನಿರಾಶ್ರಿತರು ನಮಗೆ ಅತಿಥಿಗಳಿಗಿಂತ ಹೆಚ್ಚು. ಅವರೂ ನಮ್ಮವರೇ. ಅವರ ಮಾನಸಿಕ ಸ್ಥಿತಿ ನಮಗೆ ಅರ್ಥವಾಗುತ್ತದೆ. ಅವರು ಪರಿಸ್ಥಿತಿಯ ಕೈಗೊಂಬೆಯಾಗಿದ್ದಾರೆ. ನಾವೆಲ್ಲರೂ ಅವರೊಂದಿಗೆ ಕೈಜೋಡಿಸೋಣ.

ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಸಿಎಂ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com