ಹೊಸ ವರ್ಷಾಚರಣೆ ವೇಳೆ ಕಾಲ್ತುಳಿತಕ್ಕೆ 35 ಬಲಿ

ಇಡೀ ವಿಶ್ವಕ್ಕೆ ಹೊಸ ವರ್ಷ ಆಚರಣೆ ಸಂಭ್ರಮ, ಆದರೆ ಹೊಸ ವರ್ಷಕ್ಕೆ ಸ್ವಾಗತ ಕೋರುವ...
ಹೊಸ ವರ್ಷಾಚರಣೆ ವೇಳೆ ಕಾಲ್ತುಳಿತಕ್ಕೆ 35 ಬಲಿ

ಶಾಂಘೈ: ಇಡೀ ವಿಶ್ವಕ್ಕೆ ಹೊಸ ವರ್ಷ ಆಚರಣೆ ಸಂಭ್ರಮ, ಆದರೆ ಹೊಸ ವರ್ಷಕ್ಕೆ ಸ್ವಾಗತ ಕೋರುವ ಉತ್ಸಾಹದ ನಡುವೇ 35ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ದುರ್ಘಟನೆ ಚೀನಾದಲ್ಲಿ ನಡೆದಿದೆ.

ಚೀನಾ ಜನತೆಯ ಪಾಲಿಗೆ 2015 ಅನ್ ಹ್ಯಾಪಿ ನ್ಯೂ ಇಯರ್ ಆಗಿದ್ದು, ಹೊಸ ವರ್ಷ ಆರಂಭಿಕದಲ್ಲಿ ದೇಶದಲ್ಲಿ ದೊಡ್ಡ ದುರಂತ ಸಂಭವಿಸಿದೆ.

ಹೊಸ ವರ್ಷವನ್ನು ಉತ್ಸುಕವಾಗಿ ಬರಮಾಡಿಕೊಳ್ಳಲು ಶಾಂಘೈನ ಪ್ರಸಿದ್ಧ ಪ್ರವಾಸಿ ತಾಣವಾದ ನದಿದಂಡೆ ಪ್ರದೇಶದಲ್ಲಿ ಸಂಭ್ರಮಾಚರಣೆ ನಡೆಯುತ್ತಿದ್ದಾಗ ಕಾಲ್ತುಳಿತಕ್ಕೆ 35ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 46ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಹ್ಯಾಪಿ ನ್ಯೂ ಇಯರ್ ಆಚರಣೆಗೆಂದು ಶಾಂಘೈನ ಪ್ರವಾಸಿ ತಾಣದಲ್ಲಿ ಜನಸ್ತೋಮವೇ ನೆರದಿತ್ತು. ಅಪರೂಪದ ಪ್ರದರ್ಶನ ವೀಕ್ಷಣೆಗಾಗಿ ಮೇಲಿನ ಗ್ಯಾಲರಿಗೆ ಹೋಗಲು ಕಿರಿದಾದ ಮೆಟ್ಟಿಲುಗಳನ್ನು ಹೊಂದಿದ್ದ ಆ ಕಟ್ಟಡದ ಮೇಲೆ ಹತ್ತಲು ಸಾವಿರಾರು ಮಂದಿ ನುಗ್ಗಿದ್ದಾರೆ. ಈ ವೇಳೆಗಾಗಲೇ ಮೇಲಿದ್ದ ಸಾವಿರಾರು ಮಂದಿ ಕೆಳಗಿಳಿಯವ ಮುಂದಾಗಿದ್ದಾರೆ. ಅಲ್ಲದೇ, ಕಟ್ಟಡದ ಮೂರನೇ ಮಹಡಿಯ ಮೇಲಿನಿಂದ ಡಾಲರ್ ಬಿಲ್ ಎಂಬ ಕೂಪನ್‌ಗಳನ್ನು ಕೆಳಗಡೆ ಎಸೆಯಲಾಗಿದೆ. ಅದನ್ನು ತೆಗೆದುಕೊಳ್ಳಲೆಂದು ಮೇಲಿದ್ದ ಜನತೆ ಕೆಳಗೆ ದಾವಿಸತೊಡಗಿದರು. ಈ ಸಂದರ್ಭ ಕೆಳಗಿಳಿಯುವವರು, ಮೇಲೆರುವವರ ಮಧ್ಯೆ ನೂಕಾಟ, ತಳ್ಳಾಟ ಆರಂಭವಾಗಿದೆ.

ಈ ಸಂದರ್ಭದಲ್ಲಿ ಉಂಟಾದ ಸಂಘರ್ಷದಲ್ಲಿ 35 ಮಂದಿ ಮೃತಪಟ್ಟು, 46ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅನೇಕ ಮಹಿಳೆಯರು ತುಳಿದಾಟದಲ್ಲಿ ಸಿಕ್ಕಿ ನಲುಗಿದ್ದಾರೆ.

ಈ ದುರ್ಘಟನೆ ಕುರಿತಂತೆ ತಕ್ಷಣವೇ ಸಮಗ್ರ ತನಿಖೆ ನಡೆಸುವಂತೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆದೇಶಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ಅವರು ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com