
ಬೆಂಗಳೂರು: ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಮೃತಪಡುತ್ತಾನೆ. ನಾವು ಗಲಾಟೆ ಮಾಡುವುದಿಲ್ಲ...ವಿದ್ಯುತ್ ಶಾಕ್ ಹೊಡೆದು ಸಾಯುತ್ತಾನೆ. ನಾವು ಕೋಲಾಹಲ ಸೃಷ್ಟಿಸುವುದಿಲ್ಲ...
ಚಾಲಕನ ನಿರ್ಲಕ್ಷ್ಯದಿಂದಾಗಿ ಇಡೀ ಬಸ್ ಪಲ್ಟಿಯಾಗಿ ಪ್ರಯಾಣಿಕರು ಸಾಯುತ್ತಾರೆ. ನಾವು ಆ ಚಾಲಕನನ್ನು ಕೊಲ್ಲಿ ಎನ್ನುವುದಿಲ್ಲ...ಕಳ್ಳನೊಬ್ಬ ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಂದರೂ ನಾವು ಆತನಿಗೆ ಗಲ್ಲು ಶಿಕ್ಷೆ ವಿಧಿಸುವುದಿಲ್ಲ.
ಆದರೆ, ಹುಲಿಯೊಂದು ಜಾನುವಾರುಗಳ ಮೇಲೆ ದಾಳಿ ಮಾಡಿದರೆ ಅದನ್ನ ಹಿಡಿಯಿರೆಂದು ಹುಯಿಲೆಬ್ಬಿಸುತ್ತೇವೆ. ಜನರ ಮೇಲೆ ದಾಳಿ ಮಾಡಿದರೆ ಅದನ್ನ ಕೊಲ್ಲಿರೆಂದು ಬೊಬ್ಬಿರಿಯುತ್ತೇವೆ. ಅಂದರೆ, ಅತಿ ಬುದ್ಧಿವಂತ ಪ್ರಾಣಿ ಎನಿಸಿಕೊಂಡ ಮಾನವ ಮಾಡುವ ತಪ್ಪನ್ನು ನಾವು ನೋಡುವ ರೀತಿಯೇ ಬೇರೆ. ಮನುಷ್ಯನಷ್ಟು ಯೋಚಿಸುವ ಸಾಮರ್ಥ್ಯ ಇಲ್ಲದ, ಬುದ್ಧಿವಂತವಲ್ಲದ ಕಾಡು ಪ್ರಾಣಿಗಳು ಮಾಡುವ ತಪ್ಪನ್ನು ನೋಡುವ ರೀತಿಯೇ ಬೇರೆ ಅಲ್ಲವೇ? ಮನುಷ್ಯರಿಗೆ ಕೊಡುವ ಶಿಕ್ಷೆಯೇ ಬೇರೆ. ಆದರೆ ಅದೇ ತಪ್ಪನ್ನು ಪ್ರಾಣಿ ಮಾಡಿಬಿಟ್ಟರೆ ಮಾತ್ರ ಅದಕ್ಕೆ ಮರಣದಂಡನೆ ಶಿಕ್ಷೆಯೇ ನಿಶ್ಚಿತ.
ಚಿಕ್ಕಮಗಳೂರಿನಲ್ಲಿ ಜನರಿಗೆ ಉಪಟಳ ಕೊಟ್ಟು, ಮಹಿಳೆಯನ್ನು ಕೊಂದ ಹುಲಿ ಬೆಳಗಾವಿಗೆ ಸ್ಥಳಾಂತರಗೊಂಡ ಮೇಲೆ ಚಂಡವ್ಯಾಘ್ರನಾಗಿ ಪರಿವರ್ತನೆಗೊಂಡುಬಿಟ್ಟ. ಅಲ್ಲೂ ಹುಲಿಯ ಪುಂಡಾಟಿಕೆ ಜೋರಾಗಿಬಿಟ್ಟಿತು. ಸಿಕ್ಕ ಸಿಕ್ಕ ದನ-ಕರುಗಳನ್ನು ಕೊಲ್ಲುವುದು, ಜನರನ್ನ ನೋಡಿದರೆ ಅಟ್ಟಿಸಿಕೊಂಡು ಬರುವುದು ಮಾಡುತ್ತಿದ್ದ ಹುಲಿ, ಕಡೆಗೆ ಮತ್ತೊಬ್ಬ ಗರ್ಭಿಣಿಯನ್ನೂ ಕೊಂದು ತಾನು ಸಂಪೂರ್ಣ ದಾರಿ ತಪ್ಪಿದ ಹುಲಿ ಎನ್ನುವುದನ್ನು ಸಾಬೀತುಪಡಿಸಿಬಿಟ್ಟಿತು. ಕಾಡಂಚಿನ ಗ್ರಾಮಗಳ ಜನದಂಗೆ ಎದ್ದರು. ಪೊಲೀಸ್, ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಯಿತು. ಹುಲಿಯಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಸಹ ದಿಕ್ಕೆಟ್ಟಿತು. ಐದಾರು ದಿನಗಳ ಕಾರ್ಯಾಚರಣೆ ಬಳಿಕ ಈ ನರಭಕ್ಷಕ ಹುಲಿಯನ್ನು ಕಡೆಗೂ ಕೊಲ್ಲಲಾಯಿತು.
