
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗವುದು ಬಹುತೇಕ ಖಚಿತವೆಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾಗಿದ್ದ ಸರ್ಕಾರ ರಚನೆ ಬಿಕ್ಕಟ್ಟು ಶೀಘ್ರದಲ್ಲಿಯೇ ಅಂತ್ಯವಾಗುವ ಸಂಭವವಿದ್ದು, ಪಿಡಿಪಿ ಮತ್ತು ಬಿಜೆಪಿ ಪಕ್ಷಗಳ ನೇತೃತ್ವದ ಮೈತ್ರಿ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಇದಕ್ಕೆ ಪೂರಕ ಎಂಬಂತೆ ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ನೀಡಿರುವ ಹೇಳಿಕೆಗಳು ಇದಕ್ಕೆ ಇಂಬು ನೀಡಿವೆ.
ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಶ್ಲಾಘಿಸಿದ ಮುಫ್ತಿ ಅವರು, ವಾಜಪೇಯಿ ಅವರು ದೂರದೃಷ್ಟಿವುಳ್ಳ ಜವಾಬ್ದಾರಿಯುತ ವ್ಯಕ್ತಿಯಾಗಿದ್ದು, ಅವರ ನೀತಿಗಳನ್ನು ನಾವು ಮತ್ತೆ ವಾಪಸ್ ತರಬೇಕಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಚ್ಚಿನ ಜವಾಬ್ದಾರಿ ಇದ್ದು, ಮೋದಿ ಅವರು ಅದನ್ನು ನಿಭಾಯಿಸಬಲ್ಲರು. ರಾಜ್ಯಕ್ಕೆ ವಾಜಪೇಯಿ ಅವರ ವಿಧಾನ ಬೇಕಿದೆ ಎಂದು ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಪಿಡಿಪಿ ಪಕ್ಷದೊಂದಿಗೆ ಕೈ ಜೋಡಿಸುವ ಕುರಿತು ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆಯಾದರೂ ತೆರೆ ಮರೆಯಲ್ಲಿ ಸರ್ಕಾರ ರಚನೆ ಕಸರತ್ತು ಕೂಡ ನಡೆದಿದೆ.
Advertisement