ಅರಣ್ಯ ಇಲಾಖೆಯಿಂದಲೇ ರೇಡಿಯೋ ಕಾಲರ್

ನರಭಕ್ಷಕ ಹುಲಿ ಪ್ರಕರಣವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನಿಭಾಯಿಸುವಲ್ಲಿ ವಿಫಲಗೊಂಡ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನರಭಕ್ಷಕ ಹುಲಿ ಪ್ರಕರಣವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನಿಭಾಯಿಸುವಲ್ಲಿ ವಿಫಲಗೊಂಡ ಅರಣ್ಯ ಇಲಾಖೆ ಇದೀಗ ಹೊಸ ಚಿಂತನೆಯತ್ತ ಮುಖ ಮಾಡಿದೆ.

ರೇಡಿಯೋ ಕಾಲರ್ ಅಳವಡಿಕೆ, ಬಳಕೆ ಬಗ್ಗೆ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡುವ ಜತೆಗೆ, ಇಲಾಖೆಯೇ ನೇರವಾಗಿ ರೇಡಿಯೋ ಕಾಲರ್ ಖರೀದಿಸಲು ನಿರ್ಧರಿಸಿದೆ. ಅಷ್ಟೇ ಅಲ್ಲ, ದೇಶದ ಪ್ರತಿಷ್ಠಿತ ವನ್ಯಜೀವಿ ಸಂಶೋಧನಾ ಕೇಂದ್ರವಾಗಿರುವ ಡೆಹ್ರಾಡೂನ್‌ನ ವೈಲ್ಡ್‌ಲೈಫ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (ಡಬ್ಲ್ಯೂ ಐಐ) ಶಾಖೆಯನ್ನು ರಾಜ್ಯದಲ್ಲಿ ಪ್ರಾರಂಭಿಸಲು ಪತ್ರ ಬರೆದಿದೆ.

ಸ್ವಯಂ ಸೇವಾ ಸಂಸ್ಥೆಯಿಂದ ಪಡೆದು ಬೆಳವಾವಿ ನರಭಕ್ಷಕ ಹುಲಿಗೆ ಹಾಕಲಾಗಿದ್ದ ರೇಡಿಯೋ ಕಾಲರ್ ಸಮರ್ಪಕವಾಗಿ ಕೆಲಸ ಮಾಡಲಿಲ್ಲ. ಆದ್ದರಿಂದಲೇ ಹುಲಿ ಪತ್ತೆ ಹಚ್ಚುವಲ್ಲಿ ವಿಳಂಬವಾಯಿತು. ಕಡೆಗೆ ಆ ಹುಲಿ ಮತ್ತೊಬ್ಬ ಮಹಿಳೆಯನ್ನೂ ಬಲಿ ಪಡೆಯಿತು. ಈ ಘಟನೆಗಳಿಂದ ಪಾಠ ಕಲಿತಿರುವ ಅರಣ್ಯ ಇಲಾಖೆ, ಹೊರಗಿನ ವಿಜ್ಞಾನಿಗಳ ನೆರವು ಪಡೆಯುವುದನ್ನು ತಪ್ಪಿಸಲು ಸ್ವಂತ ವಿಜ್ಞಾನಿಗಳ ತಂಡ ರೂಪಿಸಲು ಮುಂದಾಗಿದೆ.

ವ್ಯಾಪಕ ಟೀಕೆ
ಹುಲಿ ಪ್ರಕರಣವನ್ನು ಇಲಾಖೆ ನಿಭಾಯಿಸಿದ ರೀತಿಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಇದರಿಂದಾಗಿ ಇದೀಗ ಅರಣ್ಯ ಇಲಾಖೆ ರೇಡಿಯೋ ಕಾಲರ್‌ಗಳನ್ನ ಖುದ್ದು ಖರೀದಿಗೆ ಮುಂದಾಗಿದೆ. ಇವುಗಳ ಬಳಕೆ ಬಗ್ಗೆ ಇಲಾಖೆಯ ಪಶುವೈದ್ಯರಿಗೆ ಹಾಗೂ ಐಟಿ ಘಟಕಕ್ಕೆ ತರಬೇತಿ ನೀಡಲು ತೀರ್ಮಾನಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿನಯ್ ಲೂತ್ರ 'ಕನ್ನಡಪ್ರಭ'ಕ್ಕೆ ಹೇಳಿದರು.