ಹಾಗಾದರೆ, ಉಪಟಳ ನೀಡುವ ಹುಲಿ, ಕಿರಿಕಿರಿ ಮಾಡುವ ಚಿರತೆ ಮುಂತಾದ ಪ್ರಾಣಿಗಳನ್ನ ಕೊಲ್ಲುವುದೇ ಪರಿಹಾರವೇ?
ಏಕೆ ದಾಳಿ ಮಾಡುತ್ತವೆ?
ಹುಲಿ ಮಾತ್ರವಲ್ಲ, ಕಾಡಿನಿಂದ ಹೊರಬಂದು ಉಪಟಳ ಕೊಡುವ ಎಲ್ಲ ಪ್ರಾಣಿಗಳನ್ನೂ ನಾವು ನೋಡುವ ದೃಷ್ಠಿಕೋನ ಬದಲಾಯಿಸಿಕೊಳ್ಳಬೇಕಿದೆ.
ಕಾಡಿನಲ್ಲಿ ಆರಾಮವಾಗಿ ಬೇಟೆಯಾಡಿಕೊಂಡು ಜೀವನ ನಡೆಸುವ ಹುಲಿಗಳು ನರಭಕ್ಷಕಗಳಾಗಿ ರೂಪುಗೊಳ್ಳುವುದಕ್ಕೆ ಸಾಮಾನ್ಯವಾಗಿ ಎರಡು ಕಾರಣಗಳಿವೆ. ಹುಲಿಗೆ ವೃದ್ಧಾಪ್ಯ ಬಂದಿರಬೇಕು ಅಥವಾ ಗಾಯಗೊಂಡ ಬೇಟೆಯಾಡುವ ಸಾಮರ್ಥ್ಯ ಕಳೆದುಕೊಂಡಿರಬೇಕು. ಹೀಗೆ ದನಕರುಗಳ ಮೇಲೆ ದಾಳಿ ಮಾಡಲು ಜನವಸತಿ ಪ್ರದೇಶಗಳಿಗೆ ಬರಲಾರಂಭಿಸುವ ಹುಲಿಗಳು ಕಡೆಗೆ ಸುಲಭವಾಗಿ ಸಿಕ್ಕಲ್ಲಿ ಮನುಷ್ಯರ ಮೇಲೂ ದಾಳಿ ಮಾಡುತ್ತದೆ.
