"ಲಾಡೆನ್ ಮಾದರಿ"ಯಲ್ಲಿ ದಾವೂದ್‌ನನ್ನು ಹೊಡೆದುರುಳಿಸಿ: ಶಿವಸೇನೆ

ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ನನ್ನು ಕೊಂದುಹಾಕಿದಂತೆ ದಾವೂದ್‌ನನ್ನು ಕೂಡ ಹೊಡೆದುರುಳಿಸಿ ಎಂದು ಶಿವಸೇನೆ ಹೇಳಿದೆ.
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ)
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ)

ಮುಂಬೈ: ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ನನ್ನು ಕೊಂದುಹಾಕಿದಂತೆ ದಾವೂದ್‌ನನ್ನು ಕೂಡ ಹೊಡೆದುರುಳಿಸಿ ಎಂದು ಶಿವಸೇನೆ ಹೇಳಿದೆ.

ಪಾಕಿಸ್ತಾನದ ಕರಾಚಿಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇರುವಿಕೆಯ ಕುರಿತು ಬಲವಾದ ಸಾಕ್ಷ್ಯಾಧಾರಗಳು ದೊರೆತ ಹಿನ್ನಲೆಯಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ, 'ಸಾಕಷ್ಚು ಬಾರಿ ದಾವೂದ್ ಇರುವಿಕೆಯ ಕುರಿತು ಪಾಕಿಸ್ತಾನಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ನೀಡಿದರೂ ಅದು ಸ್ಪಂಧಿಸುತ್ತಿಲ್ಲ. ಹೀಗಾಗಿ ದಾವೂದ್ ನನ್ನು ಕೂಡ ಬಿನ್‌ಲಾಡೆನ್ ನಂತೆಯೇ ವಿಶೇಷ ಕಾರ್ಯಾಚರಣೆ ನಡೆಸಿ ಹೊಡೆದುರುಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಬರೆದಿರುವ ಶಿವಸೇನೆ, ಹಫೀಜ್ ಸೈಯದ್, ದಾವೂದ್ ಇಬ್ರಾಹಿಂ ನಂತಹ ಉಗ್ರರು ಪಾಕಿಸ್ತಾನದಲ್ಲಿ ರಾಜಾರೋಷವಾಗಿ ಬದುಕುತಿದ್ದು, ಅವರ ಇರುವಿಕೆಯ ಕುರಿತು ನಮಗಾವ ಸಾಕ್ಷ್ಯಾಧಾರಗಳು ಬೇಕಿಲ್ಲ. ಪಾಕಿಸ್ತಾನ ಆಡಳಿತ ವ್ಯವಸ್ಥೆಯ ರಕ್ಷಣೆಯಲ್ಲಿ ಉಗ್ರರು ಸ್ವಚ್ಛಂದ ಜೀವನ ನಡೆಸುತ್ತಿದ್ದಾರೆ. ಕಳೆದ ಹಲವು ದಶಕಗಳಿಂದ ನಾವು ಉಗ್ರರು ಇರುವ ಕುರಿತು ಪಾಕಿಸ್ತಾನಕ್ಕೆ ನಿರಂತರವಾಗಿ ಸಾಕ್ಷ್ಯಗಳನ್ನು ನೀಡಿ ಅವರನ್ನು ಹಸ್ತಾಂತರಿಸಿ ಎಂದು ಮನವಿ ಮಾಡುತ್ತಿದ್ದೇವೆ. ಆದರೆ ಪಾಕಿಸ್ತಾನ ಮಾತ್ರ ಭಾರತದ ಮನವಿಯನ್ನು ನಿರಂತರವಾಗಿ ನಿರ್ಲಕ್ಷಿಸುತ್ತಾ ಬಂದಿದೆ.

ಹೀಗಾಗಿ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್‌ಲಾಡೆನ್ ಅಮೆರಿಕದ ಸೀಲ್ ಪಡೆ ಕಾರ್ಯಾಚರಣೆ ನಡೆಸಿ ಹೊಡೆದುರುಳಿಸಿದ ಮಾದರಿಲ್ಲಿಯಲ್ಲಿಯೇ ದಾವೂದ್ ಮತ್ತು ಸೈಯೀದ್ ಹಫೀಜ್ ನನ್ನು ಕೊಂದುಹಾಕಲು ಭಾರತ ಸರ್ಕಾರದಿಂದ ಸಾಧ್ಯವೇ ಎಂದು ಶಿವಸೇನೆ ಪ್ರಶ್ನಿಸಿದೆ.

ಈ ಹಿಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇರುವ ಕುರಿತು ಮಹತ್ವದ ಸಾಕ್ಷ್ಯ ಗುಪ್ತಚರ ಇಲಾಖೆಗೆ ಲಭಿಸಿತ್ತು, ಕರಾಚಿಯ ಕ್ಲೆಪ್ಟನ್ ಪ್ರದೇಶದಿಂದ ದಾವೂದ್ ಇಬ್ರಾಹಿಂ ದುಬೈನಲ್ಲಿರುವ ಪಾಕಿಸ್ತಾನ ಮೂಲದ ರಿಯಲ್ ಎಸ್ಟೇಟ್ ಉಧ್ಯಮಿಯೋರ್ವನಿಗೆ ಕರೆ ಮಾಡಿದ ಟೇಪ್ ಲಭ್ಯವಾಗಿತ್ತು.

ಇದರ ಆಧಾರದ ಹಿನ್ನಲೆಯಲ್ಲಿ ಭಾರತ ಸರ್ಕಾರ ದಾವೂದನನ್ನು ಭಾರತಕ್ಕೆ ಒಪ್ಪಿಸಿ ಎಂದು ಪಾಕಿಸ್ತಾನ ಸರ್ಕಾರವನ್ನು ಕೇಳಿತ್ತು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದು ಮಾರ್ಮಿಕವಾಗಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com