ಇದಲ್ಲದೇ, ಕಾಡಿನಲ್ಲಿ ವನ್ಯ ಜೀವಿಗಳ ಓಡಾಟ ಅದರಲ್ಲೂ ವಿಶೇಷವಾಗಿ ಹುಲಿಯ ಚಲನವಲನಗಳ ಮೇಲೆ ನಿಗಾ ಇಡಲು ಕ್ಯಾಮೆರಾ ಟ್ರ್ಯಾಪಿಂಗ್ ವ್ಯವಸ್ಥೆ ಅಳವಡಿಸಿಕೊಳ್ಲಾಗಿದೆ. ಈ ಕೆಲಸಕ್ಕೂ ಇಲಾಖೆ ಸರ್ಕಾರೇತರ ಸಂಘ ಸಂಸ್ಥೆಗಳ ನೆರವು ಪಡೆಯುತ್ತಿತ್ತು. ಈಗ ಕ್ಯಾಮೆರಾ ಖರೀದಿಸುವುದು ಅಥವಾ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಕಂಪನಿಗಳು ಒದಗಿಸಿದಲ್ಲಿ ಅವುಗಳನ್ನು ಇಲಾಖೆಯೇ ಅಳವಡಿಸಲು ನಿರ್ಧರಿಸಿದೆ. ಕ್ಯಾಮೆರಾ ಟ್ರ್ಯಾಪಿಂಗ್ ಮೂಲಕ ಸಿಗುವ ಮಾಹಿತಿಯನ್ನ ವಿಶ್ಲೇಷಿಸಲು ಈಗಾಗಲೇ ವಿಜ್ಞಾನಿಗಳನ್ನು ನೇಮಕ ಮಾಡಿಕೊಂಡಿದೆ.

ಸಂಶೋಧನಾ ವಿಭಾಗ
ಜತೆಗೆ, ಡಬ್ಲ್ಯೂಐಐ ಸಂಶೋಧನಾ ವಿಭಾಗವನ್ನು ರಾಜ್ಯದಲ್ಲೂ ತೆರೆಯುವಂತೆ ಪತ್ರ ಬರೆಯಲಾಗಿದೆ. ಶಿವಮೊಗ್ಗದ ಚಕ್ರಾ ಮತ್ತು ಕುದುರೆಮುಖ ಸ್ಥಳ ಗುರುತಿಸಲಾಗಿದ್ದು, ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕ ತಕ್ಷಣ ಅಧ್ಯಯನ ಕೇಂದ್ರದ ಕೆಲಸ ಶುರುವಾಗಲಿದೆ.

ಆ ಮೂಲಕ ಅರಣ್ಯ ಇಲಾಖೆಯೇ ಇನ್ಮುಂದೆ ವಿಜ್ಞಾನಿಗಳ ತಂಡ ಹೊಂದಿರಲಿದೆ. ಇದುವರೆಗೂ ಈ ನಿಟ್ಟಿನಲ್ಲಿ ಯೋಚನೆ ಮಾಡಿರದ ಅರಣ್ಯ ಇಲಾಖೆ ಈಗ ನರಭಕ್ಷಕ ಹುಲಿ ಪ್ರಕರಣದಿಂದ ಪಾಠ ಕಲಿತಿದ್ದು, ಇನ್ಮುಂದೆ ತನ್ನ ಕೆಲಸಗಳಿಗೆ ಹೊರಗಿನ ವ್ಯಕ್ತಿಗಳು ಮತ್ತು ಸಂಪನ್ಮೂಲಗಳ ಮೇಲೆ ಅವಲಂಬನೆಯಾಗುವುದನ್ನು ಸಂಪೂರ್ಣವಾಗಿ ಕೈಬಿಡಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com