ಇದಲ್ಲದೇ, ಅರಣ್ಯದಂಚಿನ ಗ್ರಾಮಗಳಲ್ಲಿನ ಅನೇಕ ಜನರು ಈಗಲೂ ದಂಚಿನ ಗ್ರಾಮಗಳಲ್ಲಿನ ಅನೇಕ ಜನರು ಈಗಲೂ ಕಾಡುಗಳಲ್ಲಿ ಅತಿಕ್ರಮ ಪ್ರವೇಶ ಮಾಡುತ್ತಿದ್ದಾರೆ. ಸೌದೆ ತರುವುದಕ್ಕೋ, ಮೇಯಲು ಹೋಗಿರುವ ದನಕರುಗಳನ್ನು ವಾಪಸ್ ಕರೆತರುವುದಕ್ಕೋ ಕಾಡಿಗೆ ಹೋದಾಗ ಹುಲಿ ದಾಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಧಾಮ, ನಾಗರಹೊಳೆ ಮತ್ತಿತರ ಕಾಡುಗಳಲ್ಲಿ ಈಗಲೂ ಜನವಸತಿ ಇದೆ. ಇವು ಸಹ ಮಾನವ ಮತ್ತು ಪ್ರಾಣಿ ಸಂಘರ್ಷಕ್ಕೆ ಆಸ್ಪದ ಒದಗಿಸಿಕೊಡುತ್ತದೆ. ಈ ಕೆಲವೊಂದು ನಿರ್ದಿಷ್ಟ ಕಾರಣಗಳನ್ನು ಹೊರತುಪಡಿಸಿದಲ್ಲಿ ಹುಲಿ ಆಗಲಿ ಬೇರೆ ಪ್ರಾಣಿಗಳಾಗಿ ಮನುಷ್ಯ ನನ್ನ ಹುಡುಕಿಕೊಂಡು ಬಂದು ಕೊಲ್ಲುವುದು ಅಥವಾ ತಿನ್ನುವ ಸಾಧ್ಯತೆಗಳೇ ಇಲ್ಲ.
ಸಂಘರ್ಷ ಏಕೆ?
ಹುಲಿಗಳ ಸಂಖ್ಯೆಗಿಂತ ಅದೆಷ್ಟೇ ಪಟ್ಟು ಅಧಿಕ ಸಂಖ್ಯೆಯಲ್ಲಿ ಜನ ಮತ್ತು ಜಾನುವಾರು ಸಮೂಹ ಕಾಡಿನ ಸುತ್ತಮುತ್ತ ಇದೆ. ಇದರಿಂದಲೇ ಮಾನವ ಮತ್ತು ಪ್ರಾಣಿಗಳ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಭೂಮಿಯ ಮೇಲೆ ಜನ, ಜಾನುವಾರು ಮತ್ತು ವನ್ಯಜೀವಿಗಳು ಇರುವುದು ಈಗಷ್ಟೇ ಅಲ್ಲ. ಅವೆಲ್ಲ ಯುಗ ಯುಗಗಳಿಂದ ಬದುಕುತ್ತಿವೆ. ಈಗ ಮರೆಯಾಗಿರುವುದು ಸಹಬಾಳ್ವೆ ಮಾತ್ರ. ಕರ್ನಾಟಕದಲ್ಲಿ ಕಾಡಿನಿಂದ ನಿತ್ಯ ಒಂದಲ್ಲ ಒಂದು ಕಡೆ ಚಿರತಯೋ, ಹುಲಿಯೋ ಅತವಾ ಆನೆಯೋ ಕಾಡಿನಿಂದ ಆಚೆ ಬಂದು ಉಪಟಳ ಕೊಡುವುದು ಮಾಮೂಲಾಗಿಬಿಟ್ಟಿದೆ. ಏಕೆ ಹೀಗೆ?
ಜ್ಞಾನ ವಿಸ್ತಾರವಾದಂತೆಲ್ಲ, ಮಾಹಿತಿ ಲಭ್ಯತೆ ಸರಳ ಮತ್ತು ಸುಲಭ ಆದಂತೆಲ್ಲ ವನ್ಯಜೀವಿಗಳ ಬಗ್ಗೆ ಜನರಿಗಿರುವ ಕಲ್ಪನೆ ಕೂಡ ಬದಲಾಗುತ್ತಿದೆ. ಕಾಡಿನಿಂದ ಜಮೀನುಗಳಿಗೆ, ಹಳ್ಳಿಗಳಿಗೆ ಬರುವ ಚಿರತೆಗಳನ್ನ ಬೋನಿಟ್ಟು ಹಿಡಿಯಲಾಗುತ್ತಿದೆ.
ಹುಲಿಗಳನ್ನ ಹಿಡಿದು ಮೃಗಾಲಯಕ್ಕೆ ರವಾನಿಸಲಾಗುತ್ತಿದೆ. ಕೆಲ ಆನೆಗಳನ್ನು ಹಿಡಿದು ಪಳಗಿಸಿ ಬೇರೆ ರಾಜ್ಯಕ್ಕೂ ಕಳಿಸಿದ್ದೂ ಆಗಿದೆ. ತೀವ್ರ ಸಮಸ್ಯೆ ತಂದೊಡ್ಡುವ ಪ್ರಾಣಿಗಳನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದೂ ಮುಗಿದಿದೆ. ಆದರೂ, ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ.
