ಪಿಡಿಪಿ 'ಮಹಾಮೈತ್ರಿ'ಗೆ ಬಿಜೆಪಿ ಅಸಮಾಧಾನ

ಜಮ್ಮು ಮತ್ತು ಕಾಶ್ಮೀರ ಸರ್ಕಾರ ರಚನೆ ಬಗೆಗಿನ ಗೊಂದಲ ಸದ್ಯಕ್ಕೆ ಪರಿಹಾರವಾಗುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸರ್ಕಾರ ರಚನೆ ಬಗೆಗಿನ ಗೊಂದಲ ಸದ್ಯಕ್ಕೆ ಪರಿಹಾರವಾಗುವ ಲಕ್ಷಣ ಕಾಣುತ್ತಿಲ್ಲ. ಬಿಜೆಪಿಯೊಂದಿಗೆ ಸಖ್ಯ ಬೆಳೆಸುವುದಾಗಿ ಹೇಳುತ್ತಿದ್ದ ಪಿಡಿಪಿ ಈಗ ಕಾಂಗ್ರೆಸ್-ಎನ್‌ಸಿ ಜತೆ ಮೈತ್ರಿ ಮಾಡುವುದಾಗಿ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ  ಪಿಡಿಪಿ ಮೈತ್ರಿ ಕುರಿತು ಬಿಜೆಪಿ ಇಂದು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಪಿಡಿಪಿ ಈಗಾಗಲೇ ಕಮಲ ಪಕ್ಷದ ಮುಂದೆ ಹಲವು ಷರತ್ತುಗಳನ್ನು ಇಟ್ಟಿದ್ದು, ಇದಕ್ಕೆ ಒಪ್ಪದಿದ್ದರೆ ಕಾಂಗ್ರೆಸ್-ಎನ್‌ಸಿ ಜತೆ ಮೈತ್ರಿ ಮಾಡುವುದಾಗಿ ಹೇಳುತ್ತಿದೆ. ಹೀಗಾಗಿ ಸರ್ಕಾರ ರಚನೆ ವಿಚಾರವು ಸಸ್ಪೆನ್ಸ್ ಆಗಿಯೇ ಉಳಿದಿದೆ.

ಸೋಮವಾರ ಬೆಳಿಗ್ಗೆ ಬಿಜೆಪಿ ಜತೆ ಮೈತ್ರಿ ಬಗ್ಗೆ ಮಾತನಾಡುತ್ತಿದ್ದ ಪಿಡಿಪಿ ಸಂಜೆ ವೇಳೆಗೆ ಪ್ಲೇಟ್ ಬದಲಾಯಿಸಿದ್ದು, ರಾಜ್ಯದಲ್ಲಿ ಸ್ಥಿರ ಸರ್ಕಾರ ರಚಿಸಲು ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಜತೆಗಿನ ಮೈತ್ರಿ ಕೂಡ ನಮ್ಮ ಮುಂದಿರುವ ಆಯ್ಕೆ ಎಂದಿದೆ.

ಈ ಮೂಲಕ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಿಡಿಪಿ ಪರೋಕ್ಷವಾಗಿ ಹೇಳಿದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಹೊರಬಿದ್ದಿಲ್ಲ.

ರಾಜ್ಯದ ಎಲ್ಲ ಪ್ರದೇಶಗಳ ಜನರ ಆಕಾಂಕ್ಷೆಯನ್ನು ಈಡೇರಿಸಬೇಕಾದ್ದು ನಮ್ಮ ಕರ್ತವ್ಯ. ಹಾಗಾಗಿ ಇಂತಹುದೊಂದು ದೊಡ್ಡ ಮೈತ್ರಿ ಬಗ್ಗೆ ನಾವು ಚಿಂತನೆ ನಡೆಸುತ್ತಿದ್ದೇವೆ ಎಂದು ಪಿಡಿಪಿ ವಕ್ತಾರ ನಯೀಮ್ ಅಖ್ತರ್ ತಿಳಿಸಿದ್ದಾರೆ.

ನಾವು ಪಿಡಿಪಿಗೆ ಬೆಂಬಲ ನೀಡುತ್ತೇವೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಿಡಿಪಿಗೆ ಮಾತ್ರ ರಾಜ್ಯದಲ್ಲಿ ಸರ್ಕಾರ ರಚಿಸುವ ಕಾನೂನು ಬದ್ಧ, ನೈತಿಕ ಹಾಗೂ ಸಾಂವಿಧಾನಿಕ ಹಕ್ಕು ಇದೆ.

ಅಭಿಷೇಕ್ ಸಿಂಘ್ವಿ,
ಕಾಂಗ್ರೆಸ್ ವಕ್ತಾರ

ರಾಜ್ಯದಲ್ಲಿ ಸರಕಾರ ರಚನೆಗಾಗಿ, 28 ಸ್ಥಾನ ಗೆದ್ದಿರುವ ಪಿಡಿಪಿ ಹಾಗೂ 25 ಸ್ಥಾನ ಗೆದ್ದಿರುವ ಬಜೆಪಿಯನ್ನು ರಾಜ್ಯಪಾಲರು ಜ. 1ರಂದು ಮಾತುಕತೆಗಾಗಿ ಪ್ರತ್ಯೇಕವಾಗಿ ಆಹ್ವಾನಿಸಿದ್ದಾರೆ. ಸರಕಾರ ರಚನೆ ಸಂಬಂಧ ಅಂದು ಪ್ರಸ್ತವಾನೆ ಸಲ್ಲಿಸಬೇಕು ಎನ್ನುವ ಗಡುವನ್ನು ರಾಜ್ಯಪಾಲರು ವಿಧಿಸಿದ್ದು ಅಷ್ಟರೊಳಗೆ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯ ಸ್ಥಿತಿ ಪಕ್ಷಗಳ ಮುಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com