ಕೊಲ್ಲುವುದೊಂದೇ ಪರಿಹಾರ ಅಲ್ಲ
ಉಪಟಳ ಕೊಡುವ ಯಾವುದೇ ಪ್ರಾಣಿಗಳನ್ನು ಕೊಲ್ಲುವುದು ಅಥವಾ ಅದನ್ನು ಹಿಡಿದು ಮೃಗಾಲಯಗಳಿಗೆ ರವಾನಿಸುವುದು ಪರಿಹಾರ ಅಲ್ಲವೇ ಅಲ್ಲ. 70-80ರ ದಶಕದಲ್ಲಿ ಕರ್ನಾಟಕ ಮಾತ್ರವಲ್ಲ ಇಡೀ ದೇಶಳೊದಲ್ಲಿ ಹುಲಿಗಳ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಕುಸಿದಿತ್ತು. ಆಗಲೇ ಜಾರಿಗೊಂಡದ್ದು ವನ್ಯಜೀವಿ ಸಂರಕ್ಷಣಾ ಕಾಯ್ದೆ. ಅರಣ್ಯ ಹಾಗೂ ಅರಣ್ಯ ಜೀವಿಗಳ ರಕ್ಷಣೆಗೆ ಆದ್ಯತೆ ನೀಡಲಾಯ್ತು. ಬಿಗಿ ಕ್ರಮಗಳಿಂದಾಗಿ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹುಲಿ ಸಂತತಿ ಹೆಚ್ಚಾಯ್ತು. ಈಗ ರಾಜ್ಯದಲ್ಲಿ ಹುಲಿ ಸಂತತಿ ವೃದ್ಧಿಯಾಗುತ್ತಲೇ ಇದೆ. ಆದ್ದರಿಂದ ಕೆಲವೊಮ್ಮೆ ವಿಪರೀತ ಉಪಟಳ ಕೊಡುವ ಹುಲಿಯಾಗಲಿ, ಚಿರತೆಯನ್ನಾಗಲಿ ಕೊಲ್ಲುವುದರಲ್ಲಿ ತಪ್ಪಿಲ್ಲ. ಆದರೆ, ಕಾಡಿನಿಂದ ಹೊರಗೆ ಬರುವ ಎಲ್ಲ ಹುಲಿಗಳನ್ನು, ಊರಿಗೆ ಬಂದು ಕುರಿ, ಮೇಲೆ ಬೇಟೆಯಾಡಿ ತಿನ್ನುವ ಚಿರತೆಗಳನ್ನೆಲ್ಲ ಸಾಯಿಸುತ್ತಾ ಹೋದರೆ, ಮತ್ತೆ ಅವುಗಳ ಸಂತತಿ ನಾಶಕ್ಕೆ ನಾವೇ ಕಾರಣರಾಗುವ ಆತಂಕವಿದೆ.
ಇನ್ನೊಂದು ಸಂಗತಿಯೆಂದರೆ ಒಂದು ಹುಲಿಯ ಉಪಟಳದಿಂದಾಗಿ ಇಡೀ ಹುಲಿ ಸಂಕುಲವನ್ನೇ ದ್ವೇಷಿಸುವುದೂ ಸರಿಯಲ್ಲ. ಈ ಮಾತು ಉಳಿದ ಪ್ರಾಣಿಗಳಿಗೂ ಅನ್ವಯ. ಇನ್ನು ಕೆಲ ಪ್ರಾಣಿಗಳನ್ನು ಹಿಡಿದು ಮೃಗಾಲಯಕ್ಕೆ ಕಳಿಸುವುದೂ ಪರಿಹಾರವಲ್ಲ. ಮೃಗಾಲಯಗಳೂ ಧಾರಣ ಸಾಮರ್ಥ್ಯ ಕಳೆದುಕೊಂಡಿವೆ. ಅಲ್ಲಿ ಸ್ವತಂತ್ರ ಜೀವನದ ಅವಕಾಶವೂ ಇಲ್ಲ. ಹೀಗಾಗಿ ಮೃಗಾಲಯಕ್ಕೆ ಬಿಡುವ ಬಗ್ಗೆಯೂ ಯೋಚಿಸಬೇಕಿದೆ.
ಪ್ರಾಣಿಗಳೂ ನಮ್ಮ ಸಹಿಸಿಕೊಂಡಲ್ಲವೇ?
ಕಾಡಿಗೆ ಅತೀ ಪಕ್ಕದಲ್ಲೇ ಬದುಕುವ ಜನರನ್ನು ಕಾಡಿನೊಳಗೇ ಬದುಕುತ್ತಿರುವ ಜನರನ್ನು, ಶತಮಾನಗಳಿಂದ ತಾವು ಓಡಾಡುತ್ತಿದ್ದ ಜಾಗದಲ್ಲೆಲ್ಲ ಮನೆ, ನಾಲೆ ಕಟ್ಟಿಕೊಂಡಿರುವ ಜನರನ್ನು ಪ್ರಾಣಿಗಳೂ ಸಹಿಸಿ ಕೊಂಡಿವೆಯಲ್ಲವೇ?
ಉತ್ತಮ ಸಂರಕ್ಷಣಾ ಕ್ರಮಗಳಿಂದಾಗಿ ಚಿರತೆ ಮತ್ತು ಆನೆಗಳ ಸಂಖ್ಯೆಯೂ ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚಿದೆ. ಆನೆಗಳು ಶತಮಾನಗಳಿಂದ ಓಡಾಡುತ್ತಿದ್ದ ಜಾಗಗಳಲ್ಲಿ ನಾವೀಗ ನಾಲೆ ಕಟ್ಟಿ ಜಮೀನು ಮಾಡಿಕೊಂಡು ಊರುಗಳನ್ನು ನಿರ್ಮಾಣ ಮಾಡಿಬಿಟ್ಟಿದ್ದೇವೆ. ಪ್ರಾಣಿಗಳ ಜಾಗ ಕಸಿದು ನಾವು ಬದುಕುತ್ತಿದ್ದೇವೆ. ಹೀಗಿರುವಾಗ ಇದೇ ಪ್ರಾಣಿಗಳ ಬಗ್ಗೆ ಒಂದಿಷ್ಟು ಪ್ರೀತಿ, ಅನುಕಂಪ ತೋರಲೇಬೇಕು. ಸಹಬಾಳ್ವೆ ಸಾಕಾರ ಮಾಡಿದಲ್ಲಿ ಮಾತ್ರ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಬಹುದು.
ಹುಲಿ, ಚಿರತೆ ಮತ್ತು ಆನೆಗಳು ನಾನಾ ಕಾರಣಕ್ಕೆ ಕಾಡಿನಿಂದ ಆಚೆ ಜನವಸತಿ ಕಡೆಗೆ ಬರುತ್ತಿವೆ. ಈ ಪೈಕಿ ಕೆಲ ವಿಪರೀತ ಸಮಸ್ಯಾತ್ಮಕ ಪ್ರಾಣಿಗಳನ್ನು ಕೊಲ್ಲುವುದರಲ್ಲಿ ತಪ್ಪಿಲ್ಲ. ದೂರಗಾಮಿ ನೆಲೆಯಲ್ಲಿ ಕಾಡು, ವನ್ಯ ಜೀವಿಗಳ ಸಂರಕ್ಷಣೆ ಹಾಗೂ ಆ ಮೂಲಕ ಮನುಕುಲದ ಉಳಿವಿಗೆ ಕೆಲ ಸಮಸ್ಯಾತ್ಮಕ ಪ್ರಾಣಿಗಳ ಹತ್ಯೆ ಅನಿವಾರ್ಯವಾಗುತ್ತದೆ. ಆದರೆ, ಜನ ಸಹ ವನ್ಯ ಜೀವಿಗಳ ಬಗ್ಗೆ ತಾಳ್ಮೆ ಬೆಳೆಸಿಕೊಳ್ಳುವ ಅಗತ್ಯವಿದೆ. ವನ್ಯಜೀವಿಗಳೊಂದಿಗೆ ಸಹಬಾಳ್ವೆ ಇಂದಿನ ಅನಿವಾರ್ಯವಾಗಬೇಕಿದೆ.
ಉಲ್ಲಾಸ್ ಕಾರಂತ್
ಹಿರಿಯ ವನ್ಯಜೀವಿ ವಿಜ್ಞಾನಿ
-ವಿನೋದ್‌ಕುಮಾರ್ ಬಿ. ನಾಯ್ಕ್
Advertisement